ಎಲೆಕ್ಟ್ರಿಕಲ್ ಸಾಮಗ್ರಿ ಗುಣಮಟ್ಟ ಖಾತರಿ ಇಲ್ಲದಿದ್ದರೆ ಷಾಕ್!

ಗುರುವಾರ , ಜೂಲೈ 18, 2019
26 °C

ಎಲೆಕ್ಟ್ರಿಕಲ್ ಸಾಮಗ್ರಿ ಗುಣಮಟ್ಟ ಖಾತರಿ ಇಲ್ಲದಿದ್ದರೆ ಷಾಕ್!

Published:
Updated:

ಪರಿಚತರೊಬ್ಬರ ಮನೆ.  `ಗೃಹ ಪ್ರವೇಶ~ ಮುಗಿಸಿದ್ದರು. ಒಂದೆರಡು ವಾರವಷ್ಟೇ ಕಳೆದಿತ್ತೇನೋ.. ಅವರ ಮನೆಯಿಂದ ಆಘಾತಕಾರಿ ಸುದ್ದಿ ಬಂದಿತ್ತು. `ಷಾರ್ಟ್ ಸರ್ಕಿಟ್‌ನಿಂದಾಗಿ ಲಕ್ಷಾಂತರ ಮೌಲ್ಯದ ಗೃಹ ಬಳಕೆಯ ಎಲ್ಲ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳೂ ಸುಟ್ಟು ಕರಕಲಾಗಿವೆ~!ವೈರಿಂಗ್ ಮಾಡಿದ್ದ ಎಲೆಕ್ಟ್ರಿಷಿಯನ್ ಕರೆಸಿದರೆ, `ವೋಲ್ಟೇಜ್ ಜಾಸ್ತಿಯಾಗಿ ಷಾರ್ಟ್ ಸರ್ಕಿಟ್ ಆಗಿದೆ. ಹೊಸದಾಗಿ ವೈರಿಂಗ್ ಮಾಡಬೇಕು~ ಎಂದವನೇ ರೂ. 50 ಸಾವಿರಕ್ಕೂ ಅಧಿಕ ಮೌಲ್ಯದ ಕೊಟೇಷನ್ ಕೊಟ್ಟಿದ್ದ.ನೋಡಲು ಹೋಗಿದ್ದೆ. ಟಿವಿ ಬಹುತೇಕ ಸುಟ್ಟು ಕರಕಲಾಗಿತ್ತು. ಅಡುಗೆ ಕೋಣೆಯಲ್ಲಿ ಮಿಕ್ಸಿ ಕಥೆಯೂ ಅದೇ ಆಗಿತ್ತು. ಅದೃಷ್ಟಕ್ಕೆ ಸ್ಟೆಬೆಲೈಸರ್ ಇದ್ದುದರಿಂದ ರಿಫ್ರಿಜರೇಟರ್ ಬಚಾವಾಗಿತ್ತು. ಕಿಡಿಕಾರಿದ್ದ ಕೆಲವು ಸ್ವಿಚ್ ಪಾಯಿಂಟ್‌ಗಳಿಂದಾಗಿ ಗೋಡೆಗಳಲ್ಲಿ ಮಸಿ ಮೆತ್ತಿಕೊಂಡಿತ್ತು. ಹೊಸ ಮನೆ ಅಂದಗೆಟ್ಟಿತ್ತು. ವೋಲ್ಟೇಜ್ ಹೆಚ್ಚಾಗಿದ್ದರೆ ಎಂಸಿಬಿ(ಮೇನ್ ಸರ್ಕಿಟ್ ಬ್ರೇಕರ್) ಟ್ರಿಪ್ ಆಗಿ ವಿದ್ಯುತ್ ಕಡಿತಗೊಳ್ಳಬೇಕಿತ್ತಲ್ಲ? ಎಂಸಿಬಿ ಕೆಲಸ ಮಾಡಲಿಲ್ಲವೇ? ಕುತೂಹಲದಿಂದ ಮುಂಬಾಗಿಲ ಹಿಂದಿನ ಎಂಸಿಬಿ ಪಾಯಿಂಟ್ ತೆಗೆದು ನೋಡಿದರೆ ಅದೂ ಸುಟ್ಟು ಕರಕಲಾಗಿತ್ತು. ಕಾರಣ ಅದು ನಕಲಿ ಮಾಲು!ಮನೆ ಯಜಮಾನರು ಬೇಸರಗೊಂಡಿದ್ದರು. ಜತೆಗೆ, ಮತ್ತೆ ವೈರಿಂಗ್ ಮಾಡಿಸಲು ದುಡ್ಡು ಹೊಂದಿಸುವುದು ಹೇಗಪ್ಪಾ? ಎಂಬ ಚಿಂತೆಯೂ ಅವರ ಮುಖದಲ್ಲಿತ್ತು.

`ಒಳ್ಳೆ ವೈರ್, ಫಿಟ್ಟಿಂಗ್ಸ್, ಎಂಸಿಬಿ ಹಾಕಿಸಿರಲಿಲ್ಲವೇ?~ ಎಂಬ ಪ್ರಶ್ನೆಗೆ, `ಎಲೆಕ್ಟ್ರಿಷಿಯನ್ ಕೈಗೇ ಅವರು ಹೇಳಿದಷ್ಟು ದುಡ್ಡು ಕೊಟ್ಟಿದ್ದೆ. ಅವರೇ ಖರೀದಿ ಮಾಡಿ ತಂದಿದ್ದರು. ಒಳ್ಳೆ ಕಂಪೆನಿ ಮಾಲನ್ನೇ ತಂದು ಹಾಕಿಕುತ್ತಿರುವೆ ನೋಡಿ ಎಂದು ನನಗೂ ತೋರಿಸಿದ್ದರು.ಎಲ್ಲತರ ಮೇಲೂ ಕಂಪೆನಿ ಹೆಸರಿತ್ತು~ ಎಂದು ವಿವರಿಸಿದರು. ಸ್ಟೋರ್ ರೂಂನಲ್ಲಿದ್ದ ಎಲೆಕ್ಟ್ರಿಕಲ್ ಫಿಟ್ಟಿಂಗ್, ಸ್ವಿಚ್‌ಗಳ ಖಾಲಿ ಬಾಕ್ಸ್ ತಂದು ತೋರಿಸಿ, `ಎಲ್ಲವೂ ಒಳ್ಳೆ ಕಂಪೆನಿಯ ಐಟಂಗಳೇ ಅಲ್ಲವಾ?~ ಎಂದರು.ಬಾಕ್ಸ್‌ಗಳ ಮೇಲಿದ್ದ ಹೆಸರೇನೋ ಪ್ರಸಿದ್ಧ ಕಂಪೆನಿಯದೇ ಆಗಿತ್ತು. ಆದರೆ ಅಷ್ಟೂ ಸರಕು ಮಾತ್ರ ನಕಲಿ ಎಂಬುದು ಬಾಕ್ಸ್ ಮೇಲಿನ ಮುದ್ರಣ ನೋಡುತ್ತಲೇ ಅರ್ಥವಾಯಿತು.`ನಕಲಿ~ ಸಾಮಗ್ರಿ ಪರಿಣಾಮವಾಗಿಯೇ ಈ ಅವಘಡವಾಗಿತ್ತು. ಕನಿಷ್ಠ ಎಂಸಿಬಿ ಆದರೂ ಗುಣಮಟ್ಟದ್ದಾಗಿದ್ದರೆ ಹಾನಿಯ ತೀವ್ರತೆ ಇಷ್ಟೊಂದು ಪ್ರಮಾಣದ್ದಾಗಿರುತ್ತಿರಲಿಲ್ಲ.ಅವರು ಎಲ್ಲವನ್ನೂ ಎಲೆಕ್ಟ್ರಿಷಿಯನ್‌ಗೊಪ್ಪಿಸಿ, ಅವರು ತಂದ ಎಲೆಕ್ಟ್ರಿಕಲ್ ಸಾಮಗ್ರಿಗಳೆಲ್ಲವೂ ಅಸಲಿ ಎಂದು ನಂಬಿಕೊಂಡಿದ್ದಕ್ಕೆ ಈಗ ಪಶ್ಚಾತ್ತಾಪ ಪಡುವಂತಾಗಿದೆ.ನಿಮಗೂ ಗೊತ್ತಿರಬೇಕು, ದೇಶದಲ್ಲಿ ಎಂತಹುದೇ ವಸ್ತುವನ್ನೇ ಆದರೂ ನಕಲಿ ಮಾಡಿ ಮಾರುಕಟ್ಟೆಗೆ ರವಾನಿಸಬಲ್ಲ `ಚಾಲಾಕಿ~ಗಳಿದ್ದಾರೆ. ಹಸುಗೂಸಿನ ಪೌಷ್ಟಿಕಾಂಶಭರಿತ ಆಹಾರದಿಂದ ಹಿಡಿದು, ಖೋಟಾ ನೋಟು, ಸೋಪಿನ ಪುಡಿ, ಟೂತ್‌ಪೇಸ್ಟ್, ಪ್ರಸಿದ್ಧ ಕಂಪೆನಿ ಔಷಧ-ಮಾತ್ರೆ, ಕ್ರೆಡಿಟ್ ಕಾರ್ಡ್... ಎಲ್ಲವನ್ನೂ ನಕಲಿ ಮಾಡಿ ಮಾರಾಟ ಮಾಡುವಂತಹವರು. ಇಂಥವರಿಗೆ ಈ ಎಲೆಕ್ಟ್ರಿಕಲ್ ಸರಕು ಯಾವ ಲೆಕ್ಕ!ಈ ಮನೆಯ ಎಲೆಕ್ಟ್ರಿಕಲ್ ಐಟಂಗಳೆಲ್ಲ ಇದೇ ನಕಲಿ ಮಾರುಕಟ್ಟೆಯವು. ಮೊದಲ ನೋಟಕ್ಕೆ ಹೆಸರಾಂತ ಕಂಪೆನಿ ಸರಕುಗಳಂತೇ ನಂಬಿಕೆ ಹುಟ್ಟಿಸಿಬಿಡುತ್ತವೆ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಸಾಚಾತನವೂ ಗೊತ್ತಾಗುತ್ತದೆ.ಇತ್ತೀಚಿನ ವರ್ಷಗಳಲ್ಲಿ ಎಲ್ಲ ಪ್ರಸಿದ್ಧ ಕಂಪೆನಿಗಳೂ ತಮ್ಮ ಸರಕುಗಳ ಅಸಲಿತನವನ್ನು ಗ್ರಾಹಕರಿಗೆ ಮನದಟ್ಟು ಮಾಡಿಕೊಡಲು ಹಲವು ಸುರಕ್ಷತಾ ಮಾರ್ಗ ಅನುಸರಿಸುತ್ತಿವೆ.

ಗುಣಮಟ್ಟ ಖಾತರಿಯ `ಐಎಸ್‌ಐ~ ಚಿಹ್ನೆ, ಸ್ಟಾಂಪ್ ಆಕಾರದಲ್ಲಿ ಮುದ್ರಿಸಿದ ಕಂಪೆನಿ ಮಿನುಗುವ ಲಾಂಛನವನ್ನೂ ಪ್ರತಿ ಬಾಕ್ಸ್ ಮೇಲೆ ಎದ್ದು ಕಾಣುವಂತೆ ಹಾಕಿರುತ್ತವೆ. ವಸ್ತುವಿನ ಮೇಲೂ `ಗುಣಮಟ್ಟ ಖಾತರಿ~ ಮುದ್ರೆಯೂ ಇರುತ್ತದೆ.ಎಲೆಕ್ಟ್ರಿಕಲ್ ಸ್ವಿಚ್ ಚಿಕ್ಕದಾದರೂ ಬಾಕ್ಸ್ ಮೇಲೆ ಕಂಪೆನಿಯ ಮಿನುಗುವ ಲೊಗೊ, ಐಎಸ್‌ಐ ಚಿಹ್ನೆ ಇರುತ್ತದೆ. ವೈರ್ ಮೇಲೆಯೂ ಪ್ರತಿ ಮೀಟರ್‌ಗೊಮ್ಮೆ ಕಂಪೆನಿ ಹೆಸರು, ಗುಣಮಟ್ಟ ಖಾತರಿ ಮುದ್ರಿತವಾಗಿರುತ್ತದೆ.ಇಲ್ಲಿ ಮುಖ್ಯವಾಗಿರುವುದು ನಿಮ್ಮ ನಿರ್ಧಾರ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮನೆ ನಿರ್ಮಿಸುವ ನೀವು ಎಲೆಕ್ಟ್ರಿಕಲ್ ಸಾಮಗ್ರಿ ಖರೀದಿಯಲ್ಲಿ ಬಹಳ ಜಾಗ್ರತೆ ವಹಿಸಬೇಕು.ಕಡಿಮೆ ಬೆಲೆಗೆ ಸಿಗುತ್ತವೆ ಎಂದು ನಕಲಿ ಜಾಲಕ್ಕೆ ಬೀಳಬಾರದು. ಖರೀದಿಗೆ ಖುದ್ದು ಹೋಗುವುದು ಒಳಿತು. ಮುಂಚಿತವಾಗಿ ಅಂತರ್ಜಾಲದಲ್ಲಿ ಜಾಲಾಡಿ ಕಂಪೆನಿ, ಉತ್ಪನ್ನ, ಬೆಲೆ  ತಿಳಿದುಕೊಳ್ಳಿ. ನಂತರ 2-3 ಅಂಗಡಿ ಸುತ್ತಾಡಿ ಲಭ್ಯವಿರುವ ಸಾಮಗ್ರಿ, ಬೆಲೆ ವಿಚಾರಿಸಿಕೊಳ್ಳಬೇಕು. ಐಎಸ್‌ಐ ಗುರುತು, ಕಂಪೆನಿಯ ಲಾಂಛನದ ಸ್ಟಿಕ್ಕರ್ ಖಚಿತಪಡಿಸಿಕೊಳ್ಳಿ.ಮುಖ್ಯವಾಗಿ ಅಧಿಕೃತ ರಶೀತಿ ಪಡೆಯಿರಿ. ಅಂಗಡಿಯವರು, `ತೆರಿಗೆ ಬೀಳುತ್ತದೆ~ ಎಂದು ಗೊಂದಲಕ್ಕೆ ಕೆಡವಲು ಯತ್ನಿಸಬಹುದು. ತೆರಿಗೆ ಪಾವತಿ ಎಲ್ಲರ ಜವಾಬ್ದಾರಿ ಅಲ್ಲವೆ. ರಶೀತಿ ಬೇಕೇಬೇಕು ಎನ್ನಿ. ಇದರಿಂದಾಗುವ ಅನುಕೂಲವೇನು ಗೊತ್ತೆ? ನಕಲಿ ಸಾಮಗ್ರಿ ಮೊದಲಿಗೇ ತಪ್ಪುತ್ತದೆ. ರಶೀತಿಯಲ್ಲಿ ವಸ್ತುವಿನ ಹೆಸರು, ತಯಾರಿ ದಿನ, ಬ್ಯಾಚ್, ಎಂಆರ್‌ಪಿ ನಮೂದಿಸಬೇಕು. ಆಗ ಅಸಲಿ ಸಾಮಗ್ರಿಯನ್ನೇ ಕೊಡಬೇಕು.ಜತೆಗೆ ಸಾಮಗ್ರಿಯಿಂದ ಏನಾದರೂ ಸಮಸ್ಯೆಯಾದರೆ ರಶೀತಿ ಇರುವುದರಿಂದ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ಮೊರೆ ಹೋಗಿ ಪರಿಹಾರ ಪಡೆಯಬಹುದು.

ನಿಮ್ಮ ಕನಸಿನ ಮನೆಗೆ ಅಗತ್ಯವಾದ ಎಲೆಕ್ಟ್ರಿಕಲ್ ಸಾಮಗ್ರಿ ಖರೀದಿ ವೇಳೆ ಈ ಎಲ್ಲ ಅಂಶ ಗಮನದಲ್ಲಿಡಿ. ಇಲ್ಲವಾದರೆ ನಿಮ್ಮ ಮನೆಗೆ ಬೆಳಕು ನೀಡಬೇಕಾದ ಈ ಪುಟ್ಟ ಸಾಮಗ್ರಿಗಳೇ ಬದುಕಿಗೆ ಕತ್ತಲೆಯನ್ನೂ ತರಬಹುದು, ಜಾಗ್ರತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry