ಭಾನುವಾರ, ಜೂನ್ 20, 2021
20 °C

ಎಲೆ ಮರೆಯಲ್ಲಿ ಐತಿಹಾಸಿಕ ಸ್ಥಳಗಳು

ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳಿಗೆ ಕೊರತೆ ಇಲ್ಲ. ಇದಕ್ಕೆ ಒತ್ತು ನೀಡಿರುವ ಸಾಕಷ್ಟು ಐತಿಹಾಸಿಕ ಸ್ಥಳಗಳನ್ನು ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಕಾಣ ಸಿಗುತ್ತವೆ.ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ ಸ್ಥಳಗಳು ಹೆಚ್ಚಿನ ಪ್ರಮಾಣದಲ್ಲಿ ದೇವಸಮುದ್ರ ಹೋಬಳಿಯಲ್ಲಿ ಇವೆ. ಇವುಗಳಲ್ಲಿ ಪ್ರಮುಖ ಎಂದರೆ ಅಶೋಕನ ಶಾಸನಗಳು, ಕಾಡು ಸಿದ್ದಾಪುರದಲ್ಲಿನ ಅಕ್ಕತಂಗಿ ಗುಡಿಗಳು, ಕಾಡುಸಿದ್ದಾಪುರದಲ್ಲಿ ಒಂದೇ ಸ್ಥಳದಲ್ಲಿ ಇಡೀ ಗ್ರಾಮಸ್ಥರು ಶವಸಂಸ್ಕಾರ ಮಾಡುವ ಅಪರೂಪ ಪದ್ಧತಿ.ಬೆಂಗಳೂರು-ಬಳ್ಳಾರಿ ರಾಜ್ಯಹೆದ್ದಾರಿಯಲ್ಲಿನ ನಾಗಸಮುದ್ರ ಕ್ರಾಸ್ ನಂತರ ಸಿಗುವುದೇ ಅಶೋಕ ಸಿದ್ದಾಪುರ ಕ್ರಾಸ್. ಹೆದ್ದಾರಿಯಿಂದ 8 ಕಿ.ಮೀ. ದೂರ ಸಾಗಿದರೆ ರಸ್ತೆ ಬಲಭಾಗದಲ್ಲಿ ಅಶೋಕ ಶಾಸನ ಇರುವ ಕಲ್ಲಿನ ಕಟ್ಟಡವನ್ನು ಕಾಣಬಹುದಾಗಿದೆ. ಕ್ರಿ.ಪೂ. 3ನೇ ಶತಮಾನದಲ್ಲಿ ಅಶೋಕ ಮಹಾರಾಜ ಆಡಳಿತ ಅವಧಿಯಲ್ಲಿ ಈ ಸ್ಥಳದಲ್ಲಿ `ಇಸಿಲಾ~ ಪಟ್ಟಣ ಇತ್ತು ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಸರ್ ಮಾರ್ಟಿಮರ್ ವೀಲರ್, ಎಚ್.ಎಂ. ಕೃಷ್ಣ ಮುಂತಾದ ಇತಿಹಾಸಕಾರರು ನಡೆಸಿದ ಉತ್ಖನನ ವೇಳೆ ಈ ಸ್ಥಳದಲ್ಲಿ 2500 ವರ್ಷದ ಹಿಂದೆ ಇದ್ದ ಜನವಸತಿ ಪ್ರದೇಶ ಶಿಷ್ಟ ಸಂಸ್ಕೃತಿ ಹೊಂದಿತ್ತು ಎಂದು ತಿಳಿದುಬಂದಿದೆ.ಅಶೋಕ ಮಹಾರಾಜ ಅವಧಿಯಲ್ಲಿ ಧರ್ಮ ಪ್ರಚಾರ ವೇಳೆ ಬೃಹತ್ ಕಲ್ಲುಬಂಡೆ ಮೇಲೆ ಶಾಸನ ಕೆತ್ತಲಾಗಿದೆ. ಗಾಳಿ, ಮಳೆ ಪರಿಣಾಮ ಅವನತಿ ಹಾದಿಯಲ್ಲಿದ್ದ ಈ ಶಾಸನಕ್ಕೆ ಈಚೆಗೆ ಪ್ರವಾಸೋದ್ಯಮ ಇಲಾಖೆ ಕಲ್ಲಿನ ಕಟ್ಟಡ ನಿರ್ಮಿಸಿದೆ. ಆದರೆ, ಕಟ್ಟಡ ಆವರಣದಲ್ಲಿ ಮೂಲಸೌಕರ್ಯ ಸೂಕ್ತವಾಗಿಲ್ಲ.ಹೊರರಾಜ್ಯ ಹಾಗೂ ಬೌದ್ಧ ಧರ್ಮ ಅನುಯಾಯಿ ದೇಶಗಳ ಪ್ರವಾಸಿಗಳು ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಬಂದು ಹೋಗುತ್ತಿದ್ದು, ಸೂಕ್ತ ಪ್ರಚಾರ, ಆವರಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ವ್ಯವಸ್ಥೆ ಇಲ್ಲದಾಗಿದೆ ಎಂಬ ದೂರು ಕೇಳಿಬರುತ್ತಿವೆ.`ಇಸಿಲಾ~ ಜನವಸತಿ ಪ್ರದೇಶದಲ್ಲಿ ಆರಂಭದಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಾಗಿದ್ದು, ಇವರ ಅವನತಿ ನಂತರ ಇಲ್ಲಿ ಜೈನಧರ್ಮ ಪ್ರವರ್ಧಮಾನಕ್ಕೆ ಬಂದಿತು ಎಂದು ಅಶೋಕ ಶಾಸನಕ್ಕೆ ಸಮೀಪವಿರುವ ಅಕ್ಕತಂಗಿ ಗುಡಿ ಬಳಿ ಇರುವ ನಿಷಧಿ ಕಲ್ಲುಗಳು, ಜೈನಬಸದಿಗಳು, ಸಮೀಪದ ಬೆಟ್ಟದ ಮೇಲಿರುವ ತ್ರಿಶಂಕೇಶ್ವರ ದೇವಾಲಯ, ಭಾಗ್ಯಲಕ್ಷ್ಮೀ ದೇವಸ್ಥಾನ ಸಾಕ್ಷಿಯಾಗಿದೆ.ಜೈನಧರ್ಮಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು ದೇವಸ್ಥಾನಗಳನ್ನು ನಿರ್ಮಿಸಲು ಉದ್ದೇಶಿಸಿ ಕಾರ್ಯ ಆರಂಭಿಸಿದರಂತೆ. ಈ ಸಮಯದಲ್ಲಿ ಅಕ್ಕ ನನ್ನ ದೇವಸ್ಥಾನ ಚೆನ್ನಾಗಿರಬೇಕು ಎಂಬ ಆಸೆಯಿಂದ ತಂಗಿಯನ್ನು ತವರುಮನೆಗೆ ಕಳುಹಿಸಿ ನಿರ್ಮಾಣ ಆರಂಭಿಸಿದಾಗ ಈ ಸಂಗತಿ ತಿಳಿದು ತಂಗಿ ಅಕ್ಕನ ದೇವಸ್ಥಾನ ಪಕ್ಕದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರೂ ಅದನ್ನು ಸ್ಥಗಿತಗೊಳಿಸಿ ಸುಮಾರು 1.5. ಕಿ.ಮೀ. ದೂರದಲ್ಲಿ ದೇವಸ್ಥಾನ ನಿರ್ಮಿಸಿದಳು ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ ಎಂದು ಈ ಬಗ್ಗೆ ಉತ್ಖನ ಮಾಡಿರುವ ಸಾಹಿತಿ ಮರಿಕುಂಟೆ ತಿಪ್ಪೇಸ್ವಾಮಿ ಹೇಳುತ್ತಾರೆ.ಬಹುಶಃ ಈ ದೇವಸ್ಥಾನಗಳನ್ನು 11ನೇ ಶತಮಾನದಲ್ಲಿ ಹೊಯ್ಸಳರ ಅವಧಿಯ ಶಿವೋದನ ರಾಜ ಅಡಳಿತದಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನಗಳ ಗರ್ಭಗುಡಿಗಳಲ್ಲಿ ಯಾವುದೇ ದೇವರ ಮೂರ್ತಿಗಳು ಇಲ್ಲ. ರಕ್ಷಣೆ ಕೊರತೆ ಎದುರಿಸುತ್ತಿರುವ ಆಕರ್ಷಕ ಕೆತ್ತನೆ ಹೊಂದಿರುವ ಈ ಎರಡೂ ದೇವಸ್ಥಾನಗಳು ಅವಸಾನ ಹಂತದಲ್ಲಿವೆ ಎಂದು ಹೇಳುತ್ತಾರೆ ಮರಿಕುಂಟೆ ಅವರು.ಕಾಡುಸಿದ್ದಾಪುರದಲ್ಲಿ ಇರುವ ಮತ್ತೊಂದು ವಿಸ್ಮಯ ಎಂದರೆ ಸಿದ್ದೇಶ್ವರ ಸ್ವಾಮಿ ಆವರಣದಲ್ಲಿ ಇರುವ ಒಂದೇ ಗುಂಡಿಯಲ್ಲಿ ಗ್ರಾಮದ ಯಾರೇ ಮೃತಪಟ್ಟರೂ ಶವಸಂಸ್ಕಾರ ಮಾಡಲಾಗುತ್ತಿದೆ. ಇದಕ್ಕೆ ಕೆಲನಿಯಮ ವಿಧಿಸಲಾಗಿದೆ. ಇಂತಹ ಭಿನ್ನ ಸಂಸ್ಕೃತಿ ಬೇರೆ ಕಡೆ ಇರುವ ಸಾಧ್ಯತೆ ಕ್ಷೀಣ. ಇದರ ಸಮೀಪದಲ್ಲಿ ರೊಪ್ಪ ಗ್ರಾಮದಲ್ಲಿ ಹತ್ತಾರು ಶಿಲಾಯುಗ ಕಾಲದ ಸಮಾಧಿಗಳನ್ನು ನೋಡಬಹುದಾಗಿದೆ. ಇಂತಹ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಕೇವಲ ಐದು ಕಿಮೀ ವ್ಯಾಪ್ತಿಯಲ್ಲಿ ನೋಡಬಹುದಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆ ಪ್ರಚಾರ ಕೈಗೊಳ್ಳುವ ಜತೆಗೆ, ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.