`ಎಫ್‌ಐಆರ್'ಗೆ ಆಕ್ರೋಶ

7
ರಾಯಲ್ ಆರ್ಕಿಡ್ ದುರಂತ: ಹೈಕೋರ್ಟ್ ವಿಚಾರಣೆ

`ಎಫ್‌ಐಆರ್'ಗೆ ಆಕ್ರೋಶ

Published:
Updated:

ಬೆಂಗಳೂರು: ಶಿವಮೊಗ್ಗದ ರಾಯಲ್ ಆರ್ಕಿಡ್ ಹೋಟೆಲ್‌ನ ಮ್ಯಾನ್‌ಹೋಲ್‌ನಲ್ಲಿ ಕಾರ್ಮಿಕರೊಬ್ಬರು ಬಿದ್ದು, ಉಸಿರುಗಟ್ಟಿ ಮೃತಪಟ್ಟ ಘಟನೆ ಕುರಿತು ಪೊಲೀಸರು ಸಿದ್ಧಪಡಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹೈಕೋರ್ಟ್, `ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಇದು' ಎಂದು ಕಟುವಾಗಿ ಹೇಳಿದೆ.`ಶ್ರೀಮಂತರನ್ನು ರಕ್ಷಿಸುವುದು ಮಾತ್ರ ಪೊಲೀಸರ ಕೆಲಸವಲ್ಲ. ಇದೇ ಮಾದರಿಯ ಅವಿವೇಕದ ಎಫ್‌ಐಆರ್‌ಗಳನ್ನೇ ಅಲ್ಲಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಸಿದ್ಧಪಡಿಸುವುದಾದರೆ, ಅವರನ್ನು ಅಮಾನತು ಮಾಡಿ ಎಂದು ಆದೇಶ ನೀಡಬೇಕಾಗುತ್ತದೆ' ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಗುರುವಾರ ಮೌಖಿಕ ಎಚ್ಚರಿಕೆ ನೀಡಿದೆ.ಈ ಹೋಟೆಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಒಡೆತನಕ್ಕೆ ಸೇರಿದ್ದು ಎನ್ನಲಾಗಿದೆ. ಈ ಹೋಟೆಲ್‌ನ ಮ್ಯಾನ್‌ಹೋಲ್‌ನಲ್ಲಿ ಸೆಪ್ಟೆಂಬರ್ 23ರಂದು ಕಾರ್ಮಿಕರೊಬ್ಬರು ಬಿದ್ದು ಉಸಿರುಗಟ್ಟಿ ಮೃತಪಟ್ಟರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇನ್ನೊಬ್ಬ ಕಾರ್ಮಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.ಆರ್.ಎನ್. ನರಸಿಂಹಮೂರ್ತಿ ಮತ್ತು ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠಕ್ಕೆ ಸರ್ಕಾರದ ಪರ ವಕೀಲರು, ಶಿವಮೊಗ್ಗದ ಘಟನೆ ಕುರಿತು ದಾಖಲಾಗಿರುವ ಎಫ್‌ಐಆರ್ ಪ್ರತಿ ಸಲ್ಲಿಸಿದರು. `ಫಿಲ್ಟರ್ ತೊಟ್ಟಿ ಸ್ವಚ್ಛಮಾಡುವ ಕಾರ್ಮಿಕರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು' ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿರುವ ಸಾಲು ಮುಖ್ಯ ನ್ಯಾಯಮೂರ್ತಿಯವರ ಕೆಂಗಣ್ಣಿಗೆ ಗುರಿಯಾಯಿತು.`ಎರಡು ಅಡಿ ಅಗಲದ ಸೆಪ್ಟಿಕ್ ತೊಟ್ಟಿಯಲ್ಲಿ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬೀಳಲು ಹೇಗೆ ಸಾಧ್ಯ? ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಆ ತೊಟ್ಟಿಯಲ್ಲಿ ಇಳಿಯಿರಿ ಎಂದು ನೀವೇ (ಹೋಟೆಲ್ ಆಡಳಿತ ಮಂಡಳಿ) ಅವರಿಗೆ ಸೂಚನೆ ನೀಡಿದ್ದೀರಿ. ಆ ತೊಟ್ಟಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬೀಳುವಂತೆ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕರಿಗೆ ಒಮ್ಮೆ ಹೇಳಿ ನೋಡೋಣ?!' ಎಂದು ಮುಖ್ಯ ನ್ಯಾಯಮೂರ್ತಿ ಸೇನ್ ಸರ್ಕಾರದ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡರು.`900 ರೂಪಾಯಿ ಸಂಭಾವನೆಗಾಗಿ ಕಾರ್ಮಿಕರು ತೊಟ್ಟಿ ಶುಚಿಗೊಳಿಸುವ ಕಾರ್ಯಕ್ಕೆ ಬಂದಿದ್ದರು ಎಂದು ಎಫ್‌ಐಆರ್ ಹೇಳುತ್ತದೆ. ಜೀವಕ್ಕೆ ಎರವಾಗುವಂಥ ಕೆಲಸವನ್ನು 900 ರೂಪಾಯಿಗೆ ಮಾಡಲು ಅವರು ಅನಕ್ಷರಸ್ಥರೇ? ಎಫ್‌ಐಆರ್‌ನಲ್ಲಿ ಹೇಳುವಂತೆ ಅದು ಫಿಲ್ಟರ್ ತೊಟ್ಟಿ ಹೌದಾ? ವಿವೇಚನೆ ಇಲ್ಲದೆ ಎಫ್‌ಐಆರ್ ಅನ್ನು ಸಿದ್ಧಪಡಿಸಲಾಗಿದೆ' ಎಂದೂ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.ಮ್ಯಾನ್‌ಹೋಲ್‌ಗಳಲ್ಲಿ ಕಾರ್ಮಿಕರು ಉಸಿರುಗಟ್ಟಿ ಮೃತಪಡುವುದನ್ನು ತಪ್ಪಿಸಲು ನ್ಯಾಯಾಲಯಗಳು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಆದರೆ, ಅಂಥ ಸಾವುಗಳನ್ನು ತಡೆಗಟ್ಟಲು ಆಗುತ್ತಿಲ್ಲ. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಅಗತ್ಯ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಮುಂದಿನ ವಿಚಾರಣೆ ವೇಳೆ ರಾಯಲ್ ಆರ್ಕಿಡ್ ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕರು ಖುದ್ದು ಹಾಜರಿರಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ವಿಚಾರಣೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry