ಎಲ್ಲರಂಥವರಲ್ಲ ಈ ಮೇಷ್ಟ್ರು...

7

ಎಲ್ಲರಂಥವರಲ್ಲ ಈ ಮೇಷ್ಟ್ರು...

Published:
Updated:
ಎಲ್ಲರಂಥವರಲ್ಲ ಈ ಮೇಷ್ಟ್ರು...

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿಗೆ ಹೋಗಿ `ರಘುನಾಥ ಮೇಷ್ಟ್ರು~ ಎಂದ ಕೂಡಲೇ ಹಳ್ಳಿಗರ ಕಣ್ಣಲ್ಲಿ ಅಭಿಮಾನ, ಗೌರವ, ಮೆಚ್ಚುಗೆಯ ಬೆಳಕು ಹೊಮ್ಮುತ್ತದೆ. `ಅವರನ್ನು ಹುಡುಕಿ ಬಂದವರೂ ಕೂಡ ಅಷ್ಟೇ ಗೌರವಕ್ಕೆ ಪಾತ್ರರು~ ಎಂಬ ಅಪರೂಪದ ಭಾವನೆಯನ್ನು ಎದುರುಗೊಳ್ಳುವುದು ಕೂಡ ಒಂದು ಬೆಚ್ಚನೆ ಅನುಭವ.ಕನ್ನಡ-ತೆಲುಗು ಸಾಹಿತ್ಯ ಪರಿಸರದಲ್ಲಿ ಸ.ರಘುನಾಥ ಕವಿ, ಕತೆಗಾರ, ಅನುವಾದಕ, ಅಂಕಣಕಾರರಾಗಿ ಪರಿಚಿತರು. ಆದರೆ ದಿನವೂ ಕನ್ನಡ-ತೆಲುಗು ಎರಡನ್ನೂ ಸೇರಿಸಿ ಮಾತನಾಡುವ ಹಳ್ಳಿಗರಿಗೆ ಇವು ಹೆಚ್ಚು ಗೊತ್ತಿಲ್ಲ. ಕಶೆಟ್ಟಿಪಲ್ಲಿಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾಗಿರುವ ರಘುನಾಥರು ಕೇವಲ ಅಷ್ಟೇ ಅಲ್ಲ.34 ವರ್ಷಗಳ ಅವರ ವೃತ್ತಿಯಾಚೆಗೆ, ಶಾಲೆಯ ಸುತ್ತಮುತ್ತಲ ಹಳ್ಳಿಗರಿಗೆ ಹಳ್ಳಿವೈದ್ಯ, ಪೇಟೆಯ ಡಾಕ್ಟ್ರು, ದಂಪತಿಗಳಿಗೆ ಆಪ್ತ ಸಮಾಲೋಚಕ, ಹಳ್ಳಿಗಳ ತರುಣತರುಣಿಯರಿಗೆ ಅಣ್ಣ, ಮುದುಕರ ಆಪ್ತಮಿತ್ರ, ಅನಾಥ ಮಕ್ಕಳ ರಕ್ಷಕ, ಪೋಷಕ... ಹೀಗೆ ಬಹುಪಾತ್ರಗಳ ಜವಾಬ್ದಾರಿಯನ್ನು ಹೊತ್ತ ಮತ್ತೊಬ್ಬ, ಎಲ್ಲ ಅರ್ಥದಲ್ಲೂ ವಿಶೇಷವಾದ ವ್ಯಕ್ತಿಯೊಬ್ಬರು ಅಲ್ಲಿ ಕಂಗೊಳಿಸುತ್ತಾರೆ. ಹೀಗಾಗಿ ಕಶೆಟ್ಟಿಯಪಲ್ಲಿಯ ಶಾಲೆಯೊಂದು ಮಿನಿ ಆಸ್ಪತ್ರೆ, ಸಾಂತ್ವನ ಕೇಂದ್ರದಂತೆ ಕಾಣುತ್ತದೆ. ಲೇಖಕರಾಗಿ ರಘುನಾಥರನ್ನು ಬಲ್ಲ ಬಹಳ ಮಂದಿಗೆ ಪ್ರೀತಿ-ಕರುಣೆಯನ್ನು ಆಧರಿಸಿದ ಅವರ ಈ ಬಹುಪಾತ್ರ ನಿರ್ವಹಣೆ ಅಷ್ಟೇನೂ ಪರಿಚಿತವಾದುದಲ್ಲ.ನಮ್ಮ ಮಕ್ಕಳು

ಈ ಮೇಷ್ಟ್ರು ಅಜ್ಜ-ಅಜ್ಜಿಯ ನೆರಳಲ್ಲಿ ಬೆಳೆದವರು. ಆ ಋಣಭಾರವನ್ನು ಇಳಿಸಿಕೊಳ್ಳಲು ಹಲವು ದಾರಿ ಹುಡುಕಿಕೊಂಡವರು. ಆ ದಾರಿಗಳಲ್ಲಿ ಅವರಿಗೆ ಮೊದಲು ಸಿಕ್ಕವರು ಭಿಕ್ಷುಕರ, ಅಲೆಮಾರಿಗಳ ಹಾಗೂ ಬಡ ಕುಟುಂಬಗಳ ಮಕ್ಕಳು. ಅವರೆಲ್ಲ ಈ ಮೇಷ್ಟ್ರಿಗೆ `ನಮ್ಮ ಮಕ್ಕಳು~ ಆದದ್ದು ವಿಶೇಷ. ಮೇಷ್ಟ್ರ ಸಂಬಳದ ಬಹುಪಾಲು ಹಣ ಹಾಗೂ ಲೇಖನ, ಪುಸ್ತಕ, ಕವಿತೆಗಳಿಗೆ ಬರುವ ಗೌರವಧನದ ಪೂರ್ತಿ ಹಣ ಈ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದು ಕೆಲವು ದಶಕಗಳ ಹಿಂದಿನ ಮಾತು. ಅಷ್ಟು ಸಾಕಾಗದೆ, ಆ ಮಕ್ಕಳ ಪುಸ್ತಕ, ಪೆನ್ನು, ಬಟ್ಟೆ ಮತ್ತಿತರ ಅಗತ್ಯಗಳಿಗಾಗಿ ಅವರು ಪರಿಚಿತರನ್ನು, ದಾನಿಗಳನ್ನು ಬೇಡಿ-ಕಾಡಿ `ನಮ್ಮ ಮಕ್ಕಳನ್ನು~ ಪೋಷಿಸಿದ್ದಾರೆ.`ಈ ಒಂಟಕಾಲಿನ ಮನುಷ್ಯನಿಗೇಕೆ ಇದೆಲ್ಲ ಉಸಾಬರಿ~ ಎಂದು ಅವರ ಹಲವು ಗೆಳೆಯರು ಅವರ ಮುಂದೆಯೇ ಬೈದರೂ, ಕೊನೆಗೆ ಕೈಲಾದದ್ದನ್ನು ಕೊಡುವುದು ಇಂದಿಗೂ ನಡೆದು ಬಂದಿರುವ ಪದ್ಧತಿ. ಇಂಥ ದಾನ-ಭಿಕ್ಷೆಗಳಿಂದ ಬೆಳೆದ ಸುಮಾರು 60-70 ಮಕ್ಕಳು ಈಗ ಉತ್ತಮ ಬದುಕು ಕಂಡಿದ್ದಾರೆ. ರಾಜೇಶ್, ಸೈಯದ್, ಗೌಸಿಯಾ ಬೇಗಂ, ಗಾಯತ್ರಿ, ಹಸೀನ್ ಸಾಬ್, ಅಮ್ಮಾಜಾನ್, ಶಂಕರ್ ಹೀಗೆ ಹಲವರಲ್ಲಿ ಕೆಲವರು ವೈದ್ಯರಾಗಿದ್ದಾರೆ. ಎಂಜಿನಿಯರುಗಳಾಗಿದ್ದಾರೆ, ಶಿಕ್ಷಕರಾಗಿದ್ದಾರೆ.`ನಮ್ಮ ಮಕ್ಕಳು~- ರಘುನಾಥರ ವಿಶಿಷ್ಟ ಯೋಜನೆ. ಅವರು ಮೊದಲು ಕೆಲಸಕ್ಕೆ ಸೇರಿದ ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ಲು, ನಂತರದ ಗೌನಿಪಲ್ಲಿ ಮತ್ತು ಕಶೆಟ್ಟಿಪಲ್ಲಿ ಶಾಲೆಗಳ ಸುತ್ತಮುತ್ತಲಿನ ಬಡ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿಯೇ ರೂಪಿಸಿದ್ದು. ಅದಕ್ಕೆ ಯಾವುದೇ ಲಿಖಿತ ಸಂವಿಧಾನವಿಲ್ಲ. ಹಣ ನಿರ್ವಹಣೆಗೆ ಬ್ಯಾಂಕ್ ಖಾತೆಯೂ ಇಲ್ಲ.

 

ತಾನು ಕೂಡಿಟ್ಟಿದ್ದು, ದಾನಿಗಳಿಂದ ಬಂದಿದ್ದು, ಬಂದ ಹಾಗೆಯೇ ಅಗತ್ಯವಿದ್ದ ಮಕ್ಕಳ ಬದುಕಿಗೇ ಜಮೆಯಾಗುತ್ತದೆ. ಈ ಸೇವೆಯ ಬದುಕಿನಲ್ಲಿ ಅವರು ಸಾಲ ಮಾಡಿದ್ದೂ ಉಂಟು. ಇದೇ ಕಾರಣಕ್ಕೆ, ಮಗಳ ಮದುವೆಗೆ ಸಾಕಷ್ಟು ಹಣವಿಲ್ಲದೆ ಈ ಮೇಷ್ಟು ಸಂಕಟಪಟ್ಟ ದಿನಗಳನ್ನು ಅವರ ಕೆಲ ಆಪ್ತಮಿತ್ರರು ಹೆಮ್ಮೆ ಮತ್ತು ಸಂಕಟದಿಂದ ಸ್ಮರಿಸುತ್ತಾರೆ. ನಿರ್ಗತಿಕ ಸಮುದಾಯವೆಂದರೆ ಕುಟುಂಬವನ್ನೂ ಮೀರಿದ ಕಾಳಜಿ ಮೇಷ್ಟರದು.ರಘುನಾಥರ ಗಮನ ಈಗ ನಿರ್ಗತಿಕ ಮಕ್ಕಳ ಕಡೆಯಿಂದ ನಿರ್ಗತಿಕ ಗ್ರಾಮೀಣ ಮುದುಕರ ಕಡೆಗೆ ಸಾಗಿದೆ. ಕಶೆಟ್ಟಿಪಲ್ಲಿ ಮತ್ತು ಸುತ್ತಮುತ್ತಲಿನ 10 ಕಿಮೀ ದೂರದ ಹಳ್ಳಿಗಳ ಮುದುಕರು ಈಗ ರಘುನಾಥರನ್ನು ಹುಡುಕಿಕೊಂಡು ಬರುತ್ತಾರೆ. ಅವರಿಗೆ ಆಪ್ತ ಸಮಾಲೋಚನೆ, ಔಷಧ, ಬಟ್ಟೆ ತಂದು ಕೊಡುವ ಕೆಲಸವನ್ನು ಮೇಷ್ಟ್ರು ಶುರು ಮಾಡಿದ್ದಾರೆ.

ಶಾಲೆಯಲ್ಲಿ ಶಿಸ್ತಿನ ಸಿಪಾಯಿ

ಈ ಬಹುಪಾತ್ರ ನಿರ್ವಹಣೆಯಲ್ಲಿ ಮುಖ್ಯಶಿಕ್ಷಕರ ವೃತ್ತಿ ನಿರ್ವಹಣೆ ಹೇಗೆ ಮಾಡುತ್ತಿದ್ದಾರೆ ಎಂಬ ಅನುಮಾನ ಏಳುವುದು ಸಹಜ. ಆದರೆ ಶಾಲೆಯ ಆವರಣದೊಳಗೆ ನಿಂತರೆ ಅದಕ್ಕೆ ಹಲವು ಉತ್ತರ ಸಿಗುತ್ತದೆ. ಕೊರಳಿನಲ್ಲಿನ ಸೀಟಿ ತೆಗೆದು ಮೇಷ್ಟ್ರು ಶಿಸ್ತಿನ ಸಿಪಾಯಿಯಂತೆ ಊದಿ ಕಮಾಂಡ್ ಹೇಳಿದರೆಂದರೆ, ಅವರು ಹೆಸರಿಡಿದು ಕೂಗಿದ ವಿದ್ಯಾರ್ಥಿ ಕೂಡಲೇ ಹಾಜರ್. ಕೆಲಸವೂ ಪರ್‌ಫೆಕ್ಟ್! ಶಾಲೆಯ ಪ್ರತಿ ಗೋಡೆಯೂ ಗಣಿತ, ವಿಜ್ಞಾನ, ವ್ಯಾಕರಣದ ಮಾಹಿತಿಗಳಿಂದ ಗಮನ ಸೆಳೆಯುತ್ತದೆ.

 

ಇತರೆ ಶಾಲೆಗಳ ಮಕ್ಕಳಿಗಿಂತಲೂ ಇಲ್ಲಿನ ಮಕ್ಕಳು ಹೆಚ್ಚು ಹಾಡುಗಳನ್ನು ಕಲಿತಿದ್ದಾರೆ. ಖಾಸಗಿ ಶಾಲೆಗೆ ಹೋಗಬೇಕೆಂಬ ಆಸೆ ಇಲ್ಲಿನವರಲ್ಲಿ ಇಲ್ಲ. ಭಯ, ಕೀಳರಿಮೆ, ಸಂಕೋಚವಿಲ್ಲದೆ ಮಕ್ಕಳು ಇಂಗ್ಲಿಷ್‌ನಲ್ಲಿ ನಡೆಸುವ ಸಂಭಾಷಣೆಯನ್ನು ಕೇಳುವುದೇ ಒಂದು ಸೊಗಸು. ಪ್ರತಿ ವಿದ್ಯಾರ್ಥಿಯ ಹುಟ್ಟುಹಬ್ಬಕ್ಕೆ ದಾನಿಗಳಿಂದ ಬಟ್ಟೆ, ಪುಸ್ತಕ ಸಂಗ್ರಹಿಸಿ ತಂದು ಸಾಮೂಹಿಕವಾಗಿ ಆಚರಿಸುವುದು ಇಲ್ಲಿನ ವಿಶೇಷ.ಈ ಮೇಷ್ಟ್ರು ಮಕ್ಕಳು, ಸಿಬ್ಬಂದಿಯ ಜೊತೆಗೆ ಶಾಲೆಯ ಆವರಣದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸಿದ್ದಾರೆ. ಆಲ, ಅಲಸು, ಹೊಂಗೆ, ಬೇವು ಮೊದಲಾದ ಸಸಿಗಳನ್ನು ಬೆಳೆಸಿ ಗ್ರಾಮಸ್ಥರಿಗೆ ಹಂಚುತ್ತಿದ್ದಾರೆ. ಎಲ್ಲಕ್ಕಿಂತಲೂ ವಿಶೇಷವೆಂದರೆ, ಹಳ್ಳಿಯ ಸುತ್ತಮುತ್ತ, ಕಾಡಿನಲ್ಲಿ ದೊರಕುವ ಗಾಯಗೊಂಡ ಮೊಲ, ಆಮೆ, ಜಿಂಕೆ ಮರಿ, ಪಾರಿವಾಳ, ಅಳಿಲು ಮೊದಲಾದ ಪ್ರಾಣಿಗಳನ್ನು ಆರೈಕೆ ಮಾಡಿ ಕಾಡಿಗೆ ಬಿಡುವ `ಪ್ರಾಣಿ ಸ್ನೇಹಿ~ಯಾದ ಅಪರೂಪದ ಕಾಯಕ.ಅದರ  ಪರಿಣಾಮವಾಗಿಯೇ ಈ ಮೇಷ್ಟು ಕೆಲವೊಮ್ಮೆ ಹಳ್ಳಿಗರಿಂದ ಆಕ್ಷೇಪಣೆಗಳನ್ನೂ, ಕೆಟ್ಟ ನಿಂದನೆಯ ಮಾತುಗಳನ್ನೂ ಎದುರಿಸಿದ್ದಾರೆ. ಕೆಲವು ಖಾಸಗಿ ಶಾಲೆಗಳ ಚಿತಾವಣೆಯಿಂದ, ಮಕ್ಕಳು, ಪೋಷಕರ ಜೊತೆಗಿನ ಮೇಷ್ಟ್ರ ಆತ್ಮೀಯತೆಯನ್ನು ಮುರಿಯುವ ಪ್ರಯತ್ನಗಳೂ ನಡೆದಿವೆ.ಗೌನಿಪಲ್ಲಿಯಲ್ಲಿ ಪ್ರಭಾರಿ ಮುಖ್ಯಶಿಕ್ಷಕರಾಗಿದ್ದಾಗ ಶಾಲೆಯಲ್ಲಿ ಬೆಳೆಸಿದ್ದ ಗಿಡಗಳನ್ನು ಆಗದವರು ಹಾಳು ಮಾಡಿದ್ದು, ಪೋಷಿಸುತ್ತಿದ್ದ ಕೆಲವು ಪ್ರಾಣಿಗಳನ್ನೂ ಕೊಂದಿದ್ದಕ್ಕೆ ಸಂಕಟಪಟ್ಟು ತಮ್ಮ ಸ್ಥಾನ ಮರೆತು ಗಳಗಳ ಎಂದು ಅವರು ಅತ್ತಿದ್ದೂ ಇದೆ. ಅಲ್ಲಿಂದ ಕಶೆಟ್ಟಿಪಲ್ಲಿಗೆ ವರ್ಗ ಮಾಡಿಸಿಕೊಂಡು ಬಂದ ಬಳಿಕವೂ ಅಂಥವೇ ಎಡರು ತೊಡರುಗಳ ನಡುವೆ ಪ್ರಾಣಿಗಳ ಆರೈಕೆ ಸಾಗುತ್ತಿದೆ. (ಈ ಕುರಿತ ಅನುಭವ ಕಥನ ಇತ್ತೀಚೆಗೆ ಪ್ರಕಟವಾದ ಅವರ `ಮಡಿಲು~ ಸಂಕಲನದಲ್ಲಿದೆ).

ಒಂಟಿಕಾಲಿನ ನಡಿಗೆ

ತಾನು ಕೆಲಸ ಮಾಡುತ್ತಿರುವ ಸ್ಥಳದಲ್ಲಿರುವ ಇಡೀ ಸಮುದಾಯವನ್ನು ತನ್ನ ಒಡಲ ಕುಲುಮೆಯೊಳಗಿಟ್ಟುಕೊಂಡು ಪ್ರೀತಿ-ಕರುಣೆಯನ್ನು ಹರಿಸುವ ಮಾಂತ್ರಿಕ ಶಿಕ್ಷಕ ಅಥವಾ ಇಡೀ ಜೀವನವನ್ನು ಸಮಾಜಕ್ಕಾಗಿ ತೇಯುತ್ತಿರುವ ನಗುಮೊಗದ ಜೀವಿ ಎಂದರೆ ಅವರು ಥಟ್ಟಂತ ಬಾಯಿಗೆ ಬಂದಂತೆ ಬೈಯಬಹುದು. ಬೈಯೋದು, ಬೈಯಿಸಿಕೊಳ್ಳೋದು ಅವರಿಗೆ ಬಹಳ ಇಷ್ಟ. ಬೈಗುಳವೆಂದರೆ ಬರೀ ಬೈಗುಳವಲ್ಲ. ಅದು ಇತರರೊಡನೆ ಅರ್ಥಪೂರ್ಣ ಸಂವಾದ, ವಾಗ್ವಾದ, ಸಂಘರ್ಷ, ಸಂಬಂಧಗಳ ವ್ಯಾಖ್ಯಾನಕ್ಕೆ ಅವರು ಹುಡುಕಿಕೊಂಡಿರುವ ಭಾಷೆ.`ಹೇಳಿ ಗುರುವೇ~ ಎಂಬುದು, ಯಾರಾದರೂ ಎದುರು ಸಿಕ್ಕರೆ ಅವರ ಮೊದಲ ಮಾತು. ಅದು ಗುರುವೊಬ್ಬ ತನಗೆ ಎದುರಾದ ಎಲ್ಲರನ್ನೂ ಗುರುವೆಂದು ಭಾವಿಸುವ ರೀತಿ. ಹೀಗಾಗಿ ಎದುರು ನಿಂತವರಲ್ಲೂ ವಿನಯ, ಸಂಕೋಚದ ಭಾವ. ಈ ಆರ್ದ್ರತೆಯೇ- `ನಮ್ಮ ಮಕ್ಕಳಿಗೆ~, `ಗ್ರಾಮೀಣ ಮುದುಕರಿಗಾಗಿ~ ಅವರು ಏನನ್ನಾದರು ಕೇಳಲೂ ಅದು ದಾರಿಯನ್ನು ಸಲೀಸು ಮಾಡುತ್ತದೆ.ರಘುನಾಥ ಮೇಷ್ಟರದು ಬಾಲ್ಯದಿಂದಲೂ ಒಂಟಿಕಾಲು. ಆದರೆ, ಈ ಒಂಟಿಕಾಲು ಅವರ ಚಟುವಟಿಕೆಗಳಿಗೆ ಯಾವತ್ತೂ ಅಡ್ಡಿಯೆನಿಸಿದ್ದಿಲ್ಲ. ಒಂದುರೀತಿಯಲ್ಲಿ, ನಮ್ಮ ಸುತ್ತಲಿನ ಸಮಾಜದಲ್ಲಿ ಮಾನವೀಯತೆಯದು ಯಾವಾಗಲೂ ಒಂಟಿಕಾಲಿನ ನಡಿಗೆಯೇ ಅಲ್ಲವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry