ಎರಡನೇ ಹಸಿರು ಕ್ರಾಂತಿ ಅವಶ್ಯ

7

ಎರಡನೇ ಹಸಿರು ಕ್ರಾಂತಿ ಅವಶ್ಯ

Published:
Updated:

ಧಾರವಾಡ: ‘ವಿಜ್ಞಾನ ಹಾಗೂ ತಂತ್ರಜ್ಞಾನದ ವ್ಯಾಪಕ ಬಳಕೆಯಿಂದಾಗಿ ನಿತ್ಯವೂ ನೂರೆಂಟು ಹೊಸ ಹೊಸ ಕೌತುಕಗಳು, ವೈವಿಧ್ಯತೆಗಳು ಹಾಗೂ ವೈಪರೀತ್ಯ ಸಂಗತಿಗಳನ್ನು ಕಾಣುತ್ತಿದ್ದೇವೆ. ಈ ಎಲ್ಲ ಸಾಧನೆಗಳ ನಡುವೆ ಶ್ರೀಸಾಮಾನ್ಯನನ್ನು ಹಸಿವಿನಿಂದ ರಕ್ಷಿಸುವ ಸಲುವಾಗಿ ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿಯಾಗಲು ನಮಗಿಂದು ಎರಡನೇ ಹಸಿರುಕ್ರಾಂತಿ ಅತ್ಯವಶ್ಯವಿದೆ’ ಎಂದು ಕೃಷಿ ಅನುಸಂಧಾನ ಪರಿಷತ್‌ನ ನಿವೃತ್ತ ಮಹಾನಿರ್ದೇಶಕ ಡಾ. ಎಂ.ವಿ.ರಾವ್ ಹೇಳಿದರು.ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಡಾ. ಎಸ್.ಡಬ್ಲ್ಯೂ.ಮೆಣಸಿನಕಾಯಿ ಸ್ಮಾರಕ ಶಿಕ್ಷಣ ಮತ್ತು ಸಂಶೋಧನಾ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಉಪನ್ಯಾಸ ನೀಡಿದ ಅವರು, 60ನೇ ದಶಕದಲ್ಲಿ ದೇಶವು ಎದುರಿಸುತ್ತಿದ್ದ ತೀವ್ರ ಆಹಾರಧಾನ್ಯಗಳ ಅಭಾವದ ಸಂಕಷ್ಟದ ಸ್ಥಿತಿಗತಿಗಳನ್ನು ಅಂಕಿ-ಅಂಶಗಳೊಂದಿಗೆ ವಿವರಿಸಿದರು. ಸದ್ಯ ನಮ್ಮ ದೇಶಕ್ಕೆ ಬೇಕಿರುವುದು ಕೇವಲ ಆಹಾರವಲ್ಲ, ಉತ್ತಮ ಆಹಾರ. ಈ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಅತ್ಯುತ್ತಮ ಗುಣಮಟ್ಟದ ತಳಿಗಳ ವರ್ಧನೆ ಮತ್ತು ವರ್ಗಾವಣೆಗಾಗಿ ಶ್ರಮಿಸಬೇಕು ಎಂದರು.ವಿಶ್ರಾಂತ ಕುಲಪತಿ ಡಾ. ಜೆ.ವಿ.ಗೌಡ ಮಾತನಾಡಿ, ಡಾ. ಎಸ್.ಡಬ್ಲ್ಯೂ.ಮೆಣಸಿನಕಾಯಿ ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು. ಧಾರವಾಡ ಕೃಷಿ ಮಹಾವಿದ್ಯಾಲಯವನ್ನು ಉಳಿಸಿಕೊಳ್ಳಲು ಮೆಣಸಿನಕಾಯಿ ಶ್ರಮಿಸಿದ ಪರಿಯನ್ನು ವಿವರಿಸಿದರು.ಕುಲಪತಿ ಡಾ. ಆರ್.ಆರ್.ಹಂಚಿನಾಳ ಅಧ್ಯಕ್ಷತೆ ವಹಿಸಿ, ಡಾ. ಮೆಣಸಿನಕಾಯಿ ಅವರು ಶ್ರೇಷ್ಠ ಶಿಕ್ಷಕ, ವಿಜ್ಞಾನಿ, ಆಡಳಿತಗಾರರು. ಮೆಣಸಿನಕಾಯಿ ಅವರ ಜನ್ಮಶತಾಬ್ದಿ ವರ್ಷವಾದ ಈ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ರೈತರು, ರೈತ ಮಹಿಳೆಯರಿಗಾಗಿ ಹಮ್ಮಿಕೊಳ್ಳಲು ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ಸಿದ್ಧಪಡಿಸಲಾಗಿದೆ. ಶತಾಬ್ದಿ ವರ್ಷದ ಕಟ್ಟಡ ಹಾಗೂ ಅವರ ಹೆಸರಿನಲ್ಲಿ ಅನುವಂಶೀಕತೆ ಮತ್ತು ಸಸ್ಯತಳಿ ವರ್ಧನೆ ವಿಭಾಗದಲ್ಲಿ ಪ್ರಾಧ್ಯಾಪಕರ ಚೇರ್ ಅನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದರು.ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನೊಳಗೊಂಡಂತೆ ಅನೇಕ ಗಣ್ಯರಿಂದ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಪ್ರತಿಷ್ಠಾನದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೆಣಸಿನಕಾಯಿ ಅವರ ಅಳಿಯ ಶರಣ ಬಸವರಾಜ ಹಾಗೂ ಡಾ. ಜೆ.ವಿ.ಗೌಡ ಅವರನ್ನು ಸನ್ಮಾನಿಸಲಾಯಿತು. ಡಾ. ಎಂ.ಬಿ.ಚೆಟ್ಟಿ ಸ್ವಾಗತಿಸಿದರು. ಡಾ. ಎಚ್.ಎಲ್.ನದಾಫ್ ವಂದಿಸಿದರು. ಡಾ.ಎಸ್. ಲಿಂಗರಾಜ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry