ಸೋಮವಾರ, ಅಕ್ಟೋಬರ್ 21, 2019
24 °C

ಎಲೆಲೆ ರಸ್ತೆ ಏನೀ ಅವಸ್ಥೆ?

Published:
Updated:
ಎಲೆಲೆ ರಸ್ತೆ ಏನೀ ಅವಸ್ಥೆ?

ಬೆಂಗಳೂರು: ತೀವ್ರ ಹದಗೆಟ್ಟಿರುವ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ ಮುಖ್ಯರಸ್ತೆ ಸದ್ಯದಲ್ಲೇ ಅಭಿವೃದ್ಧಿಯಾಗುವ ಲಕ್ಷಣ ಕಾಣುತ್ತಿದೆ. ವಿ.ವಿ ಆವರಣದ ರಸ್ತೆಗಳ ಉನ್ನತೀಕರಣ, ಸೈಕಲ್ ಪಥ, ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗೆ ರಾಜ್ಯ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.ಬಿಬಿಎಂಪಿಯು ಸುಮಾರು 11.99 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಿದೆ. ಮೈಸೂರು ರಸ್ತೆಯಿಂದ (ವಿ.ವಿಯ ಪ್ರವೇಶ ದ್ವಾರ) ವರ್ತುಲ ರಸ್ತೆ ಸಂಪರ್ಕಿಸುವ 2.42 ಕಿ.ಮೀ. ಉದ್ದದ ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಲಿದೆ. ಹಾಗೆಯೇ 1.32 ಕಿ.ಮೀ ಉದ್ದದ ಮಾರ್ಗದಲ್ಲಿ ಒಟ್ಟು 14 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ.`ಮೈಸೂರು ರಸ್ತೆಯಿಂದ ವರ್ತುಲ ರಸ್ತೆ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದ್ದು, ಜಲ್ಲಿಕಲ್ಲುಗಳು ಕಿತ್ತುಬಂದಿವೆ. ಹಾಗಾಗಿ ಸಂಪೂರ್ಣ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಬೇಕಿದೆ. ರಸ್ತೆಯ ಎರಡೂ ಭಾಗಗಳಲ್ಲಿ ಕಾಂಕ್ರಿಟ್ ಚರಂಡಿ ನಿರ್ಮಿಸಲಾಗುವುದು. ಹಾಗೆಯೇ ಎರಡೂ ಕಡೆಗಳಲ್ಲಿ ಸೈಕಲ್ ಪಥ ನಿರ್ಮಾಣ ಮಾಡಲಾಗುವುದು~ ಎಂದು ಪಾಲಿಕೆಯ ಬೃಹತ್ ರಸ್ತೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.`ಆಡಳಿತಾಧಿಕಾರಿಗಳ ಕಚೇರಿಯಿಂದ ನಾಗರಬಾವಿ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ 2.54 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ಒಟ್ಟು 7 ಮೀಟರ್ ಅಗಲದ ರಸ್ತೆಯನ್ನು ದುರಸ್ತಿಪಡಿಸಿ ಡಾಂಬರು ಹಾಕಲಾಗುವುದು. ಮರಿಯಪ್ಪನ ಪಾಳ್ಯ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು~ ಎಂದರು.`ಜ್ಞಾನಭಾರತಿ ಆವರಣದಲ್ಲಿ ಒಟ್ಟು 5.46 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ನಾಲ್ಕು ಬಸ್ ನಿಲುಗಡೆ ತಾಣ ನಿರ್ಮಿಸಲಾಗುವುದು. ಅಗತ್ಯವಿರುವ ಕಡೆಗಳಲ್ಲಿ ಒಟ್ಟು 40 ಕಾಂಕ್ರಿಟ್ ಮೋರಿ ನಿರ್ಮಾಣ ಮಾಡಲಾಗುವುದು. ಎಂಟು ಕಡೆಗಳಲ್ಲಿ ವೈಜ್ಞಾನಿಕವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗುವುದು~ ಎಂದು ಹೇಳಿದರು.`ಒಟ್ಟು 11.99 ಕೋಟಿ ರೂಪಾಯಿ ಅಂದಾಜು ವೆಚ್ಚದ ಯೋಜನೆ ರೂಪಿಸಲಾಗಿದೆ. ಇದು ದುಬಾರಿ ಎನಿಸಿದರೂ ದೀರ್ಘಕಾಲ ಬಾಳಿಕೆ ಬರಲಿದೆ. ಹಾಲಿ ರಸ್ತೆ ಕಳಪೆಯಾಗಿದೆ. ಜಲ್ಲಿ ಕಲ್ಲುಗಳ ಮೇಲೆ ಡಾಂಬರು ಹಾಕಲಾಗಿದೆಯೇ ಹೊರತು ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿಲ್ಲ. ಹಾಗಾಗಿ ಹೊಸ ರಸ್ತೆಯನ್ನೇ ನಿರ್ಮಾಣ ಮಾಡಬೇಕಿದೆ~ ಎಂದು ಅವರು ಹೇಳಿದರು.15 ದಿನದಲ್ಲಿ ಕಾಮಗಾರಿ ಆರಂಭ: `ಈ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ 15 ದಿನಗಳಲ್ಲಿ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಯು (ಕೆಆರ್‌ಐಡಿಎಲ್) ಕಾಮಗಾರಿ ಕೈಗೊಳ್ಳಲಿದ್ದು, ಒಂಬತ್ತು ತಿಂಗಳಲ್ಲಿ ಪೂರ್ಣಗೊಳ್ಳಲಿದೆ~ ಎಂದು ಮಾಹಿತಿ ನೀಡಿದರು.ಸಂತಸ: ಜ್ಞಾನಭಾರತಿ ಆವರಣದ ರಸ್ತೆಗಳ ಉನ್ನತೀಕರಣ ಕಾಮಗಾರಿಗೆ ಸಂಬಂಧಪಟ್ಟ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ಬೆಂಗಳೂರು ವಿ.ವಿ ಕುಲಪತಿ ಡಾ.ಎನ್. ಪ್ರಭುದೇವ್ ಸಂತಸ ವ್ಯಕ್ತಪಡಿಸಿದ್ದಾರೆ.`ಜ್ಞಾನಭಾರತಿ ಆವರಣದ ಪರಿಸರಕ್ಕೆ ಧಕ್ಕೆಯಾಗದಂತೆ, ಗಿಡ- ಮರಗಳನ್ನು ಕಡಿಯದೆ ಪರಿಸರಸ್ನೇಹಿ ವಿಧಾನದ ಮೂಲಕ ಕಾಮಗಾರಿ ಕೈಗೊಳ್ಳುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿದೆ. ವಿ.ವಿಯ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆಗಾಗಿ ಕೈಗೊಳ್ಳುವ ಕ್ರಿಯಾತ್ಮಕ ಯೋಜನೆ ಹಾಗೂ ಯೋಚನೆಗಳನ್ನು ಸರ್ಕಾರ ಮತ್ತು ಸಾರ್ವಜನಿಕರು ಬೆಂಬಲಿಸಬೇಕು~ ಎಂದು ಪ್ರಭುದೇವ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Post Comments (+)