ಎಫ್‌ಡಿಐ ವಿರೋಧಿಸಿ ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
26 °C

ಎಫ್‌ಡಿಐ ವಿರೋಧಿಸಿ ಪ್ರತಿಭಟನೆ

Published:
Updated:

ಬೆಂಗಳೂರು: ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ  ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಲು ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಜೆಡಿಯು ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.ಜೆಡಿಯುನ ನಗರ ಘಟಕದ ಅಧ್ಯಕ್ಷ ಸುಂದರಪ್ಪ ಮಾತನಾಡಿ, `ಕೇಂದ್ರ ಸರ್ಕಾರವು ಹೊಸ ಆರ್ಥಿಕ ನೀತಿಯ ಹೆಸರಿನಲ್ಲಿ ತರುತ್ತಿರುವ ಒಂದೊಂದು ಯೋಜನೆಗಳು ಸ್ಥಳೀಯ ವ್ಯಾಪಾರಿಗಳಿಗೆ, ರೈತರಿಗೆ ಮಾರಕವಾಗುತ್ತಿವೆ. ಈಗಾಗಲೇ ರಾಜ್ಯಕ್ಕೆ ಹಲವು ವಿದೇಶಿ ಕಂಪೆನಿಗಳು ಕಾಲ್ಲಿಟ್ಟಿದ್ದು, ಸಣ್ಣ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ಅರಿವಿದ್ದರೂ ಸರ್ಕಾರ ಎಫ್‌ಡಿಐ ನೀತಿಯನ್ನು ಜಾರಿಗೆ ತರಲು ಮುಂದಾಗಿರುವುದು ಖಂಡನೀಯ' ಎಂದರು.ಬೀದಿ ಬದಿ ಹೂ-ಹಣ್ಣು, ತರಕಾರಿ, ಸೊಪ್ಪು ಮಾರಾಟ ಮಾಡುವವರು ಸೇರಿದಂತೆ ರಾಜ್ಯದಲ್ಲಿ ಪ್ರಸ್ತುತ ಎರಡೂವರೆ ಲಕ್ಷ ಮಂದಿ ಸಣ್ಣ ವ್ಯಾಪಾರಿಗಳಿದ್ದಾರೆ. ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಒಮ್ಮೆ ವಿದೇಶಿ ಬಂಡವಾಳ ಹರಿದು ಬಂದಲ್ಲಿ, ವ್ಯಾಪಾರಿಗಳ ಜೀವನಕ್ಕೆ ಭಾರಿ ಪೆಟ್ಟು ಬೀಳಲಿದೆ. ಹೀಗಾಗಿ ಸರ್ಕಾರ ಯೋಚಿಸಿ ಮುಂದಿನ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ, ಮುಂದಿನ ಅನಾಹುತಗಳಿಗೆ ಸರ್ಕಾರ ಹೊಣೆಯಾಗಬೇಕಾಗುತ್ತದೆ' ಎಂದು ಎಚ್ಚರಿಸಿದರು.ವಿದೇಶ ಬಂಡವಾಳ ಹೂಡಿಕೆ ನೀತಿ ಜಾರಿಯಾದ ದಿನದಿಂದಲೇ ರಾಜ್ಯದೆಲ್ಲೆಡೆ ಹಂತ ಹಂತವಾಗಿ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಜೆಡಿಯುನ ಉಪಾಧ್ಯಕ್ಷ ದೊಡ್ಡ ಅಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಎಸ್. ಅಶ್ವತ್ಥ ನಾರಾಯಣ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry