ಎಫ್‌ಡಿಐಗೆ ಯುಪಿಎ ಮಿತ್ರಪಕ್ಷಗಳ ವಿರೋಧ

7

ಎಫ್‌ಡಿಐಗೆ ಯುಪಿಎ ಮಿತ್ರಪಕ್ಷಗಳ ವಿರೋಧ

Published:
Updated:
ಎಫ್‌ಡಿಐಗೆ ಯುಪಿಎ ಮಿತ್ರಪಕ್ಷಗಳ ವಿರೋಧ

ನವದೆಹಲಿ (ಪಿಟಿಐ): ಬಹುಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ 51ರಷ್ಟು ನೇರ ವಿದೇಶಿ ಬಂಡವಾಳಕ್ಕೆ (ಎಫ್‌ಡಿಐ) ಅವಕಾಶ ಕೊಡುವ ನಿರ್ಧಾರದ ಮೇಲೆ ಮಂಗಳವಾರ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಯುಪಿಎ ಮಿತ್ರಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ, ಡಿಎಂಕೆ ಕೂಡ ವಿರೋಧ ಪಕ್ಷಗಳ ಜತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.ಆದರೆ ಬುಧವಾರ ನಡೆಯಲಿರುವ ಮತದಾನ ಕುರಿತು ಮಿತ್ರಪಕ್ಷಗಳು ಖಚಿತವಾದ ನಿಲುವನ್ನು ಪ್ರಕಟಿಸಿಲ್ಲ. ಎಫ್‌ಡಿಐಗೆ ವಿರೋಧ ಇದ್ದರೂ ಸರ್ಕಾರವನ್ನು ಅಸ್ಥಿರಗೊಳಿಸುವುದಿಲ್ಲ ಎಂದು ಡಿಎಂಕೆ ಹೇಳಿದೆ.`ಎಫ್‌ಡಿಐ ನಿರ್ಧಾರವು ಚುನಾವಣಾ ಭವಿಷ್ಯಕ್ಕೆ ಮಾರಕವಾಗಲಿದೆ. ಇದರಿಂದ ಬಿಜೆಪಿ ಲಾಭ ಪಡೆಯುತ್ತದೆ' ಎಂದು ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಸರ್ಕಾರವನ್ನು ಎಚ್ಚರಿಸಿದರು.`ಸರ್ಕಾರ ತರಾತುರಿಯಲ್ಲಿ ಇದನ್ನು ಜಾರಿ ಮಾಡಬಾರದು' ಎಂದು ಬಿಎಸ್‌ಪಿ ಮುಖಂಡ ದಾರಾ ಸಿಂಗ್ ಚೌಹಾಣ್ ಕೂಡ ಬುದ್ಧಿಮಾತು ಹೇಳಿದರು.`ಎಫ್‌ಡಿಐನಿಂದ ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ ಎನ್ನುವುದು ಶುದ್ಧ ಸುಳ್ಳು. ದೇಶದಲ್ಲಿರುವ 25 ಕೋಟಿ ಸಣ್ಣ ವ್ಯಾಪಾರಿಗಳನ್ನು ಬೀದಿ ಪಾಲು ಮಾಡುವ ಹುನ್ನಾರ ಇದು' ಮುಲಾಯಂ ದೂರಿದರು.ಎಫ್‌ಡಿಐ ವಿರೋಧ ವಿಷಯಕ್ಕೆ ಮಹಾತ್ಮ ಗಾಂಧಿಜಿ ಅವರನ್ನು ಉಲ್ಲೇಖಿಸಿದ ಯಾದವ್ ಹಾಗೂ ಚೌಹಾಣ್, ` ಸೋನಿಯಾ ಗಾಂಧಿ ಅವರು ಕನಿಷ್ಠ ಪಕ್ಷ ತಮ್ಮ ಅಡ್ಡಹೆಸರಿಗೆ ಬೆಲೆ ಕೊಟ್ಟಾದರೂ ಈ ನಿರ್ಧಾರವನ್ನು ಕೈಬಿಡಬೇಕು' ಎಂದು ಆಗ್ರಹಿಸಿದರು.ಡಿಎಂಕೆ ಮುಖಂಡ ಟಿ.ಕೆ.ಎಸ್.ಇಳಂಗೋವನ್ ಮಾತನಾಡಿ, ` ನಮ್ಮ ಪಕ್ಷವು ಎಫ್‌ಡಿಐ ನಿರ್ಧಾರವನ್ನು ಖಡಾಖಂಡಿತವಾಗಿ ವಿರೋಧಿಸುತ್ತದೆ. ಆದರೂ ನಾವು ನಿಮ್ಮ ವಿರುದ್ಧ ಮತ ಹಾಕುವುದಿಲ್ಲ. ಈ ವಿಷಯದಲ್ಲಿ ವಿರೋಧ ಪಕ್ಷದ ಜತೆ ಸೇರುವುದಿಲ್ಲ' ಎಂದರು.ಪಾಶ್ಚಿಮಾತ್ಯ ಆರ್ಥಿಕತೆಯಲ್ಲಿ ಸೂಪರ್ ಮಾರ್ಕೆಟ್ ಪರಿಕಲ್ಪನೆಯು ವೈಫಲ್ಯಗೊಂಡಿದೆ. ಹೀಗಿರುವಾಗ ಎಫ್‌ಡಿಐನಿಂದ ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚುತ್ತದೆ ಎಂದು ಯಾವ ಆಧಾರದಲ್ಲಿ ಕೇಂದ್ರ ಸರ್ಕಾರವು ಸಮರ್ಥಿಸಿಕೊಳ್ಳುತ್ತಿದೆ? ಪ್ರಧಾನಿ ಮನಮೋಹನ್ ಸಿಂಗ್ ಅವರು 2002ರಲ್ಲಿ ರಾಜ್ಯಸಭೆಯ ನಾಯಕರಾಗಿದ್ದಾಗ ಎಫ್‌ಡಿಐ ವಿರೋಧಿಸಿದ್ದರು. ಆದರೆ ಈಗ ಅವರು ತಮ್ಮ ನಿಲುವನ್ನು ಬದಲಿಸಿದ್ದು ಯಾಕೆ' ಎಂದು ಬಿಜೆಪಿ ನಾಯಕಿ  ಸುಷ್ಮಾ ಸ್ವರಾಜ್ ಪ್ರಶ್ನಿಸಿದ್ದಾರೆ.

ಬಿಎಸ್‌ವೈ ಬೆಂಬಲಿಗರು `ಪರ'

ಅರಸೀಕೆರೆ: `ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರದ ಪರ ಮತ ಚಲಾಯಿಸುವಂತೆ ನನ್ನ ಬೆಂಬಲಿಗ ಸಂಸದರಿಗೆ ಸೂಚನೆ ನೀಡಿದ್ದೇನೆ' ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry