ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ : ಪ್ರಾಯೋಗಿಕ ಜಾರಿಗೆ ಚಿಂತನೆ

7

ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ : ಪ್ರಾಯೋಗಿಕ ಜಾರಿಗೆ ಚಿಂತನೆ

Published:
Updated:

ಬೆಂಗಳೂರು: `ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಕೇಂದ್ರದ ಬಳಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಚಿಂತಿಸಲಾಗಿದೆ~ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವಿಶೇಷ ಕಾರ್ಯದರ್ಶಿಯೂ ಆದ ಮಹಾ ನಿರ್ದೇಶಕ (ರಸ್ತೆ ಅಭಿವೃದ್ಧಿ ವಿಭಾಗ) ಸಿ.ಕಂದಸಾಮಿ ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ `ಕರ್ನಾಟಕದಲ್ಲಿ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಪ್ರಾಯೋಗಿಕ ಯೋಜನೆಗಳಿಗೆ ಆದ್ಯತೆ~ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ  ಮಾತನಾಡಿದರು.`ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಪಾವತಿಗೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಿದ್ದು, ಸಾಕಷ್ಟು ವಿಳಂಬವಾಗುತ್ತಿದೆ ಎಂಬ ಆರೋಪವಿದೆ. ಆ ಹಿನ್ನೆಲೆಯಲ್ಲಿ ನವದೆಹಲಿಯಿಂದ ಪಾಣಿಪಟ್ ನಡುವಿನ 350ರಿಂದ 400 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ- 1ರಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಾಟಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಲು ಚಿಂತಿಸಲಾಗಿದೆ~ ಎಂದರು.`ಎಲೆಕ್ಟ್ರಾನಿಕ್ ಟೋಲ್ ಸಂಗ್ರಹಣೆಗೆ `ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್~ (ಆರ್‌ಎಫ್‌ಐಡಿ) ವಿಧಾನ ಅಳವಡಿಸಿಕೊಳ್ಳುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರು ಶಿಫಾರಸು ಮಾಡಿದ್ದರು. ಆ ಹಿನ್ನೆಯಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ಅದರಂತೆ ಆರ್‌ಎಫ್‌ಐಡಿ ಸಾಧನವನ್ನು ಅಳವಡಿಸಿಕೊಂಡಿರುವ ವಾಹನ ಹೆದ್ದಾರಿಯಲ್ಲಿ ಹಾದು ಹೋದರೆ ಆ ಮಾಹಿತಿಯು ಟೋಲ್ ಕೇಂದ್ರದಲ್ಲಿ ದಾಖಲಾಗುತ್ತದೆ. ಬಳಿಕ ನಿಗದಿತ ಶುಲ್ಕವು ವಾಹನ ಮಾಲೀಕರ ಖಾತೆಯಿಂದ ಕಡಿತವಾಗಲಿದೆ~ ಎಂದು ಹೇಳಿದರು.`ಈ ಸಂಬಂಧ ಭಾರತೀಯ ಸ್ಟೇಟ್ ಬ್ಯಾಂಕ್, ಐಸಿಐಸಿಐ ಸೇರಿದಂತೆ ನಾಲ್ಕು ಬ್ಯಾಂಕ್‌ಗಳ ಜತೆ ಮಾತುಕತೆ ನಡೆದಿದೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಇತರೆ ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲೂ ಈ ವಿಧಾನ ಅಳವಡಿಸಲು ಚಿಂತಿಸಲಾಗುವುದು~ ಎಂದರು.ಉತ್ತಮ ವ್ಯವಸ್ಥೆ: `ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಅಳವಡಿಕೆಯಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆಯಿಲ್ಲದೇ ಪ್ರಯಾಣಿಸಬಹುದು. ಟೋಲ್ ಸಂಗ್ರಹದಲ್ಲಿ   ಪಾರದರ್ಶಕತೆಯನ್ನು ತರಬಹುದು. ಆದಾಯ ಸೋರಿಕೆ ತಡೆಗೂ ಅನುಕೂಲವಾಗಲಿದೆ. ಹೆದ್ದಾರಿ ಬಳಕೆದಾರರಿಗೂ ಇಂಧನ ಉಳಿತಾಯವಾಗಲಿದೆ.ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರಕ್ಕೆ ಅಡಚಣೆ ಉಂಟಾಗುವುದು ತಪ್ಪುತ್ತದೆ~ ಎಂದು ತಜ್ಞರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry