ಗುರುವಾರ , ಆಗಸ್ಟ್ 22, 2019
22 °C
ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ

ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ

Published:
Updated:

ಬೆಳಗಾವಿ: ಸಿಇಟಿ ಕೌನ್ಸೆಲಿಂಗ್‌ಗಿಂತ ಮುಂಚಿತವಾಗಿ ಕಾಮೆಡ್-ಕೆ ಕೌನ್ಸೆಲಿಂಗ್ ನಡೆಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕಾಲೇಜುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.



ನಗರದ ಗೋವಾವೇಸ್ ವೃತ್ತದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಎಬಿವಿಪಿ ಕಾರ್ಯಕರ್ತರು, ಸಿಇಟಿ ಕೌನ್ಸೆಲಿಂಗ್‌ಗಿಂತ ಮುನ್ನವೇ ಕಾಮೆಡ್-ಕೆ ಕೌನ್ಸೆಲಿಂಗ್‌ಗೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರದ ಪ್ರತಿಕ್ರತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.



`ಸಿಇಟಿ ಕೇಂದ್ರದಲ್ಲಿ ಪ್ರವೇಶ ಪ್ರಕ್ರಿಯೆಯ ಮಾಹಿತಿ, ಸಮಸ್ಯೆಗಳಿಗೆ ದೂರು ಸ್ವೀಕರಿಸಲು ಸಿಬ್ಬಂದಿಯ ಕೊರತೆ ಇದೆ. ಇದರ ನಡುವೆಯೇ ಕಾಮೆಡ್-ಕೆ ಅವರು ಸಿಇಟಿಗಿಂತ ಮೊದಲೇ ಕೌನ್ಸೆಲಿಂಗ್ ನಡೆಸಲು ಅನುಮತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಷೋಷಣೆ ಮಾಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಸಿಇಟಿ ಕೌನ್ಸೆಲಿಂಗ್‌ನಲ್ಲಿ ಸೀಟು ಪಡೆದು, ಕಾಲೇಜುಗಳಿಗೆ ಪ್ರವೇಶ ಪಡೆಯಲು ಬಂದಾಗ ಕೆಲವು ಕಾಲೇಜುಗಳಲ್ಲಿ ಸರ್ಕಾರಿ ಶುಲ್ಕದ ಹೊರತಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ 10,000 ರಿಂದ 90,000 ರೂಪಾಯಿಯರೆಗೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ. ಕೂಡಲೇ ಇದನ್ನು ತಡೆಯಬೇಕು' ಎಂದು ಒತ್ತಾಯಿಸಿದರು.



`ಸಿಇಟಿಯ 3ನೇ ಸುತ್ತಿನ ಕೌನ್ಸೆಲಿಂಗ್ ಮಾಡುವ ಮೂಲಕ ಪೂರ್ಣ ಪ್ರಮಾಣದ ಪ್ರಕ್ರಿಯೆ ನಡೆಸಬೇಕು. ಈಗಾಗಲೇ ವಿದ್ಯಾರ್ಥಿಗಳಿಂದ ಹೆಚ್ಚುವರಿಯಾಗಿ ವಸೂಲಿ ಮಾಡಿರುವ ಹಣವನ್ನು ಕಾಲೇಜುಗಳು ಕೂಡಲೇ ಹಿಂತಿರುಗಿಸಬೇಕು. ಹೆಚ್ಚುವರಿ ಹಣವನ್ನು ಹಿಂತಿರುಗಿಸದ ಕಾಲೇಜುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.



ಡಿಪ್ಲೊಮಾ ಲ್ಯಾಟರಲ್ ಪ್ರವೇಶಕ್ಕೆ ಎಲ್ಲ ಸುತ್ತಿನ ಕೌನ್ಸೆಲಿಂಗ್ ನಡೆಸಿ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ಹಲವು ದೋಷಗಳಿದ್ದು, ಕೂಡಲೇ ಆನ್‌ಲೈನ್ ಪ್ರವೇಶ ಪರೀಕ್ಷೆಯ ವ್ಯವಸ್ಥೆಯನ್ನು ಸುಧಾರಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.



ಶಿವರಾಜ ಕಾಂಬಳೆ, ನೇತ್ರಾ ಕಮ್ಮಾರ, ರೋಹಿತ ಪಾಟೀಲ, ಕರುಣಾಕರ ಪೂಜಾರಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Post Comments (+)