ಭಾನುವಾರ, ಜೂನ್ 20, 2021
26 °C

ಎರಡು ಕುಟುಂಬಗಳ ಸೆಣಸಾಟದ ಕ್ಷೇತ್ರ

ಪ್ರಜಾವಾಣಿ ವಾರ್ತೆ/ನಾಗೇಶ್‌ ಶೆಣೈ ಪಿ. Updated:

ಅಕ್ಷರ ಗಾತ್ರ : | |

ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ಚುನಾವಣೆಗಳು ಎರಡು ಪ್ರಭಾವಿ ಕುಟುಂಬಗಳ ಸದಸ್ಯರ ನಡುವೆಯೇ ನಡೆದಿವೆ. ಈ ಬಾರಿಯೂ ಆ ಪರಂಪರೆ ಮುಂದುವರಿಯಲಿದೆ. ಬಿಜೆಪಿ ಸಂಸದರಾಗಿದ್ದ ದಿ. ಜಿ.ಮಲ್ಲಿಕಾರ್ಜುನಪ್ಪ ಅವರ ಪುತ್ರ ಜಿ.ಎಂ.ಸಿದ್ದೇಶ್ವರ (ಬಿಜೆಪಿ) ಮತ್ತು ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್‌.ಎಸ್‌.ಮಲ್ಲಿಕಾರ್ಜುನ (ಕಾಂಗ್ರೆಸ್‌) ಎದುರಾಳಿ­ಗಳಾಗಲಿದ್ದಾರೆ– ಅದೂ ಸತತ ಮೂರನೇ ಬಾರಿಗೆ!ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೆಚ್ಚಿನ ಪರ್ಯಾಯಗಳು ಇದ್ದಂತೆ ಕಾಣುತ್ತಿಲ್ಲ. ಇಬ್ಬರ ಹೆಸರುಗಳೂ ಆಯಾ ಪಕ್ಷಗಳ ಮೊದಲ ಪಟ್ಟಿಯಲ್ಲೇ ಕಾಣಿಸಿಕೊಂಡಿವೆ. ಮಲ್ಲಿಕಾರ್ಜುನ ವಿರುದ್ಧ ಹಿಂದಿನ ಎರಡೂ ಚುನಾವಣೆಗಳಲ್ಲಿ ಸಿದ್ದೇಶ್ವರ ಜಯ ಗಳಿಸಿದ್ದಾರೆ. ಆದರೆ, ವಿಜಯದ ಅಂತರ ಕಡಿಮೆಯಾಗುತ್ತ ಬಂದಿದೆ.ಮಲ್ಲಿಕಾರ್ಜುನಪ್ಪ 1996ರಲ್ಲಿ ಮೊದಲ ಬಾರಿ ಜಯ ಗಳಿಸುವ ಮೂಲಕ ಕಾಂಗ್ರೆಸ್‌ನ ಈ  ಭದ್ರಕೋಟೆಯಲ್ಲಿ ಕಮಲ­ವನ್ನು ಅರಳಿಸಿದ್ದರು. ನಂತರದ ಎರಡು ಚುನಾವಣೆಗಳಲ್ಲಿ ಮಲ್ಲಿಕಾರ್ಜುನಪ್ಪ ಮತ್ತು ಶಾಮನೂರು ಮುಖಾಮುಖಿ­ಯಾ­ಗಿ­ದ್ದರು. 1998ರಲ್ಲಿ ಶಾಮನೂರು ಜಯ ಗಳಿಸಿದರೆ, ಕೇವಲ 13 ತಿಂಗಳ ನಂತರ ಎದುರಾದ ಮತ್ತೊಂದು ಸಾರ್ವತ್ರಿಕ ಚುನಾವಣೆ­ಯಲ್ಲಿ ಶಾಮನೂರು ಅವರನ್ನು ಸೋಲಿಸುವ ಮೂಲಕ ಮಲ್ಲಿಕಾರ್ಜುನಪ್ಪ ಸೇಡು ತೀರಿಸಿಕೊಂಡರು. ಮಲ್ಲಿಕಾರ್ಜುನಪ್ಪ ನಿಧನದ ನಂತರ ನಡೆದ ಎರಡೂ ಚುನಾವಣೆಗಳು ಈ ಮುಖಂಡರಿಬ್ಬರ ಪುತ್ರರ ನಡುವೆಯೇ ನಡೆದಿವೆ.

ಶಾಮನೂರು ಮತ್ತು ಮಲ್ಲಿಕಾರ್ಜುನಪ್ಪ ಕುಟುಂಬಗಳು ಜಿಲ್ಲೆಯಲ್ಲಿ ಪ್ರಭಾವಶಾಲಿಯಾಗಿರುವ ಸಾಧು (ಸಾದರ) ಲಿಂಗಾಯತ ಸಮುದಾಯಕ್ಕೆ ಸೇರಿವೆ. ಸಾಕಷ್ಟು ಸಂಪತ್ತನ್ನೂ ಹೊಂದಿವೆ.ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾಗಿರುವ ಶಾಮನೂರು ಶಿವಶಂಕರಪ್ಪ, ಕರ್ನಾಟಕ ಪ್ರದೇಶ ಕಾಂಗ್ರೆಸ್‌ಗೆ ದೀರ್ಘ ಕಾಲದ ಖಜಾಂಚಿ. ಕಳೆದ ಏಪ್ರಿಲ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಜಯ ಗಳಿಸಿದ ನಂತರ ತೋಟ­ಗಾರಿಕೆ ಮತ್ತು ಎಪಿಎಂಸಿ ಸಚಿವರಾದರು. ಅವರ ಪುತ್ರ ಮಲ್ಲಿಕಾರ್ಜುನ ರಾಜಕೀಯಕ್ಕೆ ಹೊಸಬ­ರೇನಲ್ಲ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ­ಯಾಗಿದ್ದಾಗ (1999–2004) ಯುವ­ಜನ ಸೇವೆ ಮತ್ತು ಕ್ರೀಡಾ ಸಚಿವ­ರಾಗಿದ್ದರು. ಪ್ರಸ್ತುತ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ.ನೆಲೆಕಾಣದ 3ನೇ ಪಕ್ಷ: ಕಾಂಗ್ರೆಸ್‌ – ಬಿಜೆಪಿ ಪೈಪೋಟಿಯಲ್ಲಿ ಜೆಡಿಎಸ್‌ ಸೇರಿದಂತೆ ಇತರ ಪಕ್ಷಗಳು ಇಲ್ಲಿ ನೆಲೆ ಕಂಡುಕೊಳ್ಳಲು ವಿಫಲವಾಗಿವೆ. 2009ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಠೇವಣಿ ಕಳೆದುಕೊಂಡಿದ್ದರು. ಈ ಬಾರಿ ಜೆಡಿಎಸ್‌ನಿಂದ ಸೈಯ್ಯದ್‌ ಸೈಫುಲ್ಲಾ ಅವರಿಗೆ ಟಿಕೆಟ್‌ ಖಚಿತ­ವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಎದುರು ಸ್ಪರ್ಧಿಸಿದ್ದರು.ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಮತಗಳು ಗಮನಾರ್ಹ ಪ್ರಮಾ­ಣ­­ದಲ್ಲಿದೆ. ಒಂದು ಕಾಲದಲ್ಲಿ ದಾವಣಗೆರೆ ನಗರದಲ್ಲಿ ಸಮೃದ್ಧವಾಗಿದ್ದ ಹತ್ತಿ ಗಿರಣಿ ಕಾರ್ಮಿಕರ ಮೂಲಕ ಅಸ್ತಿತ್ವ ಕಂಡುಕೊಂಡಿದ್ದ ಸಿಪಿಐ ಈ ಬಾರಿ ಎಚ್‌.ಕೆ.­ರಾಮಚಂದ್ರಪ್ಪ ಅವರನ್ನು ಕಣಕ್ಕಿಳಿಸಲಿದೆ.ಕ್ಷೇತ್ರಕ್ಕೆ ಕೊಡುಗೆ ಕಡಿಮೆ: ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ 1977ರಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರವಾಯಿತು (ಜಿಲ್ಲೆಯಾಗಿದ್ದು 1997ರಲ್ಲಿ). ಕೊಂಡಜ್ಜಿ ಬಸಪ್ಪ, ಟಿ.ವಿ.ಚಂದ್ರಶೇಖರಪ್ಪ ಒಂದೊಂದು ಅವಧಿಗೆ ಗೆದ್ದ ಮೇಲೆ ನಂತರ ಕುರುಬ ಸಮುದಾಯದ ಧಾರ್ಮಿಕ ಮುಖಂಡರಾಗಿದ್ದ ಚನ್ನಯ್ಯ ಒಡೆಯರ್‌ ಸತತ ಮೂರು ಬಾರಿ ಚುನಾಯಿತರಾಗಿದ್ದರು. ಅಂದಿನ ಕಾಲದಲ್ಲಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸಿದರೂ ಗೆಲ್ಲುವಂಥ ಕೆಲವು ಕ್ಷೇತ್ರಗಳಲ್ಲಿ ದಾವಣಗೆರೆ ಸಹ ಒಂದೆನಿಸಿತ್ತು.ಹರಿಹರ ತಾಲ್ಲೂಕಿನ ಕೊಂಡಜ್ಜಿಯ ಬಸಪ್ಪ 1971ರಲ್ಲಿ ಅವಿಭಜಿತ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದಲೂ ಸಂಸತ್‌ಗೆ ಆಯ್ಕೆಯಾಗಿದ್ದರು. ಇಂದಿರಾ­ಗಾಂಧಿ ಸಂಪುಟದಲ್ಲಿ ಕೆಲಸಮಯ ಅವರು ಆರೋಗ್ಯ ಖಾತೆ ಉಪಸಚಿವ­ರಾಗಿದ್ದರು. 1960ರ ದಶಕದಲ್ಲಿ ರಾಜ್ಯ­ದಲ್ಲೂ ಸಚಿವರಾಗಿದ್ದ ಬಸಪ್ಪ ಅವರು ಸ್ಕೌಟ್‌ ಮತ್ತು ಗೈಡ್ಸ್‌ ಆಂದೋಲನಕ್ಕೆ ನೀಡಿದ ಕಾಣಿಕೆಯಿಂದ ಖ್ಯಾತಿ ಪಡೆದಿದ್ದಾರೆ.ಜನಸಾಮಾನ್ಯರ ಜತೆ ಒಡನಾಟ ಹೊಂದಿದ್ದ ಜಿ.ಮಲ್ಲಿಕಾರ್ಜುನಪ್ಪ ಮೊದಲ ಬಾರಿ– 1996ರಲ್ಲಿ  ಕಾಂಗ್ರೆಸ್‌ ಪ್ರಾಬಲ್ಯ ಮುರಿದರು. ಆ ಚುನಾವಣೆಯಲ್ಲಿ ಜನತಾ ದಳದ ಪ್ರೊ.ಎಸ್‌.ಎಚ್‌.ಪಟೇಲ್‌ ಎರಡನೇ ಸ್ಥಾನ ಪಡೆದಿದ್ದು, ಚನ್ನಯ್ಯ ಒಡೆಯರ್‌ 3ನೇ ಸ್ಥಾನ ಪಡೆದಿದ್ದರು. ಕಳೆದೆರಡು ಬಾರಿಯ ಸಂಸತ್‌ ಸದಸ್ಯರಾಗಿರುವ ಸಿದ್ದೇಶ್ವರ ಅವರ ಯಶಸ್ಸಿನಲ್ಲೂ ತಂದೆಯ ವರ್ಚಸ್ಸು ಸಾಕಷ್ಟು ಕೆಲಸ ಮಾಡಿದೆ. ಆದರೆ, ಯಾವುದೇ ಸಂಸದರಿಂದಲೂ ಈ ಕ್ಷೇತ್ರಕ್ಕೆ ದೊಡ್ಡ ಯೋಜನೆಗಳೇನೂ ಬಂದಿಲ್ಲ. ನೆನಪಿನಲ್ಲಿ ಉಳಿಯುವಂತಹ ದೊಡ್ಡ ಉದ್ಯಮ ಯಾವುದೂ ಸ್ಥಾಪನೆಯಾಗಲಿಲ್ಲ ಎಂಬ ಕೊರಗು ಜನರಲ್ಲಿ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.