ಶುಕ್ರವಾರ, ಜೂನ್ 18, 2021
20 °C
ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ : ಮುಖಂಡರಲ್ಲಿ ತೀವ್ರಗೊಂಡ ಅಸಮಾಧಾನ

ಎರಡು ಕಡೆ ಅಭ್ಯರ್ಥಿ ಬದಲಾವಣೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಲೋಕಸಭಾ ಚುನಾವಣೆ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ಅಸಮಾ­ಧಾನ ತೀವ್ರ­ಗೊಳ್ಳುತ್ತಿದೆ. ಕೆಪಿಸಿಸಿ ಅಧ್ಯಕ್ಷರನ್ನು ಶನಿವಾರ ಭೇಟಿ ಮಾಡಿದ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು, ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಬದಲಿಸುವಂತೆ ಆಗ್ರಹಿಸಿದ್ದಾರೆ.ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ­ಯೂರಪ್ಪ ಅವರು ಬಿಜೆಪಿ ಅಭ್ಯರ್ಥಿ­ಯಾಗಿ ಕಣಕ್ಕಿಳಿಯುತ್ತಿದ್ದಾರೆ. ಅವರನ್ನು ಎದುರಿಸಲು ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರಿಗೆ ಟಿಕೆಟ್‌ ನೀಡ­ಬೇಕು ಎಂದು ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಒತ್ತಾ­ಯಿ­ಸಿದ್ದಾರೆ. ಶಿವಮೊಗ್ಗ, ಸೊರಬ, ಶಿಕಾರಿಪುರ, ತೀರ್ಥ­ಹಳ್ಳಿ, ಭದ್ರಾವತಿಯ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯ­ಕರ್ತರ ನಿಯೋಗ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.­ಪರಮೇಶ್ವರ್‌ ಅವರನ್ನು ಭೇಟಿ ಮಾಡಿ ಅಭ್ಯರ್ಥಿ ಬದಲಿ­ಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿತು.200ಕ್ಕೂ ಹೆಚ್ಚು ಜನರಿದ್ದ ಶಿವಮೊಗ್ಗ ಕಾಂಗ್ರೆಸ್‌ ಮುಖಂಡರ ನಿಯೋಗ ಮಧ್ಯಾಹ್ನವೇ ಕೆಪಿಸಿಸಿ ಕಚೇರಿಗೆ ಬಂದಿತ್ತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌. ಬೋಸರಾಜು ಮತ್ತು ಉಪಾಧ್ಯಕ್ಷ ಬಿ.ಎಲ್‌.ಶಂಕರ್‌ ಕಚೇರಿಯಲ್ಲಿದ್ದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ‘ಭಾರತ ನಿರ್ಮಾಣ ಪಾದಯಾತ್ರೆ’ ಕಾರಣಕ್ಕೆ ತುಮಕೂರಿನ­ಲ್ಲಿದ್ದರು. ಸಂಜೆಯವರೆಗೂ ಕೆಪಿಸಿಸಿ ಕಚೇರಿಯಲ್ಲೇ ಇದ್ದ ನಿಯೋಗದ ಸದಸ್ಯರು, ಪರಮೇಶ್ವರ್‌ ಕಚೇರಿಗೆ ಹಿಂದಿರುಗಿದ ಬಳಿಕ ಭೇಟಿ ಮಾಡಿ ಮನವಿ ಸಲ್ಲಿಸಿದರು.‘ಜಾತಿ ಸಮೀಕರಣ ಮತ್ತು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಆಧರಿಸಿ ಅಭ್ಯರ್ಥಿ ಬದಲಾವಣೆ ಮಾಡಬೇಕು. ಜಾತಿ ಮತ್ತು ಜನಬಲ ಎರಡೂ ದೃಷ್ಟಿಯಿಂದ ಮಂಜುನಾಥ ಭಂಡಾರಿ ಅವರ ಆಯ್ಕೆ ಸರಿಯಲ್ಲ. ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದಲ್ಲಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸ್ಪರ್ಧೆ ನೀಡಲು ಸಾಧ್ಯವಾಗುವುದಿಲ್ಲ’ ಎಂಬ ಅಭಿಪ್ರಾಯವನ್ನು ಈ ನಿಯೋಗ ಮಂಡಿಸಿದೆ.ಕೆಪಿಸಿಸಿ ಅಧ್ಯಕ್ಷರ ಭೇಟಿ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರದೇಶ ಕಾಂಗ್ರೆಸ್‌ ಹಿಂದುಳಿದ ವರ್ಗ­ಗಳ ಘಟಕದ ಪ್ರಧಾನ ಕಾರ್ಯ­ದರ್ಶಿ ರಮೇಶ್ ಇಕ್ಕೇರಿ, ‘ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಅಭ್ಯರ್ಥಿಯನ್ನು ಬದಲಾವಣೆ ಮಾಡ­ಬೇಕು ಎಂದು ಒತ್ತಾಯಿಸಿದ್ದೇವೆ. ಬಿಜೆಪಿಯನ್ನು ಸಮರ್ಥ­ವಾಗಿ ಎದುರಿಸುವ ದೃಷ್ಟಿ­ಯಿಂದ ಕುಮಾರ್‌ ಬಂಗಾರಪ್ಪ ಅವ­ರನ್ನೇ ಕಣಕ್ಕಿಳಿಸುವಂತೆ ಮನವಿ ಮಾಡಿ­ದ್ದೇವೆ. ಈ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸು­ವುದಾಗಿ ಪರಮೇಶ್ವರ್‌ ಅವರು ನಮಗೆ ಭರವಸೆ ನೀಡಿದ್ದಾರೆ’ ಎಂದರು.ತಿಪ್ಪೇಸ್ವಾಮಿ ಪರ ಒತ್ತಡ: ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎನ್‌.ಚಂದ್ರಪ್ಪ ಅವರಿಗೆ ಟಿಕೆಟ್‌ ನೀಡುತ್ತಿರುವುದನ್ನು ಎಸ್‌.ತಿಪ್ಪೇಸ್ವಾಮಿ ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಸುಮಾರು 100 ಜನರಿದ್ದ ಚಿತ್ರದುರ್ಗ ಕಾಂಗ್ರೆಸ್‌ ಮುಖಂಡರ ನಿಯೋಗ ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್‌ ನೀಡುವಂತೆ ಮನವಿ ಸಲ್ಲಿಸಿದೆ.ತಿಪ್ಪೇಸ್ವಾಮಿ ಕಳೆದ ಲೋಕಸಭಾ ಚುನಾವಣೆ­ಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಬಾರಿ ಅವರಿಗೆ ಟಿಕೆಟ್‌ ನೀಡಿದಲ್ಲಿ ಗೆಲುವು ಸಾಧ್ಯವಿದೆ ಎಂಬ ವಾದವನ್ನು ಈ ನಿಯೋಗ ಕೆಪಿಸಿಸಿ ಮುಂದಿಟ್ಟಿದೆ.

ಕಗ್ಗಂಟಾದ ಮೂರು ಕ್ಷೇತ್ರಗಳು

25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್‌ ಪಕ್ಷದ ಪಾಲಿಗೆ, ಉತ್ತರ ಕನ್ನಡ, ಹಾವೇರಿ ಮತ್ತು ಧಾರವಾಡ ಕ್ಷೇತ್ರಗಳು ಕಗ್ಗಂಟಾಗಿ ಉಳಿದಿವೆ. ಈ ಕ್ಷೇತ್ರಗಳಿಗೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕಸರತ್ತಿನಲ್ಲಿ ಕಾಂಗ್ರೆಸ್‌ ನಾಯಕರು ಮುಳುಗಿದ್ದಾರೆ.

ಮೊದಲ ಪಟ್ಟಿಯಲ್ಲಿ ಎಂಟು ಹಾಲಿ ಸಂಸದರು ಸೇರಿದಂತೆ 14 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಎರಡನೇ ಪಟ್ಟಿಯಲ್ಲಿ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಪ್ರಕಟಿಸಲಾಗಿದೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರಾಥಮಿಕ ಚುನಾವಣೆ ಮೂಲಕ ಸಿ.ನಾರಾಯಣಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.ಉತ್ತರ ಕನ್ನಡ ಕ್ಷೇತ್ರದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರ ಪುತ್ರ ಪ್ರಶಾಂತ್‌ ಮತ್ತು ಮಾರ್ಗರೇಟ್‌ ಆಳ್ವ ಅವರ ಪುತ್ರ ನಿವೇದಿತ್‌ ಆಳ್ವ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಹಾವೇರಿಯಲ್ಲಿ ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹಮ್ಮದ್ ಹಾಗೂ ಮಾಜಿ ಶಾಸಕ ಡಿ.ಆರ್‌.ಪಾಟೀಲ ನಡುವೆ ಟಿಕೆಟ್‌ಗಾಗಿ ಹಣಾಹಣಿ ನಡೆಯುತ್ತಿದೆ. ಧಾರವಾಡದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ವಿರುದ್ಧ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.