ಎರಡು ತಲೆಮಾರಿನಲ್ಲೂ ಗೆದ್ದ ಕನ್ನಡ ಮಾಧ್ಯಮ

7

ಎರಡು ತಲೆಮಾರಿನಲ್ಲೂ ಗೆದ್ದ ಕನ್ನಡ ಮಾಧ್ಯಮ

Published:
Updated:
ಎರಡು ತಲೆಮಾರಿನಲ್ಲೂ ಗೆದ್ದ ಕನ್ನಡ ಮಾಧ್ಯಮ

ರಾಜೇಶ್ವರಿ ತೇಜಸ್ವಿಯವರ `ಕನ್ನಡ ಮಕ್ಕಳ ಹೆಮ್ಮೆಯ ಕ್ಷಣಗಳು~ ಓದಿದ ಮೇಲೆ ನನಗೂ ಬರೆಯಬೇಕು ಎನಿಸಿತು. ಇದು ನನ್ನನ್ನಾಗಲಿ, ನನ್ನ ಮಗಳನ್ನು ಹೊಗಳಿಕೊಳ್ಳುವುದಕ್ಕಾಗಲಿ ಬರೆದಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿಸುವ ತಂದೆ ತಾಯಿಗಳಲ್ಲಿ, ಓದುವ ಮಕ್ಕಳಲ್ಲಿ ಇನ್ನಷ್ಟು ಆತ್ಮ ವಿಶ್ವಾಸ ಮೂಡಿಸಲಿ ಎಂಬ ಕಾರಣಕ್ಕಾಗಿ ಬರೆದಿದ್ದೆೀನೆ.ನಲವತ್ತೈದು ವರ್ಷಗಳ ಹಿಂದೆ ನಾನು ಮೈಸೂರಿನ ಬನುಮಯ್ಯ ಪ್ರೌಢಶಾಲೆಯಲ್ಲಿ ಉತ್ತಮ ಚರ್ಚಾಪಟು. ಹಲವು ಅಂತರ ಪ್ರೌಢಶಾಲಾ ಚರ್ಚಾಸ್ಪರ್ಧೆಯಲ್ಲಿ ಶಾಲೆಗೆ ಬಹುಮಾನಗಳನ್ನೂ ತಂದಿದ್ದೆ. ಒಂದು ಚರ್ಚಾಸ್ಪರ್ಧೆಯಲ್ಲಿ ಕೊಟ್ಟಿದ್ದ ವಿಷಯ : `ನಮ್ಮ ದೇಶ ಮುಂದುವರಿಯಬೇಕಾದರೆ ಶಿಕ್ಷಣ ಮಾಧ್ಯಮ ಇಂಗ್ಲಿಷ್‌ನಿಂದ ಪ್ರಾದೇಶಿಕ ಭಾಷೆಗಳಿಗೆ ಬದಲಾಗಬೇಕು~.ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದರೂ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ್ದೆ. ಶಿಕ್ಷಕರಾಗಿದ್ದ ನನ್ನ ತಂದೆ `ಯಾವ ಮಾಧ್ಯಮದಲ್ಲಿ ಬೇಕಾದರೂ ಓದು~ ಎಂದರೂ `ಕಾಲೇಜಿನಲ್ಲಿ ಸುಲಭವಾಗುತ್ತದೆ~ ಎಂಬ ಭ್ರಮಾಪ್ರೇರಿತ ಸಲಹೆಯನ್ನು ನನ್ನ ಬಂಧುಗಳೆಲ್ಲರೂ ನೀಡಿದ್ದರಿಂದ ನಾನು ಇಂಗ್ಲಿಷ್ ಮಾಧ್ಯಮ ಆರಿಸಿಕೊಂಡಿದ್ದೆ.ಆಗಿನ ಹುಡುಗುತನದಲ್ಲಿ ಇಂಗ್ಲಿಷ್ ಮಾಧ್ಯಮದ ಪರವಾಗಿಯೇ ಚರ್ಚಾಸ್ಪರ್ಧೆಯಲ್ಲಿ ಮಾತನಾಡಿದೆ. ಬಹುಮಾನ ಬಂತು. ಆದರೆ ಅಧ್ಯಕ್ಷ ಭಾಷಣ ಮಾಡಿದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಯಮುನಾಚಾರ್ಯರು ಪ್ರಾದೇಶಿಕ ಭಾಷಾ ಮಾಧ್ಯಮವನ್ನು ಪ್ರತಿಪಾದಿಸಿದರು. ಅದು ನನ್ನಲ್ಲಿದ್ದ ಇಂಗ್ಲಿಷ್ ಮಿಥ್ಯೆಯನ್ನು ಕೆಲಮಟ್ಟಿಗೆ ಅಲುಗಾಡಿಸಿತು.

 

ಜನರಿಗೇಕೆ ಇಂಗ್ಲಿಷ್ ಮಾಧ್ಯಮ ವ್ಯಾಮೋಹ?

ನಾನು ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದ್ದು ಎಂದು ಪದೇ ಪದೇ ಹೇಳುವ ಶ್ರೇಷ್ಠ ವಿಜ್ಞಾನಿ ಸಿ.ಎನ್.ಆರ್.ರಾವ್, ಯು.ಆರ್. ರಾವ್ ಮತ್ತಿತರ ಹಲವು ಸಾಧಕರೂ ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲವೇ?ಮಾಹಿತಿ ತಂತ್ರಜ್ಞಾನದಲ್ಲಿ ಯಶಸ್ಸು ಸಾಧಿಸಬೇಕಾದರೆ ಇಂಗ್ಲಿಷ್ ಮಾಧ್ಯಮ ಅನಿವಾರ್ಯ ಎಂಬುದು ದಾರಿ ತಪ್ಪಿಸುವ ಮಾತು ಎಂಬುದಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಸುಧಾ ಮೂರ್ತಿ ಪ್ರತ್ಯಕ್ಷ ನಿದರ್ಶನ.ನನಗೆ ತಿಳಿದಂತೆ ಸುಧಾಮೂರ್ತಿ ಅವರು ಶಿಕ್ಷಣ ಮಾಧ್ಯಮದ ಬಗ್ಗೆ ಎಲ್ಲೂ ಏನನ್ನೂ ನೀಡಿಲ್ಲ. ಆದರೆ ದೂರದರ್ಶನದ ಸಂದರ್ಶನದಲ್ಲಿ ಅವರು `ನಾನು ಎಸ್ಸೆಸ್ಸೆಲ್ಸಿವರೆಗೂ ಓದಿದ್ದು ಕನ್ನಡ ಮಾಧ್ಯಮದಲ್ಲೇ~ ಎಂದು ಮಾರ್ಮಿಕವಾಗಿ ಉತ್ತರಿಸಿದ್ದು ನನಗೆ ಚೆನ್ನಾಗಿ ನೆನಪಿದೆ. ಮಾಹಿತಿ ತಂತ್ರಜ್ಞಾನಕ್ಕೆ ಇಂಗ್ಲಿಷ್ ಭಾಷೆಯ ಜ್ಞಾನ ಬೇಕಿರಬಹುದು. ಆದರೆ ಅದಕ್ಕಾಗಿ ಇಂಗ್ಲಿಷ್ ಮಾಧ್ಯಮವೇ ಬೇಕಿಲ್ಲ ಎಂಬುದಕ್ಕೆ ಸುಧಾಮೂರ್ತಿ ಅವರಿಗಿಂತ ಉದಾಹರಣೆ ಬೇಕೆ? ಎಂದು ಅವರು ವ್ಯಕ್ತಪಡಿಸಿದ ದೃಢ ನಿಲುವು ಈಗಲೂ ನನ್ನ ಕಿವಿಯಲ್ಲಿ ಗುನುಗುಟ್ಟುತ್ತಿದೆ.ಹೀಗಿದ್ದೂ, ಐಟಿಯಲ್ಲಿ ಇಂಗ್ಲಿಷ್ ಇಲ್ಲದೆ ನಡೆಯವುದಿಲ್ಲ; ಅಲ್ಲೇನಿದ್ದರೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಿಗೆ ಮಣೆ. ಕನ್ನಡ ಮಾಧ್ಯಮದಲ್ಲಿ ಓದಿದವರು ಅಲ್ಲಿ ಕಾಲಿಡಲೂ ಆಗದು ಎನ್ನುವವರೂ ಇದ್ದಾರೆ. ಆದರೆ ಇದು ಅಜ್ಞಾನದ, ದಾರಿ ತಪ್ಪಿಸುವ ಮಾತು. ಇಲ್ಲವೇ ಪಟ್ಟಭದ್ರ ಹಿತಾಸಕ್ತಿಗಳ ವಾದ ಎಂದು ನನ್ನ ಅಭಿಮತ.`ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ - ಇವುಗಳನ್ನು ಇಂಗ್ಲಿಷ್ ಕಲಿಯದೆ ನನ್ನ ಮಾತೃಭಾಷೆಯಾದ ಗುಜರಾತಿಯಲ್ಲಿ ಕಲಿಯುತ್ತಿದ್ದರೆ ನಾಲ್ಕು ವರ್ಷಗಳಲ್ಲಿ ಕಲಿತದ್ದನ್ನು ಒಂದೇ ವರ್ಷದಲ್ಲಿ ಕಲಿಯಬಹುದಿತ್ತು~ ಎಂಬ ಗಾಂಧೀಜಿಯವರ ಮಾತಿನಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ.ಅಮೆರಿಕದಲ್ಲಿ ಪ್ರತಿ ವರ್ಷ ಚೀನಿ, ಜಪಾನಿ, ಕೊರಿಯನ್ನರು ಮತ್ತು ಭಾರತೀಯರೂ ಸೇರಿದಂತೆ ಸುಮಾರು ನಾಲ್ಕು ಲಕ್ಷ ಮಂದಿ ಉದ್ಯೋಗ ಪಡೆಯುತ್ತಾರೆ ಎಂಬ ಅಂದಾಜಿದೆ. ಇವರಲ್ಲಿ ಮಾತೃಭಾಷೆಯಲ್ಲಿ ಕಲಿತವರ ಸಂಖ್ಯೆ ಶೇ 75 ರಷ್ಟು. ಉಳಿದವರು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರು.

ಆದರೂ ಜನರಿಗೇಕೆ ಇಂಗ್ಲಿಷ್ ಮಾಧ್ಯಮ ವ್ಯಾಮೋಹ!ಮುಂದೆ ಯುವರಾಜ ಕಾಲೇಜಿನಲ್ಲಿ ಬಿ.ಎಸ್‌ಸಿ ಓದುತ್ತಿದ್ದಾಗ ಇಡೀ ದೇಶದಲ್ಲಿ ಶಿಕ್ಷಣ ಮಾಧ್ಯಮದ ಬಗ್ಗೆ ವಾದ ವಿವಾದದ ಎದ್ದಿತ್ತು. ಅದು, ಶಾಲೆಯಲ್ಲಿ ಮಗುವಿನ ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು ಎಂಬುದರ ಬಗೆಗೆ ಅಲ್ಲ.ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಾದೇಶಿಕ ಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು ಎಂಬುದರ ಬಗೆಗೆ ರಾಷ್ಟ್ರಮಟ್ಟದಲ್ಲಿ ವಿವಾದ ಹುಟ್ಟಿತ್ತು. ಆಗಿನ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಛಾಗ್ಲಾ ಅವರು ಇಂಗ್ಲಿಷ್ ಮಾಧ್ಯಮದ ಪ್ರಬಲ ಪ್ರತಿಪಾದಕರಾಗಿದ್ದರೆಂಬುದು ನನ್ನ ನೆನಪು.

ಆಗ ಯುವರಾಜ ಕಾಲೇಜಿನಲ್ಲಿ ಒಂದು ವಿಚಾರ ಸಂಕಿರಣ. ಡಾ. ಹಾ.ಮಾ.ನಾಯಕ, ಡಾ. ಯು.ಆರ್. ಅನಂತಮೂರ್ತಿ, ಪ್ರೊ. ಜೆ.ಆರ್. ಲಕ್ಷ್ಮಣರಾಯರು ವಿಶ್ವವಿದ್ಯಾನಿಲಯಗಳಲ್ಲಿ ಪ್ರಾದೇಶಿಕ ಭಾಷೆಯೇ ಏಕೆ ಶಿಕ್ಷಣ ಮಾಧ್ಯಮವಾಗಬೇಕು ಎಂಬುದನ್ನು ಎಳೆಎಳೆಯಾಗಿ ವಿಶ್ಲೇಷಿಸಿ ಪ್ರತಿಪಾದಿಸಿದ್ದರು. ನಾನು ಆ ಹೊತ್ತಿಗೆ ಕನ್ನಡಾಭಿಮಾನಿಯಾಗಿದ್ದೆ. ಈ ಹಿರಿಯರ ಮಾತುಗಳು ನನ್ನ ಮೇಲೆ ಅಗಾಧ ಪರಿಣಾಮ ಬೀರಿದವು. ಆ ವೇಳೆಗೆ ದೇ. ಜವರೇಗೌಡರ ಪ್ರಯತ್ನದ ಫಲವಾಗಿ ಮೈಸೂರು ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೂ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸುವ ಅವಕಾಶವನ್ನು ಜಾರಿಗೆ ಬಂದಿತ್ತು. ಪದವಿ ತರಗತಿಯಲ್ಲಿದ್ದ ನಾನು, ಮುಂದಿನ ಎಂ.ಎಸ್‌ಸಿಗೆ ಬುನಾದಿಯಾಗಿದ್ದ ಭೂ ವಿಜ್ಞಾನ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರಿಸುವ ನಿರ್ಧಾರ ಕೈಗೊಂಡೆ. ಆಗ ಕನ್ನಡದಲ್ಲಿ ಪುಸ್ತಕಗಳು ಹೆಚ್ಚೇನೂ ಇರಲಿಲ್ಲ. ಕುವೆಂಪು ಅವರು ಪ್ರಸಾರಾಂಗದಲ್ಲಿ ಆರಂಭಿಸಿದ್ದ ಪಠ್ಯಪುಸ್ತಕ ಯೋಜನೆಯಡಿಯಲ್ಲಿ ಆಗ ನನ್ನ ಶಿಕ್ಷಕರಾಗಿದ್ದ ಡಿ. ರಂಗಯ್ಯ ಒಂದೆರಡು ಪುಸ್ತಕಗಳನ್ನು ಬರೆದಿದ್ದರು. ಆದರೆ, ಎಲ್ಲ ಶಿಕ್ಷಕರ ಉತ್ತೇಜನದಿಂದಾಗಿ ನಾನು ಒಳ್ಳೆಯ ಅಂಕಗಳಿಸಿ, ಎಂ.ಎಸ್‌ಸಿ ಭೂ ವಿಜ್ಞಾನಕ್ಕೆ ಪ್ರವೇಶ ಪಡೆದೆ.ಎಂ.ಎಸ್‌ಸಿಯಲ್ಲಿಯೂ ಕನ್ನಡದಲ್ಲಿ ಉತ್ತರಿಸಲು ನಿರ್ಧರಿಸಿದೆ. ಎಲ್ಲ ಪರಾಮರ್ಶನ ಗ್ರಂಥಗಳನ್ನೂ ಓದಿ, ಕನ್ನಡದಲ್ಲಿ ಪ್ರಬಂಧಗಳನ್ನು ನಾನೇ ಭಾಷಾಂತರಿಸಿ, ಸಿದ್ಧಪಡಿಸಿಕೊಳ್ಳಬೇಕಾಯಿತು. ಪ್ರಥಮ ಎಂ.ಎಸ್‌ಸಿಯಲ್ಲಿ ಮೂರನೇ ಸ್ಥಾನ ಪಡೆದೆ.ಆಗ ಬಾಹ್ಯಮೌಲ್ಯಮಾಪಕರಾಗಿದ್ದ, ಶ್ರೇಷ್ಠ ಭೂ ವಿಜ್ಞಾನಿ ಡಾ. ಬಿ.ಪಿ. ರಾಧಾಕೃಷ್ಣ ನನ್ನನ್ನು ಕರೆಸಿ, `ಕನ್ನಡದಲ್ಲಿ ಬರೆದರೂ ಚೆನ್ನಾಗಿಯೇ ಉತ್ತರಿಸಿದ್ದೀರಿ. ಅದಕ್ಕಾಗಿ ನಿಮ್ಮನ್ನು ನೋಡಬಯಸಿದೆ. ಇದನ್ನು ಮುಂದುವರೆಸಿ~ ಎಂದು ಬೆನ್ನ ತಟ್ಟಿದರು. ದ್ವಿತೀಯ ಎಂ.ಎಸ್‌ಸಿಯಲ್ಲಿಯೂ ಮೂರನೇ ರ‌್ಯಾಂಕ್ ಪಡೆದೆ.ಸ್ನಾತಕೋತ್ತರ ಪದವಿಯ ಫಲಿತಾಂಶ ಬಂದ ಕೆಲವು ತಿಂಗಳ ನಂತರ ಭಾರತ ಭೂವಿಜ್ಞಾನ ಇಲಾಖೆಯಿಂದ ಹುದ್ದೆಯೊಂದರ ಸಂದರ್ಶನಕ್ಕೆ ಕರೆ ಬಂತು. ಸಂದರ್ಶನದಲ್ಲಿ ಮೊದಲು ಹದಿನೈದು ನಿಮಿಷ ಸಂದರ್ಶಕರು ಭೂ ವಿಜ್ಞಾನ ವಿಷಯದ ಮೇಲೆ ಪ್ರಶ್ನೆಗಳನ್ನು ಕೇಳಿದರು. ನನ್ನ ಉತ್ತರಗಳನ್ನು ಕೇಳಿದ ಮೇಲೆ ಸಂದರ್ಶಕರು `ನೀವು ಈವರೆಗೂ ಚೆನ್ನಾಗಿ ಉತ್ತರಿಸಿದ್ದೀರಿ. ಆದರೆ ಪ್ರಾದೇಶಿಕ ಭಾಷೆಯಲ್ಲಿ ಉತ್ತರಿಸಿ, ಮೂರನೇ ರ‌್ಯಾಂಕನ್ನು ಪಡೆದಿದ್ದೇನೆ ಎಂದು ಹೇಳುತ್ತಿದ್ದೀರಿ. ಆದ್ದರಿಂದ ನಿಮಗೆ ಇನ್ನಷ್ಟು ಕಷ್ಟಕರವಾದ ಪ್ರಶ್ನೆಗಳನ್ನು ಕೇಳುತ್ತೇನೆ~ ಎಂದು ಹೇಳಿ ಇನ್ನೂ ಮೂವತ್ತು ನಿಮಿಷ ಭೂ ವಿಜ್ಞಾನದ ಪ್ರಶ್ನೆಗಳನ್ನು ಕೇಳಿ ನನ್ನ ಜಂಘಾಬಲವನ್ನು ಉಡುಗಿಸಿದರು (ಕೆಪಿಎಸ್‌ಸಿಯಲ್ಲಿ ಇದಕ್ಕೆ ವ್ಯತಿರಿಕ್ತವಾದ ಅನುಭವ. ಕನ್ನಡದಲ್ಲಿ ಉತ್ತರಿಸಿದ್ದು, ಮೂರನೇ ರ‌್ಯಾಂಕ್ ಗಳಿಸಿದ್ದು ಇತ್ಯಾದಿ ಬಗ್ಗೆ ಯಾವುದೇ ಆಸಕ್ತಿ ವಹಿಸದೆ, ಒಂದೆರಡು ಕಾಟಾಚಾರದ ಪ್ರಶ್ನೆಗಳನ್ನು ಕೇಳಿ - ಭೂ ವಿಜ್ಞಾನ ಪ್ರಶ್ನೆ ಕೇಳದೇ ಹೊರ ಕಳುಹಿಸಿದ್ದರು).ಆದರೆ ಕೆಲವೇ ತಿಂಗಳಲ್ಲಿ ಭಾರತದ ಭೂ ವಿಜ್ಞಾನ ಇಲಾಖೆಯಿಂದ ನನಗೆ ನೇಮಕಾತಿಯ ಪತ್ರ ಬಂದಿತು. ಅಷ್ಟರೊಳಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಲ್ಲಿ ಇಂಗ್ಲಿಷ್-ಕನ್ನಡ ನಿಘಂಟಿನ ಸಹಾಯಕ ಸಂಪಾದಕ ಹುದ್ದೆಗೆ ಆಯ್ಕೆಯಾಗಿದ್ದೆ. ಈಗ ಅದೇ ಪ್ರಸಾರಾಂಗದಲ್ಲಿ ಉಪನಿರ್ದೇಶಕನಾಗಿ ನಿವೃತ್ತಿಯ ಅಂಚಿನಲ್ಲಿದ್ದೇನೆ.ಇಷ್ಟೆಲ್ಲವನ್ನೂ ಕನ್ನಡ ಮಾಧ್ಯಮದ ವಿದ್ಯಾರ್ಥಿಯೊಬ್ಬನ ಆತ್ಮವಿಶ್ವಾಸದ ಪ್ರತೀಕವಾಗಿ ಉಲ್ಲೇಖಿಸಿದ್ದೇನೆ, ಅಷ್ಟೆ.ನಾನು ಮನೆಗೆ ಹಿರಿಯ ಮಗ. ಸಂಪಾದನೆ ಆರಂಭವಾದಾಗ ಎರಡನೇ ತಮ್ಮನ ಓದಿನಲ್ಲಿ ಮೂಗು ತೂರಿಸಲು ಅವಕಾಶ ಒದಗಿತು. ನನ್ನ ತಮ್ಮ ಏಳನೇ ತರಗತಿಯಲ್ಲಿ ಶೇ 97ರಷ್ಟು ಅಂಕ ಗಳಿಸಿದ್ದ. ಅವನನ್ನು ಪ್ರೌಢಶಾಲೆಗೆ ಸೇರಿಸಲು ಕರೆದುಕೊಂಡು ಹೋದಾಗ ಮುಖ್ಯ ಶಿಕ್ಷಕರು `ಹುಡುಗ ಒಳ್ಳೆ ಅಂಕಗಳನ್ನು ಗಳಿಸಿದ್ದಾನೆ. ಇಂಗ್ಲಿಷ್ ಮೀಡಿಯಂ ಕೊಡಿಸಿ, ಮುಂದೆ ಕಾಲೇಜಿನಲ್ಲಿ ಸುಲಭವಾಗುತ್ತದೆ~ ಎಂದರು.`ಕನ್ನಡ ಮಾಧ್ಯಮಕ್ಕೇ ಸೇರಿಸಿಕೊಳ್ಳಿ. ಅವನು ಅಲ್ಲೂ ಒಳ್ಳೆಯ ಅಂಕಗಳನ್ನು ಗಳಿಸುತ್ತಾನೆ ಎಂಬ ವಿಶ್ವಾಸ ನನಗಿದೆ~ ಎಂದೆ.`ಅದು ಸರಿ, ಇಂಗ್ಲಿಷ್ ಮೀಡಿಯಂನಲ್ಲಾದರೆ ಬುದ್ಧಿವಂತ ಮಕ್ಕಳೇ ಇರುತ್ತಾರೆ. ಕನ್ನಡ ಮೀಡಿಯಂನಲ್ಲಿ ದಡ್ಡರು, ಅಪಾಪೋಲಿಗಳ ಸಹವಾಸದಲ್ಲಿ ಕೆಟ್ಟು ಹೋಗುತ್ತಾನೆ~ ಎಂದರು ಮುಖ್ಯ ಶಿಕ್ಷಕರು.ಅದಕ್ಕೆ ಮುಂಚೆ ನಾನು, ಹಿರಿಯ ವಿಜ್ಞಾನ ಲೇಖಕರಾಗಿದ್ದ ಪ್ರೊ. ಜೆ.ಆರ್. ಲಕ್ಷ್ಮಣರಾಯರ ಜತೆ ಸಮಾಲೋಚಿಸಿದ್ದೆ.`ನಿಮ್ಮ ತಮ್ಮನನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿ, ಓದಿದ್ದನ್ನು ಸುಲಭವಾಗಿ ಗ್ರಹಿಸಲು, ಗ್ರಹಿಸಿದ್ದನ್ನು ಚೆನ್ನಾಗಿ ಮನನ ಮಾಡಿಕೊಳ್ಳಲು, ಮನನ ಮಾಡಿಕೊಂಡಿದ್ದನ್ನು ಸಮರ್ಥವಾಗಿ ಅಭಿವ್ಯಕ್ತಿಸಲು ಮಾತೃಭಾಷೆಯೇ ಶಿಕ್ಷಣ ಮಾಧ್ಯಮವಾಗಬೇಕು~ ಎಂದು ಅವರು ಸಲಹೆ ನೀಡಿದ್ದರು.`ಅವನು ಕಾಲೇಜಿಗೆ ಹೋದಾಗ ಇಂಗ್ಲಿಷ್ ಮಾಧ್ಯಮ ಕಷ್ಟ ಎಂದು ಹೇಳಬಹುದು. ಚಿಕ್ಕ ಮಗುವಿಗೂ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸಿದಾಗ ಕಷ್ಟ ಎನಿಸುತ್ತದೆ. ಆದರೆ ಅದಕ್ಕೆ ಹೇಳಲು ಗೊತ್ತಾಗುವುದಿಲ್ಲ. ನಿಮ್ಮ ತಮ್ಮ ಕಾಲೇಜು ಸೇರಿದಾಗ, ಅದನ್ನು ಹೇಳಲು ಬರುತ್ತದೆ. ಆದರೆ ಕನ್ನಡ ಮಾಧ್ಯಮದಲ್ಲಿ ಓದುವಾಗ ಗ್ರಹಿಕೆ, ಮನನ, ಅಭಿವ್ಯಕ್ತಿ ಸಾಮರ್ಥ್ಯ ಬೆಳೆದಿರುತ್ತದೆ. ಇಂಗ್ಲಿಷ್ ಮಾಧ್ಯಮದ ಬಹುತೇಕ ಮಕ್ಕಳಂತೆ ಬಾಯಿಪಾಠ ಮಾಡಿರುವುದಿಲ್ಲ. ಒಂದೆರಡು ತಿಂಗಳಲ್ಲಿ ಸರಿ ಹೋಗುತ್ತದೆ. ಅವನಲ್ಲಿ ಬೆಳೆದಿರುವ ಗ್ರಹಿಕೆ, ಮನನ, ಅಭಿವ್ಯಕ್ತಿ ಸಾಮರ್ಥ್ಯಗಳು ಮುಂದೆ ಅವನಿಗೆ ನೆರವಾಗುತ್ತವೆ~ ಎಂದು ಕಿವಿ ಮಾತು ಹೇಳಿದ್ದರು. ಅದಕ್ಕೇ ಹಠ ಹಿಡಿದು ನನ್ನ ತಮ್ಮನನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿದೆ.ಆದರೆ ದುರಂತ - ಅವನು ತರಗತಿಯಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ `ಮುಂಡೇದೇ, ನಾವು ಹೇಳಿದರೂ ಕೇಳಲಿಲ್ಲ. ಕನ್ನಡ ಮಾಧ್ಯಮ ತೆಗೆದುಕೊಂಡು ದಡ್ಡರ ಜೊತೆ ಸೇರಿ ನೀನು ದಡ್ಡನಾಗಿ ಬಿಟ್ಟೆಯಲ್ಲೋ~ ಎಂದು ಕೆಲವು ಅಧ್ಯಾಪಕರು ಹೀಗಳೆಯತೊಡಗಿದರಂತೆ. ಅವನಲ್ಲಿ ಕೀಳರಿಮೆ ಮೂಡತೊಡಗಿ, ಮುಂದೆ ಅಂಕ ಗಳಿಕೆಯಲ್ಲಿ ಸ್ವಲ್ಪ ಹಿಂದೆ ಬಿದ್ದ.ವಿಜ್ಞಾನ ಪದವಿ ಪೂರೈಸಿ, ಮುಂದೆ ಕಾನೂನು ಪದವಿ ಸೇರಿದ. ಆ ಹೊತ್ತಿಗೆ ಕೀಳರಿಮೆ ಕಳೆದು ಹೋಗಿ, ಆತ್ಮವಿಶ್ವಾಸ ಮೂಡಿತ್ತು. ಕಾನೂನು ಪದವಿಯ ಮೊದಲ ವರ್ಷದ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿದ್ದಕ್ಕಾಗಿ ನಗದು ಬಹುಮಾನ ದೊರೆಯಿತು.

ಮುಂದೆ ಅವನು ವಕೀಲನಾಗಿ ಆರೇಳು ವರ್ಷಗಳ ನಂತರ ಮುನ್ಸೀಫ್ ಪರೀಕ್ಷೆಗೆ ಕುಳಿತ. ಮೈಸೂರು ವಕೀಲ ವೃಂದದಲ್ಲಿ ಹಲವಾರು ಜನ ಪರೀಕ್ಷೆ ತೆಗೆದುಕೊಂಡಿದ್ದರೂ ಅವನೊಬ್ಬನೇ ಪರೀಕ್ಷೆಯಲ್ಲಿ ತೇರ್ಗಡೆಯಾದ. ಈಗ ಅವನು ಮುದ್ದೆೀಬಿಹಾಳದಲ್ಲಿ ನ್ಯಾಯಾಧೀಶ (ಸ.ರ. ಮಾಣಿಕ್ಯಂ).ಜೆ.ಆರ್. ಲಕ್ಷ್ಮಣರಾಯರು ಹೇಳಿದಂತೆ ಕನ್ನಡ ಮಾಧ್ಯಮದಲ್ಲಿ ಓದಿದಾಗ ಬೆಳೆದ ಗ್ರಹಿಕೆ, ಮನನ, ಅಭಿವ್ಯಕ್ತಿ ಅವನ ನೆರವಿಗೆ ಬಂದಿತು. ಅವನು ಕನ್ನಡ ಮಾಧ್ಯಮದಲ್ಲಿ ಓದಿದ್ದು ಅವನು ಗೌರವಾನ್ವಿತ ನ್ಯಾಯಾಧೀಶನಾಗಲು ಅಡ್ಡಿಯಾಗಲಿಲ್ಲ ಎಂಬುದಕ್ಕೆ ನಿದರ್ಶನವಾಗಿ ಈ ಪ್ರಕರಣ ಉಲ್ಲೇಖಿಸಿದ್ದೇನೆ.ಕನ್ನಡ ಮಾಧ್ಯಮದಲ್ಲಿ ಓದಿದವರೆಲ್ಲ ಬುದ್ಧಿವಂತರಾಗುತ್ತಾರೆ ಎಂದು ನಾನು ಹೇಳುವುದಿಲ್ಲ. ಆದರೆ ಬುದ್ಧಿವಂತರಾದವರಿಗೆ ಬೆಟ್ಟವನ್ನು ಹತ್ತಲು ಸುಲಭವಾಗುವ ಮೆಟ್ಟಿಲು ಕನ್ನಡ ಮಾಧ್ಯಮ.ನಾನು ಎಲ್ಲೇ ಭಾಷಣ ಮಾಡಲು ಹೋದರೂ ಸಭಿಕರು ಒಂದು ಪ್ರಶ್ನೆ ಕೇಳುವುದು ಮಾಮೂಲು.`ನಿಮ್ಮ ಮಕ್ಕಳು ಯಾವ ಮಾಧ್ಯಮದಲ್ಲಿ ಓದುತ್ತಿದ್ದಾರೆ ? ಏನಾಗಿದ್ದಾರೆ~, `ಈ ಪ್ರಶ್ನೆ ಕೇಳಿ ನನ್ನನ್ನು ಚಿತ್ತು  ಮಾಡಲಾಗದು~ ಎಂದು ನಾನು ನಗುತ್ತಲೇ ಉತ್ತರಿಸುತ್ತೇನೆ. ಏಕೆಂದರೆ ನಮ್ಮ ಒಬ್ಬಳೇ ಮಗಳು `ನುಡಿ~ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ, ಬಿ.ಇ. ಮುಗಿಸಿ, ಇಂದು ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಳೆ. ನನ್ನ ಮಡದಿ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಳು. ಅವಳೂ ಕನ್ನಡ ಮಾಧ್ಯಮ ಪರವಾಗಿದ್ದಳು. ನಮ್ಮ ನಡುವೆ ಒಮ್ಮತ ಇದ್ದುದರಿಂದ `ನುಡಿ~ಯನ್ನು ಮೈಸೂರಿನ `ವನಿತಾ ಸದನ~ ಶಾಲೆಗೆ ಸೇರಿಸಿದೆವು.ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಕಾಲೇಜಿನಲ್ಲಿ ಸುಲಭವಾಗುತ್ತದೆ ಎಂಬ ಮಾತು ನಮ್ಮ ಕಾಲದಿಂದಲೂ ಪ್ರಚಾರದಲ್ಲಿತ್ತು. ಈಗ ಅದು ವ್ಯಾಪಕವಾಗಿದೆ. ನನ್ನ ಮಗಳು ಕನ್ನಡ ಮಾಧ್ಯಮದಲ್ಲಿ ಓದು ಮುಂದುವರೆಸಿದಳು. ಶಾಲೆಗೇ ಮೊದಲಿಗಳಾಗಿ ಶೇ 93ರಷ್ಟು ಅಂಕಗಳನ್ನು ಎಸ್ಸೆಸ್ಸೆಲ್ಸಿಯಲ್ಲಿ ಪಡೆದಳು. ಪಿಯುಸಿ ಯಲ್ಲಿ ವಿಜ್ಞಾನದಲ್ಲಿ ಕನ್ನಡ ಮಾಧ್ಯಮ ಇಲ್ಲದಿರುವುದರಿಂದ ಅನಿವಾರ್ಯವಾಗಿ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಕೊಳ್ಳಬೇಕಾಯಿತು. ದ್ವಿತೀಯ ಪಿಯುಸಿಯಲ್ಲೂ ಶೇ 93 ರಷ್ಟೇ ಅಂಕ ಗಳಿಸಿದಳು.ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಒಳ್ಳೆಯ ರ‌್ಯಾಂಕ್ ಗಳಿಸಿದಳು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇ. 5 ರಷ್ಟು ಮೀಸಲಾತಿ ಇದ್ದರೂ ಅದನ್ನು ಬಳಸಿಕೊಳ್ಳುವ ಸಂದರ್ಭವೇ ಬರಲಿಲ್ಲ. ಮಾಮೂಲು ಅರ್ಹತೆಯ ಮೇಲೆ ಮೈಸೂರಿನ ಜೆಸಿಇ ಕಾಲೇಜಿನಲ್ಲೇ ಪ್ರವೇಶ ದೊರೆಯಿತು. ಮುಂದೆ ಕ್ಯಾಂಪಸ್ ಆಯ್ಕೆಯಲ್ಲೂ ಯಶಸ್ವಿಯಾದಳು. ಅವಳಂತೆ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಅವಳ ಕೆಲವು ಸಹಪಾಠಿಗಳೂ ಆಯ್ಕೆಯಾದರು.

ಅಂತಿಮ ಬಿ.ಇ. ಯಲ್ಲಿ ಉನ್ನತ ಶ್ರೇಣಿಯಲ್ಲೂ ಉತ್ತೀರ್ಣಳಾದಳು. ಈಗ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಐಟಿ ಸಂಸ್ಥೆಗಳಲ್ಲಿ ದಿಕ್ಕು ತೋಚದವರಂತೆ ಆಗುತ್ತಾರೆ ಎಂಬುದು ಇನ್ನೊಂದು ಅಪಪ್ರಚಾರ. ನನ್ನ ಮಗಳು ಯಾವ ಹಂತದಲ್ಲೂ ದಿಕ್ಕು ತಪ್ಪಲಿಲ್ಲ.

ಎರಡು ತಲೆಮಾರಿನ ಕನ್ನಡ ಮಾಧ್ಯಮದ ಸಾಧನೆಗೆ ನಾನು ಮತ್ತು ನನ್ನ ಮಗಳು ಸಾಕ್ಷಿಯಾಗಿದ್ದೇವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry