ಎಫ್‌ಬಿಐನಿಂದ ಸೌದಿ ವಿದ್ಯಾರ್ಥಿ ಬಂಧನ

7

ಎಫ್‌ಬಿಐನಿಂದ ಸೌದಿ ವಿದ್ಯಾರ್ಥಿ ಬಂಧನ

Published:
Updated:

ಬಾಸ್ಟನ್ (ಪಿಟಿಐ): ಅಮೆರಿಕದಲ್ಲಿ ಅಣು ವಿದ್ಯುತ್ ಘಟಕ ಮತ್ತು ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ನಿವಾಸವನ್ನು ಗುರಿಯಾಗಿಸಿಕೊಂಡು ಭಯೋತ್ಪಾದನಾ ದಾಳಿ ನಡೆಸಲು ಮತ್ತು ಬಾಂಬ್‌ಗಳನ್ನು ತಯಾರಿಸಲು ಸಂಚು ರೂಪಿಸಿದ ಆರೋಪದ ಮೇಲೆ 20 ವರ್ಷದ ಸೌದಿ ವಿದ್ಯಾರ್ಥಿಯೊಬ್ಬನನ್ನು ಎಫ್‌ಬಿಐ ಬಂಧಿಸಿದೆ.ಸೌದಿ ಪ್ರಜೆ ಮತ್ತು ಟೆಕ್ಸಾಸ್   ನಿವಾಸಿ ಖಲೀದ್ ಅಲಿ -ಎಂ ಅಲ್ದಾವ್ಸರಿ  ‘ಸಮೂಹ ನಾಶದ ಅಸ್ತ್ರ ಬಳಸಲು’ ಯತ್ನಿಸಿದ್ದ ಅಲ್ಲದೆ ಕೆಲವು ರಾಸಾಯನಿಕಗಳನ್ನು ಉಪಯೋಗಿಸಿ ಸುಧಾರಿತ ಸ್ಫೋಟಕ ಸಾಧನವನ್ನು ರೂಪಿಸಲು ಆನ್‌ಲೈನ್ ಸಂಶೋಧನೆ ನಡೆಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಈ ಬಗ್ಗೆ  ಗುರುವಾರ ಕ್ರಿಮಿನಲ್ ದೂರು ದಾಖಲಿಸಲಾಗಿದೆ.ಅಮೆರಿಕದಲ್ಲಿ ಜಲ ವಿದ್ಯುತ್ ಘಟಕ, ಅಣು ವಿದ್ಯುತ್ ಘಟಕಗಳು ಮತ್ತು ಜಾರ್ಜ್ ಬುಷ್ ಅವರ ನಿವಾಸ ಒಳಗೊಂಡಂತೆ ಭಯೋತ್ಪಾದನಾ ದಾಳಿ ನಡೆಸಬಹುದಾದ ಪ್ರಮುಖ ಸ್ಥಳಗಳ ಬಗ್ಗೆಯೂ ಈ ವಿದ್ಯಾರ್ಥಿ ಅಧ್ಯಯನ ನಡೆಸಿದ್ದ.  ಸ್ಫೋಟಕ ಸಾಧನ ರೂಪಿಸಲು ಅಗತ್ಯವಿದ್ದ ವಸ್ತುಗಳನ್ನು ಮತ್ತು ಸಲಕರಣೆಗಳನ್ನು ಸಂಗ್ರಹಿಸಿದ್ದ. ವಿದ್ಯಾರ್ಥಿ ವೀಸಾದೊಂದಿಗೆ ಈತ 2008ರಿಂದ ಅಮೆರಿಕದಲ್ಲಿ ನೆಲೆಸಿದ್ದಾನೆ. ಟೆಕ್ಸಾಸ್‌ನ ಸೌತ್ ಪ್ಲೇನ್ಸ್ ಕಾಲೇಜ್‌ಗೆ ಸೇರಿದ್ದಾನೆ.ಸಮೂಹ ನಾಶದ ಅಸ್ತ್ರ ಬಳಕೆಗೆ ಯತ್ನಿಸಿದ ಆರೋಪ ಸಾಬೀತಾದರೆ ಈತ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 1.25 ಕೋಟಿ ರೂಪಾಯಿ ದಂಡ ತೆರಬೇಕಾಗುತ್ತದೆ. ಈತನ ಮನೆಯಲ್ಲಿ ಎಫ್‌ಬಿಐ ಶೋಧ ಕಾರ್ಯ ಕೈಗೊಂಡಾಗ, ಅಮೆರಿಕದಲ್ಲಿ ಭಯೋತ್ಪಾದನಾ ದಾಳಿ ನಡೆಸುವ ಯೋಜನೆಯನ್ನು ಈತ ಕೆಲ ವರ್ಷಗಳಿಂದಲೂ ನಡೆಸುತ್ತಾ ಬಂದಿದ್ದ ಎಂದು ಸೂಚಿಸುವ ನೋಟ್‌ಬುಕ್ ಪತ್ತೆಯಾಗಿದೆ.‘ಈಗ ಜಿಹಾದ್ ಸಮಯ ಬಂದಿದೆ’ ಎಂದು ಆತ ತನ್ನ ಪತ್ರಿಕೆಯಲ್ಲಿ ಹೇಳಿಕೊಂಡಿದ್ದಾನೆ.  ಫೆ. 1ರಂದು ಖಲೀದ್, ವಿಷಯುಕ್ತ ರಾಸಾಯನಿಕ ಸಾರಯುಕ್ತ ಫಿನಾಯಿಲ್ ಖರೀದಿಸಲು ಪ್ರಯತ್ನಿಸಿದ್ದ ಎಂದು ರಾಸಾಯನಿಕ ಪೂರೈಕೆದಾರರೊಬ್ಬರು ಎಫ್‌ಬಿಐಗೆ ತಿಳಿಸಿದ್ದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry