ಎಲೆಲೆ ಎಲೆ!

7

ಎಲೆಲೆ ಎಲೆ!

Published:
Updated:
ಎಲೆಲೆ ಎಲೆ!

`ಎಲೆ'. ಸಸ್ಯಗಳ ವಿಶಿಷ್ಟತೆಯ ಮೂಲ ಕಾರಣ ಅದೇ ಸಸ್ಯಗಳ ಬದುಕಿನ ಸಾರ ಸರ್ವಸ್ವ ಕೂಡ ಅದೇ. ಆದ್ದರಿಂದಲೇ ಪರ್ಣ ರಹಿತ ಸಸ್ಯ ಒಂದೂ ಧರೆಯಲ್ಲಿ ಇಲ್ಲ. ಎಲೆಗಳ ಅಸ್ತಿತ್ವದಿಂದಾಗಿಯೇ ಜೀವ ಜಗದಲ್ಲಿ ಸಸ್ಯಗಳಿಗೆ ತಮ್ಮ ಆಹಾರವನ್ನು ತಾವೇ ಉತ್ಪಾದಿಸಿಕೊಳ್ಳುವ ಸಾಮರ್ಥ್ಯ.

ಸಕಲ ಜೀವ ಸರಪಳಿಗಳ ಮೂಲ ಆಧಾರ ಸಸ್ಯಗಳೇ ಆಗಿರಲೂ ಎಲೆಗಳೇ ಕಾರಣ. ಆದ್ದರಿಂದಲೇ ಸ್ಪಷ್ಟವಾಗಿಯೇ ಎಲೆಗಳಿಲ್ಲದಿದ್ದರೆ ಸಸ್ಯಗಳಿಲ್ಲ; ಸಸ್ಯಗಳಿಲ್ಲದಿದ್ದರೆ ಮನುಷ್ಯರೂ ಸೇರಿದಂತೆ ಯಾವ ಪ್ರಾಣಿಯೂ ಇಲ್ಲ. ಅಷ್ಟೇ ಧರೆಗೆ ಹಸಿರುಡುಗೆ ತೊಡಿಸಿರುವ, `ಪಚ್ಚೆ ಸಾಮ್ರಾಜ್ಯ'ವನ್ನು ಸೃಜಿಸಿರುವ ವಿಶಿಷ್ಟ ದಿವ್ಯಸೃಷ್ಟಿ ಎಲೆಗಳೇ.

ವಿಸ್ಮಯ ಏನೆಂದರೆ ಎಲ್ಲ ಎಲೆಗಳದೂ ಒಂದೇ ಕಾರ್ಯಕ್ರಮವಾದರೂ ಅವುಗಳ ವೈವಿಧ್ಯತೆ ಮಾತ್ರ ಅಪರಿಮಿತ. ದ್ಯುತಿ ಸಂಶ್ಲೇಷಣೆಯಿಂದ ಆಹಾರ ಉತ್ಪಾದಿಸುವುದೇ ಸಕಲ ಎಲೆಗಳ ಕೆಲಸವಾದರೂ ಅವುಗಳ ಇತರ ಎಲ್ಲ ಗುಣ-ಲಕ್ಷಣಗಳೂ ಸಸ್ಯದಿಂದ ಸಸ್ಯಕ್ಕೆ ಭಿನ್ನ ಭಿನ್ನ. ಸಸ್ಯ ಪ್ರಭೇದಗಳು ಲಕ್ಷಾಂತರ ಸಂಖ್ಯೆಯಲ್ಲಿ ಇರುವಂತೆ ಎಲೆಗಳಲ್ಲೂ ಅಷ್ಟೇ ವಿವಿಧತೆ ಇದೆ (ಚಿತ್ರಗಳಲ್ಲಿ ಗಮನಿಸಿ). ಉದ್ದದಲ್ಲಿ, ಅಗಲದಲ್ಲಿ, ವಿಸ್ತಾರದಲ್ಲಿ ಆಕಾರದಲ್ಲಿ..... ಹಾಗೆ ಪ್ರತಿಯೊಂದರಲ್ಲೂ ಅವು ಬೇರೆ ಬೇರೆ.ಬಾಹ್ಯ ರೂಪದಲ್ಲೂ ಅಷ್ಟೆ: ಹೂಗಳಂತೆ, ಹೂದಳಗಳಂತೆ (ಚಿತ್ರ-5), ಹಕ್ಕಿಗರಿಗಳಂತೆ (ಚಿತ್ರ-6), ತಟ್ಟೆಗಳಂತೆ (ಚಿತ್ರ-3), ಸರ್ಪಗಳಂತೆ (ಚಿತ್ರ-2), ಕಾಂಡದಂತೆ (ಚಿತ್ರ-11), ದಾರದಂತೆ, ಪಟ್ಟಿಯಂತೆ, ಹಗ್ಗದಂತೆ, ಬಟ್ಟಲಿನಂತೆ, ಮುಳ್ಳುಗಳಂತೆ (ಚಿತ್ರ-10), ಚತ್ರಿ-ಚಾಮರಗಳಂತೆ..... ದಪ್ಪಗೆ, ತೆಳ್ಳಗೆ, ಒರಟಾಗಿ, ಮೃದುವಾಗಿ..... ಪರ್ಣ ವೈವಿಧ್ಯಕ್ಕೆ ಮಿತಿ ಎಲ್ಲಿ. ವಾಸನೆ-ರುಚಿಗಳಲ್ಲೂ, ಹಸಿರಿನದೇ ವಿಭಿನ್ನ ಛಾಯೆಗಳಲ್ಲೂ, ಹರಿತ್ತು ಇದ್ದೂ ಹರಿದ್ರೇತರ ವರ್ಣಗಳನ್ನು ಪ್ರದರ್ಶಿಸುತ್ತಲೂ (ಚಿತ್ರ 5, 9) ಎಲೆಗಳದು ಅಸೀಮ ವೈವಿಧ್ಯ.

ಏಕೆ ಹೀಗೆ? ಪರ್ಣಗಳಲ್ಲಿ ಇಷ್ಟೊಂದು ವಿವಿಧತೆಯ ಅಗತ್ಯ ಏನು?ಸಸ್ಯ ವಿಜ್ಞಾನಿಗಳು ವಿವರಿಸುವಂತೆ ಪರ್ಣಗಳ ಅಸದಳ ವೈವಿಧ್ಯಕ್ಕೆ ಮೂರು ಪ್ರಧಾನ ಕಾರಣಗಳಿವೆ: ಆಯಾ ಸಸ್ಯಗಳು ನೆಲೆಸಿರುವ ಪ್ರದೇಶದ ವಾಯುಗುಣ, ಸೂರ್ಯರಶ್ಮಿಯನ್ನು ಪಡೆಯಲು ಇತರ ಸಸ್ಯಗಳ ಜೊತೆ ಏರ್ಪಡುವ ಸ್ಪರ್ಧೆ ಮತ್ತು ಸ್ವರಕ್ಷಣೆಯ ಅವಶ್ಯಕತೆ” ಈ ಮೂರೂ ಅಂಶಗಳನ್ನು ಅವಲಂಬಿಸಿ ಪ್ರತಿ ಸಸ್ಯ ಪ್ರಭೇದಕ್ಕೂ ಅದರ ಮೂಲ ನೈಸರ್ಗಿಕ ನೆಲೆಗೆ ಸೂಕ್ತವಾಗುವಂಥ ಎಲೆಯನ್ನೂ ಪ್ರಕೃತಿ ರೂಪಿಸಿದೆ.

ಈ ಸಂಕೀರ್ಣ ವ್ಯವಸ್ಥೆಯನ್ನು ಸ್ಪಷ್ಟಗೊಳಿಸುವ ಕೆಲ ನಿದರ್ಶನಗಳನ್ನು ಗಮನಿಸಿ: ಮಳೆಕಾಡುಗಳ ಎಲ್ಲ ಗಿಡ-ಮರಗಳ ಎಲೆಗಳದು (ಚಿತ್ರ-1) ಸಾಮಾನ್ಯವಾಗಿ ಕಡಿವೆು ಅಗಲ, ಉದ್ದನ್ನ ತುರಿ. ಅಲ್ಲಿನ ನಿತ್ಯ ಮಳೆಯಲ್ಲಿ ಎಲೆಗಳ ಮೇಲೆ ಬೀಳುವ ನೀರು ಕ್ಷಿಪ್ರ ನೆಲಕ್ಕೆ ಸುರಿದುಹೋಗಲೆಂದು ಇಂಥ ರಚನೆ. ವೃಷ್ಟಿ ವನಗಳಲ್ಲೇ ನೆಲದಲ್ಲಿ, ವೃಕ್ಷಗಳ ನೆರಳಲ್ಲಿ ಬೆಳೆವ ಬಹಳ ಸಸ್ಯಗಳ ಎಲೆಗಳು ವಿಪರೀತ ಹರಿದ್ಭರಿತ.

ಅಲ್ಲಿ ಲಭಿಸುವ ಅತಿ ಕಡಿಮೆ ಬೆಳಕನ್ನೇ ಚೂರೂ ಬಿಡದೆ ಪಡೆಯಲು ಬಳಸಲು ಈ ವ್ಯವಸ್ಥೆ. ವಿಪರೀತ ಹಿಮಪಾತವಾಗುವ ಪ್ರದೇಶಗಳ ಗಿಡಗಳ-ವೃಕ್ಷಗಳ ಎಲೆಗಳದು ನೆಲದತ್ತ ಬಾಗಿದ ಜೋಡಣೆ (ಚಿತ್ರ-8) ಎಲೆಗಳ ಮೇಲೆ ಸ್ವಲ್ಪ ಸ್ವಲ್ಪ ಶೇಖರವಾದಾಗಲೇ ಹಿಮ ಕೆಳಕ್ಕೆ ಸುರಿದುಹೋಗಲು, ತುಂಬ ಸಂಗ್ರಹವಾಗಿ ರೆಂಬೆ-ಕೊಂಬೆಗಳು ಮುರಿಯದಿರಲೆಂದು ಇಂಥ ವಿನ್ಯಾಸ. ಮರುಭೂಮಿಗಳಲ್ಲಂತೂ ಸಿಕ್ಕಿದಾಗಲೇ ನೀರನ್ನು ಸಂಗ್ರಹಿಸಿಕೊಳ್ಳಲು ಹಾಗೆ ಸಂಗ್ರಹಿಸಿದ ನೀರು ಬೇಗ ಆವಿಯಾಗದಿರಲು ಒಪ್ಪವಾಗುವಂತೆ ಎಲೆಗಳ ನಿರ್ಮಿತಿ.

ಆದ್ದರಿಂದಲೇ ಕಳ್ಳಿಗಿಡಗಳು (ಚಿತ್ರ-11) ಕಾಂಡವನ್ನೇ ಎಲೆಯಾಗಿಸಿಕೊಂಡಿವೆ. ಇಲ್ಲವೇ ಸ್ಪಂಜಿನಂತಹ ರಚನೆಯ ದಪ್ಪನ್ನ ಎಲೆಗಳನ್ನು ಪಡೆದಿವೆ. ಸಾರಜನಕ, ರಂಜಕಗಳಂಥ ಅತ್ಯವಶ್ಯ ಪೋಷಕಾಂಶಗಳು ದೊರಕದ ಜೌಗು ನೆಲ ಹೂಳು ನೆಲ ಇತ್ಯಾದಿ ಪ್ರದೇಶಗಳಲ್ಲಿ ಬೆಳೆವ ಸಾವಿರಾರು ಸಸ್ಯ ಪ್ರಭೇದಗಳು ಕೀಟ-ಕಪ್ಪೆ-ಹಲ್ಲಿಗಳನ್ನು ಬೇಟೆಯಾಡುತ್ತವೆ.

ಅಂತಹ ಬಲಿಗಳನ್ನು ಆಕರ್ಷಿಸಿ, ಸೆರೆಹಿಡಿದು, ಜೀರ್ಣಿಸಿಕೊಳ್ಳಲು ತಕ್ಕಂತೆ ಅವುಗಳ ಎಲೆಗಳು ಕೊಳವೆಗಳಂತೆ (ಚಿತ್ರ-2), ಹೂಜಿಗಳಂತೆ, ಬಟ್ಟಲುಗಳಂತೆ, ಇಬ್ಬನಿ ಮುತ್ತಿದ ಹೂದಳ-ಎಸಳುಗಳಂತೆ ರಚಿಸಲ್ಪಟ್ಟಿವೆ. ಇನ್ನು ಕೆರೆ-ಸರೋವರಗಳ ಜಲಸಸ್ಯಗಳದು (ಚಿತ್ರ-3), ಸಾಗರ ಸಸ್ಯಗಳದು (ಚಿತ್ರ-12) ಆಯಾ ಪರಿಸರಕ್ಕೆ ತಕ್ಕಂತಹ ಭಿನ್ನ ಭಿನ್ನ ನಿರ್ಮಿತಿ.

ಬಹು ನಿಬಿಡ ಸಸ್ಯಾವಾರಗಳಲ್ಲಂತೂ ಅಡವಿ, ದಟ್ಟ ತೋಟ ಇತ್ಯಾದಿ-ನೀರು ಪೋಷಕಾಂಶಗಳಿಗೆ ಹಾಗೂ ಸೂರ್ಯರಶ್ಮಿಗಾಗಿ ಸಸ್ಯಗಳ ನಡುವೆ ಸ್ಪರ್ಧೆ ನಿರಂತರ. ಈ ಕಾರಣದಿಂದಲೇ ಅಡವಿ ಛಾವಣಿ ಮಟ್ಟಸವಾಗಿಲ್ಲ.

ಸ್ಥಳ ಸಿಕ್ಕಲ್ಲೆಲ್ಲ ಎಲೆಗಳನ್ನು ನುಗ್ಗಿಸಿ ಸೂರ್ಯರಶ್ಮಿ ಸಂಗ್ರಹಿಸಿ ಗಿಡಗಳು ವೃಕ್ಷಗಳಾಗಿ ಇತರರಿಗಿಂತ ಎತ್ತರಕ್ಕೇರಲು ಯತ್ನಿಸುತ್ತವೆ. ಮೇಲ್ಮುಖನಾದ ಚೂಪಾದ ಎಲೆಗಳು ವೃಕ್ಷಗಳ ಕ್ಷಿಪ್ರ ಉನ್ನತಿಗೆ ನೆರವು ನೀಡಿದರೆ ಅಗಲವಾದ ವಿಶಾಲ ಎಲೆಗಳು ಸುತ್ತಲಿನ ಇತರ ಸಸ್ಯಗಳನ್ನು ನೆರಳಿಗೆ ತಳ್ಳಿ ಅವುಗಳ ನೇರದ ಸೂರ್ಯನ ಬೆಳಕನ್ನೂ ತಾವೇ ಸಂಗ್ರಹಿಸುತ್ತವೆ. ಪರ್ಣ ವೈವಿಧ್ಯಕ್ಕೆ ಇಂಥ ಸ್ಪರ್ಧೆಗಳೂ ಮುಖ್ಯ ಕಾರಣ.

ಎಲೆಗಳಷ್ಟು `ಜನಪ್ರಿಯ' ಆಹಾರ ಬೇರಾವುದೂ ಇಲ್ಲ. ಹೇರಳ ವಿಧಗಳ ಮೇಯುವ ಪ್ರಾಣಿಗಳಿಗೆ (ಚಿತ್ರ-13), ಅಸಂಖ್ಯ ಕೀಟಗಳಿಗೆ, ಕೀಟಗಳ ಮರಿಹುಳುಗಳಿಗೆ, ಬೂಷ್ಟು ಶಿಲೀಂಧ್ರಗಳಿಗೆ ಎಲೆಗಳೇ ಆಹಾರ ಸರ್ವಸ್ವ.

ಹಾಗಾಗಿ ಹುಲ್ಲು ಗಿಡಗಳಿಂದ ಮಹಾವೃಕ್ಷಗಳವರೆಗೆ ಎಲ್ಲ ಸಸ್ಯಗಳೂ ತಮ್ಮ ಎಲೆಗಳನ್ನು ಉಳಿಸಿಕೊಳ್ಳಲು ತನ್ಮೂಲಕ ಸ್ವರಕ್ಷಣೆ ಮಾಡಿಕೊಳ್ಳಲು ಎಲೆಗಳ ಮೂಲಕವೇ ನಾನಾ ತಂತ್ರ ರೂಪಿಸಿಕೊಂಡಿವೆ. ಕೆಲ ಹುಲ್ಲು ಸಸ್ಯಗಳ ಎಲೆಗಳ ಅಂಚುಗಳು (ಚಿತ್ರ-4) ಮೇಯಲು ಬರುವ ಪ್ರಾಣಿಗಳ ನಾಲಿಗೆ ಸೀಳುವಂತೆ ಹರಿತವಾಗಿವೆ.

ಹುಳಿಯ, ಕಹಿಯ, ವಾಕರಿಕೆ ತರುವ ರುಚಿ ತುಂಬಿದ ಎಲೆಗಳಿವೆ. ಮುಳ್ಳುಗಳಂತೆ ಹರಡಿದ, ಮುಟ್ಟಿದರೇ ತುರಿಕೆ ತರುವ ಎಲೆಗಳಿವೆ. ಮುಟ್ಟಿದೊಡನೆ ಅಂಟು ರಸ-ದ್ರವ ಸ್ರವಿಸುವ ಎಲೆಗಳಿವೆ. ಸ್ವಲ್ಪ ಮೇಯ್ದ್‌ಡನೆ ಮತ್ತು ಬರಿಸುವ ಮಾದಕ ದ್ರವ್ಯ ತುಂಬಿದ ಎಲೆಗಳಿವೆ; ಜ್ಞಾನ ತಪ್ಪಿಸುವ, ಪಾರ್ಶ್ವವಾಯು ತರಿಸುವ (ಚಿತ್ರ-7) ಪ್ರಾಣವನ್ನೇ ತೆಗೆವಂಥ ಉಗ್ರ ವಿಷ ತುಂಬಿದ ಎಲೆಗಳಿವೆ ಕೂಡ.

ಇಲ್ಲೊಂದು ಮುಖ್ಯ ವಿಷಯ: ಪರ್ಣಗಳ ಅಪಾರ ವಿವಿಧತೆಗೆ ವಾಯುಗುಣ, ಸ್ಪರ್ಧೆ ಮತ್ತು ಸ್ವರಕ್ಷಣ ಈ ಮೂರೂ ಪ್ರಧಾನ ಕಾರಣಗಳು ಅಷ್ಟೆ. ಇವಲ್ಲದೇ ಇನ್ನೂ ಹಲವಾರು ಸೂಕ್ಷ್ಮ ಕಾರಣಗಳು ಇರುವುದು ಸ್ಪಷ್ಟ. ಆದ್ದರಿಂದಲೇ ಈ ಮೂರೂ ಅಂಶಗಳು ಸಂಪೂರ್ಣ ಏಕರೂಪದಲ್ಲಿರುವ ನೆಲೆಗಳಲ್ಲೂ ಅಲ್ಲಿನ ಎಲ್ಲ ಸಸ್ಯಗಳ ಎಲೆಗಳೂ ಒಂದೇ ವಿಧದಲ್ಲಿಲ್ಲ.

ವಾಸ್ತವ ಏನೆಂದರೆ ಪರ್ಣಗಳ ಅಸೀಮ ವಿವಿಧತೆಯ ಪೂರ್ಣ ರಹಸ್ಯ ಇನ್ನೂ ತಿಳಿದಿಲ್ಲ. ನಿಸರ್ಗದ ಸೃಷ್ಟಿ ವಿಸ್ಮಯಗಳನ್ನು ಸಂಪೂರ್ಣ ಪತ್ತೆ ಹಚ್ಚುವುದು ಸಾಧ್ಯವೂ ಇಲ್ಲ. ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry