ಎಲೆಗಳ ಬಾಳೆ-ಲಾಭದಾಯಕ ಬೆಳೆ

7

ಎಲೆಗಳ ಬಾಳೆ-ಲಾಭದಾಯಕ ಬೆಳೆ

Published:
Updated:

ದೊಡ್ಡಬಳ್ಳಾಪುರ: ಬಾಳೆ ಹಣ್ಣುಗಳಿಗಾಗಿ ಬಾಳೆ ತೋಟ ಬೆಳೆಸುವುದಕ್ಕಿಂತಲೂ ಈಗ ಎಲೆಗಳಿಗಾಗಿ ಬಾಳೆ ತೋಟಗಳನ್ನು ಬೆಳೆಸುವ ರೈತರ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದೆ.ವಿವಾಹ ಕಾರ್ಯಕ್ರಮಗಳು ಸೇರಿದಂತೆ ಎಲ್ಲಾ  ಶುಭ ಸಮಾರಂಭಗಳಲ್ಲೂ ಬಾಳೆ ಎಲೆಗೆ ಪ್ರಥಮ ಪ್ರಾಶಸ್ತ್ಯ. ಅಂತೆಯೇ ಹೊಟೇಲ್‌ಗಳಲ್ಲಿ ದೈನಂದಿನ `ಬಾಳೆ ಎಲೆ~ ಊಟದ್ದೇ ವಿಶೇಷ. ಹೀಗಾಗಿ ಊಟಕ್ಕಾಗಿ ಬಳಸುವ ಒಂದು ಬಾಳೆ ಎಲೆ ಬೆಲೆ 2.50 ಪೈಸೆ. ಇನ್ನು  ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ತಿಂಡಿಗಳನ್ನು ನೀಡಲು ಬಳಸುವ ಒಂದು ಕಟ್ಟು (ಒಂದು ಕಟ್ಟಿನಲ್ಲಿ 40ರಿಂದ 50 ಎಲೆಗಳಿರುತ್ತವೆ) ಬಾಳೆ ಎಲೆಯ ಬೆಲೆ 10 ರೂಪಾಯಿ.ದೊಡ್ಡಬಳ್ಳಾಪುರದಲ್ಲಿ ಬಾಳೆ ಮಂಡಿಗಳಂತೆ ಬಾಳೆ ಎಲೆ ಮಾರಾಟಕ್ಕಾಗಿಯೇ ಪ್ರತ್ಯೇಕ ಅಂಗಡಿಗಳು ಇವೆ. `ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಹುತೇಕ `ತುದಿ~ಎಲೆಗಳೇ ಇರಬೇಕು ಎನ್ನುವುದು ಗ್ರಾಹಕರ ಬೇಡಿಕೆ.ಏಲಕ್ಕಿ ಬಾಳೆ ಗಿಡದಲ್ಲಿ ಮಾತ್ರ ಊಟದ ಎಲೆ ದೊರೆಯುತ್ತವೆ. ಪಚ್ಚಬಾಳೆ ಗಿಡದ ಎಲೆಗಳು ದಪ್ಪ ಇರುತ್ತವೆ. ಇದರಿಂದಾಗಿ ಸಾಗಾಣಿಕೆಯಲ್ಲಿ ಈ ಎಲೆಗಳು ಸೀಳಿ ಹೋಗುತ್ತವೆ. ಹೀಗಾಗಿ ಎಲೆ ಬಳಕೆಗೆ ಏಲಕ್ಕಿ ಬಾಳೆ ಎಲೆಗಳನ್ನು ಮಾತ್ರವೇ ಬಳಸಲಾಗುತ್ತದೆ. ಏಲಕ್ಕಿ ಬಾಳೆ ಗಿಡದ ಎಲೆಗಳು ತೆಳುವು ಹಾಗೂ ಆಕರ್ಷಕ ಬಣ್ಣವನ್ನು ಹೊಂದಿವೆ. ಇವುಗಳ ಸಾಗಾಣಿಕೆ ಹಾಗೂ ಬಳಕೆ ಅತ್ಯಂತ ಸುಲಭ~ ಎನ್ನುತ್ತಾರೆ ನಗರದ ಬಾಳೆ ಎಲೆ ಮಾರಾಟಗಾರ ಮೈಲಾರಯ್ಯ.

 

ಸಾಮಾನ್ಯವಾಗಿ ಏಲಕ್ಕಿ ಬಾಳೆ ಬೆಳೆಯುವ ಬಹುತೇಕ ರೈತರು ಮೊದಲ ಎರಡು ಅಥವಾ ಮೂರನೇ ಬೆಳೆ ಮಾತ್ರ ಬಾಳೆ ಹಣ್ಣುಗಳಿಗಾಗಿ ಬೆಳೆಯುತ್ತಾರೆ.  ಮೂರನೇ ಬೆಳೆ ನಂತರ ಬಾಳೆ ಗೊನೆಗಳು ತೂಕ, ಗುಣಮಟ್ಟದಲ್ಲಿ ಕಡಿಮೆಯಾಗುತ್ತವೆ. ಹೀಗಾಗಿ ಬಾಳೆಗಿಡದ ಸುತ್ತ ಬರುವ ಕಂದುಗಳು (ಪುಟ್ಟ ಸಸಿಗಳನ್ನು) ಕಿತ್ತು ಹಾಕದೆ ಅವುಗಳನ್ನು ಎಲೆಗಳಿಗಾಗಿ ಬೆಳೆಸಲಾಗುತ್ತದೆ~ ಎನ್ನುತ್ತಾರೆ ತಾಲ್ಲೂಕಿನ ಚನ್ನವೀರನಹಳ್ಳಿ ಗ್ರಾಮದ ಬಾಳೆ ಬೆಳೆಗಾರ ಸಿ.ವಿ.ಲಕ್ಷ್ಮೀಪತಿ.ಒಂದು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ಬಾಳೆ ತೋಟವನ್ನು ಒಂದು ತಿಂಗಳ ಲೆಕ್ಕದಲ್ಲಿ 8 ರಿಂದ 10 ಸಾವಿರ ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತದೆ. ತೋಟದಲ್ಲೇ ಎಲೆಗಳ ಲೆಕ್ಕದಲ್ಲಿ ಮಾರಾಟ ಮಾಡುವುದಾದರೆ ಒಂದು ಬಾಳೆ ಎಲೆ 50 ರಿಂದ 70 ಪೈಸೆ. ಬಾಳೆಯಲ್ಲಿ ಮೂರನೇ ಬೆಳೆ ಬಂದ ನಂತರ ಎಲೆ ಮಾರಾಟಕ್ಕಾಗಿಯೇ ಒಂದು ವರ್ಷ ಗಿಡಗಳನ್ನು ಕಿತ್ತು ಹಾಕದೆ ಬೆಳೆಸಲಾಗುತ್ತದೆ ಎಂದು ವಿವರಿಸುತ್ತಾರೆ ಲಕ್ಷ್ಮೀಪತಿ.                                                                                                            

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry