ಎರಡು ಮಕ್ಕಳ ಕುಟುಂಬದ ಕಥೆ

7

ಎರಡು ಮಕ್ಕಳ ಕುಟುಂಬದ ಕಥೆ

Published:
Updated:

ಸಾರಾ ಎಂಬ ಹದಿನಾಲ್ಕು ವರ್ಷದ ಹುಡುಗಿ. ಅವಳ ತಮ್ಮ ಇಬ್ರಾಹಿಂಗೆ ವಯಸ್ಸಿನ್ನೂ ಒಂಬತ್ತು. ಇಬ್ಬರೂ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಆದರೆ, ಬೇರೆ ಮಕ್ಕಳೊಟ್ಟಿಗೆ ಬೆರೆಯುವುದು ಕೆಲವು ಕಾಲ ಇವರಿಗೆ ಸಲೀಸಾಗಿರಲಿಲ್ಲ. ಮಾಧ್ಯಮದ ಯಾರಾದರೂ ಎದುರಾಗಿ ಏನಾದರೂ ಕೇಳಿದರೆ ಮೌನವೇ ಉತ್ತರವಾಗುತ್ತಿತ್ತು.ಈಗ ಪರಿಸ್ಥಿತಿಗೆ ಇಬ್ಬರೂ ಒಗ್ಗಿಕೊಂಡಿದ್ದಾರೆ. ಅಪ್ಪ ಮನೆಯಲ್ಲಿ ಇಲ್ಲ. ಟೀಪಾಯಿಯ ಮೇಲೆ ಹರಡಿಕೊಂಡ ಮ್ಯಾಗಜೀನುಗಳ ಮುಖಪುಟದಲ್ಲೋ, ಒಳಪುಟಗಳಲ್ಲೋ ಅವರೇನು ಮಾಡುತ್ತಿದ್ದಾರೆಂಬುದರ ಸಂಪೂರ್ಣ ಮಾಹಿತಿ ನಿಯಮಿತವಾಗಿ ಸಿಗುತ್ತದೆ. ಆಗೀಗ ಅಪ್ಪ ಕೂಡ ಸಿಗುವುದುಂಟು. ಕಾರಿನೊಳಗೇ ಅವರು ಗಂಟೆಗಟ್ಟಲೆ ಲಲ್ಲೆಗರೆಯಬಲ್ಲರು. ಯಾಕೆಂದರೆ, ಹೊರಗೆ ಹೋದರೆ ಅಭಿಮಾನಿಗಳ ಕಾಟ. ಒಂದಿಷ್ಟು ಬಟ್ಟೆ, ಚಾಕೊಲೇಟ್, ತಾರಾ ಹೋಟೆಲಿನ ಖಾದ್ಯ ಎಲ್ಲವನ್ನೂ ಕೊಡಿಸಿ ಪ್ರೀತಿಸಿ ಮೊದಲೇ ಸಣ್ಣಗಿರುವ ಕಣ್ಣುಗಳನ್ನು ಇನ್ನೂ ಸಣ್ಣಗೆ ಮಾಡಿಕೊಂಡು ಅಪ್ಪ ಮೌನದಲ್ಲೇ ಏನೇನನ್ನೋ ಹೇಳುವಾಗಲೆಲ್ಲಾ ಈ ಮಕ್ಕಳ ಗಂಟಲು ಉಬ್ಬಿಬಂದದ್ದಿದೆ. ಆ ಅಪ್ಪನ ಪ್ರೇಯಸಿ ಸಾರಾ ತನ್ನ ಗೆಳತಿ ಎಂದು ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡಿದ್ದಿದೆ.ಅಮ್ಮನಿಗೂ ಇವೆಲ್ಲಾ ಕಿರಿಕಿರಿಗಳೀಗ ರೂಢಿ. ಮಕ್ಕಳನ್ನು ಸಹಪಾಠಿಗಳು ಕೆಟ್ಟದಾಗಿ ನೋಡದೇ ಇರಲೆಂಬ ಕಾರಣಕ್ಕೆ ಶ್ರೀಮಂತ ತಾಯಿ ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಆಕೆ ಮಾಡಿದ್ದಾರೆ. ಒಂದು ಕಾಲದಲ್ಲಿ ನಟಿಯಾಗಿದ್ದ ಅವರ ಪಡಿಪಾಟಲಿನ ಕುರಿತು ಮಕ್ಕಳೋದುವ ಶಾಲೆಯ ಸಿಬ್ಬಂದಿಗೂ ಕನಿಕರವಿದೆ. ಇಷ್ಟಕ್ಕೂ ಇಂಥ ಅಮ್ಮಂದಿರು, ಇಂಥ ಅಪ್ಪಂದಿರು ಆ ಪ್ರತಿಷ್ಠಿತ ಶಾಲೆಯಲ್ಲಿ ವಿರಳವೇನಲ್ಲ.ಆಧುನಿಕ ಬದುಕಿನ ಮಾನಸಿಕ ತಲ್ಲಣಗಳನ್ನು ಹತ್ತಿರದಿಂದ ಕಂಡುಂಡ ಈ ಮಕ್ಕಳಿಗೆ ಎಲ್ಲವೂ ಈಗ ಅಭ್ಯಾಸವಾಗಿಹೋಗಿದೆ. ಹಾಗಾಗಿ ಓದಿನೊಟ್ಟಿಗೆ ಕನಸುಗಳನ್ನು ನೇವರಿಸುತ್ತಾ, ಅಮ್ಮನ ಕಣ್ಣಲ್ಲಿ ಆಗೀಗ ಆಡುವ ನೀರು ನೋಡುತ್ತಾ, ಅಪ್ಪನ ಕೈಮೇಲಿನ ಹಚ್ಚೆ ನೋಡಿ ಏನೂ ಹೇಳದೆ, ಪ್ರೇಯಸಿ ತುಳುಕಿಸುವ ನಗೆ ನೋಡಿಕೊಂಡು ಈ ಮಕ್ಕಳು ಸುಮ್ಮನಿವೆ.ತೆರೆಮೇಲೆ ತಾನು ಮಾಡುವ ರೊಮ್ಯಾನ್ಸ್ ಕುರಿತು ಮಕ್ಕಳು ಏನಂದುಕೊಳ್ಳುತ್ತವೆಯೋ ಎಂಬುದು ಆ ನಟನಿಗೆ ಗೊತ್ತಿಲ್ಲ. ವಯಸ್ಸಿಗೆ ಬರುತ್ತಿರುವ ಮಕ್ಕಳಿರುವಾಗಲೂ ಪ್ರೇಯಸಿಯ ಸಹವಾಸ ಯಾಕೆ ಎಂದರೆ, ಅದು ತನಗಷ್ಟೇ ಗೊತ್ತು ಎನ್ನುವ ಆತನಿಗೆ ಒಟ್ಟಿನಲ್ಲಿ ಮಕ್ಕಳೆಂದರೆ ಇಷ್ಟ. ಒಂಬತ್ತು ವರ್ಷದ ಹುಡುಗನಿಗೆ ಎಲ್ಲವೂ ಪೂರ್ತಿ ಅರ್ಥವಾಗುವುದಿಲ್ಲ. ತಾನು ಸುಖವಾಗಿದ್ದೇನೆ ಎಂದಷ್ಟೇ ಅವನು ಭಾವಿಸಿದ್ದಾನೆ. ಅಮ್ಮನ ತಾಕಲಾಟ, ಅಪ್ಪನ ಲಲ್ಲೆ ಇವ್ಯಾವುದನ್ನೂ ಅವನು ಸ್ಪಷ್ಟವಾಗಿ ಗುರುತಿಸಲಾರ. ಯಾಕೆಂದರೆ, ಅವನ ವಯಸ್ಸಿನ್ನೂ ಚಿಕ್ಕದು. ಆದರೆ, ಅಪ್ಪ ನಟಿಸಿದ ಚಿತ್ರಗಳನ್ನು ಅವನು ತುಂಬಾ ಪ್ರೀತಿಯಿಂದ ನೋಡುತ್ತಾನೆ. ಅವನ ಅಕ್ಕನಿಗೂ ತನ್ನಪ್ಪ ಈ ವಯಸ್ಸಿನಲ್ಲೂ ಮೈಕಟ್ಟು ಕಾಯ್ದುಕೊಂಡಿರುವ ಬಗ್ಗೆ ಹೆಮ್ಮೆಯಿದೆ. ಇಂಥ ಸಂದರ್ಭದಲ್ಲಿಯೇ ಅಮ್ಮ ತಮ್ಮ ಪ್ರೇಮದ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವುದೂ ಉಂಟು.ಅಂದಹಾಗೆ, ಈ ಮಕ್ಕಳ ತಂದೆಯ ಹೆಸರು ಸೈಫ್ ಅಲಿ ಖಾನ್. ತಾಯಿ ಅಮೃತಾ ಸಿನ್ಹ. ಆ ಪ್ರೇಯಸಿ ಕರೀನಾ ಕಪೂರ್. ಬಾಲಿವುಡ್ ಚಿತ್ರದ ಕಥೆಗೆ ಈ ನಿಜಕಥೆ ಸಾಟಿಯಾಗಬಲ್ಲದಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry