ಎಲೆಕ್ಷನ್‌ನಲ್ಲಿ ಮಾಲಾಶ್ರೀ ಆ್ಯಕ್ಷನ್

7

ಎಲೆಕ್ಷನ್‌ನಲ್ಲಿ ಮಾಲಾಶ್ರೀ ಆ್ಯಕ್ಷನ್

Published:
Updated:

ಎಲೆಕ್ಷನ್ ಕಮೀಷನರ್! ಇದು ನಟಿ ಮಾಲಾಶ್ರೀ ಹೊಸ ಅವತಾರ.

ಭ್ರಷ್ಟ ವ್ಯವಸ್ಥೆಯನ್ನು ಸರಿದಾರಿಗೆ ತರುವ ಚುನಾವಣಾ ಆಯುಕ್ತೆಯ ಪಾತ್ರದಲ್ಲಿ ಮಾಲಾಶ್ರೀ ಹೊಸ ಚಿತ್ರ `ಎಲೆಕ್ಷನ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾದಿ ಭಿನ್ನವಾದರೂ ನಡಿಗೆ ಸ್ವರೂಪ ಮಾತ್ರ ಬದಲಾಗಿಲ್ಲ. ರಾಜಕೀಯ ವ್ಯವಸ್ಥೆಯ ಸುತ್ತ ಜರುಗುವ ಸಂಗತಿಗಳನ್ನು ಪಕ್ಕಾ ಕಮರ್ಷಿಯಲ್ ಮಾದರಿಯಲ್ಲಿ ಹಿಡಿದುಕೊಡುವ ಚಿತ್ರವಿದು. ಹೀಗಾಗಿ ಮಾಲಾಶ್ರೀ ಚುನಾವಣಾ ಆಯುಕ್ತೆ ಎಂಬ ವಿಭಿನ್ನ, ಜವಾಬ್ದಾರಿಯುತ ಪಟ್ಟದಲ್ಲಿದ್ದರೂ ಹೊಡೆದಾಟ ಮಾತ್ರ ಮರೆಯುವುದಿಲ್ಲ.ರಾಮು ನಿರ್ಮಾಣದಲ್ಲಿ ನಿರ್ದೇಶಕ ಓಂಪ್ರಕಾಶ್‌ರಾವ್ ಆ್ಯಕ್ಷನ್ ಕಟ್ ಹೇಳುತ್ತಿರುವ ಆರನೇ ಚಿತ್ರವಿದು. `ಎಲೆಕ್ಷನ್' ಚಿತ್ರದ ಕಥೆಯ ಬೆನ್ನೆಲುಬು ಪ್ರಸಕ್ತದ ರಾಜಕೀಯ ವಿದ್ಯಮಾನಗಳು. ಇದನ್ನೇ ಬಂಡವಾಳ ಆಗಿಸಿಕೊಂಡಿರುವ ಚಿತ್ರತಂಡ ತರಾತುರಿಯಲ್ಲಿ ಚಿತ್ರೀಕರಣ ಮುಗಿಸಲು ಉದ್ದೇಶಿಸಿದೆ. ಕಾರಣ ಮುಂಬರುವ ರಾಜ್ಯದ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಸಮಯಕ್ಕೆ ಸರಿಯಾಗಿ ಚಿತ್ರ ಬಿಡುಗಡೆ ಮಾಡುವುದು ಅವರ ಗುರಿ.ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚಿತ್ರೀಕರಣ ನಡೆಸಲಾಗುತ್ತದೆಯಂತೆ. 45 ದಿನಗಳ ಕಾಲ ಹಗಲು ರಾತ್ರಿ ಚಿತ್ರೀಕರಣ ನಡೆಸಿ ತ್ವರಿತವಾಗಿ ಚಿತ್ರ ಮುಗಿಸುವುದು ಓಂಪ್ರಕಾಶ್‌ರಾವ್ ಗುರಿ. ಅವರೂ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಗಳಿಗೆ ಹೆಸರಾಂತ ನಟರನ್ನೇ ಬಳಸಿಕೊಳ್ಳುವ ಉಮೇದು ಅವರದು. ಹೀಗಾಗಿ ಚಿತ್ರದಲ್ಲಿ ಕಲಾವಿದರ ದೊಡ್ಡ ದಂಡೇ ಇರಲಿದೆ.`ಮಠ' ಗುರುಪ್ರಸಾದ್‌ರ ಹರಿತ ಸಂಭಾಷಣೆ ಚಿತ್ರದಲ್ಲಿ ಇರಲಿದೆ. ಹಂಸಲೇಖ ಅವರ ಸಂಗೀತ ಪ್ರಭೆಯಲ್ಲಿ ಆರು ಹಾಡುಗಳು ಸಿದ್ಧವಾಗುತ್ತಿವೆ.ಇದು ಅತ್ಯಂತ ಸವಾಲಿನ ಪಾತ್ರ ಎಂದು ಹೇಳಿಕೊಂಡರು ನಟಿ ಮಾಲಾಶ್ರೀ. ಕಾಲ್ಪನಿಕ ಸನ್ನಿವೇಶಗಳ ಮೂಲಕ ನೈಜ ಸಮಸ್ಯೆಯ ಚಿತ್ರಣ ಹಾಗೂ ಅದಕ್ಕೆ ಪರಿಹಾರವನ್ನೂ ಚಿತ್ರ ನೀಡುತ್ತದೆ. ಅತ್ಯಂತ ಶಕ್ತಿಶಾಲಿ ಪಾತ್ರವದು. ಸಂಭಾಷಣೆ ಮಾತ್ರವಲ್ಲ, ಉತ್ತಮ ಸಂದೇಶವೂ ಚಿತ್ರದಲ್ಲಿದೆ ಎಂದರು.ಚಿತ್ರ ಯಾವುದೇ ರಾಜಕೀಯ ಪಕ್ಷ ಅಥವಾ ಸರ್ಕಾರವನ್ನು ಕುರಿತದ್ದಾಗಿಲ್ಲ. ಯಾರನ್ನೂ ನೋವನ್ನುಂಟು ಮಾಡುವ ಸನ್ನಿವೇಶಗಳೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು ನಿರ್ಮಾಪಕ ರಾಮು.ಛಾಯಾಗ್ರಾಹಕ ರಾಜೇಶ್‌ಗಿದು ಮೂರನೇ ಚಿತ್ರ. `ಶಕ್ತಿ' ಮತ್ತು `ವೀರ' ಎಂಬ ಮಾಲಾಶ್ರೀ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿರುವ ಅವರಲ್ಲಿ ಹೊಸಬಗೆಯಲ್ಲಿ ದೃಶ್ಯಗಳನ್ನು ಕಟ್ಟಿಕೊಡುವ ಉತ್ಸಾಹವಿದೆ.ರಾಜಕೀಯ ಇಲ್ಲವೇ ಇಲ್ಲ...

ಮಾಲಾಶ್ರೀ ಕೆಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶಿಸುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿತ್ತು. ಚಿತ್ರದ ಮುಹೂರ್ತಕ್ಕೆಂದು ಯಡಿಯೂರಪ್ಪ ಅವರನ್ನು ಕರೆಯಲು ಮನೆಗೆ ಹೋಗಿದ್ದು ಅಷ್ಟೇ. ಅವರ ಮಗಳು ನನಗೆ ಆತ್ಮೀಯರು. ರಾಜಕೀಯದ ಬಗ್ಗೆ ಏನೊಂದೂ ಮಾತನಾಡಿಲ್ಲ. ಇದು ಸತ್ಯ. ನಾನು ಕೆಜೆಪಿ ಸೇರಿರುವ, ಮುಂದೆ ಸೇರುವ ವದಂತಿಗಳು ಸತ್ಯಕ್ಕೆ ದೂರ. ಭವಿಷ್ಯದಲ್ಲೂ ಅಂಥ ಯೋಚನೆಗಳಿಲ್ಲ. ಸದ್ಯ ನಟನೆಯ ಬಗ್ಗೆ ಮಾತ್ರ ನನ್ನ ಗಮನ ಎಂದು ಮಾಲಾಶ್ರೀ ಸ್ಪಷ್ಟೀಕರಣ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry