ಭಾನುವಾರ, ಜನವರಿ 26, 2020
22 °C

ಎಲ್ಲರಂತವನಲ್ಲ ಈ ಪ್ರಸಾದ್...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಇದು ಸಿನಿಮಾ ಅಲ್ಲ. ಇದು ಜೀವನ. ನಾನು ಈವರೆಗೆ ನಟಿಸಿರುವ ಸುಮಾರು 150 ಸಿನಿಮಾಗಳ ಪೈಕಿ ಟಾಪ್-5 ಚಿತ್ರಗಳಲ್ಲಿ ಇದೂ ಒಂದು~. ನಾಯಕ ನಟ ಅರ್ಜುನ್ ಸರ್ಜಾ ಮಾತುಗಳಲ್ಲಿ ಭಾವುಕತೆಯಿತ್ತು. `ಪ್ರಸಾದ್~ ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಂದರ್ಭದಲ್ಲಿ, ಸಿನಿಮಾದ ವಿಶೇಷಗಳ ಬಗ್ಗೆ ಮಾತನಾಡುತ್ತಿದ್ದ ಅವರು, `ಇದು ಹೃದಯಕ್ಕೆ ಹತ್ತಿರವಾದ ಸಿನಿಮಾ~ ಎಂದು ಬಣ್ಣಿಸಿದರು.ಬಾಲಕನೊಬ್ಬ ತನ್ನ ಅಂಗವೈಕಲ್ಯವನ್ನು ದಾಟಿ ಉನ್ನತ ಸಾಧನೆ ಮಾಡುವುದು `ಪ್ರಸಾದ್~ ಚಿತ್ರದ ಕಥೆ. ಈ ಬಾಲಕನ ತಂದೆಯಾಗಿ ಅರ್ಜುನ್ ನಟಿಸಿದ್ದಾರೆ. ಚಿತ್ರದಲ್ಲಿ ಅವರದು ಮಧ್ಯಮ ವರ್ಗದ ಮೆಕಾನಿಕ್ ಪಾತ್ರವಂತೆ. ಅವರ ಪತ್ನಿಯಾಗಿ ರೂಪದರ್ಶಿ ಮಾಧುರಿ ಭಟ್ಟಾಚಾರ್ಯ ನಟಿಸಿದ್ದಾರೆ.ಉದ್ಯಮಿ ಅಶೋಕ್ ಖೇಣಿ `ಪ್ರಸಾದ್~ ಚಿತ್ರದ ನಿರ್ಮಾಪಕರು. ಕನ್ನಡದಲ್ಲಿದು ಅವರ ಮೊದಲ ಸಿನಿಮಾ. ಮೊದಲ ಪ್ರಯತ್ನಕ್ಕೆ ಅವರು ಹೆಸರಾಂತ ತಂಡವನ್ನೇ ಕಲೆಹಾಕಿರುವುದು ವಿಶೇಷ. ನಾಯಕನಟ ಅರ್ಜುನ್ ಸರ್ಜಾ, ನಾಯಕಿ ಮಾಧುರಿ ಭಟ್ಟಾಚಾರ್ಯ, ಸಂಗೀತ ನಿರ್ದೇಶಕ ಇಳಯರಾಜಾ, ನೃತ್ಯ ಸಂಯೋಜಕ ಶಾಮ್ ಅಕ್ದರ್ ಎಲ್ಲರೂ ತಂತಮ್ಮ ಕ್ಷೇತ್ರಗಳಲ್ಲಿ ಪ್ರಸಿದ್ಧರಾದವರೇ.`ಕನ್ನಡದ ಬಗ್ಗೆ ನನಗೆ ಹೆಮ್ಮೆ. ಕನ್ನಡ ಚಿತ್ರರಂಗವನ್ನು ಭಾರತದಲ್ಲಿಯೇ ನಂಬರ್ 1 ಮಾಡುವ ನಿಟ್ಟಿನಲ್ಲಿ ನಾನು ಪ್ರಯತ್ನಿಸುತ್ತಿದ್ದೇನೆ~ ಎಂದು ಅಶೋಕ್ ಖೇಣಿ ತಮ್ಮ ಸಿನಿಮಾ ನಿರ್ಮಾಣದ ಹಿಂದಿನ ಉದ್ದೇಶವನ್ನು ಬಹಿರಂಗಪಡಿಸಿದರು.ಇಳಯರಾಜಾ ಕೂಡ `ಪ್ರಸಾದ್~ ಬಗ್ಗೆ ಭಾವುಕರಾಗಿ ಮಾತನಾಡಿದರು. `ಈ ಸಿನಿಮಾ ಕಲಾದೇವಿ ಸರಸ್ವತಿಗೆ ಕಲೆಯ ರೂಪದಲ್ಲಿ ನೈವೇದ್ಯದ ಅರ್ಪಣೆ~ ಎಂದರು. ಅಂದಹಾಗೆ, ಈ ಸಿನಿಮಾ ಪೂರ್ತಿಯಾದ ನಂತರ ಇಳಯರಾಜಾ ಸಂಗೀತ ನೀಡಿದರಂತೆ. ಮೊದಲಿಗೆ ಸಂಗೀತ ನೀಡಲಿಕ್ಕೆ ಹಿಂಜರಿದಿದ್ದ ಅವರು, ಸಿನಿಮಾ ನೋಡಿದ ಮೇಲೆ ತಮ್ಮ ನಿರ್ಧಾರ ಬದಲಿಸಿದರಂತೆ.ಧ್ವನಿಮುದ್ರಿಕೆ ಬಿಡುಗಡೆಗೆ ಮುನ್ನಾ ದಿನವಷ್ಟೇ ನಿರ್ಮಾಪಕರು ತಮ್ಮ ಬಂಧುಬಳಗಕ್ಕೆ ಚಿತ್ರ ತೋರಿಸಿದ್ದರು. ಸಿನಿಮಾ ನೋಡಿದ್ದ ಅಂಬರೀಷ್- `ಈ ಚಿತ್ರ ಕಣ್ಣಿನಲ್ಲಿ ನೀರಿನ ಬದಲು ರಕ್ತವನ್ನು ತರಿಸುತ್ತೆ~ ಎಂದರು. `ಪ್ರಸಾದ್~ ಮೂಲಕ ಆಕ್ಷನ್ ಹೀರೊ ಇಮೇಜ್‌ಗೆ ಹೊರತಾದ ಅರ್ಜುನ್ ಸರ್ಜಾ ಪ್ರತಿಭೆ ಅನಾವರಣಗೊಂಡಿದೆ ಎಂದು ಅಂಬರೀಷ್ ಹೇಳಿದರು.`ಸಿನಿಮಾದಿಂದ ದುಡ್ಡು ಬರುತ್ತೆ. ಹೋಗುತ್ತೆ. ಆದರೆ, ಪ್ರಸಾದ್ ಸದಾ ತೆರೆಯ ಮೇಲೆ ಇರುತ್ತಾನೆ~ ಎಂದು ಚಿತ್ರತಂಡದ ಬೆನ್ನುತಟ್ಟಿದ್ದು ಹಿರಿಯ ನಟ-ನಿರ್ಮಾಪಕ ದ್ವಾರಕೀಶ್.ಸುಮಲತಾ ಅಂಬರೀಷ್, ಸುದೀಪ್, ಮಾಧುರಿ ಭಟ್ಟಾಚಾರ್ಯ, ಲಹರಿ ವೇಲು, ಸುಧಾರಾಣಿ, ಚಿತ್ರದ ನಿರ್ದೇಶಕ ಮನೋಜ್ ಸತಿ ವೇದಿಕೆಯ ಮೇಲಿದ್ದರು.ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಕಲ್ಪ್ ಎನ್ನುವ ಬಾಲಕನೂ ವೇದಿಕೆಯ ಮೇಲಿದ್ದ. ಎಲ್ಲರ ಪ್ರಶಂಸೆಗೆ ಪಾತ್ರನಾದ ಆ ಹುಡುಗನಿಗೆ ಮಾತು ಬಾರದು, ದನಿ ಕೇಳಿಸದು. `ಖೇಣಿ ಅವರು ಈ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಸಂಕಲ್ಪ್ ಸದ್ಯದಲ್ಲಿಯೇ ಮಾತನಾಡಲಿದ್ದಾನೆ~ ಎಂದು ಅರ್ಜುನ್ ಹೇಳಿದರು.

ಪ್ರತಿಕ್ರಿಯಿಸಿ (+)