ಮಂಗಳವಾರ, ಮೇ 17, 2022
25 °C

ಎಲೆಕ್ಟ್ರಾನಿಕ್ ತೂಕದ ಯಂತ್ರ ಕಡ್ಡಾಯ:ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ. ಕೋಟೆ  : `ಎಪಿಎಂಸಿ ಮಾರುಕಟ್ಟೆಯಿಂದ ಯಾವ ರೈತರಿಗೂ ಅನುಕೂಲವಾಗುತ್ತಿಲ್ಲ, ಬದಲಿಗೆ ಅನ್ಯಾಯವಾಗುತ್ತಿದೆ~ ಎಂದು ಹಳಿಯೂರು ಗ್ರಾಮದ ಮಹಿಳೆ ರತ್ನಮ್ಮ ದೂರಿದರು.ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ ಅವರೊಂದಿಗಿನ ಫೋನ್ -ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಅವರು, ಎಲೆಕ್ಟ್ರಾನಿಕ್ ಯಂತ್ರ ಬಳಸದೆ ಇತರ ತೂಕದ ಯಂತ್ರಗಳಿಂದ ಹತ್ತಿಯನ್ನು ರೈತರಿಂದ ಪಡೆದು ವಂಚಿಸುತ್ತಿದ್ದಾರೆ, ರೈತರಿಗೆ ಕೃಷಿ ಮಾರುಕಟ್ಟೆ ಸಮೀಪದಲ್ಲೆ ಇದ್ದರೂ ಇದರಿಂದ ಏನು ಪ್ರಯೋಜನವಾಗುತ್ತಿಲ್ಲ ಎಂದರು.ಇದಕ್ಕೆ ಉತ್ತರಿಸಿದ ವಿಜಯಲಕ್ಷ್ಮಿ ,ಕೃಷಿ ಉತ್ಪನ್ನಗಳ ಮಾರಾಟದಲ್ಲಿ ನಿಖರ ತೂಕ ಖಾತ್ರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನೇ ಬಳಸುವಂತೆ ತಿಳಿಸಿ ಪರವಾನಗಿ  ನೀಡಲಾಗುತ್ತಿದೆ. ಇತರ ತೂಕದ ಯಂತ್ರಗಳನ್ನು ಬಳಸಿ ರೈತರಿಗೆ ತೂಕದಲ್ಲಿ ವಂಚಿಸಿ ಖರೀದಿ ಸುವ ವ್ಯಾಪಾರಿ ಗಳ ಲಾರಿಯನ್ನು ಮರು ತೂಕ ಮಾಡಿಸಿ ದಂಡ ವಿಧಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗು ವುದು ಎಂದು ತಿಳಿಸಿದರು.ಹ್ಯಾಂಡ್‌ಪೋಸ್ಟ್‌ನಲ್ಲಿರುವ ಮಾರುಕಟ್ಟೆಗೆ 98ಲಕ್ಷ ಹಣ ಬಿಡುಗಡೆಯಾಗಿದ್ದು, ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ದಾಸ್ತಾನು ಕೊಠಡಿ ಮತ್ತಿತರ ಸೌಲಭ್ಯಗಳನ್ನು ಒದಗಿಸಿದ ನಂತರ ತಂಬಾಕು ಮಾರುಕಟ್ಟೆ ಮಾದರಿಯಲ್ಲಿಯೆ ಹತ್ತಿಯನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಲಕ್ಷ್ಮೀ ವಿವರಿಸಿದರು.ರೈತರಿಗೆ ಕ್ಷಿಪ್ರವಾಗಿ ಮಾರುಕಟ್ಟೆ ಮಾಹಿತಿ  ನೀಡುವ ಉದ್ದೇಶದಿಂದ ತಮಗೆ ಬೇಕಾದ ಆಯ್ದ ಮಾರುಕಟ್ಟೆಯ ದೈನಂದಿನ ಬೆಲೆಯನ್ನು ಉಚಿತ ಎಸ್.ಎಂ.ಎಸ್. ಮೂಲಕ ನೀಡಲಾಗುತ್ತಿದ್ದು, ರೈತರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಸಮಿತಿಯ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವಂತೆ ತಿಳಿಸಿದರು.ತಾಲ್ಲೂಕಿನಲ್ಲಿ 2010-11ರಲ್ಲಿ ಆರ್‌ಎಂಸಿ ಶುಲ್ಕವಾಗಿ 1.42ಕೋಟಿ ಆದಾಯ ಬಂದಿತ್ತು, 2011-12 ಈಗಾಗಲೆ 63ಲಕ್ಷ ಶುಲ್ಕ ಬಂದಿದ್ದು 2 ಕೋಟಿ ತಲುಪುವ ಸಾಧ್ಯತೆ ಇದೆ ಎಂದರು.ಸರಗೂರಿನ ರಾಜಣ್ಣ ಎಂಬುವರು ಎಪಿಎಂಸಿ ಮಾರುಕಟ್ಟೆಯಲ್ಲಿನ ವಾಣಿಜ್ಯ ಸಂಕೀರ್ಣಗಳನ್ನು ಬಾಡಿಗೆಗೆ ನೀಡಿ 2 ವರ್ಷಗಳೇ ಕಳೆಯುತ್ತಿದ್ದರೂ ಸರಿಯಾಗಿ ಹಣ ನೀಡಿರುವುದಿಲ್ಲ, ಅಂಥಹವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದರು.ಬೆದ್ದಲಪುರ ಕೆಂಡಗಣ್ಣಪ್ಪ, ಮೇಟಿಕುಪ್ಪೆಯ ಗುರುಸ್ವಾಮಿ, ಸಿ.ಎಂ. ಮಹದೇವಪ್ಪ ಹಾಗೂ ವಿವಿಧ ಗ್ರಾಮಗಳಿಂದ 15ಕ್ಕೂ ಹೆಚ್ಚು ರೈತರು ದೂರವಾಣಿ ಕರೆ ಮಾಡಿದರು.

ಸಂಘದ ಅಧ್ಯಕ್ಷ ಮಂಜುಕೋಟೆ, ಪ್ರಧಾನ ಕಾರ್ಯದರ್ಶಿ ಎಸ್.ಆರ್.ನಾಗರಾಮ್, ಕಾರ್ಯದರ್ಶಿ ಸತೀಶ್ ಬಿ.ಆರಾಧ್ಯ, ಖಜಾಚಿ ರಘು, ಎಂ.ಎಲ್. ರವಿಕುಮಾರ್,ಕನ್ನಡಪ್ರಮೋದ್, ಅಂಕಪ್ಪ, ರಾಜುಸಾಗರ್ ಹಾಗೂ ಇತರ ಸದಸ್ಯರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.