ಎರಡು ಕಡೆ ಹೊಸ ಬಸ್ ನಿಲ್ದಾಣ: ಭರವಸೆ

7

ಎರಡು ಕಡೆ ಹೊಸ ಬಸ್ ನಿಲ್ದಾಣ: ಭರವಸೆ

Published:
Updated:
ಎರಡು ಕಡೆ ಹೊಸ ಬಸ್ ನಿಲ್ದಾಣ: ಭರವಸೆ

ರಾಮನಗರ: ಜಿಲ್ಲಾ ಕೇಂದ್ರವಾದ ರಾಮನಗರದಲ್ಲಿ ಶಿಥಿಲಗೊಳ್ಳುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಟ್ಟಡವನ್ನು ಕೆಡವಿ ಎರಡು ಕಡೆ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದರು.ಸೋಮವಾರದ `ಪ್ರಜಾವಾಣಿ~ ಸಂಚಿಕೆಯಲ್ಲಿ ಪ್ರಕಟವಾದ ಬಸ್ ನಿಲ್ದಾಣದ ಮೇಲ್ಛಾವಣಿ ಕೆಳಭಾಗ ಕುಸಿದಿರುವ ವರದಿಗೆ ಸ್ಪಂದಿಸಿದ ಸಚಿವರು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲಾ ಕೇಂದ್ರವಾಗಿರುವ ಕಾರಣ ಬೆಂಗಳೂರು- ಮೈಸೂರು ಹೆದ್ದಾರಿಯ ಎರಡೂ ಬದಿಯಲ್ಲಿ ಒಂದೊಂದು ಬಸ್ ನಿಲ್ದಾಣವನ್ನು ನಿರ್ಮಿಸಬೇಕಾದ ಅಗತ್ಯ ಇದೆ. ಹಾಲಿ ಇರುವ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಾರ್ಗದಲ್ಲಿ ಸಾಗುವ ಬಸ್‌ಗಳ ನಿಲ್ದಾಣ ಹಾಗೂ ಕೈಗಾರಿಕಾ ಪ್ರದೇಶದ ಬಳಿ ಲಭ್ಯವಿರುವ ಪ್ರದೇಶದಲ್ಲಿ ಮೈಸೂರು ಮಾರ್ಗದಲ್ಲಿ ಸಾಗುವ ಬಸ್‌ಗಳಿಗೆ ನಿಲ್ದಾಣ ಮಾಡುವ ಉದ್ದೇಶ ಇದೆ ಎಂದು ಅವರು ವಿವರಿಸಿದರು.ಅದಕ್ಕೂ ಮೊದಲು ಪಾಳು ಬೀಳುತ್ತಿರುವ ಹಾಲಿ ಬಸ್ ನಿಲ್ದಾಣದ ಕಟ್ಟಡವನ್ನು ನೆಲಸಮ ಮಾಡಿ, ಹೊಸ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಬೇಕಾಗುತ್ತದೆ. ಇದಕ್ಕಾಗಿ ಈಗಾಗಲೇ ಒಂದೂವರೆ ಕೋಟಿ ರೂಪಾಯಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಈ ಯೋಜನೆ ತೃಪ್ತಿಕರವಾಗಿ ಇಲ್ಲದ ಕಾರಣ ಹಾಗೂ ಜಿಲ್ಲಾ ಕೇಂದ್ರವಾಗಿರುವ ಹಿನ್ನೆಲೆಯಲ್ಲಿ ಅಂದಾಜು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.ಈ ಸಂಬಂಧ ಶೀಘ್ರದಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸಿ, ಯೋಜನೆಯನ್ನು ಅಂತಿಮಗೊಳಿಸಲಾಗುವುದು. ನಂತರ ಸಾರಿಗೆ ಸಚಿವರ ಜತೆ ಮಾತನಾಡಿ ಯೋಜನೆಗೆ ಅಂಗೀಕಾರ ಪಡೆಯಲಾಗುವುದು ಎಂದು ಅವರು ವಿವರಿಸಿದರು. ಬಸ್ ನಿಲ್ದಾಣದ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇರುವ ವ್ಯಾಜ್ಯವನ್ನು ಸಮರ್ಪಕವಾಗಿ ಎದುರಿಸಿ ಇತ್ಯರ್ಥ ಪಡಿಸಿಕೊಳ್ಳುವಂತೆ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಪತ್ರಿಕಾ ವರದಿಯಲ್ಲಿ ಪ್ರಕಟವಾಗಿರುವಂತೆ ಬಸ್ ನಿಲ್ದಾಣದಲ್ಲಿರುವ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ಗಮನಿಸಿದ್ದೇನೆ. ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಶಕ್ತಿಮೀರಿ ಶ್ರಮಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.ಮುಂದಿನ ವಾರ ಸಭೆ:  ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕಾಮಗಾರಿಯ ವಿಳಂಬ ಏಕಾಗುತ್ತಿದೆ ಎಂಬುದನ್ನು ಅಧಿಕಾರಿಗಳಿಂದ ತಿಳಿದು ಮುಂದಿನ ಕ್ರಮ ಕೈಗೊಳ್ಳಲಾಗುವುದು.ಈ ಸಂಬಂಧ ಮುಂದಿನವಾರ ಅಧಿಕಾರಿಗಳ ಜತೆ ಸಭೆ ನಡೆಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.ಹೇಮಾವತಿ ನದಿಯನ್ನು ಜಿಲ್ಲೆಗೆ ತರುವ ಯೋಜನೆ ಇದೆ. ಈ ಸಂಬಂಧ ಈಗಾಗಲೇ 50 ಕಿ.ಮೀ ಸರ್ವೇ ಕಾರ್ಯ ಕೂಡ ಮುಕ್ತಾಯವಾಗಿದ್ದು, ಇನ್ನೂ 15 ಕಿ.ಮೀ ಸರ್ವೇ ಬಾಕಿ ಇದೆ ಎಂದು ಅವರು ಹೇಳಿದರು.ಹೇಮಾವತಿಯಿಂದ ಕಣ್ವಕ್ಕೆ ಸ್ವಾಭಾವಿಕವಾಗಿ ನೀರು ಹರಿದು ಬರಲು ಅವಕಾಶ ಇರುವ ಕಾರಣ ಈ ಯೋಜನೆ ಜಾರಿಯಾದರೆ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದ ಎಂದು ಅವರು ವಿವರಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಯಾವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುತ್ತೇನೆ. ಜಿಲ್ಲೆಗೆ ನೀರಾವರಿ ಸೌಕರ್ಯ ಕಲ್ಪಿಸುವ ಮಹತ್ವದ ಕನಸು ಹೊಂದಿರುವ ನಾನು ನೀರಾವರಿ ಖಾತೆ ನೀಡುವಂತೆ ಮನವಿ ಮಾಡಿದ್ದೇನೆ. ಆದರೆ ರೇಷ್ಮೆ ಖಾತೆ ನೀಡಿದರೂ ನಿರ್ವಹಿಸಲು ಸಿದ್ಧ. ರೇಷ್ಮೆ ನಾಡಿನ ಜನರಿಂದ ಆಯ್ಕೆ ಆಗಿರುವ ನಾನು ರೇಷ್ಮೆ ಖಾತೆಯನ್ನು ನಿರಾಕರಿಸಲು ಹೇಗೆ ಸಾಧ್ಯ ? ಎಂದು ಅವರು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry