ಭಾನುವಾರ, ಏಪ್ರಿಲ್ 11, 2021
27 °C

ಎಫ್‌ಡಿಐ ವಿರುದ್ಧ ಎಡಪಕ್ಷಗಳ ನಿಲುವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಇದೇ 22 ರಿಂದ ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ `ಎಫ್‌ಡಿಐ~ ಭಾರಿ ಕೋಲಾಹಲ ಎಬ್ಬಿಸುವ ಲಕ್ಷಣಗಳು ಕಾಣುತ್ತಿವೆ.ಎಫ್‌ಡಿಐಗೆ ಅವಕಾಶ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಸಂಸತ್‌ನಲ್ಲಿ ನಿಲುವಳಿ ಸೂಚನೆ ಮಂಡಿಸಿ ಮತದಾನಕ್ಕೆ ಒತ್ತಡ ಹೇರುವುದಾಗಿ ಶುಕ್ರವಾರ ಎಡಪಕ್ಷಗಳು ಘೋಷಿಸಿವೆ. ನಿರ್ಣಯವನ್ನು ಉಭಯ ಸದನಗಳಲ್ಲಿಯೂ ಬೆಂಬಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿವೆ.`ಜನರ ಮೇಲೆ ಪರಿಣಾಮ ಬೀರುವಂಥ ಇಂಥ ತೀರ್ಮಾನಗಳ ಬಗ್ಗೆ ಸಂಸತ್‌ನ ಒಪ್ಪಿಗೆ ಪಡೆಯಬೇಕಾಗುತ್ತದೆ. ಇಲ್ಲದೇ ಹೋದರೆ ಅದು ಸಂಸದೀಯ ಪ್ರಜಾಪ್ರಭುತ್ವದ ಉಲ್ಲಂಘನೆಯಾಗುತ್ತದೆ~ ಎಂದು ಸಿಪಿಎಂ ಹಿರಿಯ ನಾಯಕ ಸೀತಾರಾಂ ಯೆಚೂರಿ ಹೇಳಿದರು.`ಚಿಲ್ಲರೆ ವಲಯ ನಾಲ್ಕು ಕೋಟಿ ಜನರಿಗೆ ನೇರ ಉದ್ಯೋಗ ಕೊಟ್ಟಿದೆ. ದೇಶದ ಸುಮಾರು 20 ಕೋಟಿ ಮಂದಿ ಇದನ್ನು ಅವಲಂಬಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಇವರೆಲ್ಲ ನೆಲೆ ಕಳೆದುಕೊಳ್ಳುತ್ತಾರೆ~ ಎಂದು ಆತಂಕ ವ್ಯಕ್ತಪಡಿಸಿದರು.`ಎಫ್‌ಡಿಐ ಕುರಿತ ಸರ್ಕಾರದ ನಿರ್ಧಾರವನ್ನು ಡಿಎಂಕೆ ಕೂಡ ಬಹಿರಂಗವಾಗಿ ಟೀಕಿಸಿದೆ. ಎಐಎಡಿಎಂಕೆ ಹಾಗೂ ಜೆಡಿಯು ಕೂಡ ವಿರೋಧ ವ್ಯಕ್ತಪಡಿಸಿವೆ~ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಹೇಳಿದರು.ಮತಕ್ಕೆ ಅವಕಾಶ ನೀಡುವ ನಿರ್ಣಯ ಮಂಡನೆ ವಿರುದ್ಧ ಎಡಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಇದೆಯೇ ಎಂಬ ಪ್ರಶ್ನೆಗೆ, `ಸಿಪಿಐ ಹಾಗೂ ಇಡೀ ಎಡಪಕ್ಷದ ನಿಲುವು ಒಂದೇ ಆಗಿದೆ. ನಾವು ವಿಮಾ ಕ್ಷೇತ್ರದಲ್ಲಿಯೂ ಎಫ್‌ಡಿಐ ವಿರೋಧಿಸಿದ್ದೇವೆ~ ಎಂದರು.ಮತಕ್ಕೆ ಹಾಕದೆಯೇ ಎಫ್‌ಡಿಐ ಕುರಿತು ಚರ್ಚೆ ನಡೆಸಬಹುದು ಎಂದು ಸಿಪಿಐ ಮುಖಂಡ ಗುರುದಾಸ್ ದಾಸ್‌ಗುಪ್ತಾ ಈ ಮುನ್ನ ಹೇಳಿಕೆ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.