ಭಾನುವಾರ, ಆಗಸ್ಟ್ 25, 2019
27 °C

ಎರಡು ಮತ್ತೊಂದು...

Published:
Updated:

ಇತ್ತೀಚೆಗಷ್ಟೇ `ಕನ್ನಡದ ಕೋಟ್ಯಾಧಿಪತಿ' ಎರಡನೇ ಆವೃತ್ತಿ ಪೂರ್ಣಗೊಳಿಸಿರುವ ಸುವರ್ಣ ವಾಹಿನಿ ಆ ಅವಧಿಯಲ್ಲಿ ಮೂರು ಹೊಸ ಧಾರಾವಾಹಿಗಳನ್ನು ನೀಡಲು ಅಣಿಯಾಗಿದೆ. ಆಗಸ್ಟ್ 5ರಿಂದ, ಸೋಮವಾರದಿಂದ ಶನಿವಾರದವರೆಗೆ ಧಾರಾವಾಹಿಗಳು ಪ್ರಸಾರವಾಗಲಿವೆ. `ಕೋಟ್ಯಾಧಿಪತಿ' ಮೂಡಿಬರುತ್ತಿದ್ದ ಅವಧಿಯಲ್ಲಿಯೇ (ರಾತ್ರಿ 8ರಿಂದ 9.30) ಈ ಮೂರು ಧಾರಾವಾಹಿಗಳು ಮೂಡಿಬರಲಿವೆ.



ರಾತ್ರಿ 8 ಹಾಗೂ 9 ಗಂಟೆಗೆ ಪ್ರಸಾರವಾಗಲಿರುವ `ಪ್ರಿಯದರ್ಶಿನಿ' ಮತ್ತು `ಅರಗಿಣಿ'ಯ ನಿರ್ಮಾಣ- ನಿರ್ದೇಶನದ ಹೊಣೆ ಹೊತ್ತವರು ರವಿ ಆರ್. ಗರಣಿ. `ಕೃಷ್ಣ ರುಕ್ಮಿಣಿ' ಧಾರಾವಾಹಿಯ ಯಶಸ್ಸು ಅವರಿಗೆ ಮತ್ತೆರಡು ಧಾರಾವಾಹಿ ರೂಪಿಸುವ ಹೊಣೆ ನೀಡಿದೆ. ರಾತ್ರಿ 8.30ಕ್ಕೆ ಪ್ರಸಾರವಾಗಲಿರುವ `ಮಿಲನ'ದ ನಿರ್ದೇಶಕರು `ಪಲ್ಲವಿ ಅನುಪಲ್ಲವಿ' ಖ್ಯಾತಿಯ ಮಧುಸೂದನ್.



ಸುದ್ದಿಗೋಷ್ಠಿಯಲ್ಲಿ ಸುವರ್ಣ ವಾಹಿನಿಯ ಭಿನ್ನ ಹೆಜ್ಜೆಗಳನ್ನು ದಾಖಲಿಸಿದ್ದು ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ಸುಧೀಂದ್ರ ಭಾರದ್ವಾಜ್. `ಪ್ಯಾಟೆ ಹುಡುಗೀರ ಹಳ್ಳಿ ಲೈಫು'ನಂಥ ಯುವಾಕರ್ಷಣೆಯ ಕಾರ್ಯಕ್ರಮಗಳನ್ನು ನೀಡಿದ ವಾಹಿನಿ ಬ್ರೇಕ್ ಪಡೆದದ್ದು `ಕನ್ನಡದ ಕೋಟ್ಯಾಧಿಪತಿ' ಮೂಲಕ. ಆ ರಿಯಾಲಿಟಿ ಶೋನ ಸುತ್ತ ಸದಭಿರುಚಿಯ ಧಾರಾವಾಹಿಗಳನ್ನು ನೀಡುವ ಕನಸು ಈಡೇರಿದ್ದು `ಲಕುಮಿ', `ಗುರು ರಾಘವೇಂದ್ರ ವೈಭವ' ದಂಥ ಧಾರಾವಾಹಿಗಳಿಂದ. ಋಣಾತ್ಮಕ ಅಂಶಗಳಿಗೆ ಹೆಚ್ಚು ಮಹತ್ವ ನೀಡದೆ ಮನರಂಜನೆ ನೀಡಬೇಕು ಎಂಬ ಉದ್ದೇಶವಿದೆ. ಭಾರತೀಯ ಪ್ರಸಾರ ಒಕ್ಕೂಟ ಧಾರಾವಾಹಿಗಳ ಗುಣಮಟ್ಟ ಕಾಯ್ದುಕೊಳ್ಳುವ ಸ್ಪಷ್ಟ ರೂಪು ರೇಷೆಗಳನ್ನು ನೀಡಿದ್ದು ಅದಕ್ಕೆ ವಾಹಿನಿ ಬದ್ಧವಾಗಿದೆ ಎಂದರು. 



`ಪ್ರಿಯದರ್ಶಿನಿ' ಒಡೆದ ಕುಟುಂಬಗಳನ್ನು ಹೊಸ ತಲೆಮಾರಿನ ಸದಸ್ಯರು ಹೇಗೆ ಒಂದು ಗೂಡಿಸುತ್ತಾರೆ ಎಂಬ ಕತೆ ಹೊಂದಿದೆ. ತಿಳಿ ಹಾಸ್ಯದೊಂದಿಗೆ ಅವಿಭಕ್ತ ಕುಟುಂಬದ ಮಹತ್ವ ಸಾರುವ ಧಾರಾವಾಹಿ ಇದು. `ಮಿಲನ' ಭಿನ್ನ ಹಿನ್ನೆಲೆಯಿರುವ ಮೂವರ ತ್ರಿಕೋನ ಪ್ರೇಮಕತೆಯನ್ನು ಹೇಳುತ್ತದೆ. ಹಿಂದಿ ಧಾರಾವಾಹಿಯ ರೀಮೇಕ್ ಆದರೂ `ಅರಗಿಣಿ' ಬಿಜಾಪುರದ ಸೊಗಡನ್ನು ಹೊಂದಿದೆ. ಅಲ್ಲಿನ ಭಾಷೆಯೂ ನೆಲೆ ಪಡೆದಿದೆ. ಪ್ರೀತಿ ದ್ವೇಷದ ಸಂಘರ್ಷ ಧಾರಾವಾಹಿಯಲ್ಲಿದೆ.



ಪಾತ್ರಧಾರಿಗಳೆಲ್ಲ ಹೊಸಬರು ಎನ್ನುವುದು ವಿಶೇಷ. ಧಾರಾವಾಹಿಯಲ್ಲಿ ಹೊಸ ರೀತಿಯ ಪ್ರಯತ್ನಗಳಾಗಿವೆ ಎಂದದ್ದು ರವಿ ಗರಣಿ. ವಾಹಿನಿಯ ಸಂಶೋಧನೆ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅನಿಲ್ ನಾರಂಗ್ ಉಪಸ್ಥಿತರಿದ್ದರು. 

Post Comments (+)