ಎರಡೇ ಎರಡು ನೃತ್ಯ...!

6

ಎರಡೇ ಎರಡು ನೃತ್ಯ...!

Published:
Updated:
ಎರಡೇ ಎರಡು ನೃತ್ಯ...!

ಬೆಂಗಳೂರು: ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದ ವೇದಿಕೆಯು ಐದನೇ `ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ'ದ ಉದ್ಘಾಟನಾ ಸಮಾರಂಭಕ್ಕೆ ಗುರುವಾರ ಸಾಕ್ಷಿಯಾಯಿತು. 


ಖ್ಯಾತ ಸ್ಯಾಕ್ಸೋಫೋನ್ ವಾದಕ ಶ್ರೀಧರ ಸಾಗರ್ ಮತ್ತು ತಂಡವು `ತನುವು ನಿನ್ನದು, ಮನವು ನಿನ್ನದು' ಭಾವಗೀತೆ ಹಾಗೂ ಕನ್ನಡ ಸಿನಿಮಾ ಜಗತ್ತಿನ ಪ್ರಮುಖ ಹಾಡುಗಳನ್ನು ನುಡಿಸುವ ಮೂಲಕ ಕಲಾರಸಿಕರ ಮನ ಗೆದ್ದರು.ಸಮಾರಂಭದ ಮೊದಲು `ಸಿನಿಮಾ ನೂರು ವರ್ಷ' ದೃಶ್ಯಮಾಲೆ ಒಟ್ಟು ಭಾರತೀಯ ಚಿತ್ರರಂಗದ ಮೈಲುಗಲ್ಲನ್ನು ನೆನಪಿಸುವಂತಿತ್ತು. ಮೂಕಿ ಚಿತ್ರದಿಂದ, ಟಾಕಿ ಚಿತ್ರದವರೆಗೆ, ಕಪ್ಪು-ಬಿಳುಪುನಿಂದ, ಬಣ್ಣದ ಚಿತ್ರದವರೆಗೆ ಚಿತ್ರರಂಗ ನಡೆದು ಬಂದ ದಾರಿಯನ್ನು ಪರಿಚಯಿಸಲಾಯಿತು.ಹಿಂದಿ ಚಿತ್ರರಂಗದ ವಿ.ಶಾಂತಾರಾಮ್, ರಾಜ್‌ಕಪೂರ್, ದೇವಾನಂದ್ ಸೇರಿದಂತೆ ಹಿರಿಯ ಚೇತನಗಳ ಹೆಜ್ಜೆಗಳು ಹಾಗೂ ಸಿನಿಮಾದೊಂದಿಗೆ ಬೆಸೆದುಕೊಂಡು ಸಂಗೀತ ನಿರ್ದೇಶಕರು ಮತ್ತು ಗಾಯಕರ ಸಾಧನೆಯನ್ನು ತಿಳಿಸುತ್ತಲೇ ಒಟ್ಟು ಭಾರತೀಯ ಚಿತ್ರರಂಗ ಬೆಳೆದುಬಂದ ಕತೆಯನ್ನು ದೃಶ್ಯಮಾಲೆ ಹೇಳಿತು. ಇದರೊಂದಿಗೆ ದಕ್ಷಿಣ ಭಾರತದ ಸಿನಿಮಾ ಜಗತ್ತಿನಲ್ಲಿ ತೆಲುಗಿನ `ಮಾಯಾಬಜಾರ್'ನಂತಹ ಪೌರಾಣಿಕ ಚಿತ್ರ, ಕನ್ನಡದ `ನಾಗರಹಾವು' ಚಿತ್ರದಿಂದ ಈಚಿಗಿನ ಕೂರ್ಮಾವತಾರದವರೆಗೆ ಚಲನಚಿತ್ರದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಯಿತು. 

 

ಚಿತ್ತಾಕರ್ಷದ ಬೆಳಕಿನಿಂದ ಝಗಮಗಿಸುತ್ತಿದ್ದ ಸಿನಿ ಉತ್ಸವಕ್ಕೆ ತಾರೆಗಳ ದಂಡೆ ನೆರೆದಿತ್ತು. ಹಿರಿಯ ನಟಿಯರಾದ ಭಾರತಿ ವಿಷ್ಣುವರ್ಧನ್, ಜಯಮಾಲಾ, ಹೇಮಚೌಧರಿ, ನಟ ಅನಿರುದ್ಧ್, ಟಿ.ಎನ್.ಸೀತಾರಾಂ, ಸುಧಾರಾಣಿ, ವನಿತಾವಾಸು, ನಟಿ ಹರಿಪ್ರಿಯಾ, ಸೌಂದರ್ಯ ಜಯಮಾಲಾ, ಸಂಗೀತ ವಿದುಷಿ ಶ್ಯಾಮಲಾ ಜಿ. ಭಾವೆ, ದೊಡ್ಡಣ್ಣ, ಎಂ.ಎಸ್.ಉಮೇಶ್, ಸೇರಿದಂತೆ ಅನೇಕ ಹಿರಿಯ ಕಲಾವಿದರು ಭಾಗವಹಿಸಿದ್ದರು.

 

ಕಳೆದ ಬಾರಿಯ ಸಿನಿ ಉತ್ಸವಕ್ಕೆ ಹೋಲಿಸಿದರೆ ಈ ಬಾರಿ ಉತ್ಸವದಲ್ಲಿ ಸಮಯದ ಅಭಾವದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆ ಕಂಡುಬಂತು. `ಹಾಟ್ ಶಾಟ್' ತಂಡವು ನೀಡಿದ ಎರಡು ನೃತ್ಯ ಪ್ರದರ್ಶನಗಳಿಗೆ ಕಲಾರಸಿಕರು ತೃಪ್ತಿಪಟ್ಟು ಕೊಳ್ಳಬೇಕಾಯಿತು. ವಾರ್ತಾ ಇಲಾಖೆಯು ಹೊರತಂದಿರುವ `ಕನ್ನಡ ಜೀವಸ್ವರ' ದೃಶ್ಯಕಾವ್ಯದ ಸಾಹಿತ್ಯ `ನಮ್ಮ ವಚನ-ಬಹುವಚನ, ನುಡಿಯಿರುವ ಕನ್ನಡ, ನಡೆಯಿರುವ ಕನ್ನಡ' ನೋಡುಗರನ್ನು ಮೈನವಿರೇಳಿಸಿತು.

 

ಸ್ಟಾರ್ ನಟರ ಗೈರು: ಈ ಬಾರಿಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟರಾದ ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್, ಸುದೀಪ್, ದರ್ಶನ್, ಉಪೇಂದ್ರ, ನಟಿಯರಾದ ರಮ್ಯಾ, ಐಂದ್ರಿತಾ ರೇ, ರಾಧಿಕಾ ಪಂಡಿತ್, ರಾಗಿಣಿ ದ್ವಿವೇದಿ ಗೈರು ಹಾಜರು ಎದ್ದು ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry