ಬುಧವಾರ, ಡಿಸೆಂಬರ್ 11, 2019
24 °C

ಎಫ್‌ಡಿಐನಿಂದ ಆರ್ಥಿಕತೆಗೆ ಅನುಕೂಲ: ಡಾ.ಕೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಫ್‌ಡಿಐನಿಂದ ಆರ್ಥಿಕತೆಗೆ ಅನುಕೂಲ: ಡಾ.ಕೋಶಿ

ಹುಬ್ಬಳ್ಳಿ: ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ)ಯನ್ನು ಸ್ವಾಗತಿಸಿರುವ ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾರುಕಟ್ಟೆ ವಿಭಾಗದ ಪ್ರಾಧ್ಯಾಪಕ ಡಾ.ಕೋಶಿ ಅಬ್ರಹಾಂ, `ಎಫ್‌ಡಿಐನಿಂದ ದೇಶದ ಆರ್ಥಿಕತೆಗೆ ಅನುಕೂಲವಾಗಲಿದೆ. ನಿರ್ಲಕ್ಷಕ್ಕೆ ಒಳಗಾಗಿರುವ ಹಲವು ಕ್ಷೇತ್ರಗಳು ಚೇತರಿಸಿಕೊಳ್ಳಲಿವೆ~ ಎಂದು ಪ್ರತಿಪಾದಿಸಿದ್ದಾರೆ.ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರೀಯ ಸಂಸ್ಥಾಪನಾ ದಿನದ ಅಂಗವಾಗಿ ಇತ್ತೀಚೆಗೆ ಏರ್ಪಡಿಸಿದ್ದ `ಭಾರತದ ಚಿಲ್ಲರೆ ಕ್ಷೇತ್ರದಲ್ಲಿ ಎಫ್‌ಡಿಐ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಅವರು, `ಎಫ್‌ಡಿಐ ಆರ್ಥಿಕತೆಯ ಇತರ ವಿಭಾಗಗಳಾದ ಗ್ರಾಹಕರು, ವ್ಯಾಪಾರಿಗಳು ಹಾಗೂ ಸರ್ಕಾರಕ್ಕೆ ಹಲವು ಅವಕಾಶಗಳನ್ನು ಸೃಷ್ಟಿಸಲಿದೆ~ ಎಂದರು.ಸಮಾರೋಪ ಭಾಷಣ ಮಾಡಿದ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆ.ಎಸ್.ಪಾಟೀಲ, `ಭಾರತದಲ್ಲಿ ಚಿಲ್ಲರೆ ವಲಯ ಸಾಕಷ್ಟು ಪ್ರಭಾವಿಯಾಗಿದೆ. ಇಲ್ಲಿ ವೈವಿಧ್ಯ ಸಂಸ್ಕೃತಿಯೂ ಇದೆ. ಹಾಗಾಗಿ ಎಫ್‌ಡಿಐನಿಂದ ದೇಶದ ಆರ್ಥಿಕತೆಗೆ ಯಾವುದೇ ಪರಿಣಾಮ ಆಗುವುದಿಲ್ಲ. ರಾಷ್ಟ್ರದ ನೀತಿಗಳನ್ನು ಬದಲಿಸುವ ಮೂಲಕ ವಿದೇಶಿ ಕಂಪೆನಿಗಳು ದೇಶವನ್ನು ಪ್ರವೇಶಿಸಬಹುದು. ಆದರೆ ಇಲ್ಲಿನ ಚಿಲ್ಲರೆ ವಲಯವನ್ನು ಆಪೋಶನ ಮಾಡಿಕೊಳ್ಳುವುದು ಅಷ್ಟೊಂದು ಸುಲಭವಲ್ಲ~ ಎಂದರು.ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಮೋಹನ್‌ಕುಮಾರ್, `ಎಫ್‌ಡಿಐನಿಂದ ಉದ್ಭವವಾಗುವ ಸಮಸ್ಯೆಗಳನ್ನು ಸೂಕ್ತ ನಿಯಂತ್ರಣ ಕ್ರಮಗಳನ್ನು ಅನುಸರಿಸುವ ಮೂಲಕ ಪರಿಹರಿಸಬಹುದು~ ಎಂದು ಹೇಳಿದರು.

ಪ್ರೊ.ಮಧುಸೂದನ ಗಣ್ಯರನ್ನು ಸ್ವಾಗತಿಸಿದರು. ಪ್ರೊ.ಸುಪ್ರೀತಾ ಲಗಳಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಬಸವರಾಜ ಬೆಣ್ಣಿ ವಂದಿಸಿದರು.ಈ ಸಮ್ಮೇಳನದಲ್ಲಿ ಒಟ್ಟು 160 ಮಂದಿ ಭಾಗವಹಿಸಿದ್ದರು. 45 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಒಟ್ಟು ನಾಲ್ಕು ತಾಂತ್ರಿಕ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು.ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ಎಂ.ಆರ್.ಸೋಲಾಪುರ, ಕರ್ನಾಟಕ ವಿ.ವಿ. ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಎಲ್. ಹೈದರಾಬಾದ್, ಅಡೆಪ್ಟ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ಡಾ.ಎನ್.ಜಿ.ಚಚಡಿ, ಬೆಂಗಳೂರು ವಿ.ವಿ.ಯ ಡಾ.ಎಸ್. ಆರ್.ಕೇಶವ ಗೋಷ್ಠಿಗಳ ಅಧ್ಯಕ್ಷತೆ ವಹಿಸಿದ್ದರು.

ಸಿ.ಡಿ ಬಿಡುಗಡೆ

ಹುಬ್ಬಳ್ಳಿ: ಉತ್ತರಾದಿಮಠಾಧೀಶರಾದ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಹುಬ್ಬಳ್ಳಿಯ ಚಾತುರ್ಮಾಸ್ಯದಲ್ಲಿ ಚಿತ್ರೀಕರಿಸಿದ ಸಿ.ಡಿಗಳು ಕಲ್ಯಾಣನಗರದ ಉತ್ತರಾದಿಮಠದಲ್ಲಿ ವಿತರಣೆಗೆ ವ್ಯವಸ್ಥೆಗೊಳಿಸಲಾಗಿದೆ.

ಚಾತುರ್ಮಾಸ್ಯದ ದಿವ್ಯ ದರ್ಶನದ ಅಮೃತ ಬಿಂದುಗಳು, ಪೂಜಾತ್ರಯ ವಿಶೇಷ, ಸ್ಪರ್ಧಾ ವಿಶೇಷ ಹಾಗೂ ಯುವ ದರ್ಶನ  ಸಿ.ಡಿಗಳು ಲಭ್ಯವಿವೆ.  ಮಾಹಿತಿಗೆ ದೂರವಾಣಿ 97391 94333 ಸಂಪರ್ಕಿಸಬಹುದು.

ಪ್ರತಿಕ್ರಿಯಿಸಿ (+)