ಎಫ್‌ಪಿಒ ಸಂಗ್ರಹ : ಗುರಿ ತಪ್ಪುವ ಸಾಧ್ಯತೆ?

7

ಎಫ್‌ಪಿಒ ಸಂಗ್ರಹ : ಗುರಿ ತಪ್ಪುವ ಸಾಧ್ಯತೆ?

Published:
Updated:

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ ಪೂರಕ ಸಾರ್ವಜನಿಕ ಕೊಡುಗೆಯ (ಎಫ್‌ಪಿಒ) ಮೂಲಕ ಸರ್ಕಾರ  ರೂ.40 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದು, ಷೇರುಪೇಟೆಯಲ್ಲಿ ತಲ್ಲಣಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ಈ ಗುರಿ, ಕೈತಪ್ಪುವ ಸಾಧ್ಯತೆಗಳು ಹೆಚ್ಚಿವೆ.ಮಾರ್ಚ್ 31ರ ಒಳಗೆ ಸರ್ಕಾರಿ ಸ್ವಾಮ್ಯದ (ಪಿಎಸ್‌ಯು) ಕಂಪೆನಿಗಳ  ರೂ 40 ಸಾವಿರ ಕೋಟಿ ಮೌಲ್ಯದ ‘ಎಫ್‌ಪಿಒ’ಗಳು ಮಾರುಕಟ್ಟೆ ಪ್ರವೇಶಿಸುತ್ತವೆ ಎಂದು ಹೇಳಲಾಗಿತ್ತು. ಆದರೆ, ‘ಷೇರುಪೇಟೆ ತೀವ್ರ ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ನಾವು ಮತ್ತೊಂದಿಷ್ಟು ದಿನ ಕಾದು ನೋಡುವುದು ಉಚಿತ ಎನಿಸುತ್ತದೆ. ಈ ಹಣಕಾಸು ವರ್ಷ ಮುಗಿಯಲು ಇನ್ನು ಕಡಿಮೆ ಅವಧಿ ಮಾತ್ರ ಬಾಕಿ ಇದ್ದು, ಮಾರುಕಟ್ಟೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ’ ಎಂದು ಉಕ್ಕು ಸಚಿವ ಬೇನಿ ಪ್ರಸಾದ್ ವರ್ಮಾ ಹೇಳಿದ್ದಾರೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ಸರ್ಕಾರಿ ಸ್ವಾಮ್ಯದ ಕಂಪೆನಿಗಳ  ಷೇರು ವಿಕ್ರಯದ ಮೂಲಕ ಇದುವರೆಗೆ ರೂ. 22 ಸಾವಿರ ಕೋಟಿ ಸಂಗ್ರಹಿಸಲಾಗಿದೆ. ‘ಒನ್‌ಜಿಸಿ’ ಕಂಪೆನಿಯ ಪೂರಕ ಸಾರ್ವಜನಿಕ ಕೊಡುಗೆ  ಮಾರ್ಚ್ 15ರಂದು ಪ್ರಕಟಗೊಳ್ಳುವ ಸಾಧ್ಯತೆ ಇದ್ದು, ್ಙ 13 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಭಾರತೀಯ ಉಕ್ಕು ನಿಯಂತ್ರಣ ಪ್ರಾಧಿಕಾರ (ಎಸ್‌ಎಐಎಲ್) ಸೀಮಿತ ಷೇರುಗಳನ್ನು ಮಾತ್ರ ಪ್ರಕಟಿಸಲಿದ್ದು, ಈ ಹಣಕಾಸು ವರ್ಷದಲ್ಲಿ ರೂ. 8 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಿದೆ. ಆದರೆ, ಇದು ಪ್ರಕಟಗೊಳ್ಳುತ್ತದೆಯೇ ಎನ್ನುವುದು ಸಂಶಯಮುಂದುವರೆದಿದೆ.‘ನಾವು ‘ಎಫ್‌ಪಿಒ’ ಪ್ರಕಟಿಸಲು ಸಿದ್ಧರಿದ್ದೇವೆ. ಆದರೆ ಮಾರುಕಟ್ಟೆ ಪರಿಸ್ಥಿತಿಗಳು ಹೂಡಿಕೆಗೆ ಅನುಕೂಲಕರವಾಗಿಲ್ಲ. ಕನಿಷ್ಠ 15ರಿಂದ 20 ದಿನಗಳಾದರೂ ನಿಗಾ ವಹಿಸಿದ ಮೇಲೆ ಮಾರುಕಟ್ಟೆ ಪ್ರವೇಶಿಸಬೇಕಾಗುತ್ತದೆ’ ಎಂದು ‘ಎಸ್‌ಎಐಎಲ್’ನ ಕಾರ್ಯದರ್ಶಿ ಪಿ.ಕೆ ಮಿಶ್ರಾ ಹೇಳಿದ್ದಾರೆ. ಪ್ರಸಕ್ತ ಹಣಕಾಸು ವರ್ಷದ ಆರಂಭದಲ್ಲಿ 2ಜಿ ತರಂಗಾಂತರ ಹಂಚಿಕೆ ವಿವಾದ ಸೃಷ್ಟಿಸಿದ ರಾಜಕೀಯ ಅನಿಶ್ಚಿತತೆ, ಐರ್ಲೆಂಡ್‌ನಲ್ಲಾದ ಆರ್ಥಿಕ ದಿವಾಳಿತನ ಮತ್ತು ಇತ್ತೀಚೆಗೆ ಈಜಿಪ್ಟ್‌ನಲ್ಲಿ ನಡೆದ ರಾಜಕೀಯ ಚಳುವಳಿ ಕೂಡ ಮುಂಬೈ ಷೇರುಪೇಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಸಂವೇದಿ ಸೂಚ್ಯಂಕ ಒಟ್ಟು ಶೇ 11.42ರಷ್ಟು ಕುಸಿತ ಕಂಡಿದೆ. ಈ ಎಲ್ಲ ಬೆಳವಣಿಗೆಗಳು ‘ಎಫ್‌ಪಿಒ’ ಪ್ರಕಟಣೆಗೆ ಹಿನ್ನಡೆ ಯಾಗಿದೆ.ಶುಕ್ರವಾರದ ವಹಿವಾಟಿನಲ್ಲಿ ‘ಎಸ್‌ಎಐಎಲ್’ನ ಷೇರು ರೂ. 160.15 ಗಳಿಗೆ ವಹಿವಾಟು ಕೊನೆಗೊಳಿಸಿತು. ಇದು ಕಳೆದ ವಾರ ರೂ. 187.95ರ ವರೆಗೆ ಏರಿಕೆ ಕಂಡಿತ್ತು.ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋಲ್ ಇಂಡಿಯಾ ಆರಂಭಿಕ ಸಾರ್ವಜನಿಕ ಕೊಡುಗೆಯ ಮೂಲಕ (ಐಪಿಒ) ಸಂಗ್ರಹಿಸಿದ ರೂ 15 ಸಾವಿರ ಕೋಟಿ ಪ್ರಮುಖ ಸಾಧನೆಯಾಗಿದೆ.  ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆರಂಭಿಕ ಕೊಡುಗೆಯ ಮೂಲಕ ಹಣ ಸಂಗ್ರಹಿಸಲು ಮುಂದಾಗಿತ್ತು, ಆದರೆ ಇದು ಕೂಡ ಮುಂದೂಡಲಾಗಿದೆ.ಕಳೆದ ಹಣಕಾಸು ವರ್ಷದಲ್ಲಿ ಆಯಿಲ್ ಇಂಡಿಯಾ, ಎನ್‌ಟಿಪಿಸಿ, ಎನ್‌ಎಂಡಿಸಿ ಸೇರಿದಂತೆ ಹಲವು ಕೇಂದ್ರೋದ್ಯಮಗಳ ಆರಂಭಿಕ  ಸಾರ್ವಜನಿಕ ಕೊಡುಗೆಯ ಮೂಲಕ ಸರ್ಕಾರ, ರೂ. 25 ಸಾವಿರ ಕೋಟಿ ಸಂಗ್ರಹಿಸಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ರೂ. 40 ಸಾವಿರ ಕೋಟಿ ದಾಟಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕಳೆದ ಬಜೆಟ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry