ಸೋಮವಾರ, ಆಗಸ್ಟ್ 2, 2021
26 °C
ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್: ಸತತ 32ನೇ ಗೆಲುವು ದಾಖಲಿಸಿದ ಅಮೆರಿಕದ ಆಟಗಾರ್ತಿ

ಎರಡನೇ ಸುತ್ತಿಗೆ ಸೆರೆನಾ, ನೊವಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ/ಎಎಫ್‌ಪಿ): ಹಾಲಿ ಚಾಂಪಿಯನ್ ಅಮೆರಿಕದ ಸೆರೆನಾ ವಿಲಿಯಮ್ಸ ಹಾಗೂ ಸರ್ಬಿಯಾದ ನೊವಾಕ್ ಜೊಕೊವಿಚ್ ವಿಂಬಲ್ಡನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದರು.ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟ್ರಲ್ ಕೋರ್ಟ್‌ನಲ್ಲಿ ಮಂಗವಾರ ನಡೆದ ಮಹಿಳಾ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೆರೆನಾ 6-1, 6-3ರ ನೇರ ಸೆಟ್‌ಗಳಿಂದ ಲುಕ್ಸೆಂಬರ್ಗ್‌ನ ಮಂಡೆ ಮಿನೆಲ್ಲಾ ಎದುರು ಜಯ ಸಾಧಿಸಿದರು.ವಿಂಬಲ್ಡನ್ ಟೂರ್ನಿಯಲ್ಲಿ ಐದು ಸಲ ಚಾಂಪಿಯನ್ ಆಗಿರುವ 31ರ ಹರೆಯದ ಸೆರೆನಾ ಸಾಧಿಸಿದ ಸತತ 32ನೇ ಗೆಲುವು ಇದಾಗಿದೆ. ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಮೆರಿಕದ ಆಟಗಾರ್ತಿ 42 ವರ್ಷದ ಜಪಾನ್‌ನ ಕಿಮಿಕೊ ದೇಟ್ ಕ್ರಮ್ ಸಾಲಿಗೆ ಸೇರ್ಪಡೆಯಾದರು. ಈ ಆಟಗಾರ್ತಿ ಕೂಡಾ ಸತತ ಇಷ್ಟೇ ಗೆಲುವುಗಳನ್ನು ಸಾಧಿಸಿದ್ದಾರೆ. ಹಿಂದಿನ 75 ಪಂದ್ಯಗಳಲ್ಲಿ ಸೆರೆನಾ 75 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿದ ಸೆರನಾ ದಾಖಲೆಗಳ ಬಗ್ಗೆ ಯೋಚಿಸುವುದಿಲ್ಲ. ಪ್ರತಿ ಪಂದ್ಯದಲ್ಲೂ ಗೆಲುವು ಪಡೆಯುವತ್ತ ಮಾತ್ರ ಗಮನ ಹರಿಸುತ್ತೇನೆ. ಹಿಂದಿನ ಎಲ್ಲಾ ಗೆಲುವುಗಳಲ್ಲಿ ಮರೆಯಲಾಗದ ಮಧುರ ನೆನಪುಗಳಿವೆ ಎಂದು ಹೇಳಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ನ್ಯೂಜಿಲೆಂಡ್‌ನ ಮರಿನಾ ಎರಿಕೋವಿಕ್ 4-6, 6-0, 7-5ರಲ್ಲಿ ಜಪಾನ್‌ನ ಆಯುಮಿ ಮೊರಿತಾ ಮೇಲೂ, ಬ್ರಿಟನ್‌ನ ಲೌರಾ ರಾಬ್ಸನ್ 6-3, 6-4ರಲ್ಲಿ ರಷ್ಯಾದ ಮಾರಿಯಾ ಕಿರಿಲೆಂಕೊ ವಿರುದ್ಧವೂ, ಆಸ್ಟ್ರೇಲಿಯಾದ ಸಮಂತಾ ಸ್ಟಾಸರ್ 6-1, 6-3ರಲ್ಲಿ ಸ್ಲೋವಾಕಿಯಾದ ಅನ್ನಾ ಚೆಮಿಡೆಲ್ವಾ ಮೇಲೂ, ಜರ್ಮನಿಯ ಆ್ಯಂಜಲಿಕ್ ಕೆರ್ಬರ್ 6-3, 6-4ರಲ್ಲಿ ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ವಿರುದ್ಧವೂ, ಚೀನಾದ ಲೀ ನಾ 6-1, 6-1ರಲ್ಲಿ  ಹಾಲೆಂಡ್‌ನ ಮಿಚೆಲ್ಲಾ ಕ್ರೆಜಿಸಿಕ್ ಮೇಲೂ, ಇಟಲಿಯ ರಾಬೆರ್ಟಾ ವಾನ್ಸಿ 6-2, 6-1ರಲ್ಲಿ ಅಮೆರಿಕದ ಕೆನೆಲ್ಲಾ ಚೆಹೀಪೀರ್ಸ್‌ ವಿರುದ್ಧವೂ ಗೆಲುವು ಸಾಧಿಸಿ ಎರಡನೇ ಸುತ್ತಿಗೆ ಮುನ್ನಡೆದರು.ನೊವಾಕ್ ಶುಭಾರಂಭ: ಎರಡನೇ ಸೆಟ್‌ನಲ್ಲಿ ಸೋಲು ಕಂಡು ನಂತರ ಮರು ಹೋರಾಟ ತೋರಿದ ನೊವಾಕ್ ಜೊಕೊವಿಚ್ ಪುರುಷರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 6-3, 7-5, 6-4ರಲ್ಲಿ ಜರ್ಮನಿಯ ಪ್ಲೋರಿಯನ್ ಮಾಯರ್ ಎದುರು ಜಯ ಪಡೆದು ಶುಭಾರಂಭ ಮಾಡಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಜುವಾನ್ ಡೆಲ್ ಪೆಟ್ರೊ 6-2, 7-5, 6-1ರಲ್ಲಿ ಅಲ್ವೆರ್ಟಾ ರೋಮ್ಸ ಮೇಲೂ, ಜರ್ಮನಿಯ ಟಾಮ್ ಹಾಸ್ 6-3, 7-5, 7-5ರಲ್ಲಿ ರಷ್ಯಾದ ಡಿಮಿಟ್ರಿ ತುರ್ಸೆನೊವಾ ವಿರುದ್ಧವೂ, ಜರ್ಮನಿಯ ಬೆರ್ನಾಡ್ ಟಾಮಿಕ್ 7-6, 7-6, 3-6, 2-6, 6-3ರಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ವಿರುದ್ಧವೂ ಗೆಲುವು ಪಡೆದು ಎರಡನೇ ಸುತ್ತು ಪ್ರವೇಶಿಸಿದರು.ಹೆವಿಟ್ ದಿಟ್ಟ ಆಟ

ಏಳು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾದರೂ ದಿಟ್ಟತನದಿಂದ ಮತ್ತೆ ಟೆನಿಸ್ ಕೋರ್ಟ್‌ಗೆ ಕಾಲಿಟ್ಟಿರುವ ಲೆಲ್ಟನ್ ಗ್ಲೇನ್ ಹೆವಿಟ್ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.ಹೆವಿಟ್ ಮೊದಲ ಸುತ್ತಿನ ಪಂದ್ಯದಲ್ಲಿ ಸೋಮವಾರ 6-4, 7-5, 6-3ರಲ್ಲಿ 11ನೇ ಶ್ರೇಯಾಂಕದ ಆಟಗಾರ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಿಸ್ ವಾಂವ್ರಿಕಾ ಎದುರು ಗೆಲುವು ಪಡೆದು ಟೆನಿಸ್ ಪ್ರಿಯರಲ್ಲೂ ಬೆರಗು ಮೂಡಿಸಿದ್ದಾರೆ. ಈ ಆಟಗಾರ ಶಸ್ತ್ರಚಿಕಿತ್ಸೆಗೆ ಒಳಗಾದಾಗ `ನೀವಿನ್ನು ಟೆನಿಸ್ ಆಡಲು ಆಗದು' ಎಂದು ವೈದ್ಯರು ಹೇಳಿದ್ದರು. ಆದರೆ, ಮತ್ತೆ ಆಡಲು ಶುರು ಮಾಡಿ ತಮ್ಮ ಸಾಮರ್ಥ್ಯವೇನೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.`ಎರಡು ಶಸ್ತ್ರಚಿಕಿತ್ಸೆಯಾದಾಗ ನನ್ನ ಟೆನಿಸ್ ಬದುಕು ಮುಗಿಯುತು ಎಂದು ಹೇಳಿದವರೇ ಹೆಚ್ಚು. ಆದರೆ, ಏಳು ಶಸ್ತ್ರಚಿಕಿತ್ಸೆಯಾದರೂ ನಾನು ಆಡುವುದನ್ನು ಬಿಟ್ಟಿಲ್ಲ' ಎಂದು ಹೆವಿಟ್ ನುಡಿದರು.ಪುರವ್-ದಿವಿಜ್‌ಗೆ ವೀರೋಚಿತ ಸೋಲು

ಅರ್ಹತಾ ಸುತ್ತಿನಲ್ಲಿ ದಿಟ್ಟ ಪ್ರದರ್ಶನ ತೋರಿ ಪ್ರಧಾನ ಹಂತಕ್ಕೆ ಲಗ್ಗೆ ಇಟ್ಟಿದ್ದ ಭಾರತದ ಯುವ ಆಟಗಾರರಾದ ದಿವಿಜ್ ಶರಣ್ ಹಾಗೂ ಪುರವ್ ಜೋಡಿ ಡಬಲ್ಸ್ ವಿಭಾಗದ ಆರಂಭದ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿತು.ಮೊದಲ ಸುತ್ತಿನಲ್ಲಿಯೇ ಭಾರತದ ಆಟಗಾರರು ಸೋಲು ಕಂಡರೂ ಅವರು ತೋರಿದ ಹೋರಾಟ ಮಾತ್ರ ಮೆಚ್ಚುವಂತದ್ದು. ಗ್ರ್ಯಾನ್ ಸ್ಲಾಮ್ ಟೂರ್ನಿಗಳಲ್ಲಿ ಆಡಿದ ಅನುಭವ ಹೊಂದಿರದ ಪುರವ್-ದಿವಿಜ್ 7-6, 6-2, 3-6, 4-6, 4-6ರಲ್ಲಿ ಅಮೆರಿಕದ ನಿಕೊಲಸ್ ಮೊನ್ರಾಯೆ ಜರ್ಮನಿಯ ಸಿಮೋನ್ ಸ್ಟಡ್ಲರ್ ಎದುರು ಪ್ರಬಲ ಪೈಪೋಟಿ ಒಡ್ಡಿದರು.ಮೂರು ಗಂಟೆ 15 ನಿಮಿಷ ನಡೆದ ಮ್ಯಾರಥಾನ್ ಹೋರಾಟಲ್ಲಿ ಭಾರತದ ಯುವ ಜೋಡಿ ಎದುರಾಳಿಗೆ ಸುಲಭವಾಗಿ ಶರಣಾಗಲಿಲ್ಲ. ಮೊದಲ ಸೆಟ್‌ನಲ್ಲಿ ಪ್ರಯಾಸದ ಗೆಲುವು ಪಡೆದರೂ, ಎರಡನೇ ಸೆಟ್‌ನಲ್ಲಿ ಅಮೆರಿಕ-ಜರ್ಮನ್ ಜೋಡಿಯ ಬೆವರಳಿಸಿದರು. ಆದರೆ, ಮೂರನೇ ಸೆಟ್‌ನಲ್ಲಿ ಸರ್ವಿಸ್‌ನಲ್ಲಿ ಮಾಡಿದ ಕೆಲ ತಪ್ಪುಗಳು ಭಾರತದ ಜೋಡಿಗೆ ಮುಳುವಾದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.