ಎರ್ಮಾಳು ಬಡಾ ಸ್ಮಶಾನ ಜಾಗ ವಿವಾದ: ಸೌಹಾರ್ದಯುತ ಪರಿಹಾರಕ್ಕೆ ಆಗ್ರಹಿಸಿ ಮೆರವಣಿಗೆ

7

ಎರ್ಮಾಳು ಬಡಾ ಸ್ಮಶಾನ ಜಾಗ ವಿವಾದ: ಸೌಹಾರ್ದಯುತ ಪರಿಹಾರಕ್ಕೆ ಆಗ್ರಹಿಸಿ ಮೆರವಣಿಗೆ

Published:
Updated:

ಪಡುಬಿದ್ರಿ: ಎರ್ಮಾಳು ಬಡಾ ಗ್ರಾಮದ ವಿವಾದಿತ ಸಾರ್ವಜನಿಕ ಸ್ಮಶಾನವನ್ನು ತೆರವುಗೊಳಿಸಿ ಶಾಲಾ ಮೈದಾನಕ್ಕೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿ ಎರ್ಮಾಳು ಬಡಾ ಮೊಗವೀರ ಸಭಾದ ಸದಸ್ಯರು ಹಾಗೂ ಸ್ಥಳೀಯರು ಶುಕ್ರವಾರ ಮೌನ ಮೆರವಣಿಗೆ ನಡೆಸಿದರು.ಈ ಜಾಗವು ಸರ್ಕಾರಿ ಪರಂಬೋಕ ಸ್ಥಳವಾಗಿದ್ದು, ಮಳೆಗಾಲದಲ್ಲಿ ಕಡಲ್ಕೊರೆತ ಸಂದರ್ಭ ಮಾತ್ರ ಶವ ಸಂಸ್ಕಾರ ನಡೆಸುತ್ತಿದ್ದರು. ಇತ್ತೀಚಿಗೆ ಸುತ್ತಮುತ್ತ ವಾಸ್ತವ್ಯದ ಮನೆಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಇಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಾಣದಿಂದ ಸಮಸ್ಯೆ ಉದ್ಭವಿಸಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಬೇರೆ ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.ಮೊಗವೀರ ಮಹಾಸಭಾ ಅಧ್ಯಕ್ಷ ಜಿನರಾಜ್ ಎರ್ಮಾಳು ಮಾತನಾಡಿ ಈಗಿರುವ ಸ್ಮಶಾನ ನಿರ್ಮಾಣ ಮೊಗವೀರ ಸಮಾಜದಿಂದಲೇ ನಡೆದಿದೆ. ಯಾವುದೇ ಸರ್ಕಾರಿ ಅನುದಾನ ಬಳಸಿಲ್ಲ. ಅಲ್ಲದೆ ಈ ಸ್ಮಶಾನವು ಸಾರ್ವಜನಿಕವಲ್ಲದ ಕಾರಣ ಯಾವುದೇ ವರ್ಗದ ಶವ ಸಂಸ್ಕಾರಕ್ಕೆ ನಿರಾಕರಿಸಿದ ಘಟನೆ ನಡೆದಿಲ್ಲ ಎಂದು  ಸ್ಪಷ್ಟಪಡಿಸಿದರು. ಈ ವಿವಾದಕ್ಕೆ ಗ್ರಾಮದ ಜನ ಹೊರತುಪಡಿಸಿ ಬೇರೆ ಸಂಘಟನೆಗಳು ಹಸ್ತಕ್ಷೇಪ ಮಾಡಬಾರದು ಎಂದು ಆಗ್ರಹಿಸಿದರು.ಎರ್ಮಾಳು ಬಡಾದಿಂದ ಹೆದ್ದಾರಿ ಮೂಲಕ ಪ್ರತಿಭಟನಾಕಾರರು ಮೌನ ಮೆರವಣಿಗೆ ನಡೆಸಿ, ಬಡಾ ಗ್ರಾಪಂ ಕಚೇರಿಗೆ ತೆರಳಿ ಅಧ್ಯಕ್ಷ ಚಂದ್ರಶೇಖರ ಕೋಟ್ಯಾನ್ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವಂತೆ ಮನವಿ ಸಲ್ಲಿಸಿದರು.ಲಕ್ಷ್ಮಣ ತಿಂಗಳಾಯ, ಮನೋಹರ ಕುಂದರ್, ಭರತ್ ಕುಮಾರ್, ಲಕ್ಷ್ಮಣ ಸುವರ್ಣ, ಲಕ್ಷ್ಮೀ ಎಸ್. ಸಾಲ್ಯಾನ್, ಶೇಖರ ಗುರಿಕಾರ, ರಾಘು ಗುರಿಕಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry