ಎಫ್‌ಐಆರ್ ದಾಖಲಿಸಲು ಬಿಜೆಪಿ ಒತ್ತಾಯ

7
ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಕಡತ ನಾಪತ್ತೆ ಪ್ರಕರಣ

ಎಫ್‌ಐಆರ್ ದಾಖಲಿಸಲು ಬಿಜೆಪಿ ಒತ್ತಾಯ

Published:
Updated:

ನವದೆಹಲಿ (ಪಿಟಿಐ): ವಿವಾದಿತ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ಮಹತ್ವದ ಕಡತಗಳು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಬಿಐ ಎದುರು ಸ್ವಯಂಪ್ರೇರಿತರಾಗಿ ಹಾಜರಾಗಿ ಹೇಳಿಕೆ ನೀಡುವಂತೆ ಬಿಜೆಪಿ ಬುಧವಾರ ಒತ್ತಾಯಿಸಿದೆ. ಕಡತ ನಾಪತ್ತೆ ಪ್ರಕರಣ ಕುರಿತು ತಕ್ಷಣ ಎಫ್‌ಐಆರ್ ದಾಖಲಿಸುವಂತೆಯೂ ಒತ್ತಡ ಹೇರಿದೆ.ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಸುಮಾರು 186 ಲಕ್ಷ ಕೋಟಿ ರೂಪಾಯಿ ಅವ್ಯವಹಾರ ತುಂಬಾ ಗಂಭೀರವಾದ ವಿಷಯವಾಗಿದ್ದು, ಸರ್ಕಾರ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ. ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಆರೋಪಿಸಿವೆ.ಸರ್ಕಾರ ಮತ್ತು ಬಿಜೆಪಿ ನಡುವೆ ನಡೆದ ಸಂಧಾನದ ಫಲವಾಗಿ ಕಡತ ನಾಪತ್ತೆ ಪ್ರಕರಣದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಲಿಲ್ಲ. ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಕುರಿತು ಹೇಳಿಕೆ ನೀಡಿ ಚರ್ಚೆಗೆ ತೆರೆ ಎಳೆದರು.   

 

ಕಡತಗಳು ನಾಪತ್ತೆಯಾಘಿವೆ ಎಂಬುವುದನ್ನು ನಂಬುವುದಿಲ್ಲ. ಅವನ್ನು ಕಳವು ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ತಕ್ಷಣ ಎಫ್‌ಐಆರ್ ದಾಖಲಿಸಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಒತ್ತಾಯಿಸಿದರು. ಯಾವಾಗ ಎಫ್‌ಐರ್ ದಾಖಲಿಸಲಾಗುತ್ತದೆ ಎಂಬ ಕುರಿತು ಸರ್ಕಾರ ಸ್ಪಷ್ಟ ಹೇಳಿಕೆ ನೀಡಬೇಕು. ಇಲ್ಲದಿದ್ದರೆ ಸರ್ಕಾರ ಏನನ್ನೋ ಮುಚ್ಚಿಡಲು ಯತ್ನಿಸುತ್ತಿದೆ ಎಂದು ಮನವರಿಕೆಯಾಗುತ್ತದೆ ಎಂದರು.2006ರಿಂದ 2009ರ  ಅವಧಿಯಲ್ಲಿ ಪ್ರಧಾನಿ ಸಿಂಗ್ ಕಲ್ಲಿದ್ದಲು ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಹೀಗಾಗಿ ಅವರ ಮೇಲೆ ಅನುಮಾನ ಮೂಡುತ್ತಿದ್ದು, ಈ ಪ್ರಕರಣದಲ್ಲಿ ಆರೋಪಗಳಿಂದ ಮುಕ್ತರಾಗಬೇಕು ಎಂದಾದಲ್ಲಿ ಸಿಂಗ್ ಸ್ವಯಂಪ್ರೇರಿತರಾಗಿ ಸಿಬಿಐ ಮುಂದೆ ಹಾಜರಾಗಬೇಕು ಎಂದು ಸುಷ್ಮಾ ಸಲಹೆ ಮಾಡಿದರು.ಕಡತದಲ್ಲಿದ್ದ ಲಿಖಿತ ದಾಖಲೆಗಳನ್ನು ನಾಶಪಡಿಸಲಾಗಿದ್ದು, ತನಿಖೆಗೂ ಅವಕಾಶ ನೀಡುತ್ತಿಲ್ಲ. ಒಂದು ದಿನ ಪ್ರಕರಣವನ್ನು ಮುಚ್ಚಿ ಹಾಕಲಾಗುತ್ತದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.ಉಭಯ ಸದನಗಳಲ್ಲಿ ವಿರೋಧ ಪಕ್ಷಗಳ ನಾಯಕರ ಈ ಬೇಡಿಕೆಗಳಿಗೆ ಎಡಪಕ್ಷಗಳು, ಸಮಾಜವಾದಿ ಪಕ್ಷ, ಎಐಎಡಿಎಂಕೆ ಮತ್ತು ಟಿಡಿಪಿ ಧ್ವನಿಗೂಡಿಸಿದವು. ಜೆಡಿಯುನ ಶರದ್ ಯಾದವ್, ಸಿಪಿಐನ ಗುರುದಾಸ್ ದಾಸ್‌ಗುಪ್ತಾ, ಡಿ.ರಾಜಾ, ಸಿಪಿಐಎಂನ ಸಿತಾರಾಂ ಯೆಚೂರಿ, ಸಮಾಜವಾದಿ ಪಕ್ಷದ ಶೈಲೇಂದ್ರ ಕುಮಾರ್, ಬಿಎಸ್‌ಪಿಯ ದಾರಾಸಿಂಗ್ ಚೌಹಾಣ್, ಟಿಎಂಸಿಯ ಸುಗತ್ ರಾಯ್ ಹಾಗೂ ಬಸುದೇವ್ ಆಚಾರ್ಯ್ ಅವರು ತಕ್ಷಣ ಎಫ್‌ಐಆರ್ ದಾಖಲಿಸಲು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry