ಶನಿವಾರ, ಫೆಬ್ರವರಿ 27, 2021
19 °C
35ನೇ ರಾಜ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಅಧ್ಯಕ್ಷ ನಾಗೇಶ್‌ ಠಾಕೂರ್‌

ಎಬಿವಿಪಿ ವಿರುದ್ಧ ಸಮಾಜದ್ರೋಹಿಗಳ ಅಪಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಬಿವಿಪಿ ವಿರುದ್ಧ ಸಮಾಜದ್ರೋಹಿಗಳ ಅಪಪ್ರಚಾರ

ದಾವಣಗೆರೆ: ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಏಳಿಗೆಯನ್ನು ಸಹಿಸದ ಕೆಲವು ಸಮಾಜದ್ರೋಹಿ ಸಂಘಟನೆಗಳು ನಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿವೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದು ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ನಾಗೇಶ್‌ ಠಾಕೂರ್‌ ಕರೆ ನೀಡಿದರು.ನಗರದಲ್ಲಿ ಶುಕ್ರವಾರದಿಂದ ಆರಂಭವಾದ ಎಬಿವಿಪಿಯ 35ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.ಶ್ರೇಷ್ಠ ಭಾರತ ನಿರ್ಮಾಣವೇ ನಮ್ಮ ಕನಸು. ಆದರೆ, ರಾಕ್ಷಸೀ ಪ್ರವೃತ್ತಿಯ ಸಂಘಟನೆಗಳು ನಮ್ಮ ಪ್ರಯತ್ನವನ್ನು ವಿಫಲಗೊಳಿಸುವ ಕಾರ್ಯ ನಡೆಸುತ್ತಿವೆ. ಪರಿಷತ್‌ ಅಧಿಕಾರಕ್ಕೆ ಆಸೆಪಟ್ಟಿಲ್ಲ. ಇದು ವಿದ್ಯಾರ್ಥಿಗಳ ಸಂಘಟನೆ. ದೇಶದಾದ್ಯಂತ 32 ಲಕ್ಷ ಸದಸ್ಯರಿದ್ದಾರೆ. ಕರ್ನಾಟಕದಲ್ಲಿ ಎಬಿವಿಪಿ 4.5 ಲಕ್ಷ ಸದಸ್ಯರನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.ತಮಿಳುನಾಡು ಹಾಗೂ ಕೇರಳದಲ್ಲಿ ರಾಷ್ಟ್ರೀಯವಾದ ಕಡಿಮೆಯಿದೆ. ಕರ್ನಾಟಕದ ಸದಸ್ಯರು, ಈ ಎರಡೂ ರಾಜ್ಯಗಳಲ್ಲಿ ರಾಷ್ಟ್ರೀಯವಾದದ ಕಲ್ಪನೆ ಮೂಡಿಸಬೇಕು ಎಂದು ಕರೆ ನೀಡಿದರು.ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಎಬಿವಿಪಿ ಜಾತೀಯತೆ ಮಾಡಿಲ್ಲ ಎಂಬುದು ಗೊತ್ತಿರುವ ವಿಚಾರ. ಆದರೆ, ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್‌ ಆತ್ಮಹತ್ಯೆ ಪ್ರಕರಣದ ಬಳಿಕ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪರಿಷತ್‌ ವಿರುದ್ಧವೂ ಆರೋಪಗಳು ಕೇಳಿಬಂದಿವೆ. ಈ ಗೊಂದಲ ನಿವಾರಣೆ ಆಗಬೇಕಾದರೆ ಎಬಿವಿಪಿ ಜಾತೀಯತೆ ಹಾಗೂ ಅಸಮಾನತೆಯ ವಿರುದ್ಧವೂ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು.ಸ್ವಾತಂತ್ರ್ಯಪೂರ್ವದಲ್ಲಿದ್ದ ಅಸಮಾನತೆ, ಗೊಂದಲಗಳು ಈಗ ಇಲ್ಲ. ಉತ್ತರ, ದಕ್ಷಿಣ, ಈಶಾನ್ಯ ರಾಜ್ಯದವರು ಎಂದು ಭೇದಭಾವ ಮಾಡಬಾರದು. ಸಮಾಜದಲ್ಲಿರುವ ಸಣ್ಣಪುಟ್ಟ ತಾರತಮ್ಯಗಳು ಮೊದಲು ನಿವಾರಣೆ ಆಗಲಿ ಎಂದು ಸ್ವಾಮೀಜಿ ಮನವಿ ಮಾಡಿದರು.ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್‌ ಬಳ್ಳಿ ಮಾತನಾಡಿ, ‘ಸಮಾನತೆ, ಶ್ರೇಷ್ಠ ಭಾರತ ನಮ್ಮ ಕಲ್ಪನೆ. ನಾವು ದಲಿತರ ವಿರೋಧಿಗಳಲ್ಲ. ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟ’ ಎಂದು ಹೇಳಿದರು.ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಿವಾನಂದ ಹೊಸಮನಿ ಉಪಸ್ಥಿತರಿದ್ದರು.ಎನ್‌ಎಸ್‌ಯುಐ ಕಾರ್ಯಕರ್ತರ ವಶ, ಬಿಡುಗಡೆ

ದಾವಣಗೆರೆ:
ರೋಹಿತ್‌ ಆತ್ಮಹತ್ಯೆಗೆ ಎಬಿವಿಪಿಯೇ ನೇರ ಕಾರಣ ಎಂದು ಆರೋಪಿಸಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಬಂದಿದ್ದ ರಾಷ್ಟ್ರೀಯ ಅಧ್ಯಕ್ಷ ನಾಗೇಶ್‌ ಠಾಕೂರ್‌ ಅವರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದ ಎನ್‌ಎಸ್‌ಯುಐನ 15 ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದರು.ಬೆಳಿಗ್ಗೆ 11ರ ವೇಳೆಗೆ ಕಾಲೇಜೊಂದರ ಬಳಿ ಎನ್‌ಎಸ್‌ಯುಐನ ಜಿಲ್ಲಾ ಘಟಕದ ಅಧ್ಯಕ್ಷ ಮುಜಾಹಿದ್‌ ಪಾಷಾ ನೇತೃತ್ವದಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಮಾಹಿತಿ ಪಡೆದ ಪೊಲೀಸರು ಮುಂಜಾಗೃತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.