ಎಲ್ಲರಲ್ಲೂ ಪ್ರಶ್ನಿಸುವ ಮನೋಭಾವ ಅಗತ್ಯ

7
ಐಐಎಸ್‌ಸಿ ಡೀನ್‌ ಎಂ.ಆರ್‌.ಎನ್‌.ಮೂರ್ತಿ ಅಭಿಮತ

ಎಲ್ಲರಲ್ಲೂ ಪ್ರಶ್ನಿಸುವ ಮನೋಭಾವ ಅಗತ್ಯ

Published:
Updated:

ಸಾಗರ: ಪ್ರತಿಯೊಬ್ಬರಲ್ಲೂ ಪ್ರಶ್ನಿಸುವ ಮನೋಭಾವ ಬೆಳೆಸುವುದು ವಿಜ್ಞಾನದ ವಿಶೇಷತೆಯಾಗಿದೆ ಎಂದು ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಸಂಸ್ಥೆಯ ಡೀನ್‌ ಎಂ.ಆರ್‌.ಎನ್‌. ಮೂರ್ತಿ ಹೇಳಿದರು.ಇಲ್ಲಿಗೆ ಸಮೀಪದ ಅಮಟೆಕೊಪ್ಪದ ಗ್ರಾಮದ ಹೊಂಗಿರಣ ಶಿಕ್ಷಣ ಸಂಸ್ಥೆಯಲ್ಲಿ ಸಾಗರ ವಿಜ್ಞಾನ ವೇದಿಕೆ, ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ ಮೂರು ದಿನಗಳ ಕಾಲ ಏರ್ಪಡಿಸಿರುವ ‘ವಿಜ್ಞಾನ ಮಂಥನ’ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಒಂದು ವಿಷಯವನ್ನು ಸುಲಭವಾಗಿ ಒಪ್ಪಿಕೊಳ್ಳಲು ವಿಜ್ಞಾನ ಆಸ್ಪದ ಮಾಡಿಕೊಡುವುದಿಲ್ಲ. ಪ್ರತಿಯೊಂದು ಪ್ರಶ್ನೆಗೂ ತರ್ಕಬದ್ದವಾಗಿ ಯೋಚಿಸಿ ಉತ್ತರ ಮತ್ತು ಪರಿಹಾರ ದೊರಕಿಸಿಕೊಡುವತ್ತ ವಿಜ್ಞಾನ ಮನುಷ್ಯನನ್ನು ಕೊಂಡೊಯ್ಯುತ್ತದೆ ಎಂದರು.ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ಹಲವು ಹೊಸ ಆಲೋಚನೆಗಳು ಮೂಡುವ ವಾತಾವರಣ ಇರುತ್ತದೆ. ಆದರೆ ಅದನ್ನು ವ್ಯಕ್ತಪಡಿಸಲು ಅವರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶ ದೊರಕಿರುವುದಿಲ್ಲ. ಈ ವಿಷಯದಲ್ಲಿ ನಗರ ಪ್ರದೇಶಕ್ಕೆ ಸೇರಿದ ವಿದ್ಯಾರ್ಥಿಗಳೇ ಹೆಚ್ಚಿನ ಅವಕಾಶ ಗಿಟ್ಟಿಸುತ್ತಾರೆ. ಈ ಕೊರತೆಯನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು.ಸಾಗರ ವಿಜ್ಞಾನ ವೇದಿಕೆಯ ಎಚ್.ಎಲ್.ಎಸ್.ರಾವ್ ಮಾತನಾಡಿ ಮಕ್ಕಳಲ್ಲಿ ಗಣಿತ ಮತ್ತು ವಿಜ್ಞಾನದ ಕಲಿಕೆ ಕಷ್ಟ ಎಂಬ ಪೂರ್ವಗ್ರಹ ಭಾವನೆ ಮೂಡಿದೆ. ಅದನ್ನು ಹೋಗಲಾಡಿಸುವ ಸಲುವಾಗಿ ವೇದಿಕೆ ವಿವಿಧ ರೀತಿಯ ಚಟುವಟಿಕೆ ನಡೆಸಲು ಮುಂದಾಗಿದೆ ಎಂದು ಹೇಳಿದರು.ಬೆಂಗಳೂರು ವಿಶ್ವವಿದ್ಯಾಲಯದ  ಭೌತಶಾಸ್ತ್ರದ ವಿಭಾಗದ ಮುಖ್ಯಸ್ಥ ಪ್ರೊ.ರಾಮಕೃಷ್ಣ ಧಾಮ್ಲೆ, ಕುವೆಂಪು ವಿ.ವಿ.ಯ ಪ್ರೊ.ವಸಂತಕುಮಾರ್‌ ಪೈ, ಹೊಂಗಿರಣ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಶೋಭಾ ರವೀಂದ್ರ, ಸಾಗರ ವಿಜ್ಞಾನ ವೇದಿಕೆ ಕಾರ್ಯದರ್ಶಿ ಪೂರ್ಣಪ್ರಜ್ಞ ಬೇಳೂರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry