ಎಲ್ಲರಿಗಾಗಿ ನಾನು ಭಾವನೆ ಹೊಂದಲು ಶರಣರ ಸಲಹೆ

7

ಎಲ್ಲರಿಗಾಗಿ ನಾನು ಭಾವನೆ ಹೊಂದಲು ಶರಣರ ಸಲಹೆ

Published:
Updated:

ಮೊಳಕಾಲ್ಮುರು: ಮಾನವ `ನನನಾಗಿ ನಾನು~ ಎಂಬ ಸ್ವಾರ್ಥ ಭಾವನೆ ಕೈಬಿಟ್ಟು `ಎಲ್ಲರಿಗಾಗಿ ನಾನು~ ಎಂಬ ಭಾವನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಮಾದರಿ ಜೀವನ ನಡೆಸಲು ಮುಂದಾಗಬೇಕು ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ಮಾಡಿದರು.ತಾಲ್ಲೂಕಿನ ಚಿಕ್ಕೋಬನಹಳ್ಳಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಜನಮುಖಿ ಸೇವಾ ಸಂಘ ಉದ್ಘಾಟಿಸಿ ಮಾತನಾಡಿದರು.ಯಾವುದೇ ಕಾರ್ಯಗಳನ್ನು ಪೂರ್ಣ ಮಾಡದೇ ಜೀವನ ನಡೆಸುತ್ತಿರುವ ಯುವಶಕ್ತಿಯನ್ನು ಜಾಗೃತಗೊಳಿಸಿ ನಮ್ಮ ಸುತ್ತಮುತ್ತ ಸಿಗುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಸ್ವಉದ್ಯೋಗ ಕೈಗೊಂಡು ಆರ್ಥಿಕ ಪ್ರಗತಿ ಸಾಧಿಸುವ ಮೂಲಕ ಕ್ರಿಯಾಶೀಲ ಜೀವನ ನಡೆಸಬೇಕು ಎಂದು ಅವರು ಸಲಹೆ ಮಾಡಿದರು.ಮಾನವ ಇಂದು ದ್ವೇಷ, ಅಸೂಯೆ ಹಾಗೂ ನಕಾರಾತ್ಮಕ ವಿಚಾರಗಳನ್ನು ಬೆಳೆಸುತ್ತಿದ್ದಾನೆ. ಇದನ್ನು ತೊರೆದು ಜೀವನದ ಮೌಲ್ಯಗಳನ್ನು ಅರಿತು ಸ್ನೇಹಮಯಿಯಾಗಿ ಜೀವನ ನಡೆಸಬೇಕು. ಸಮಾಜದಲ್ಲಿ ಶೋಷಣೆಗೆ ಒಳಗಾದವರಿಗೆ, ಅಸಹಾಯಕರಿಗೆ ನೆರವಾಗುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಸಿದ್ದಯ್ಯನಕೋಟೆ ಶಾಖಾ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಯುವಶಕ್ತಿ ದುಶ್ಚಟಗಳಿಂದ ದೂರ ಉಳಿದು ಕಡ್ಡಾಯವಾಗಿ ಶಿಕ್ಷಣ ಮುಖ್ಯ ವಾಹಿನಿಗೆ ಹೋಗುವ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ. ಸದಸ್ಯೆ ಮಾರಕ್ಕ ಓಬಯ್ಯ ವಹಿಸಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯ ಜಿ.ಎಸ್. ಮುರಳೀಧರ ನಾಯಕ, ನಿವೃತ್ತ ಬಿಡಿಒ ಬಸಣ್ಣ, ಗ್ರಾ.ಪಂ. ಅಧ್ಯಕ್ಷೆ ಪಾಲಾಕ್ಷಿ ಚಿಂತಗುಂಡ್ಲು ಓಬಯ್ಯ, ಸದಸ್ಯರಾದ ಗೊಂಚಿಗಾರ್ ಬಂಗಾರಯ್ಯ, ಬಸವರಾಜಪ್ಪ, ಗೌಡ್ರ ಪಾಪಣ್ಣ, ಕಿರಣ್ ಸ್ವಾಮೀಜಿ, ಇತರರು ಉಪಸ್ಥಿತರಿದ್ದರು. ಒ. ಕರಿಬಸಪ್ಪ ಸ್ವಾಗತಿಸಿದರು, ಡಿ.ಒ. ಮೊರಾರ್ಜಿ ನಿರೂಪಿಸಿದರು, ವಿರೂಪಾಕ್ಷ ನಾಯಕ ವಂದಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry