ಶನಿವಾರ, ಏಪ್ರಿಲ್ 17, 2021
23 °C

ಎರಡು ವಾರದಲ್ಲಿ ಮೀಸಲು ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಗತ್ಯವಿರುವ ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಎರಡು ವಾರಗಳಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.ಮೀಸಲಾತಿ ಪಟ್ಟಿಯನ್ನು ಎರಡು ವಾರಗಳಲ್ಲಿ ನೀಡದಿದ್ದರೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಿರಬೇಕು ಎಂದೂ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ತಾಕೀತು ಮಾಡಿದೆ.ರಾಜ್ಯದ ಏಳು ಮಹಾನಗರ ಪಾಲಿಕೆಗಳು ಸೇರಿದಂತೆ 200ಕ್ಕೂ ಅಧಿಕ ನಗರ ಸ್ಥಳೀಯ ಸಂಸ್ಥೆಗಳ ಅವಧಿ ಬರುವ ಫೆಬ್ರುವರಿ - ಮಾರ್ಚ್ ತಿಂಗಳಲ್ಲಿ ಕೊನೆಗೊಳ್ಳಲಿದೆ. ಮೀಸಲಾತಿ ಪಟ್ಟಿ ನೀಡುವಂತೆ ಕೋರಿ ಕಳೆದ ಏಪ್ರಿಲ್‌ನಲ್ಲಿಯೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

 

ಆದರೆ ಸರ್ಕಾರದಿಂದ ಇದುವರೆಗೆ ಉತ್ತರ ದೊರೆತಿಲ್ಲ. ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.`ಸರ್ಕಾರವೇ ಹೊಣೆ~: `ಮೀಸಲಾತಿ ಪಟ್ಟಿ ನೀಡುವಲ್ಲಿ ಆಗುವ ವಿಳಂಬಕ್ಕೆ ಸರ್ಕಾರವೇ ಹೊಣೆ ಎಂದು ಕಿಷನ್‌ಸಿಂಗ್ ತೋಮರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಸಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಾಗದಿದ್ದರೆ, ಆಡಳಿತಾಧಿಕಾರಿ ನೇಮಕ ಮಾಡಬೇಕಾದ ಸ್ಥಿತಿ ಎದುರಾಗುತ್ತದೆ. ಇದನ್ನು ಕರ್ತವ್ಯ ಲೋಪ ಎಂದು ಪರಿಭಾವಿಸಬಹುದು~ ಎಂದು ಆಯೋಗ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದೆ.ನಿಗದಿತ ಸಮಯದಲ್ಲಿ ಮೀಸಲಾತಿ ಪಟ್ಟಿಯನ್ನು ನೀಡದ ಸರ್ಕಾರದ ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಿ.ಆರ್. ಚಿಕ್ಕಮಠ, ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು ಎಂದು ಇದೇ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.ಬರುವ ಏಪ್ರಿಲ್, ಮೇ ತಿಂಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಎದುರಾಗಲಿದೆ. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಗಳನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕೆಲಸಕ್ಕೆ ಬಳಸಿಕೊಳ್ಳಲು ಆಗದು. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಶಾಲೆ- ಕಾಲೇಜುಗಳಿಗೆ ಪರೀಕ್ಷಾ ಸಮಯ.

 

ಹಾಗಾಗಿ ಶಿಕ್ಷಕರನ್ನು ಚುನಾವಣಾ ಕೆಲಸಕ್ಕೆ ಬಳಸಲು ಆಗುವುದಿಲ್ಲ. ಶಾಲೆ-ಕಾಲೇಜುಗಳ ಕಟ್ಟಡವನ್ನು ಮತಗಟ್ಟೆಯಾಗಿ ಬಳಸಿಕೊಳ್ಳಲೂ ಸಾಧ್ಯವಿಲ್ಲ. ಹಾಗಾಗಿ, ಡಿಸೆಂಬರ್ 15ರಿಂದ ಜನವರಿ 15ರೊಳಗೆ ಚುನಾವಣೆ ನಡೆಸಬೇಕಾಗಿರುವ ಅನಿವಾರ್ಯತೆಯನ್ನು ಆಯೋಗ ರಾಜ್ಯಪಾಲ ಎಸ್.ಆರ್. ಭಾರದ್ವಾಜ್ ಅವರ ಗಮನಕ್ಕೂ ತಂದಿದೆ.ಮೊದಲೇ ಎಚ್ಚರಿಸಿದ್ದ ಆಯೋಗ: 2001ರಲ್ಲಿ ನಡೆದ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡು, ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನು ಜೂನ್ 30ರೊಳಗೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯನ್ನು ಕೋರಿತು. ಚುನಾವಣಾ ಆಯೋಗ ಈ ಕೋರಿಕೆ ಸಲ್ಲಿಸಿದ್ದು, ಇದೇ ವರ್ಷದ ಜನವರಿಯಲ್ಲಿ. ಮೀಸಲಾತಿ ಪಟ್ಟಿ ಸಲ್ಲಿಸಲು

ಸರ್ಕಾರಕ್ಕೆ ಆರು ತಿಂಗಳ ಕಾಲಾವಕಾಶ ಇತ್ತು.

 

ಜೂನ್‌ನಲ್ಲಿ ಮತ್ತೊಮ್ಮೆ ಸಭೆ ನಡೆಸಿದ ಆಯೋಗ, ಮೀಸಲಾತಿ ಪಟ್ಟಿ ಸಿದ್ಧಪಡಿಸುವಲ್ಲಿ ಆಗಿರುವ ಪ್ರಗತಿ ಕುರಿತು 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಇಲಾಖೆಗೆ ಸೂಚನೆ ನೀಡಿತು. ಆದರೂ, ಇಲಾಖೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ ಎಂದು ಚಿಕ್ಕಮಠ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.ಚುನಾವಣಾ ಸಿದ್ಧತೆಗೆ ಸಂಬಂಧಿಸಿದಂತೆ ಆಯೋಗ ಹಲವು ಬಾರಿ ನಗರಾಭಿವೃದ್ಧಿ ಇಲಾಖೆಯ ಜೊತೆ ಸಭೆ ನಡೆಸಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೂ ಚಿಕ್ಕಮಠ ಮಾಹಿತಿ ನೀಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.