ಮಂಗಳವಾರ, ನವೆಂಬರ್ 19, 2019
23 °C
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಅಶ್ವಿನಿಗೆ ಮಿಶ್ರಫಲ

ಎರಡನೇ ಸುತ್ತಿಗೆ ಕಶ್ಯಪ್, ಸಿಂಧು

Published:
Updated:

ತೈಪೆ (ಪಿಟಿಐ): ಭರವಸೆ ಮೂಡಿಸಿರುವ ಭಾರತದ ಪಿ.ಕಶ್ಯಪ್ ಹಾಗೂ ಪಿ.ವಿ.ಸಿಂಧು ಇಲ್ಲಿ ನಡೆಯುತ್ತಿರುವ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.ಬುಧವಾರ ನಡೆದ ಪ್ರಧಾನ ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಕಶ್ಯಪ್ 18-21, 21-15, 22-20ರಲ್ಲಿ ದಕ್ಷಿಣ ಕೊರಿಯಾದ ಜಿ ಹೂನ್ ಹಾಂಗ್ ಅವರನ್ನು ಪರಾಭವಗೊಳಿಸಿದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದ ಕಶ್ಯಪ್ ಈ ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ. 69 ನಿಮಿಷ ನಡೆದ ಈ ಹೋರಾಟದಲ್ಲಿ ಭಾರತದ ಆಟಗಾರ ಮೊದಲ ಗೇಮ್‌ನಲ್ಲಿ ಸೋಲು ಕಂಡರು. ಆದರೆ ತಕ್ಷಣವೇ ಚೇತರಿಸಿಕೊಂಡು ಆಡಿದ ಅವರು ನಂತರದ ಎರಡೂ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ನಿರ್ಣಾಯಕ ಗೇಮ್ ಬಿರುಸಿನ ಪೈಪೋಟಿಗೆ ಕಾರಣವಾಯಿತು. ಅದರಲ್ಲಿ ಹೈದರಾಬಾದ್‌ನ ಆಟಗಾರ ಗಮನಾರ್ಹ ಪ್ರದರ್ಶನ ತೋರಿದರು.ವಿಶ್ವ ರ‌್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ ಕಶ್ಯಪ್ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ ಹನ್ ಚೋ ಚು ಅವರನ್ನು ಎದುರಿಸಲಿದ್ದಾರೆ. ಭಾರತದ ಮತ್ತೊಬ್ಬ ಆಟಗಾರ ಸಾಯಿ ಪ್ರಣೀತ್ 21-10, 21-12ರಲ್ಲಿ    ಮಾಲ್ಡೀವ್ಸ್‌ನ ಅಜ್ಫಾನ್ ರಶೀದ್ ಎದುರು  ಜಯ ಗಳಿಸಿದರು. ಈ ಪಂದ್ಯ ಕೇವಲ 22 ನಿಮಿಷಗಳಲ್ಲಿ ಮುಗಿದು ಹೋಯಿತು.

ಭರವಸೆಯ ಆಟಗಾರ್ತಿ ಸಿಂಧು ಚೇತೋಹಾರಿ ಪ್ರದರ್ಶನ ತೋರಿದರು. ಅವರು ಮೊದಲ ಸುತ್ತಿನ ಪಂದ್ಯದಲ್ಲಿ 21-18, 21-19ರಲ್ಲಿ ಹಾಂಕಾಂಗ್‌ನ ಚನ್ ಅವರನ್ನು ಮಣಿಸಿದರು. ಇದಕ್ಕೆ ಅವರು ತೆಗೆದುಕೊಂಡ ಸಮಯ ಕೇವಲ 30 ನಿಮಿಷ. ಆದರೆ ಎರಡನೇ ಸುತ್ತಿನಲ್ಲಿ ಭಾರತದ ಆಟಗಾರ್ತಿಗೆ ಭಾರಿ ಸವಾಲು ಎದುರಿದೆ. ಏಕೆಂದರೆ ಅವರು ಕೆಲ ತಿಂಗಳ ಹಿಂದೆ ಮೊದಲ ರ‌್ಯಾಂಕ್ ಹೊಂದಿದ್ದ ಚೀನಾದ ವಾಂಗ್ ಶಿಕ್ಸಿಯಾನ್ ಎದುರು ಪೈಪೋಟಿ ನಡೆಸಬೇಕು.ಪುರುಷರ ವಿಭಾಗದ ಡಬಲ್ಸ್‌ನಲ್ಲಿ ಪ್ರಣವ್ ಜೆರ‌್ರಿ ಚೋಪ್ರಾ ಹಾಗೂ ಅಕ್ಷಯ್ ದೇವಾಲ್ಕರ್ ಪರಾಭವಗೊಂಡರು. ಅವರು 17-21, 17-21ರಲ್ಲಿ ತೈಪೆಯ ಹಂಗ್ ಲಿಂಗ್ ಚೆನ್ ಹಾಗೂ ಚಿಯಾ ಪಿನ್ ಲು ಎದುರು ಸೋಲು ಕಂಡರು. ತರುಣ್ ಕೋನಾ ಹಾಗೂ ಅರುಣ್ ವಿಷ್ಣು 24-22, 19-21, 16-21ರಲ್ಲಿ ವಿಯೆಟ್ನಾಂನ ಬಾವೊ ಡಕ್ ಡುವಾಂಗ್ ಹಾಗೂ ಹೊಂಗ್ ನಾಮ್ ನುಯೆನ್ ಎದುರು ಸೋತರು.ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಪ್ರದ್ನ್ಯಾ ಗಾದ್ರೆ 21-12, 30-29ರಲ್ಲಿ ಪಿ ರಾಂಗ್ ವಾಂಗ್ ಹಾಗೂ ಕುವೊ ಯು ವೆನ್ ಎದುರು ಗೆಲುವು ಸಾಧಿಸಿದರು. ಈ ಪೈಪೋಟಿ 29 ನಿಮಿಷ ನಡೆಯಿತು. ಆದರೆ ಮತ್ತೊಂದು ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್ ಹಾಗೂ ಸಿಕ್ಕಿ ರೆಡ್ಡಿ ಸುಲಭವಾಗಿ ಶರಣಾದರು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ-ತರುಣ್ ಕೋನಾ ಆಘಾತ ಅನುಭವಿಸಿದರು. ಇವರು 14-21, 21-16, 18-21ರಲ್ಲಿ ಲಿಯು ಯಿ ಹಾಗೂ ಲೀ ಯಾವೊ ಎದುರು ಮಣಿದರು.

ಪ್ರತಿಕ್ರಿಯಿಸಿ (+)