ಭಾನುವಾರ, ನವೆಂಬರ್ 17, 2019
21 °C

`ಎಫ್‌ಡಿಐ ಮಿತಿ ಹೆಚ್ಚಳವೇ ಪ್ರಮುಖ ಕಾರ್ಯಸೂಚಿ'

Published:
Updated:
`ಎಫ್‌ಡಿಐ ಮಿತಿ ಹೆಚ್ಚಳವೇ ಪ್ರಮುಖ ಕಾರ್ಯಸೂಚಿ'

ವಾಷಿಂಗ್ಟನ್ (ಪಿಟಿಐ):ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಶೇ 26ರಿಂದ ಶೇ 49ಕ್ಕೆ ಹೆಚ್ಚಿಸುವುದು ಯುಪಿಎ ಸರ್ಕಾರದ ಪ್ರಮುಖ ಕಾರ್ಯಸೂಚಿ. ಮುಂಬರುವ ಸಂಸತ್ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆಗೆ ಒಪ್ಪಿಗೆ ಲಭಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಶನಿವಾರ ಇಲ್ಲಿ ಹೇಳಿದರು.ವಾಷಿಂಗ್ಟನ್ ಮೂಲದ ಅಂತರರಾಷ್ಟ್ರೀಯ ಆರ್ಥಿಕ ಚಿಂತಕರ ಚಾವಡಿಯಾದ `ಪೀಟರ್‌ಸನ್ ಇನ್‌ಸ್ಟಿಟ್ಯೂಟ್' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಿಮಾ ವಲಯದಲ್ಲಿ `ಎಫ್‌ಡಿಐ' ಮಿತಿ ಹೆಚ್ಚಿಸಬೇಕಾದ ಅಗತ್ಯ ಈಗಾಗಲೇ ವಿರೋಧ ಪಕ್ಷಗಳಿಗೆ ಮನವರಿಕೆ ಆಗಿದೆ.   ಸುಸ್ಥಿರ ಆರ್ಥಿಕ ಪ್ರಗತಿಯನ್ನು ಅವರೂ  ಒಪ್ಪಿಕೊಳ್ಳುತ್ತಾರೆ. ಹಾಗಾಗಿ ಮಸೂದೆ ಒಪ್ಪಿಗೆ ಪಡೆಯುವ ವಿಶ್ವಾಸ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.  ಹೊಣೆಗಾರಿಕೆ ಇರುವ ಸರ್ಕಾರ ಮಾತ್ರ ಪುನರಾಯ್ಕೆ ಆಗುತ್ತದೆ. ಆರ್ಥಿಕ ಪ್ರಗತಿಗೆ ಆದ್ಯತೆ ನೀಡದಿದ್ದರೆ ಯಾವುದೇ ಸರ್ಕಾರ ಪುನರಾಯ್ಕೆ ಆಗುವುದಿಲ್ಲ ಎಂದೂ ಅವರು ಹೇಳಿದರು.ವಿತ್ತೀಯ ಕೊರತೆ

ವಿತ್ತಿಯ ಕೊರತೆಯನ್ನು ಪ್ರತಿ ವರ್ಷ 60 ಮೂಲಾಂಶಗಳಂತೆ ತಗ್ಗಿಸಲು ಸಾಕಷ್ಟು ಉತ್ತೇಜನಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪೂರೈಕೆ ಭಾಗದಲ್ಲಿನ ಲೋಪಗಳನ್ನು ಸರಿಪಡಿಸುವ ಮೂಲಕ ಹಣದುಬ್ಬರವನ್ನೂ ಹಿತಕರ ಮಟ್ಟಕ್ಕೆ ತಗ್ಗಿಸಲಾಗುವುದು.

ಈ ಮೂಲಕ ಆರ್ಥಿಕ ವೃದ್ಧಿ ದರವನ್ನು ಮುಂದಿನ ಹಣಕಾಸು ವರ್ಷದ ಅಂತ್ಯಕ್ಕೆ ಶೇ 7ರ ಪಥಕ್ಕೆ ತರಲಾಗುವುದು ಎಂದು ಚಿದಂಬರಂ ವಿವರಿಸಿದರು.   ಹೂಡಿಕೆಗೆ ಸಂಬಂಧಪಟ್ಟ ಸಂಪುಟ ಸಮಿತಿ ಇತ್ತೀಚೆಗೆ 140 ಕೋಟಿ ಡಾಲರ್ ಮೊತ್ತದ ಯೋಜನೆಗಳನ್ನು ಇತ್ಯರ್ಥಪಡಿಸಿದೆ ಎಂದರು.

ಪ್ರತಿಕ್ರಿಯಿಸಿ (+)