ಭಾನುವಾರ, ಮೇ 9, 2021
27 °C

ಎಲೆಕ್ಟ್ರಿಕ್ ಸ್ಕೂಟರ್: ನಿಮ್ಮ ಆಯ್ಕೆ ಯಾವುದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆಟ್ರೋಲ್ ಬೆಲೆ ದಿನೇ ದಿನೇ ಏರುತ್ತಿದೆ. ಕೆಲವೇ ದಿನಗಳಲ್ಲಿಲೀಟರ್ ಪೆಟ್ರೋಲ್‌ಗೆ 100 ರೂಪಾಯಿ ದಾಟಿದರೂ ಆಶ್ಚರ್ಯ ಪಡದಂತಹ ಪರಿಸ್ಥಿತಿ ಈಗ ಎದುರಾಗಿದೆ. ಈ ದುಬಾರಿ ಬೆಲೆಯಲ್ಲಿ ನಮ್ಮ ವಾಹನಗಳು ಎಷ್ಟೇ ಅಧಿಕ ಮೈಲೇಜ್ ನೀಡಿದರೂ ಅದರಿಂದ ಯಾವ ಲಾಭವೂ ಇಲ್ಲ ಎಂಬ ಹತಾಶೆ ವಾಹನ ಚಾಲಕರಲ್ಲಿ ಮೂಡುತ್ತಿರುವುದು ಅಸಹಜವೇನಲ್ಲ.ಇದಕ್ಕಾಗಿಯೇ ಪರ್ಯಾಯ ಇಂಧನಗಳನ್ನು ಬಳಸಿಕೊಳ್ಳುವ ವಿಧಾನಗಳನ್ನೂ ಈಗೀಗ ಅಳವಡಿಸಿಕೊಳ್ಳಲಾಗುತ್ತಿದೆ. ಆದರೆ ಈ ಪರ್ಯಾಯ ಇಂಧನ ತಂತ್ರಜ್ಞಾನಗಳು ಬಳಕೆದಾರನ ಕೈಗೆಟುಕದೆ ತುಟ್ಟಿಯಾಗಿಯೂ, ಕೆಲವೊಮ್ಮೆ ಅಳವಡಿಸಿಕೊಳ್ಳಲು ಅಸಾಧ್ಯ ಎಂಬಷ್ಟು ಅಪ್ರಾಯೋಗಿಕವಾಗಿಯೂ ಇದ್ದು ಸೋಲನ್ನು ಅನುಭವಿಸಿದ್ದೇ ಹೆಚ್ಚು. ಹಾಗಾಗಿ ಬೆಲೆ ಹೆಚ್ಚಾಗಿ ಜೇಬು ಸುಟ್ಟಿಕೊಂಡರೂ ಪರವಾಗಿಲ್ಲ, ಸಾಂಪ್ರದಾಯಿಕ ಪೆಟ್ರೋಲ್, ಡೀಸೆಲ್ ವಾಹನಗಳನ್ನೇ ಬಳಸಲು ಜನರು ನಿರ್ಧರಿಸಿದ್ದಾರೆ.ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯುಚ್ಚಾಲಿತ ವಾಹನಗಳು ರಸ್ತೆಗಿಳಿದು ಕುತೂಹಲ ಮೂಡಿಸಿದ್ದು ನಿಜ. ಬೆಂಗಳೂರು ಮೂಲದ ರೇವಾ ಎಲೆಕ್ಟ್ರಿಕಲ್ಸ್ ವಿದ್ಯುಚ್ಚಾಲಿತ ಕಾರನ್ನು ಹೊರಬಿಟ್ಟು ಭಾಗಶಃ ಯಶಸ್ವಿಯಾಗಿದ್ದು ಗೊತ್ತೇ ಇದೆ.

 

ಈ ಸಂಸ್ಥೆ ಇದೀಗ ಅತಿ ಬಳಶಾಲಿ ಮೋಟಾರ್ ಹೊಂದಿರುವ, ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವಂತಹ ಹಗುರ ಹಾಗೂ ಬಲಶಾಲಿ ಲಿಥಿಯಂ ಅಯಾನ್ ಬ್ಯಾಟರಿ ಅಳವಡಿಸಲ್ಪಟ್ಟ ಕಾರನ್ನು ಹೊರಬಿಡಲಿರುವುದು ಕುತೂಹಲ ಮೂಡಿಸಿದೆ. ಇದು ಹೊರಬಂದದ್ದೇ ಆದಲ್ಲಿ, ಕಡಿಮೆ ಬೆಲೆಗೆ ಅತಿ ದೀರ್ಘ ಪ್ರಯಾಣ ಮಾಡುವ ವಿನೂತನ ಅವಕಾಶ ಚಾಲಕರಿಗೆ ಸಿಗುವುದರಲ್ಲಿ ಅನುಮಾನವಿಲ್ಲ.ಹಾಗಾದರೆ ಸಮಸ್ಯೆಯೇನು?

ಸಮಸ್ಯೆಗಳು ಬಹಳ ಸರಳವಾಗಿವೆ. ವಿದ್ಯುಚ್ಚಾಲಿತ ಸ್ಕೂಟರ್‌ಗಳು ಈಗ ಸಾಕಷ್ಟು ಸಂಖ್ಯೆಯಲ್ಲಿ ಹೊರಬಂದಿವೆ. ಮುಖ್ಯ ಸಮಸ್ಯೆಯೆಂದರೆ ಬ್ಯಾಟರಿಯದು. ಈಗ ಈ ಸ್ಕೂಟರ್‌ಗಳಲ್ಲಿ ನಿಕ್ಕಲ್ ಕ್ಯಾಡ್‌ಮಿಯಂ ಬ್ಯಾಟರಿಗಳನ್ನು ಬಳಸಲಾಗುತ್ತಿದೆ.ಈ ಬ್ಯಾಟರಿಗಳ ಬೆಲೆ ಕಡಿಮೆ. ಆದರೆ ತೂಕ ಹೆಚ್ಚು. ಚಾರ್ಚ್ ಸಾಮರ್ಥ್ಯ ಕಡಿಮೆ. ಜೊತೆಗೆ ರೀಚಾರ್ಚ್ ಸೈಕಲ್‌ಗಳೂ ಕಡಿಮೆ. ಅಂದರೆ ದೀರ್ಘ ಕಾಲ ಬ್ಯಾಟರಿ ರೀಚಾರ್ಜ್ ಮಾಡಲಾಗದೇ, ಬದಲಿಸಬೇಕಾಗುತ್ತದೆ. ಆಗ ಮತ್ತೆ ಸಾವಿರಾರು ರೂಪಾಯಿಗಳ ಹೊಸ ಬ್ಯಾಟರಿ ಜೋಡಿಸುವುದು ಅನಿವಾರ್ಯ.ಹಾಗಾಗಿ ಬೈಕ್ ಸವಾರಿಯ ನಡುವೆಯೇ ಚಾರ್ಜ್ ಮುಗಿದು ಹೋಗಿ ತಳ್ಳಬೇಕಾದ ಅನಿವಾರ್ಯ ಸ್ಥಿತಿ ಒದಗುತ್ತದೆ. ಪೆಟ್ರೋಲ್ ಬಂಕ್‌ಗಳಂತೆ ರೀಚಾರ್ಜ್ ಕೇಂದ್ರಗಳು ಇಲ್ಲದೇ ಇರುವುದು ದೊಡ್ಡ ಕೊರತೆ.ಬಳಕೆದಾರರು ಹೆಚ್ಚಿದರೆ ಕೇಂದ್ರಗಳನ್ನು ಸ್ಥಾಪಿಸಬಹುದು ಎನ್ನುವುದು ಇಲ್ಲಿ ಕೇವಲ ಸಮರ್ಥನೆ. ಹೀಗಿದ್ದೂ ಇರುವುದರಲ್ಲೇ ವಾಸಿ ಎನ್ನುವ ಅನೇಕ ವಿದ್ಯುತ್ ಸ್ಕೂಟರ್‌ಗಳು ಭಾರತದ ಮಾರುಕಟ್ಟೆಯಲ್ಲಿವೆ.ಅದೇನೆ ಇರಲಿ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೀರೊ, ಬಿಎಸ್‌ಎ, ಯೋ ಬೈಕ್‌ಗಳ ಜತೆಗೆ ಬರಲಿರುವ ಎವಾನ್, ಬಿಪಿಜಿ ಮೋಟಾರ್ಸ್, ಅಲ್ಟ್ರಾ ಮೋಟಾರ್ಸ್‌ಗಳ ಹಲವು ಬೈಕ್‌ಗಳು ಭರವಸೆ ಮೂಡಿಸಿವೆ.

ಆದರೂ ಈಗಾಗಲೇ ಖರೀದಿಸಿರುವವರಲ್ಲಿ ಹಲವರು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಸಿ ತುಪ್ಪದಂತೆ ಉಗಿಯಲೂ ಆಗದೆ ನುಂಗಲೂ ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕರ್ನಾಟಕದಲ್ಲಿ ಖರೀದಿಸಬಹುದಾದ ಎಲೆಕ್ಟ್ರಿಕ್ ಬೈಕ್‌ಗಳ ಕುರಿತ ಒಂದು ಸಮೀಕ್ಷೆ ಇಲ್ಲಿದೆ.ಎಲೆಕ್ಟ್ರಿಕ್ ಸ್ಕೂಟರ್: ಲಾಭ-ನಷ್ಟಲಾಭ


1. ಪೆಟ್ರೋಲ್‌ಗಿಂತ ಅಗ್ಗ: ಆಗಾಗ್ಗೆ ಏರುವ ಪೆಟ್ರೋಲ್ ಬೆಲೆಗೆ ಹೋಲಿಸಿದಲ್ಲಿ ದಿನಕ್ಕೆ ಎರಡು ಯೂನಿಟ್ ವಿದ್ಯುತ್ ಬೇಡುವ ಇ-ಸ್ಕೂಟರ್‌ಗಳ ನಿರ್ವಹಣೆ ಅಗ್ಗ

2. ಹೆಚ್ಚು ಒತ್ತಡ ಇಲ್ಲ: ಇದರ ವೇಗ ಅಷ್ಟಾಗಿ ಇರದ ಕಾರಣ ಸವಾರರ ಮೇಲೆ ಹೆಚ್ಚು ಒತ್ತಡ ಇರದು. ಜತೆಗೆ ಪುಟ್ಟ ಮೊಪೆಡ್ ಮಾದರಿಯ ಇ-ಸ್ಕೂಟರ್‌ಗಳನ್ನು ಟ್ರಾಫಿಕ್ ಇರುವ ಪ್ರದೇಶದಲ್ಲಿ ಸೈಕಲ್‌ನಂತೆ ಲೀಲಾಜಾಲವಾಗಿ ಚಲಿಸಬಹುದು.

3. ಸುರಕ್ಷಿತ ಹಾಗೂ ಸುಲಭ: ಬಹುತೇಕ ವಿದ್ಯುತ್ ಚಾಲಿತ ಸ್ಕೂಟರ್‌ಗಳಿಗೆ ಕಿಕ್ಕರ್ ಬಳಸುವಂತಿಲ್ಲ. ಕೀಲಿ ಹಾಕಿ ಆಕ್ಸಿಲ್‌ರೇಟರ್ ನೀಡಿದರೆ ಸಾಕು. ಅದರಂತೆ ಬ್ಯಾಟರಿ ಸಿಡಿಯುವ ಅಥವಾ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳು ಇದರಲ್ಲಿ ಇಲ್ಲ. ಏಕೆಂದರೆ ಇಂಥ ಸಂದರ್ಭಗಳು ಎದುರಾದಾಗ ತನ್ನಿಂತಾನೆ ವಿದ್ಯುತ್ ಹರಿಸುವ ಕ್ರಿಯೆ ಸ್ಥಗಿತಗೊಳ್ಳುವ ಇಂಟಲಿಜೆಂಟ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಿರಲಾಗುತ್ತದೆ.

4. ಪರಿಸರ ಸ್ನೇಹಿ: ಪೆಟ್ರೋಲ್ ಬೈಕ್‌ಗಳಂತೆ ವಾತಾವರಣಕ್ಕೆ ಇಂಗಾಲವನ್ನು ಇದು ಉಗುಳದು.

5. ಪ್ರತಿಯೊಬ್ಬರಿಗೂ ಒಗ್ಗುವಂಥದ್ದು: ಯುವಕ-ಯುವತಿಯರು, ಮಹಿಳೆಯರು, ಪುರುಷರು, ವಯಸ್ಕರು ಹೀಗೆ ಪ್ರತಿಯೊಬ್ಬರೂ ಲೀಲಾಜಾಲವಾಗಿ ಓಡಿಸಬಹುದಾದ ವಾಹನ.ನಷ್ಟ

1. ವೇಗ ಹಾಗೂ ದೂರ: ಇ-ಸ್ಕೂಟರ್‌ನಲ್ಲಿ ಹೆಚ್ಚು ವೇಗದಲ್ಲಿ ಹೋಗಲಾಗದು, ಒಮ್ಮೆ ಚಾರ್ಜ್ ಮಾಡಿದರೆ ಹೆಚ್ಚು ದೂರವನ್ನೂ ಕ್ರಮಿಸಲಾಗದು.

2. ವಾತಾವರಣವೇ ಇದರ ಶತ್ರು: ಮಳೆ ಹಾಗೂ ವಿಪರೀತ ಚಳಿ ವಾತಾವರಣದಲ್ಲಿ ಕೊಂಚ ಕಷ್ಟಪಡಬೇಕಾಗಬಹುದು.

3. ಚಾರ್ಜಿಂಗ್ ಕೇಂದ್ರ: ಪೆಟ್ರೋಲ್ ಬಂಕ್‌ಗಳಂತೆ ಇ-ಸ್ಕೂಟರ್‌ನ ಬ್ಯಾಟರಿ ಚಾರ್ಜ್ ಮಾಡಬಲ್ಲ ಕೇಂದ್ರವಿಲ್ಲ.

4. ಸೇವಾ ಕೇಂದ್ರ: ಎಲ್ಲೆಡೆ ಸೇವಾ ಕೇಂದ್ರಗಳು ಇಲ್ಲದ ಕಾರಣ ದುರಸ್ತಿ ಹಾಗೂ ಇತರ ಬಿಡಿ ಭಾಗಗಳಿಗೆ ಅಲೆದಾಟ ತಪ್ಪಿದ್ದಲ್ಲ

5. ದುಬಾರಿ ಬ್ಯಾಟರಿ: ಬಹಳ ಬೇಗ ಬ್ಯಾಟರಿ ತನ್ನ ಸಾಮರ್ಥ್ಯ ಕಳೆದುಕೊಳ್ಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.