ಎರವಲು ಸೇವೆ ಪೋಷಿಸುತ್ತಿರುವ ಬಿಬಿಎಂಪಿ

7

ಎರವಲು ಸೇವೆ ಪೋಷಿಸುತ್ತಿರುವ ಬಿಬಿಎಂಪಿ

Published:
Updated:

ಬೆಂಗಳೂರು: ಮಹಾನಗರ ಪಾಲಿಕೆಗಳಲ್ಲಿ ಸಿಬ್ಬಂದಿಯ ಕೊರತೆ ಇದ್ದಾಗ ಇತರೆ ಇಲಾಖೆಗಳ ಅಧಿಕಾರಿಗಳನ್ನು ಎರವಲು ಮೇಲೆ ಬಳಸಿಕೊಳ್ಳುವುದು ಸಹಜ. ಆದರೆ ಸಿಬ್ಬಂದಿ ನೇಮಕ ಆದ ಬಳಿಕವೂ ಬಿಬಿಎಂಪಿ ಆಡಳಿತವು ಎರವಲು ಸೇವೆಯಲ್ಲಿರುವ ನೂರಾರು ಎಂಜಿನಿಯರುಗಳನ್ನು ಪೋಷಿಸುತ್ತಿದೆ. ಪರಿಣಾಮವಾಗಿ ಪಾಲಿಕೆಯ ಬೊಕ್ಕಸಕ್ಕೆ ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿ ಹೊರೆ ಬೀಳುತ್ತಿದೆ.ಬಿಬಿಎಂಪಿ ಯೋಜನಾ ವಿಭಾಗದಲ್ಲಿ 157 ಮಂದಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ 120 ಸಹಾಯಕ/ಕಿರಿಯ ಎಂಜಿನಿಯರ್‌ಗಳನ್ನು ಬಿಬಿಎಂಪಿ ನೇಮಿಸಿಕೊಂಡಿದೆ. ಆ ಬಳಿಕವೂ ಎರವಲು ಸೇವೆಯಲ್ಲಿರುವವರು ಪಾಲಿಕೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ!ಪಾಲಿಕೆಯ ದೈನಂದಿನ ಕಾರ್ಯಚಟುವಟಿಕೆಯನ್ನು ಸುಗಮಗೊಳಿಸುವ ಸಲುವಾಗಿ ವಿವಿಧ ಇಲಾಖೆಗಳಿಂದ ಅಗತ್ಯವಾದ ಅಧಿಕಾರಿ ಮತ್ತು ಸಿಬ್ಬಂದಿ ಸೇವೆಯನ್ನು ಪಡೆಯಲಾಗುತ್ತದೆ. ಹೀಗೆ ಎರವಲು ಸೇವೆಗೆ ನಿಯೋಜನೆಗೊಂಡವರು ಕನಿಷ್ಠ ಮೂರು ವರ್ಷದಿಂದ ಗರಿಷ್ಠ ಐದು ವರ್ಷ ಸೇವೆ ಸಲ್ಲಿಸಬಹುದು. ಒಂದೊಮ್ಮೆ ಎರವಲು ಸೇವೆ ಆಧಾರದ ಮೇಲೆ ಅಗತ್ಯಕ್ಕಿಂತ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದರೆ, ಇಲ್ಲವೇ ಅಧಿಕಾರಿಗಳ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಎನಿಸಿದರೆ ತಕ್ಷಣವೇ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಅವಕಾಶವಿದೆ. ಆದರೆ ಇದ್ಯಾವುದೂ ನಡೆಯುತ್ತಿಲ್ಲ.ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆಯುತ್ತವೆ. ಹಾಗಾಗಿ ದೊಡ್ಡ ಸಂಖ್ಯೆಯ ಎಂಜಿನಿಯರ್‌ಗಳ ಅಗತ್ಯವಿರುತ್ತದೆ. ಇದರಿಂದಾಗಿ ನೂರಾರು ಮಂದಿ ಎಂಜಿನಿಯರ್‌ಗಳು ಎರವಲು ಸೇವೆಯ ಮೇಲೆ ಪಾಲಿಕೆಗೆ ಬರುತ್ತಾರೆ. ಈ ಅವಕಾಶಕ್ಕಾಗಿ ಎಂಜಿನಿಯರುಗಳ ನಡುವೆ ಸದಾ ಪೈಪೋಟಿ ನಡೆಯುತ್ತಲೇ ಇರುತ್ತದೆ.

ಪಾಲಿಕೆ ಯೋಜನಾ ವಿಭಾಗದಲ್ಲಿ ಸದ್ಯ ಒಟ್ಟು 196 ಸಹಾಯಕ/ ಕಿರಿಯ ಎಂಜಿನಿಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಬಹುಪಾಲು ಎಂದರೆ 157 ಮಂದಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿರುವ ಪಾಲಿಕೆ ಎಂಜಿನಿಯರ್‌ಗಳ ಸಂಖ್ಯೆ ಕೇವಲ 39!ಕೆಲವೇ ಗಂಟೆ ಕೆಲಸ!:

ಇತ್ತೀಚೆಗೆ 120 ಮಂದಿ ಕಿರಿಯ/ ಸಹಾಯಕ ಎಂಜಿನಿಯರ್‌ಗಳು ಪಾಲಿಕೆಗೆ ನೇರವಾಗಿ ನೇಮಕಗೊಂಡಿದ್ದಾರೆ.ನವೆಂಬರ್‌ನಿಂದ ‘ಪರಿಸರ ಎಂಜಿನಿಯರ್’ ಹುದ್ದೆಯನ್ನು ಇವರು ನಿರ್ವಹಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಗಿನ ಅವಧಿಯಲ್ಲಿ ಕೆಲವೇ ಗಂಟೆಗಳ ಕೆಲಸಕ್ಕೆ ಇವರನ್ನು ಬಳಸಿಕೊಳ್ಳಲಾಗುತ್ತಿದೆ.ಹೊಸದಾಗಿ ನೇಮಕವಾಗಿರುವ ಬಹುಪಾಲು ಎಂಜಿನಿಯರ್‌ಗಳನ್ನು ‘ಪರಿಸರ ಎಂಜಿನಿಯರ್’ ಹುದ್ದೆಗೆ ನಿಯೋಜಿಸಲಾಗಿದೆ. ಈ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ಇವರ ಕೆಲಸ ಪೂರ್ಣಗೊಳ್ಳುತ್ತದೆ. ನಂತರ ಯಾವುದೇ ಕೆಲಸವಿರುವುದಿಲ್ಲ. ಆದರೂ ಇವರಿಗೆ ಬೇರೆ ಜವಾಬ್ದಾರಿ ನೀಡಿಲ್ಲ!ಹೊಸದಾಗಿ ನೇಮಕವಾದ ಎಂಜಿನಿಯರುಗಳನ್ನು ಯೋಜನಾ ವಿಭಾಗದ ಕೆಲಸಕ್ಕೆ ಬಳಸಿಕೊಂಡಿದ್ದರೆ ಎರವಲು ಸೇವೆಯಲ್ಲಿರುವವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಸಾಧ್ಯವಾಗುತ್ತಿತ್ತು. ಹಾಗೆ ಮಾಡಿದ್ದರೆ ಎರವಲು ಸೇವೆಯಲ್ಲಿರುವ ಎಂಜಿನಿಯರುಗಳ ಸಂಖ್ಯೆ ಕೇವಲ 37ಕ್ಕೆ ಇಳಿಯುತ್ತಿತ್ತು. ಆದರೆ ಮೂರು ತಿಂಗಳು ಕಳೆದರೂ ಒಬ್ಬ ಎಂಜಿನಿಯರ್ ಕೂಡ ಮಾತೃ ಇಲಾಖೆಗೆ ಹಿಂತಿರುಗದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಬಿಬಿಎಂಪಿಗೆ ನೂತನವಾಗಿ ನೇಮಕಗೊಂಡ 120 ಮಂದಿ ಎಂಜಿನಿಯರ್‌ಗಳಿಗೆ ವೇತನಕ್ಕೆಂದು ಮಾಸಿಕ 26.46 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಜತೆಗೆ ಎರವಲು ಸೇವೆಯ ಅಧಿಕಾರಿಗಳಿಗೂ ವೇತನ ನೀಡಲಾಗುತ್ತಿದೆ.‘ಪಾಲಿಕೆಗೆ ಎರವಲು ಸೇವೆಯ ಅಧಿಕಾರಿಗಳ ಅಗತ್ಯವಿದೆ. ಆದರೆ ಅಗತ್ಯಕ್ಕಿಂತ ಹೆಚ್ಚು ಮಂದಿಯನ್ನು ಎರವಲು ಸೇವೆಗೆ ನಿಯೋಜಿಸಿಕೊಂಡರೆ ಆರ್ಥಿಕ ಹೊರೆ ಬೀಳಲಿದೆ. ಹಾಗಾಗಿ 120 ಎಂಜಿನಿಯರ್‌ಗಳ ನೇಮಕದ ಹಿನ್ನೆಲೆಯಲ್ಲಿ ಅಷ್ಟೇ ಸಂಖ್ಯೆಯ ಎರವಲು ಸೇವೆ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು’ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತರೆಡ್ಡಿ ಹೇಳಿದರು.

ವಾಪಸ್ ಕಳುಹಿಸಲು ಕ್ರಮ:

‘ಬಿಬಿಎಂಪಿಗೆ ಇತ್ತೀಚೆಗಷ್ಟೇ 120 ಮಂದಿ ಸಹಾಯಕ/ ಕಿರಿಯ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಹಾಗಾಗಿ ಎರವಲು ಸೇವೆಯ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಕಿರಿಯ ಎಂಜಿನಿಯರ್‌ಗಳನ್ನು ಹಂತ ಹಂತವಾಗಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.‘ಬಿಬಿಎಂಪಿ ಕಾಯ್ದೆಯ 89ನೇ ನಿಯಮದನ್ವಯ ಒಟ್ಟು ಅಗತ್ಯದ ಶೇ 75ರಷ್ಟು ಎಂಜಿನಿಯರ್‌ಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸಿಕೊಳ್ಳಲು ಅವಕಾಶವಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಎಂಜಿನಿಯರ್‌ಗಳು ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಈ ಅನುಪಾತವನ್ನು ಶೇ 50ರಷ್ಟಕ್ಕೆ ಇಳಿಕೆ ಮಾಡುವುದು ಸೂಕ್ತ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ’ ಎಂದರು.

ಬಿಬಿಎಂಪಿ ಯೋಜನಾ ವಿಭಾಗದಲ್ಲಿನ ಸಹಾಯಕ/ ಕಿರಿಯ ಎಂಜಿನಿಯರ್‌ಗಳ ವಿವರ

ವಿಭಾಗ          ಬಿಬಿಎಂಪಿ ಎರವಲು ಸೇವೆ ಒಟ್ಟು

ಡ್ರಾಫ್ಟ್‌ಮನ್‌ಗಳು  12       25        37

ನಗರ ಯೋಜನೆ   1         7         8

ಬೃಹತ್ ರಸ್ತೆಗಳು  6       21        27

ಕೆರೆ ವಿಭಾಗ        1        5         6

ರಸ್ತೆ ವಿಸ್ತರಣೆ      2       16        18

ವಲಯವಾರು

ಮಹದೇವಪುರ     -       6        6

ರಾಜರಾಜೇಶ್ವರಿನಗರ 1     11       12

ದಾಸರಹಳ್ಳಿ          -      5        5

ಬೊಮ್ಮನಹಳ್ಳಿ       1       7        8

ಯಲಹಂಕ           2     13        15

ಪೂರ್ವ              1      11        12

ಪಶ್ಚಿಮ             3       8        11

ದಕ್ಷಿಣ ವಲಯ     9      22        31

ಒಟ್ಟು            39     157       196

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry