ಗುರುವಾರ , ನವೆಂಬರ್ 21, 2019
20 °C

ಎಲೆಕಲ್ಲು ಘಾಟಿಯಲ್ಲಿ ಅಕ್ರಮ: ಆರೋಪ

Published:
Updated:

ಬಾಳೆಹೊನ್ನೂರು : ಪಟ್ಟಣದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಎಲೆಕಲ್ಲು ಘಾಟಿಯಲ್ಲಿ ಕಾನೂನು ಬಾಹಿರ ಚಟುವಟಿಕೆ ದಿನದಿನಕ್ಕೂ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟುವಲ್ಲಿ ಸಂಬಂಧಿಸಿದ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ತಲುಪುವ ರಸ್ತೆಯಲ್ಲಿ ಸುಮಾರು ಮೂರು ಕಿ.ಮೀ. ಸಾಗಿದರೆ ಎಲೆಕಲ್ಲು ಘಾಟಿ ಸಿಗಲಿದೆ. ಅಲ್ಲಿಂದ ಅಂಡವಾನೆ, ಕರಗಣೆ, ಹುಯಿಗೆರೆ ಮೂಲಕ ಮಾಗುಂಡಿ ತಲುಪುವ ಮಾರ್ಗದಲ್ಲಿ ಸುಮಾರು ಎರಡು ಕಿ.ಮೀ.ದೂರ ಸಂರಕ್ಷಿತ ಅರಣ್ಯ ಆಕ್ರಮ ಚಟುವಟಿಕೆಗಳಿಗೆ ಸುರಕ್ಷಿತ ತಾಣವಾಗಿ ಪರಿಣಮಿಸಿದೆ.ಇಡೀ ಪ್ರದೇಶ ಸಾಗುವಾನಿ ಮರಗಳಿಂದ ಅವೃತ್ತ ವಾಗಿದ್ದು, ಗಾಂಜಾ, ಮಾದಕ ವಸ್ತುಗಳ ಬಳಕೆಯೂ ಈ ಪ್ರದೇಶದಲ್ಲಿ  ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆಗೆ ಸವಾಲಾಗಿದೆ. ಹದಿನೈದು ದಿನದ ಹಿಂದೆ ಹುಯಿಗೆರೆ ರಸ್ತೆಯಲ್ಲಿ ಅಪರಿಚಿತ ವಾಹನವೊಂದರಿಂದ ಇಳಿದ ವ್ಯಕ್ತಿಯೊಬ್ಬ ಶೂ ಕಟ್ಟುವ ನೆಪದಲ್ಲಿ ಕಾಲ ಹರಣ ಮಾಡುತ್ತಿದ್ದದ್ದನ್ನು ಕಂಡ ಅರಣ್ಯ ಇಲಾಖೆ ಅಧಿಕಾರಿಗಳಿಬ್ಬರು ಅವರನ್ನು ಎಲ್ಲಿಗೆ ಹೊರಟಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಆತ ಉತ್ತರಿಸಲು ತಡಬಡಾ ಯಿಸಿದ್ದಾನೆ. ಆನಂತರ ಆತನ ವಿಚಾರಣೆಯಿಂದ ತಿಳಿದು ಬಂದಿದ್ದು ಆತ ಕೊಪ್ಪದ ಕಂದಾಯ ಇಲಾಖೆ ನೌಕರನಾಗಿದ್ದು, ಯುವತಿ ಯೊಂದಿಗೆ ಅಲ್ಲಿಗೆ ಬಂದಿದ್ದ ಎಂಬುದು. ಅತಿಕ್ರಮಣ ನಿಷೇಧ ಇರುವ ಕಾಡಿನಲ್ಲೂ ಮದ್ಯ, ಮಾಂಸ ಸೇವನೆ ನಡೆಯುತ್ತಿದೆ ಎಂಬ ದೂರು ಕೇಳಿಬಂದಿದೆ. ತಿಂಗಳ ಅವಧಿಯಲ್ಲಿ ವಿವಿಧ ಕಾಲೇಜುಗಳ ಪಿಯು ಮತ್ತು ಪದವಿ ತರಗತಿ  ವ್ಯಾಸಂಗ ನಡೆಸುತ್ತಿರುವ ನಾಲ್ಕು ಯುವತಿಯರು ಯುವಕರೊಂದಿಗೆ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿ ಬಿದ್ದ ಜೋಡಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಪೋಷಕರ ಸುಪರ್ದಿಗೆ ಒಪ್ಪಿಸಲಾಗುತ್ತಿದೆ. ಯುವತಿಯ ಪೋಷಕರು ಭವಿಷ್ಯದ ಮರ್ಯಾದೆಗೆ ಅಂಜಿ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡ ಯುವಕರು ಠಾಣೆಯಲ್ಲಿ ಒಂದಿಷ್ಟು `ಉಪಚಾರ' ಮಾಡಿಸಿಕೊಂಡು ಯಾವುದೇ ಕಾನೂನಿನ ಭಯ ಇಲ್ಲದೆ ಹೊರ ಬರುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರತಿಕ್ರಿಯಿಸಿ (+)