ಗುರುವಾರ , ಮೇ 13, 2021
16 °C

ಎಲೆಕ್ಟ್ರಾನಿಕ್ ಸಿಟಿಗೆ `ಕೈಗಾರಿಕಾ ಉಪನಗರ ಪ್ರಾಧಿಕಾರ' ಮಾನ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಗೆ `ಸಿಲಿಕಾನ್ ನಗರ' ಎಂಬ ಖ್ಯಾತಿಯನ್ನು ತಂದುಕೊಟ್ಟಿರುವ ಎಲೆಕ್ಟ್ರಾನಿಕ್ ಸಿಟಿಗೆ `ಕೈಗಾರಿಕಾ ಉಪನಗರ ಪ್ರಾಧಿಕಾರ'ದ ಮಾನ್ಯತೆ ದೊರಕಿದೆ. ಇದರಿಂದಾಗಿ ಈ ಪ್ರದೇಶದ ತೆರಿಗೆ ಸಂಗ್ರಹ ಮತ್ತು ಅಭಿವೃದ್ಧಿಯ ಹಕ್ಕುಗಳು ಕೈಗಾರಿಕೋದ್ಯಮಿಗಳ ಕೈಸೇರಿವೆ.ಎಲೆಕ್ಟ್ರಾನಿಕ್ ಸಿಟಿಯ ಪ್ರಥಮ, ದ್ವಿತೀಯ ಮತ್ತು ತೃತೀಯ ಹಂತದ 903.11 ಎಕರೆ ಪ್ರದೇಶವನ್ನು `ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಉಪನಗರ ಪ್ರದೇಶ' ಎಂದು ಘೋಷಿಸಿ ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಈ ಪ್ರದೇಶವನ್ನು ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಗಿಡಲಾಗಿದೆ.ಎಲೆಕ್ಟ್ರಾನಿಕ್ ಸಿಟಿಗೆ ಕೈಗಾರಿಕಾ ಉಪನಗರ ಪ್ರದೇಶ ಸ್ಥಾನಮಾನ ನೀಡುವುದಕ್ಕಾಗಿಯೇ 2002ರಲ್ಲಿ ಕರ್ನಾಟಕ ಪೌರಾಡಳಿತ ಕಾಯ್ದೆ-1964ಕ್ಕೆ ತಿದ್ದುಪಡಿ ತರಲಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳು ಅದನ್ನು ಜಾರಿಗೆ ತಂದಿರಲಿಲ್ಲ.`ಕೈಗಾರಿಕಾ ಪ್ರಾಧಿಕಾರ'ದ ಅಡಿಯಲ್ಲಿ ಬಂದಿರುವ ರಾಜ್ಯದ ಮೊದಲ ಕೈಗಾರಿಕಾ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ. ಈ ಪ್ರಾಧಿಕಾರಕ್ಕೆ ಅಲ್ಲಿನ ಉದ್ಯಮಗಳನ್ನು ಪ್ರತಿನಿಧಿಸುವ ಐವರು ಸದಸ್ಯರನ್ನು ಇತ್ತೀಚೆಗೆ ನಾಮಕರಣ ಮಾಡಲಾಗಿದೆ. ಸರ್ಕಾರದ ಕಡೆಯಿಂದ ಐವರು ಸದಸ್ಯರನ್ನು ನಾಮಕರಣ ಮಾಡಬೇಕಿದೆ. ವಾಣಿಜ್ಯ ಮತ್ತು ಕೈಗಾರಿಕೆ, ನಗರ ಯೋಜನೆ, ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಹಾಗೂ ಒಬ್ಬ ನಗರ ಯೋಜನಾ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.ತೆರಿಗೆ ಸಂಗ್ರಹ, ಪ್ರದೇಶದ ಅಭಿವೃದ್ಧಿ, ಕಟ್ಟಡ ನಿರ್ಮಾಣದ ಮೇಲೆ ನಿಯಂತ್ರಣ, ಸಾರ್ವಜನಿಕ ಆಸ್ತಿಗಳ ನಿರ್ವಹಣೆ ಮತ್ತಿತರ ನಗರಾಡಳಿತ ಅಧಿಕಾರವನ್ನು ಈ ಪ್ರಾಧಿಕಾರ ಹೊಂದಿರಲಿದೆ ಎಂದು ಮೂಲಗಳು ಹೇಳಿವೆ.ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆ ರೂಪಿಸುವುದು, ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಗಳಿಗೆ ನೀರು ಪೂರೈಕೆ, ಪರಿಸರ ಸಂರಕ್ಷಣೆ, ನಾಗರಿಕ ಸೌಲಭ್ಯಗಳ ನಿರ್ಮಾಣ ಮತ್ತಿತರ ಹೊಣೆಗಾರಿಕೆಯನ್ನೂ ಪ್ರಾಧಿಕಾರ ನಿರ್ವಹಿಸಬೇಕಿದೆ.ಇನ್ಫೋಸಿಸ್, ವಿಪ್ರೊ, ಹ್ಯೂಲೆಟ್ ಅಂಡ್ ಪ್ಯಾಕಾರ್ಡ್, ಎಚ್‌ಸಿಎಲ್ ಟೆಕ್ನಾಲಜೀಸ್ ಸೇರಿದಂತೆ ಹಲವು ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.ಎಲೆಕ್ಟ್ರಾನಿಕ್ ಸಿಟಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಯಿಂದ ಹೊರಕ್ಕೆ ಇಡಲಾಗಿತ್ತು. ಈವರೆಗೂ ಈ ಪ್ರದೇಶ ದೊಡ್ಡತೋಗೂರು ಮತ್ತು ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಸೇರಿತ್ತು. ಇಲ್ಲಿನ ಉದ್ಯಮಗಳು ಗ್ರಾಮ ಪಂಚಾಯಿತಿಗಳಿಗೆ ತೆರಿಗೆ ಪಾವತಿಸುತ್ತಿದ್ದವು. ಈಗ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ತೆರಿಗೆಯಲ್ಲಿ ಶೇಕಡ 30ರಷ್ಟು ಪಾಲು ಮಾತ್ರ ಗ್ರಾಮ ಪಂಚಾಯಿತಿಗಳಿಗೆ ದೊರೆಯಲಿದೆ.ಎಲೆಕ್ಟ್ರಾನಿಕ್ ಸಿಟಿಯನ್ನೂ ತನ್ನ ವ್ಯಾಪ್ತಿಗೆ ಪಡೆಯಲು ಬಿಬಿಎಂಪಿ ಕಳೆದ ವರ್ಷ ಪ್ರಯತ್ನಿಸಿತ್ತು. ಆದರೆ, ಕೈಗಾರಿಕಾ ಸಂಘಗಳ ತೀವ್ರ ವಿರೋಧದಿಂದಾಗಿ ಈ ಪ್ರಯತ್ನಕ್ಕೆ ಯಶಸ್ಸು ದೊರೆತಿರಲಿಲ್ಲ.ಪ್ರಾಧಿಕಾರ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಹಂತಕ್ಕೆ ಬಂದ ಬಳಿಕ ಉದ್ಯಮ ವಲಯವು ತನ್ನ ಪ್ರತಿನಿಧಿಗಳನ್ನು ಆಯ್ಕೆಮಾಡಿಕೊಳ್ಳಲು ಅವಕಾಶ ದೊರೆಯಲಿದೆ. ಪೀಣ್ಯ ಮತ್ತು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಿಗೂ `ಕೈಗಾರಿಕಾ ಉಪನಗರ' ಸ್ಥಾನಮಾನ ನೀಡುವ ಪ್ರಸ್ತಾವ ಪರಿಶೀಲನೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.