ಎಫ್‌ಡಿಐ ಹಾದಿ ಸುಗಮ

7

ಎಫ್‌ಡಿಐ ಹಾದಿ ಸುಗಮ

Published:
Updated:

ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ನಿರ್ಣಯಕ್ಕೆ ಸಂಸತ್‌ನ ಅನುಮೋದನೆ ಪಡೆದುಕೊಳ್ಳುವಲ್ಲಿ ಯುಪಿಎ ಸರ್ಕಾರ, ಕಡೆಗೂ ಯಶಸ್ವಿಯಾಗಿದೆ. ವಾಲ್‌ಮಾರ್ಟ್, ಟೆಸ್ಕೊ ಹಾಗೂ ಕೇರ್‌ಫೊರ್‌ನಂತಹ ವಿದೇಶಿ ಬಹುರಾಷ್ಟ್ರೀಯ ಬ್ರಾಂಡ್‌ಗಳು ಭಾರತದಲ್ಲಿ ತಮ್ಮ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವ ಈ ನೀತಿಯ ಬಗ್ಗೆ ಬಹುತೇಕ ಸಂಸದರು ತೀವ್ರ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬುದು ಸಂಸತ್ತಿನಲ್ಲಿ ನಡೆದ ಚರ್ಚೆಗಳ್ಲ್ಲಲಿ ವ್ಯಕ್ತವಾಗಿದೆ.

ಹೀಗಿದ್ದೂ ಬಿಜೆಪಿ ಹಾಗೂ ಎಡಪಕ್ಷಗಳು ಮಂಡಿಸಿದ ನಿಲುವಳಿಯನ್ನು ಸೋಲಿಸುವಲ್ಲಿ ಯುಪಿಎ ಸರ್ಕಾರ ಯಶಸ್ವಿಯಾಯಿತು ಎಂಬುದೇ ಇಲ್ಲಿನ ವಿಶೇಷ. ಎಫ್‌ಡಿಐ ವಿಚಾರದಲ್ಲಿ ಯುಪಿಎ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಆರೋಪಿಸಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸೆಪ್ಟೆಂಬರ್ ತಿಂಗಳ್ಲ್ಲಲೇ ಯುಪಿಎ ಸರ್ಕಾರದಿಂದ ಹೊರ ನಡೆದಿತ್ತು.

ಡಿಎಂಕೆ, ಬಿಎಸ್‌ಪಿ ಹಾಗೂ ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ಪಕ್ಷಗಳು ಸಾರ್ವಜನಿಕವಾಗಿಯೇ ವಿರೋಧ ಮಾಡಿವೆ. ಹೀಗಿದ್ದೂ ಸಂಸತ್‌ನಲ್ಲಿ ಯುಪಿಎಗೆ ಸಿಕ್ಕ ಗೆಲುವು ನಮ್ಮ ರಾಜಕೀಯ ಪಕ್ಷಗಳ ಅನುಕೂಲಸಿಂಧು ರಾಜಕಾರಣಕ್ಕೆ ಮಾದರಿ. ಮಾಯಾವತಿಯವರ ಬಹುಜನ ಸಮಾಜ ಪಕ್ಷ ಹಾಗೂ ಮುಲಾಯಂಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ಮೇಲೆ ಕಾಂಗ್ರೆಸ್ ನೇತಾರರು ಬೀರಿದ ಪ್ರಭಾವ ಫಲಿಸಿದ್ದು ಸ್ಪಷ್ಟ.

ಎರಡೂ ಸದನಗಳಲ್ಲಿ ಸಮಾಜವಾದಿ ಪಕ್ಷ, ನಿಲುವಳಿಗೆ ಮತ ಹಾಕದೆ ದೂರ ಉಳಿಯಿತು. ಬಿಎಸ್‌ಪಿ ರಾಜ್ಯಸಭೆಯಲ್ಲಿ ಸರ್ಕಾರದ ಪರ ಮತ ಹಾಕಿತು. ಘೋಷಿತ ನೀತಿಗಳು ಹಾಗೂ ಸದನದಲ್ಲಿ ತೋರಿದ ವರ್ತನೆಗಳ ನಡುವಿನ ಈ ವೈರುಧ್ಯಗಳು ರಾಜಕೀಯ ಪಕ್ಷಗಳ ದ್ವಿಮುಖ ಧೋರಣೆಗಳನ್ನು ಚೆನ್ನಾಗಿಯೇ ಪ್ರದರ್ಶಿಸಿವೆ. ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್‌ಡಿಐ ಮೇಲಿನ ಚರ್ಚೆ ದಶಕಗಳಷ್ಟು ಹಳೆಯದು. ಕೃಷಿಕರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ದೊರಕಿಸಿಕೊಡಬ್ಲ್ಲಲಂತಹ ಉತ್ತಮವಾದ ಸಂಘಟಿತ ಮಾರುಕಟ್ಟೆ, ಸಾರಿಗೆ ಸೌಲಭ್ಯ ಹಾಗೂ ಸಂಗ್ರಹ ವ್ಯವಸ್ಥೆ ಅಗತ್ಯ ಎಂಬುದು ನಿಜವಾದುದೆ. ಸೂಕ್ತ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಧ್ಯವರ್ತಿಗಳ ಕಾಟ ಇಲ್ಲದೆ ಖರೀದಿಸುವ ಅವಕಾಶ ಗ್ರಾಹಕರಿಗೆ ಇರಬೇಕಾದುದೂ ಅಗತ್ಯ.

ಈ ಎರಡೂ ಉದ್ದೇಶಗಳನ್ನು ಬಹು ಬ್ರಾಂಡ್ ಚಿಲ್ಲರೆ ವಲಯದಲ್ಲಿ ಎಫ್‌ಡಿಐ ಈಡೇರಿಸುತ್ತದೆ ಎಂಬಂತಹ ವಾದ ನಿಜವೇ ಆದಲ್ಲಿ ಅದು ಸ್ವಾಗತಾರ್ಹವಾದುದೆ. ಆದರೆ ದೂರಗಾಮಿ ಪರಿಣಾಮಗಳನ್ನು ಬೀರುವಂತಹ ಇಷ್ಟೊಂದು ಮುಖ್ಯವಾದ ವಿಚಾರದಲ್ಲಿ ರಾಷ್ಟ್ರವ್ಯಾಪಿ ಚರ್ಚೆಗೆ ಅನುವು ಮಾಡಿಕೊಡಲಿಲ್ಲ ಎಂಬಂತಹ ದೂರನ್ನು ಕಡೆಗಣಿಸುವಂತಹದ್ದಲ್ಲ.

ವಿದೇಶಿ ದೈತ್ಯ ಸಂಸ್ಥೆಗಳ ಆಗಮನದಿಂದ ಸ್ಥಳೀಯರ ಜೀವನೋಪಾಯಗಳಿಗೆ ಧಕ್ಕೆಯಾಗದಂತೆ ಸುರಕ್ಷಾ ಕ್ರಮಗಳು ಹಾಗೂ ನಿಯಂತ್ರಣಗಳನ್ನು ಸೂಕ್ತವಾಗಿ ಜಾರಿಗೊಳಿಸಲು ಸರ್ಕಾರ ಆದ್ಯತೆ ನೀಡುವುದು ಅವಶ್ಯ. ಚಿಲ್ಲರೆ ವಲಯದಲ್ಲಿ ಎಫ್‌ಡಿಐಗೆ ಅವಕಾಶ ನೀಡುವ ನಿರ್ಣಯಗಳನ್ನು ರಾಜ್ಯ ಸರ್ಕಾರಗಳ ವಿವೇಚನೆಗೇ ಬಿಟ್ಟಿರುವುದು ಒಳ್ಳೆಯ ಸಂಗತಿ. ಆದರೂ ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಏಕರೂಪ  ನೀತಿಗಳನ್ನು ರೂಪಿಸಲು ಅನುವಾಗುವಂತೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಕೇಂದ್ರ ಸರ್ಕಾರ ಸಮಾಲೋಚಿಸುವುದೂ ಈ ಹಂತದಲ್ಲಿ ಸೂಕ್ತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry