ಶುಕ್ರವಾರ, ಮೇ 14, 2021
21 °C
ಕರ್ನಾಟಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತಂಡದ ವರದಿ ಸರ್ಕಾರಕ್ಕೆ ಸಲ್ಲಿಕೆ

ಎಫ್‌ಎಆರ್ ಏರಿಕೆಗೆ ತಜ್ಞರ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ತೆಗೆದುಕೊಳ್ಳಬೇಕಾದ ಉಪಕ್ರಮಗಳ ಕುರಿತು ಪ್ರಮುಖ 10 ಶಿಫಾರಸುಗಳನ್ನು ಒಳಗೊಂಡ `ಕೆಐಜಿ 2020 ವರದಿ'ಯನ್ನು ಕರ್ನಾಟಕ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತಂಡ (ಕೆಐಜಿ)ವು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿನ ಫ್ಲೋರ್ ಏರಿಯಾ ರೇಷಿಯೋ (ಎಫ್‌ಎಆರ್) ಹಾಗೂ ಫ್ಲೋರ್ ಸ್ಪೇಸ್ ಇಂಡೆಕ್ಸ್ (ಎಫ್‌ಎಸ್‌ಐ) ಹೆಚ್ಚಳ ಸೇರಿದಂತೆ ಕೆಲವು ಶಿಫಾರಸುಗಳ ಬಗ್ಗೆ ನಗರ ಯೋಜನಾ ತಜ್ಞರು ಹಾಗೂ ಸಂಘಟನೆಗಳ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ರಾಜ್ಯವು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ (ಐಸಿಟಿ) ಮುನ್ನಡೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಜಾಗತಿಕ ಸವಾಲುಗಳನ್ನು ಎದುರಿಸಿ ಭವಿಷ್ಯದ ಬದಲಾವಣೆಗಳಿಗೆ ತಕ್ಕಂತೆ ಐಸಿಟಿ ನಿಯಮಗಳಲ್ಲಿ ತೆಗೆದುಕೊಳ್ಳಬೇಕಾದ ಅವಶ್ಯಕ ಕ್ರಮಗಳನ್ನು ಶಿಫಾರಸು ಮಾಡಲು ರಾಜ್ಯ ಸರ್ಕಾರ ಕೆಐಜಿ ತಂಡವನ್ನು ರಚಿಸಿತ್ತು.ಇದಲ್ಲದೆ ರಫ್ತು ಆದಾಯವನ್ನೂ ಸೇರಿಸಿ ಐಸಿಟಿ ಕ್ಷೇತ್ರದ ಗಳಿಕೆಯನ್ನು ನಾಲ್ಕು ಲಕ್ಷ ಕೋಟಿ ರೂಪಾಯಿಗೆ ಹೆಚ್ಚಿಸುವುದು (ಪ್ರಸಕ್ತ ಇದು 1 ಲಕ್ಷ 35 ಸಾವಿರ ಕೋಟಿ ರೂಪಾಯಿಯಷ್ಟಿದೆ), 2020ರೊಳಗೆ ಐಸಿಟಿ ವಲಯದಲ್ಲಿ 20 ಲಕ್ಷ ನೇರ ಉದ್ಯೋಗಗಳ (ಈಗ ಇದು 8 ಲಕ್ಷದಷ್ಟಿದೆ) ಸೃಷ್ಟಿಸುವುದು, 2020ರೊಳಗೆ 1 ಸಾವಿರಕ್ಕೂ ಅಧಿಕ ಕಂಪೆನಿಗಳ ಕಾರ್ಯಾರಂಭಕ್ಕೆ ಅನುವು ಮಾಡಿಕೊಡುವ ವಿಷಯಗಳ ಬಗ್ಗೆಯೂ ಶಿಫಾರಸು ನೀಡುವಂತೆ ಸರ್ಕಾರ ನಿರ್ದೇಶನ ನೀಡಿತ್ತು.ಜನವರಿ 8ರಂದು ಬಿಜೆಪಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿತ್ತು. ಈಗ ವರದಿಯನ್ನು ಕಾಂಗ್ರೆಸ್ ಸರ್ಕಾರಕ್ಕೆ ಕೆಲ ದಿನಗಳ ಹಿಂದೆ ಸಲ್ಲಿಸಲಾಗಿದೆ. ಸಮಿತಿಯು ಪ್ರಮುಖ 10 ಶಿಫಾರಸುಗಳನ್ನು ಮಾಡಿದೆ. ಬಿಲ್ಡರ್‌ಗಳಿಗೆ ಹೆಚ್ಚಿನ ಎಫ್‌ಎಸ್‌ಐ (ಫ್ಲೋರ್ ಸ್ಪೇಸ್ ಇಂಡೆಕ್ಸ್)ಗೆ ಅವಕಾಶ ಕಲ್ಪಿಸಿ ಅದರಿಂದ ಬರುವ ಆದಾಯವನ್ನು ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಬಳಸಲು ಸಲಹೆ ಮಾಡಲಾಗಿದೆ.ಇಲ್ಲಿನ ಕೆಲವು ಶಿಫಾರಸುಗಳನ್ನು ಜಾರಿಗೆ ತಂದರೆ ನಗರದ ಜನರು ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಶಿಫಾರಸುಗಳನ್ನು ಜಾರಿಗೊಳಿಸಲು ಹೆಚ್ಚಿನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಮಿತಿಯ ಶಿಫಾರಸು ಅನುಷ್ಠಾನ ಮಾಡಬಾರದು ಎಂದು ಆಗ್ರಹಿಸಿ ಮುಖ್ಯಮಂತ್ರಿ ಅವರಿಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದಾರೆ.`ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಸದೆ ಎಫ್‌ಎಸ್‌ಐ ಹೆಚ್ಚಳಕ್ಕೆ ಶಿಫಾರಸು ಮಾಡಿರುವುದು ದೂರದೃಷ್ಟಿಯಿಲ್ಲದ ಅಪಾಯಕಾರಿ ಸಲಹೆ. ಎಫ್‌ಎಸ್‌ಐ ಹೆಚ್ಚಳದಿಂದ ನಗರದ ಕಟ್ಟಡಗಳ ಎತ್ತರ ಬೆಳೆಯಬಹುದು. ಆದರೆ, ಈ ರೀತಿಯ ಬೆಳವಣಿಗೆಗೆ ನಗರ ಸಜ್ಜಾಗಿಲ್ಲ. ಈ ಕ್ರಮದಿಂದ ಜನಸಾಂದ್ರತೆ ಅಧಿಕಗೊಳ್ಳುತ್ತದೆ. ಅಲ್ಲದೆ ಇಲ್ಲಿನ ಲಭ್ಯ ಸೌಕರ್ಯದ ಮೇಲೆ ಒತ್ತಡ ಬೀಳುತ್ತದೆ. ಜೊತೆಗೆ ನಗರದ ಹಸಿರು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ' ಎಂದು ಹಲವು ನಗರ ಯೋಜನಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.`ಎಫ್‌ಎಸ್‌ಐನಲ್ಲಿ ಇತರ ಅಂತರರಾಷ್ಟ್ರೀಯ ನಗರಗಳಿಗೆ ಹೋಲಿಸಿದರೆ ಭಾರತ ಹಿಂದುಳಿದಿದೆ. ಶಾಂಘೈಯ ಎಫ್‌ಎಸ್‌ಐ 13.1, ನ್ಯೂಯಾರ್ಕ್ ಹಾಗೂ ಮ್ಯಾನ್‌ಹಾಟನ್‌ನಲ್ಲಿ ಎಫ್‌ಎಸ್‌ಐ 15 ಇದೆ. ನ್ಯೂಯಾರ್ಕ್‌ನ ಬಹುಮಹಡಿ ಕಟ್ಟಡಗಳಲ್ಲೇ ಅಗತ್ಯ ಜನರೇಟರ್‌ಗಳು, ಅಂಗಡಿಗಳು ಹಾಗೂ ಇತರ ಎಲ್ಲ ಸೌಲಭ್ಯಗಳಿದ್ದು, ಒಂದೊಂದು ಕಟ್ಟಡ ಒಂದೊಂದು ನಗರದಂತಿದೆ. ಆದರೆ, ಅಗತ್ಯ ಸೌಲಭ್ಯಗಳನ್ನು ಒದಗಿಸುವುದರಲ್ಲಿ ನಾವು ಹಿಂದುಳಿದ ಕಾರಣ ಕಟ್ಟಡಗಳ ಎತ್ತರವನ್ನು ಹೆಚ್ಚಿಸುವುದು ಸೂಕ್ತವಲ್ಲ' ಎಂದು ಅವರು ಪ್ರತಿಪಾದಿಸಿದ್ದಾರೆ.`ಎಫ್‌ಎಆರ್ ಹೆಚ್ಚಳವನ್ನು ಹೊಂದಿರುವ `ವಲಯ ಮಹಾಯೋಜನೆ-2015' (ಆರ್‌ಎಂಪಿ-2015)ಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಯಾವುದೇ ಮಹಾಯೋಜನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕು. ಅದರ ಸಾಮಾಜಿಕ, ಪ್ರಾಕೃತಿಕ ಪರಿಣಾಮಗಳ ಕುರಿತು ಪಾರದರ್ಶಕವಾಗಿ ಚರ್ಚೆ ಆಗಬೇಕು. ಇಂತಹ ನಡೆಗಳಿಂದ ಸರ್ಕಾರ ಹಾಗೂ ನಾಗರಿಕರ ನಡುವಿನ ವಿಶ್ವಾಸ ವೃದ್ಧಿಯಾಗುತ್ತದೆ' ಎಂದು ಅವರು ವಿಶ್ಲೇಷಿಸಿದ್ದಾರೆ.`ಕೆಐಜಿ ವರದಿಯಲ್ಲಿ ವಿಶೇಷ ಆರ್ಥಿಕ ವಲಯದಡಿಯಲ್ಲಿ ಪರಿಸರದ ಮೇಲಾಗುವ ಪರಿಣಾಮಗಳ ಒಟ್ಟು ಅಂದಾಜಿನ ಉಲ್ಲೇಖವೇ ಇಲ್ಲ. ಉಳಿದಿರುವ ಐಟಿ ಯೋಜನೆಗಳಿಗೆ 90 ದಿನಗಳಲ್ಲಿ ಒಪ್ಪಿಗೆ ನೀಡುವ ಪ್ರಸ್ತಾವ ವರದಿಯಲ್ಲಿದೆ. ಇದರಿಂದ ನೀರು ಪೂರೈಕೆ, ನೈರ್ಮಲ್ಯ ಹಾಗೂ ತ್ಯಾಜ್ಯ ನಿರ್ವಹಣೆಗಳ ಮೇಲೆ ಇನ್ನೂ ಹೆಚ್ಚಿನ ಒತ್ತಡ ಬೀಳುತ್ತದೆ' ಎಂದು ಅವರು ಬೆಳಕು ಚೆಲ್ಲಿದ್ದಾರೆ.ಕೆಐಜಿ 2020 ವರದಿ ತಯಾರಿಸಿದ ತಂಡದಲ್ಲಿದ್ದ ತಜ್ಞರು

ಅಧ್ಯಕ್ಷ- ಮೋಹನದಾಸ್ ಪೈ (ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್), ಸಹ ಅಧ್ಯಕ್ಷ- ಬಿ.ವಿ.ನಾಯ್ಡು (ಸಗೈಟರ್ ವೆಂಚರ್ಸ್ ಇಂಡಿಯಾ), ಸದಸ್ಯರು: ಐ.ಎಸ್.ಎನ್. ಪ್ರಸಾದ್ (ಪ್ರಧಾನ ಕಾರ್ಯದರ್ಶಿ, ಐಟಿ ಮತ್ತು ಬಿಟಿ ಇಲಾಖೆ), ಪ್ರೊ.ಎಸ್.ಸಡಗೋಪನ್ (ನಿರ್ದೇಶಕರು, ಐಐಟಿ, ಬೆಂಗಳೂರು), ಡಾ.ಸತ್ಯಗುಪ್ತ (ಅಧ್ಯಕ್ಷರು, ಇಂಡಿಯಾ ಸೆಮಿಕಂಡಕ್ಟರ್ ಅಸೋಸಿಯೇಷನ್), ಸಂಜಯ್ ನಾಯಕ್ (ಸಿಇಒ, ತೇಜಸ್ ನೆಟ್‌ವರ್ಕ್ಸ್), ಡಾ.ಶ್ರೀಧರ್ ಮಿಟ್ಟಾ (ನಿರ್ವಾಹಕ ನಿರ್ದೇಶಕ, ನೆಕ್ಟ್ ವೆಲ್ತ್ ಎಂಟರ್‌ಪ್ರೀನರ್ಸ್, ನಾಸ್ಕಾಂ ಪ್ರತಿನಿಧಿ), ಎಸ್.ಆರ್.ಗೋಪಾಲನ್ (ಅಧ್ಯಕ್ಷ, ಟಿಐಇ), ಕಿರಣ್ ಶಾ (ಸಿಇಒ, ವೆಲಾಂಕಣಿ ಇನ್ಫಾಸ್ಟ್ರಕ್ಚರ್), ಸುದೀಪ್ ಬ್ಯಾನರ್ಜಿ (ಮಾಜಿ ಸಿಇಒ, ಎಲ್ ಅಂಡ್ ಟಿ ಇನ್ಫೋಟೆಕ್, ಮುಂಬೈ).

ಅರ್ಥಹೀನ ಪ್ರಸ್ತಾವ

ಹಿಂದೆ ಬಡ ರೈತರ ಜಮೀನನ್ನು ಬಡವರ ಮನೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡದ್ದು ಹಗರಣವಾಗಿದೆ. ಈಗ ಶ್ರೀಮಂತರಿಗಾಗಿ, ಹೈಟೆಕ್ ಉದ್ಯಮಗಳಿಗಾಗಿ ಭೂಸ್ವಾಧೀನದ ಪ್ರಸ್ತಾವ ಮಾಡಲಾಗಿದೆ. ಮಲೇಷ್ಯಾದಲ್ಲಿರುವಂತೆ ಎಲ್ಲ ನಿರ್ಮಾಣಗಳಲ್ಲಿ ಶೇ 30ರಷ್ಟನ್ನು ಕೈಗೆಟಕುವ ದರದ ವಸತಿ ಯೋಜನೆಗಳಿಗೆಂದು ಸರ್ಕಾರಕ್ಕೆ ನೀಡಲೇಬೇಕಿರುವಂತೆ ಇಲ್ಲೂ ಅಳವಡಿಸಿಕೊಂಡರೆ ಉತ್ತಮ. 2007ರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 111 ಗ್ರಾಮಗಳಿಗೆ ಇನ್ನೂ ಸಮರ್ಪಕ ಕುಡಿಯುವ ನೀರು, ನೈರ್ಮಲ್ಯ ಹಾಗೂ ವಿದ್ಯುತ್ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಎಫ್‌ಎಸ್‌ಐ ಹೆಚ್ಚಳದ ಪ್ರಸ್ತಾವ ಅರ್ಥಹೀನ.

-ಅಲ್ಮಿತ್ರಾ ಪಟೇಲ್, ಪೌರ ತಜ್ಞೆ


ನಿವಾಸಿಗಳ ಮೇಲೆ ಹೆಚ್ಚಿನ ಹೊರೆ

ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಎಫ್‌ಎಸ್‌ಐ ಹೆಚ್ಚಳದಿಂದ ಅಲ್ಲಿ ಈಗಾಗಲೇ ವಾಸಿಸುತ್ತಿರುವ ನಿವಾಸಿಗಳ ಮೇಲೆ ಹೊರೆ ಬೀಳುತ್ತದೆ. ಅಸ್ತಿತ್ವದಲ್ಲಿರುವ ರಸ್ತೆ, ಮೈದಾನ, ಉದ್ಯಾನ ಮುಂತಾದ ನಾಗರಿಕ ಸವಲತ್ತುಗಳನ್ನೇ ಹೊಸ ನಿವಾಸಿಗಳು ಉಪಯೋಗಿಸುವುದರಿಂದ ಒತ್ತಡವೂ ಹೆಚ್ಚುತ್ತದೆ. ನಗರದ ಜನತೆಗೆ ಮೂಲಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಬೇಕು.

-ಶಿರಿಷ್ ಪಟೇಲ್, ನಗರ ಯೋಜನಾ ತಜ್ಞಹಸಿರು ಪರಿಸರ ಹಾಳಾಗುತ್ತದೆ

ಇದೊಂದು ಅಪಾಯಕಾರಿ ಬೆಳವಣಿಗೆ. ಎಫ್‌ಎಸ್‌ಐ ಹೆಚ್ಚಳದಿಂದ ಜನಸಾಂದ್ರತೆ ಹೆಚ್ಚುವುದಲ್ಲದೆ ನಗರದ ಹಸಿರು ಪರಿಸರಗಳು ಹಾಳಾಗುತ್ತವೆ. ಈ ಸಾಂದ್ರತೆಯನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ ದುರಾಡಳಿತದ ಫಲವಾಗಿ ಜನರು ಹೆಚ್ಚು ತೊಂದರೆಗೆ ಒಳಗಾಗುತ್ತಾರೆ. ನಾಗರಿಕ ಸೌಲಭ್ಯಗಳನ್ನು ಸಮರ್ಪಕವಾಗಿ ಹೆಚ್ಚಿಸದೇ ಎಫ್‌ಎಸ್‌ಐ ಹೆಚ್ಚಳದಿಂದ ಜೀವನದ ಗುಣಮಟ್ಟವೂ ಕಡಿಮೆಯಾಗುತ್ತದೆ. ನಮ್ಮ ಚಿಂತನೆಗಳು ಜೀವನ ಗುಣಮಟ್ಟವನ್ನು ಉತ್ತಮಗೊಳಿಸುವತ್ತ ಸಾಗಬೇಕೇ ಹೊರತು ಎಫ್‌ಎಸ್‌ಐ ಹೆಚ್ಚಳದ ಪರಿಹಾರಕ್ಕೆ ಜಿಗಿಯುವುದಲ್ಲ.

-ಮಹಾಲಕ್ಷ್ಮಿ ಪಾರ್ಥಸಾರಥಿ, `ನಮ್ಮ ಬೆಂಗಳೂರು' ಪ್ರತಿಷ್ಠಾನದ ನಿರ್ದೇಶಕಿಶೂನ್ಯ ಪರಿಹಾರ ಸೂಚಿಸುವ ವರದಿ

ಬೆಂಗಳೂರಿಗೆ ಬೇಕಿರುವುದು ನಾಗರಿಕರ ಪಾಲ್ಗೊಳ್ಳುವಿಕೆಗಳಿಂದ ವಿಕಸಿತವಾದ ಒಂದು ದೂರದೃಷ್ಟಿಯುಳ್ಳ ಸಮಗ್ರವಾದ ಯೋಜನಾ ನಕ್ಷೆ. ನಮಗೆ ಎಂತಹ ಬೆಂಗಳೂರು ಬೇಕೆಂದು ನಾಗರಿಕರು ನಿರ್ಧರಿಸುವಂತಿರಬೇಕು. ವರದಿಯು ತನ್ನ ಶಿಫಾರಸುಗಳ ಅನುಷ್ಠಾನದ ಮೇಲ್ವಿಚಾರಣೆಗಾಗಿ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಲು ಸೂಚಿಸಿದೆ. ಇದು ಪರೋಕ್ಷವಾಗಿ ಆಡಳಿತದ ಮೇಲೆ ಖಾಸಗಿ ವಲಯ ಹಿಡಿತ ಸಾಧಿಸುವ ಪ್ರಯತ್ನ. ಇದು ಅಗತ್ಯ ಸಂಪನ್ಮೂಲಗಳ ಬಗ್ಗೆ ಯೋಚಿಸದೆ ಶೂನ್ಯ ಪರಿಹಾರಗಳನ್ನು ಸೂಚಿಸುವ ಶಿಫಾರಸು ವರದಿ.

-ವಿಜಯನ್ ಮೆನನ್, ಕೋರಮಂಗಲ ನಿವಾಸಿಗಳಅಭಿವೃದ್ಧಿ ಸಂಘದ ಅಧ್ಯಕ್ಷ ನಮ್ಮದೇ ಮಾದರಿ ರೂಪಿಸಬೇಕು

ನಾವು ಎತ್ತರದ ಕಟ್ಟಡಗಳ ಬಗ್ಗೆ ಯೋಚಿಸದೆ ಈಗಿನ ಸಮಸ್ಯೆಗಳನ್ನು ಮೊದಲು ಬಗೆಹರಿಸಬೇಕು. ಆಡಳಿತದಲ್ಲಿ ಶೀಘ್ರ ನಿರ್ಧಾರ ಹಾಗೂ ಅನುಷ್ಠಾನ ಸಾಧ್ಯವಾಗಿರುವ ಶ್ರೀಮಂತ ಪ್ರದೇಶಗಳಾಗಿರುವ ದುಬೈ, ಮ್ಯಾನ್ ಹಾಟನ್‌ಗಳನ್ನು ಅನುಸರಿಸದೆ ಜನರ ಪಾಲುದಾರಿಕೆಯಿರುವ, ಪಾರದರ್ಶಕ ಆಡಳಿತದ ನಮ್ಮದೇ ಮಾದರಿಯನ್ನು ರೂಪಿಸಬೇಕು.

-ಟಿ.ವಿದ್ಯಾಧರ್, ಫಾರ್ವರ್ಡ್ ಹೆಬ್ಬಾಳದ ಅಧ್ಯಕ್ಷಮೊದಲು ಮೂಲಸೌಕರ್ಯ ಅಭಿವೃದ್ಧಿಯಾಗಲಿ

ನಗರದಲ್ಲಿ ಬಿಲ್ಡರ್‌ಗಳು ಕಾನೂನು ಉಲ್ಲಂಘಿಸಿಯೇ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಎಫ್‌ಎಸ್‌ಐ ಹೆಚ್ಚಿಸಲು ಅನುವು ಮಾಡಿಕೊಟ್ಟರೆ ಇನ್ನಷ್ಟು ಇಂತಹ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ನಗರದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸದೆ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಕಸ ಸಮಸ್ಯೆ ಬಿಗಡಾಯಿಸಿದೆ. ವಾಹನಗಳ ಪ್ರಮಾಣವೂ ವಿಪರೀತವಾಗಿದೆ. ಈ ಸಮಸ್ಯೆಗಳಿಗೆ ಮೊದಲು ಪರಿಹಾರ ಕಂಡುಕೊಳ್ಳಬೇಕು.

-ಆನಂದ್ ಶೀರೂರ್, ಮಲ್ಲೇಶ್ವರ ಸ್ವಾಭಿಮಾನ ಉಪಕ್ರಮದ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.