ಶನಿವಾರ, ನವೆಂಬರ್ 23, 2019
23 °C

ಎರಡು ದಿನಗಳಲ್ಲಿ ನಿರಾಣಿ ನಿರ್ಧಾರ

Published:
Updated:

ಬಾಗಲಕೋಟೆ: `ಬಿಜೆಪಿಯಲ್ಲೇ ಉಳಿ ಯಬೇಕೋ ಅಥವಾ ಕೆಜೆಪಿಗೆ ಹೋಗಬೇಕೋ, ಬೀಳಗಿ ಅಥವಾ ಜಮಖಂಡಿ ಕ್ಷೇತ್ರದಿಂದ ಸ್ಪರ್ಧಿಸಬೇಕೋ ಎಂಬುದನ್ನು ಎರಡು ದಿನಗಳಲ್ಲಿ ತೀರ್ಮಾನಿಸುವೆ' ಎಂದು ಸಚಿವ ಮುರುಗೇಶ ನಿರಾಣಿ ಮಂಗಳವಾರ ಹೇಳಿದರು.`ಕೆಜೆಪಿಯಿಂದ ಜಮಖಂಡಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ಕ್ಷೇತ್ರದ 48 ಗ್ರಾ.ಪಂ.ಗಳಲ್ಲಿ ಈಗಾಗಲೇ 35 ಗ್ರಾ.ಪಂ.ಗಳ ಜನಾಭಿಪ್ರಾಯ ಸಂಗ್ರಹಿಸಿದ್ದೇನೆ, ಇನ್ನುಳಿದ 13 ಗ್ರಾ.ಪಂ.ಗಳ ಜನತೆಯ ಅಭಿಪ್ರಾಯ ಪಡೆದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ' ಎಂದು  `ಪ್ರಜಾವಾಣಿ' ಗೆ ಮಂಗಳವಾರ ದೂರವಾಣಿ ಮೂಲಕ ತಿಳಿಸಿದರು.`ಕೆಜೆಪಿ ಜಮಖಂಡಿ ತಾಲ್ಲೂಕು ಘಟಕದ ಅಧ್ಯಕ್ಷರು ಸಚಿವ ನಿರಾಣಿ ಇದೇ ಬುಧವಾರ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ' ಎಂದು ಹೇಳಿದರು.ರಾಜೀನಾಮೆ ಇಂದು?: ಜಮಖಂಡಿ ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಉಮೇಶ ಮಹಾಬಳಶೆಟ್ಟಿ, `ಮುರುಗೇಶ ನಿರಾಣಿ ಅವರು ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಲಿದ್ದಾರೆ, ಬಳಿಕ ಅಧಿಕೃತವಾಗಿ ಕೆಜೆಪಿ ಸೇರ್ಪಡೆಯಾಗಲಿದ್ದಾರೆ' ಎಂದು ಹೇಳಿದರು.'ಹಲವು ದಿನಗಳಿಂದ ಸಚಿವ ಮುರುಗೇಶ ನಿರಾಣಿ ಅವರ ರಾಜಕೀಯ ನಡೆ ಕುರಿತು ಹಲವಾರು ವದಂತಿಗಳು ಹರಿದಾಡುತ್ತ್ದ್ದಿದು, ಅವುಗಳಿಗೆಲ್ಲ ಸಚಿವರು ಬುಧವಾರ ಅಂತಿಮ ತೆರೆ ಎಳೆಯಲಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮುರುಗೇಶ ನಿರಾಣಿ ಕೆಜೆಪಿಯಿಂದ ಜಮಖಂಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ' ಎಂದರು.

`ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ 4ರಂದು ಪಾಲ್ಗೊಳ್ಳಬೇಕಿದ್ದ ಜಮಖಂಡಿಯ ಕೆಜೆಪಿ ಸಮಾವೇಶ ರದ್ದು ಮಾಡಲಾಗಿದೆ. ದಿನಾಂಕ ನಿಗದಿಯಾದ ಮೇಲೆ ಸಮಾವೇಶ ಏರ್ಪಡಿಸುವ ಉದ್ದೇಶವಿದೆ' ಎಂದು ಮಹಾಬಳಶೆಟ್ಟಿ ಹೇಳಿದರು.

ಪ್ರತಿಕ್ರಿಯಿಸಿ (+)