ಎರಡು ರೂಪಾಯಿಗೆ ಎಲಿ ಬರುದುಲ್ರಿ

7

ಎರಡು ರೂಪಾಯಿಗೆ ಎಲಿ ಬರುದುಲ್ರಿ

Published:
Updated:

ವಿಶೇಷ ವರದಿ

ಯಾದಗಿರಿ:
“ಒಂದು ರೂಪಾಯಿಗೆ, ಎರಡ ರೂಪಾಯಿಗೆ ಎಲಿ ಬರೂದುಲ್ರಿ. ತೊಗೊಳ್ಳೋದಿದ್ರ ಐದ ರೂಪಾಯಿ, ಇಲ್ಲ ಹತ್ತ ರೂಪಾಯಿದ್ದ ತಗೋರಿ”

ನಗರದ ಮಾರುಕಟ್ಟೆಯಲ್ಲಿ ವಿಳ್ಯದೆಲೆ ವ್ಯಾಪಾರಿಗಳ ಬಾಯಲ್ಲಿ ಈ ಮಾತು ಇದೀಗ ಸ್ಪಷ್ಟವಾಗಿ ಕೇಳಿ ಬರುತ್ತಿದೆ. ಯಾಕ್ರಿ ಒಂದ ರೂಪಾಯಿ, ಎರಡ ರೂಪಾಯಿ ಚಲಾವಣೆ ಆಗುದುಲ್ಲ ಏನ್ರಿ ಎಂದು ಕೇಳಬೇಡಿ. ಗಗನಕ್ಕೆ ಏರಿರುವ ವಿಳ್ಯದೆಲೆ ಬೆಲೆಯೇ ವ್ಯಾಪಾರಿಗಳು ಈ ರೀತಿ ಹೇಳಲು ಕಾರಣವಾಗಿದೆ.ಹೌದು, ಯಾದಗಿರಿಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ವಿಳ್ಯದೆಲೆ ಬೆಲೆ ಹೆಚ್ಚುತ್ತಲೇ ಸಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದಷ್ಟೆ ರೂ.40 ಕ್ಕೆ ನೂರು ಎಲೆಗಳಿದ್ದ ಬೆಲೆ ಇದೀಗ ರೂ.60ಕ್ಕೆ ಏರಿಕೆ ಆಗಿದೆ. ಅಂದರೆ 60 ಪೈಸೆಗೆ ಒಂದು ವಿಳ್ಯದೆಲೆ. ಅದು ದೊಡ್ಡದಿರಲಿ, ಸಣ್ಣದಿರಲಿ, ಎಲೆಯ ತುಂಬು ಎಣಿಸಿದರೆ 60 ಪೈಸೆ ಕೊಡಬೇಕಾಗಿದೆ.ಡಿಸೆಂಬರ್ ಅಂತ್ಯದವರೆಗೆ ಎರಡು ರೂಪಾಯಿಯ ಎಲೆ ಕೊಂಡರೆ ಎರಡು ದಿನಕ್ಕಾದರೂ ಆಗುತ್ತಿತ್ತು. ಆದರೆ ಈಗ ಎರಡು ರೂಪಾಯಿಗೆ ಎಲೆಯೇ ಬರುವುದಿಲ್ಲ ಎನ್ನುತ್ತಿದ್ದಾರೆ ವ್ಯಾಪಾರಿಗಳು. ಎರಡ ರೂಪಾಯಿಗೆ ಮೂರು ಎಲೆಗಳು ಮಾತ್ರ ಮಾರಾಟ ಮಾಡುವಂತಹ ಪರಿಸ್ಥಿತಿ ಬಂದಿದೆ ಎನ್ನುವುದು ವ್ಯಾಪಾರಿಗಳ ಅಳಲು.

ಏರಿಕೆಗೆ ಕಾರಣವೇನು?ಪ್ರಮುಖವಾಗಿ ಯಾದಗಿರಿಯ ಮಾರುಕಟ್ಟೆಗೆ ವಿಳ್ಯದೆಲೆ ಬರುವುದು ಪಕ್ಕದ ಆಂಧ್ರಪ್ರದೇಶದ ಚಪ್ಪಲ್ಲಿ, ಕರ್ನೂಲ ಕಡೆಗಳಿಂದ. ಈ ಭಾಗದಲ್ಲಿ ವಿಪರೀತ ಚಳಿಯಿಂದಾಗಿ ಎಲೆ ತೋಟಗಳೆಲ್ಲ ಹಾಳಾಗಿ ಹೋಗಿವೆ. ವಿಳ್ಯದೆಲೆಯ ಇಳುವರಿಯೂ ಕಡಿಮೆಯಾಗಿದೆ. ಹಾಗಾಗಿ ಎಲೆಗೆ ಚಿನ್ನದ ಬೆಲೆ ಬಂದೊದಗಿದೆ.50-55 ರೂಪಾಯಿಗೆ ನೂರು ಎಲೆ ಖರೀದಿಸುವ ವ್ಯಾಪಾರಿಗಳು ಐದು ರೂಪಾಯಿ ಲಾಭವಿಟ್ಟು ಮಾರುತ್ತಿದ್ದು, ಇದರಿಂದಾಗಿ 100 ಎಲೆಯ ಬೆಲೆಯ 60 ರೂಪಾಯಿಗೆ ಏರಿದೆ. ಡಿಸೆಂಬರ್‌ನಿಂದ ನಿಧಾನವಾಗಿ ಎಲೆಯ ಬೆಲೆಯಲ್ಲಿ ಏರಿಕೆ ಆಗುತ್ತಲೇ ಸಾಗಿದೆ. ಮೊದಲಿಗೆ 20 ರೂಪಾಯಿಗೆ ಸಿಗುತ್ತಿದ್ದ 100 ಎಲೆಗಳು ನಂತರದ ದಿನಗಳಲ್ಲಿ 30 ರೂಪಾಯಿ ದರ ಪಡೆಯಿತು. ಅದೇ ವೇಗದಲ್ಲಿ ಏರಿಕೆ ಆಗುತ್ತಲೇ ಸಾಗಿದ್ದು, ಇದೀಗ 60 ರೂಪಾಯಿಗೆ ಬಂದು ತಲುಪಿರುವುದು ಎಲೆ ತಿನ್ನುವವರ ಜೇಬಿಗೆ ಭಾರವಾಗಿ ಪರಿಣಮಿಸಿದೆ.ಬೀಡಾಗಳೂ ತುಟ್ಟಿ: ಡಿಸೇಲ್ ಬೆಲೆ ಏರಿಕೆಯಿಂದ ಬಸ್ ಪ್ರಯಾಣದರ ಏರುವಂತೆ ವಿಳ್ಯದೆಲೆಯ ಬೆಲೆ ಏರಿಕೆಯಿಂದಾಗಿ ಪಾನ್‌ಬೀಡಾಗಳ ಬೆಲೆಯೂ ಗಣನೀಯವಾಗಿ ಏರಿಕೆ ಕಂಡಿದೆ. ಮೊದಲಿಗೆ ಎರಡು ರೂಪಾಯಿಗೆ ಸಿಗುತ್ತಿದ್ದ ಸಾದಾ ಬೀಡಾದ ಬೆಲೆ ಈಗ ಮೂರು ರೂಪಾಯಿ ಆಗಿದೆ. ತಿನ್ನುವವರಿದ್ದರೆ ತಿನ್ನಿ, ಇಲ್ಲದಿದ್ದರೆ ಬಿಡಿ ಎನ್ನುವ ಮಾತುಗಳು ಬೀಡಾ ಅಂಗಡಿಗಳಲ್ಲಿ ಸಾಮಾನ್ಯವಾಗುತ್ತಿವೆ.“ದಿನಕ್ಕೆ ನೋಡ್ರಿ ನಾಲ್ಕೈದ ಪಾನ್ ಹಾಕ್ಕೋತಿದ್ದೆ. 10 ರೂಪಾಯಿದಾಗ ಮುಗದ ಹೋಗತಿತ್ತು. ಈಗ ನೋಡಿದ್ರ 15-20 ರೂಪಾಯಿ ಖರ್ಚ ಮಾಡಬೇಕ್ರಿ. ಹಿಂಗಾಗಿ ಎಲಿ ಹಾಕ್ಕೋಳೋದ ಕಡಿಮಿ ಮಾಡಬೇಕ ಅನ್ನೊ ನಿರ್ಧಾರ ಮಾಡಬೇಕಾಗೈತಿ” ಎನ್ನುತ್ತಾರೆ ಚಂಡ್ರಕಿಯ ಶರಣಪ್ಪ.ಪ್ರತಿ ಶುಕ್ರವಾರದ ಪೂಜೆಗೆ ಎಲೆಗಳನ್ನು ಖರೀದಿಸುತ್ತಿದ್ದ ಸಾರ್ವಜನಿಕರೂ ಇದೀಗ ಎಲೆ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಎರಡು ರೂಪಾಯಿ ಕೊಟ್ಟು ಐದಾರು ಎಲೆ ಕೊಂಡರೆ ಪೂಜೆ ಮುಗಿದು ಹೋಗುತ್ತಿತ್ತು. ಆದರೆ ಈಗ ಎರಡು ರೂಪಾಯಿಗೆ ಎಲೆಗಳೇ ಬರುವುದಿಲ್ಲ ಎಂಬ ವ್ಯಾಪಾರಿಗಳ ಮಾತಿನಿಂದ ದೇವರ ಪೂಜೆಗೂ ಎಲೆಗಳು ಇಲ್ಲದಂತಾಗುತ್ತಿವೆ.ಒಂದು ಕಾಲಕ್ಕೆ ತಾಲ್ಲೂಕಿನ ಚಿಂತನಹಳ್ಳಿಯಲ್ಲಿ ವಿಳ್ಯದೆಲೆಯ ತೋಟಗಳು ಸಾಕಷ್ಟಿದ್ದವು. ಈ ಭಾಗದ ಬಹುತೇಕ ಬೇಡಿಕೆಯನ್ನು ಗ್ರಾಮದ ಎಲೆ ತೋಟಗಳೇ ಪೂರೈಸುತ್ತಿದ್ದವು. ಆದರೆ ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯವೋ, ಸಾಕಪ್ಪ ಎಲೆಯ ಸಹವಾಸ ಎಂಬ ಭಾವನೆಯೋ ಇದೀಗ ಚಿಂತನಹಳ್ಳಿಯಲ್ಲಿ ಎಲೆ ತೋಟಗಳೆಲ್ಲ ಮಾಯವಾಗಿವೆ. ಇದರಿಂದಾಗಿ ಎಲೆಗಳ ನಾಡಾಗಿದ್ದ ಯಾದಗಿರಿಯಲ್ಲಿ ಈಗ ಜೇಬಿಗೆ ಭಾರವಾದರೂ ಹೇಳಿದಷ್ಟು ರೊಕ್ಕ ಕೊಟ್ಟು ಎಲೆ ತಿನ್ನಬೇಕು. ಇಲ್ಲವೇ ಚಟಕ್ಕೆ ಕಡಿವಾಣ ಹಾಕಬೇಕು ಎನ್ನುವ ಪರಿಸ್ಥಿತಿ ಬಂದೊದಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry