ಗುರುವಾರ , ಮೇ 19, 2022
24 °C

ಎಫ್‌ಡಿಐ ಇನ್ನಷ್ಟು ಉದಾರ: ಪ್ರಣವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮುಂದಿನ 5 ವರ್ಷಗಳಲ್ಲಿ ಮೂಲ ಸೌಕರ್ಯ ರಂಗದಲ್ಲಿ ರೂ. 45 ಲಕ್ಷ ಕೋಟಿಗಳಷ್ಟು ಭಾರಿ ಪ್ರಮಾಣದ ಬಂಡವಾಳ ಹೂಡಿಕೆಯ ಗುರಿ ಈಡೇರಿಸಲು ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯಲ್ಲಿ ಇನ್ನಷ್ಟು ಉದಾರೀಕರಣ ತರುವುದನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.2012-17ರ ವರೆಗಿನ 12ನೇ ಪಂಚವಾರ್ಷಿಕ ಯೋಜನಾ ಅವಧಿಯಲ್ಲಿ ಮೂಲ ಸೌಕರ್ಯ ರಂಗದಲ್ಲಿ ರೂ. 45 ಲಕ್ಷ ಕೋಟಿಗಳಷ್ಟು (1 ಲಕ್ಷ ಕೋಟಿ ಡಾಲರ್) ಬಂಡವಾಳ ಹೂಡಿಕೆ ಮಾಡಬೇಕಾಗಿದೆ. ಈ ಭಾರಿ ಪ್ರಮಾಣದ ಸಂಪನ್ಮೂಲ ಒದಗಿಸಲು ‘ಎಫ್‌ಡಿಐ’ ನಿಯಮದಲ್ಲಿ ಇನ್ನಷ್ಟು ಸುಧಾರಣೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ  ಪ್ರಣವ್ ತಿಳಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ‘ಎಫ್‌ಡಿಐ’ ಪ್ರಮಾಣ ಕಡಿಮೆಯಾಗಿರುವುದು ಮತ್ತು ಅದರಿಂದ ಚಾಲ್ತಿ ಖಾತೆ ಕೊರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ. ಮಧ್ಯಂತರ ಅವಧಿಯಲ್ಲಿ ಆರ್ಥಿಕ ವೃದ್ಧಿ ದರದ ಸ್ಥಿರತೆಯು ಮೂಲ ಸೌಕರ್ಯ ರಂಗದ ಅಭಿವೃದ್ಧಿ ಮತ್ತು ಗುಣಮಟ್ಟ ಆಧರಿಸಿರುತ್ತದೆ ಎಂದು ಪ್ರಣವ್ ಹೇಳಿದ್ದಾರೆ.ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ - ಡಿಸೆಂಬರ್ ಅವಧಿಯಲ್ಲಿ ‘ಎಫ್‌ಡಿಐ’ ಹಿಂದಿನ ವರ್ಷದ ಇದೇ ಅವಧಿಯಲ್ಲಿನ 21 ಶತಕೋಟಿ ಡಾಲರ್‌ಗಳಿಗೆ (ರೂ.90,000 ಕೋಟಿ) ಹೋಲಿಸಿದರೆ 16 ಶತಕೋಟಿ ಡಾಲರ್‌ಗಳಿಗೆ (ರೂ.72,000 ಕೋಟಿ) ಅಂದರೆ ಶೇ 23ರಷ್ಟು ಕುಸಿದಿತ್ತು. ಬಂಡವಾಳ ಚಲನವಲನ ಹೊರತುಪಡಿಸಿ  ವಿದೇಶಿ ವಿನಿಮಯ ಒಳ ಮತ್ತು ಹೊರ ಹರಿವಿನ ವ್ಯತ್ಯಾಸ ಮೊತ್ತವಾಗಿರುವ ಚಾಲ್ತಿ ಖಾತೆ ಕೊರತೆಯು ಕಳೆದ ಹಣಕಾಸು ವರ್ಷದಲ್ಲಿ ‘ಜಿಡಿಪಿ’ಯ ಶೇ 2.9ರಷ್ಟಿತ್ತು. ವರ್ಷಾಂತ್ಯಕ್ಕೆ ಇದು ‘ಜಿಡಿಪಿ’ಯ ಶೇ 3.5ಕ್ಕೆ ಏರಲಿದೆ ಎಂದು ಅಂದಾಜು ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.