ಶನಿವಾರ, ಮೇ 8, 2021
26 °C
ದೂರಸಂಪರ್ಕ, ರಕ್ಷಣಾ ವಲಯ

`ಎಫ್‌ಡಿಐ' ಮಿತಿ ಹೆಚ್ಚಳ ಅವಶ್ಯ: ಶರ್ಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): `ದೇಶದ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸುವ ಸಲುವಾಗಿ ದೂರಸಂಪರ್ಕ ವಲಯ, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್‌ಡಿಐ)ಗೆ ವಿಧಿಸಿರುವ ಮಿತಿಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಆನಂದ್ ಶರ್ಮಾ ಬಲವಾಗಿ ಪ್ರತಿಪಾದಿಸಿದ್ದಾರೆ.ಸೋಮವಾರದಿಂದ ಹತ್ತು ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ಅವರು, ಇಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು.ಹೆಲ್ಸಿಂಕಿ, ಸೇಂಟ್ ಪೀಟರ್ಸ್‌ಬರ್ಗ್, ಬೆಲ್‌ಫಾಸ್ಟ್ ಮತ್ತು ಲಂಡನ್ ಭೇಟಿ ವೇಳೆ ಜಾಗತಿಕ ಮಟ್ಟದ ಹೂಡಿಕೆದಾರರನ್ನು ಸಂದಿಸಿ, ಭಾರತದಲ್ಲಿ ಬಂಡವಾಳ ಹೂಡಿಕೆ ಕುರಿತು ಅವರಲ್ಲಿರುವ ಸಂಶಯ ನಿವಾರಿಸಲು ಯತ್ನಿಸುವೆ.

ಮುಖ್ಯವಾಗಿ ಬಹು ಬ್ರಾಂಡ್ ಚಿಲ್ಲರೆ ವಹಿವಾಟು ಕ್ಷೇತ್ರಕ್ಕೆ ಸಂಬಂಧಿಸಿ `ಎಫ್‌ಡಿಐ' ಮಿತಿ ಕುರಿತ ಗೊಂದಲಗಳನ್ನು ಪರಿಹರಿಸಲಾಗುವುದು ಎಂದರು.ವಿವಿಧ ದೇಶಗಳಿಂದ ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರಬೇಕಿದೆ. ಅದಕ್ಕಾಗಿ `ಎಫ್‌ಡಿಐ' ಮಿತಿ ಹೆಚ್ಚಿಸಬೇಕಿದ್ದು, ಈ ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವತಿಯಿಂದ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು.`ಇದೇ ವಿಚಾರವಾಗಿ ದೂರಸಂಪರ್ಕ ಮತ್ತು ಹಣಕಾಸು ಖಾತೆ ಸಚಿವರುಗಳ ಜತೆಗೂ ಚರ್ಚಿಸಿದ್ದೇನೆ. ಈ ಕುರಿತ ಪ್ರಸ್ತಾವನೆ ಸಚಿವಾಲಯಗಳಿಂದ ಸಿದ್ಧವಾದ ನಂತರ ಸಂಪುಟ ಸಭೆಯಲ್ಲಿ ಮಂಡಿಸಲಾಗುವುದು. ದೂರಸಂಪರ್ಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಶೇ 100ರಷ್ಟು  ಅವಕಾಶ ನೀಡಬೇಕು ಎಂಬುದು ನನ್ನ ಅಭಿಮತ' ಎಂದು ಸ್ಪಷ್ಟಪಡಿಸಿದರು.ಅಲ್ಲದೆ, ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ವಿದೇಶಿ ನೇರ ಹೂಡಿಕೆ ಮಿತಿ ಹೆಚ್ಚಿಸಬೇಕಿದೆ. ರಕ್ಷಣಾ ಸಾಮಗ್ರಿಗಳ ತಯಾರಿಕಾ ಘಟಕಗಳು ದೇಶದಲ್ಲಿ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ವಿವಿಧ ದೇಶಗಳ ರಕ್ಷಣಾ ಸಾಮಗ್ರಿಗಳ ಕಂಪೆನಿಗಳು ಭಾರತದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಜತೆ ಕೈಜೋಡಿಸಬೇಕು ಎಂಬುದೂ ನಮ್ಮ ಸಚಿವಾಲಯದ ಆಶಯವಾಗಿದೆ ಎಂದರು.ದೇಶದ ಆಮದು ಪ್ರಮಾಣ  ಹೆಚ್ಚುವಲ್ಲಿ ರಕ್ಷಣಾ ಸಾಮಗ್ರಿಗಳ ಖರೀದಿ ಪಾತ್ರವೂ ಇದೆ. ರಕ್ಷಣಾ ಶಸ್ತ್ರಾಸ್ತ್ರ ತಯಾರಿಸುವ ವಿದೇಶಿ ಕಂಪೆನಿಗಳು ಒಂದೊಮ್ಮೆ ದೇಶೀಯ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಭಾರತದ ನೆಲದಲ್ಲಿಯೇ ಕಾರ್ಖಾನೆ ಸ್ಥಾಪಿಸಿದರೆ ವಿದೇಶಿ ವಿನಿಮಯದ ಬಹಳ ದೊಡ್ಡ ಮೊತ್ತ ನಮ್ಮಲ್ಲಿಯೇ ಉಳಿಯುತ್ತದೆ. ಜತೆಗೆ ಹೆಚ್ಚಿನ ಉದ್ಯೋಗಗಳ ಸೃಷ್ಟಿಯೂ ಆಗುತ್ತದೆ ಎಂದು ಗಮನ ಸೆಳೆದರು.`ಎಫ್‌ಡಿಐ' ಮಿತಿ ಹೆಚ್ಚಿಸಬೇಕು ಎಂಬ ಪ್ರಸ್ತಾವನೆಗೆ ಸಂಬಂಧಿಸಿ ರಕ್ಷಣಾ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.  ರಕ್ಷಣಾ ಸಚಿವರನ್ನೂ ಭೇಟಿಯಾಗಿ ಚರ್ಚಿಸುವೆ. ನಂತರ ಈ ಎಲ್ಲ ವಿಚಾರವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೂ ವಿವರಿಸಿ ಗಮನ ಸೆಳೆಯಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.