ಎಲ್ಲರಿಗೂ ನ್ಯಾಯ ಕಲ್ಪಿಸಿದ ಅಂಬೇಡ್ಕರ್

7

ಎಲ್ಲರಿಗೂ ನ್ಯಾಯ ಕಲ್ಪಿಸಿದ ಅಂಬೇಡ್ಕರ್

Published:
Updated:

ಹಿರಿಯೂರು: ಅಂಬೇಡ್ಕರ್, ಬಸವಣ್ಣ, ವಾಲ್ಮೀಕಿ, ಕನಕದಾಸ ಮೊದಲಾದ ಮಹಾತ್ಮರ ಜಯಂತಿಗಳಲ್ಲಿ ಎಲ್ಲಾ ಜಾತಿ ಜನ ಪಾಲ್ಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಕರೆ ನೀಡಿದರು.ನಗರದಲ್ಲಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್. ಮೂರ್ತಿ ಬಣ) ವತಿಯಿಂದ ನಡೆದ ಡಾ.ಅಂಬೇಡ್ಕರ್ ಮತ್ತು ಜಗಜೀವನರಾಂ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ದಲಿತರಿಗೆ ಮಾತ್ರ ಸೌಲಭ್ಯ ಕಲ್ಪಿಸಲಿಲ್ಲ. ಅವಕಾಶ ವಂಚಿತರಾದ ಎಲ್ಲ ವರ್ಗದ ಜನರಿಗೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟರು ಎಂದರು.ಬಾಬು ಜಗಜೀವನ ರಾಂ ಉತ್ತಮ ಆಡಳಿತಗಾರರಾಗಿದ್ದರು. ವಾಜಪೇಯಿ ಅವರು ಜಗಜೀವನ ರಾಂ ಅವರನ್ನು ಪ್ರಧಾನಿ ಮಾಡುವ ಬಯಕೆ ಹೊಂದಿದ್ದರು. ದಲಿತರು ಎಂಬ ಕಾರಣದಿಂದ ರಾಂ ಪ್ರಧಾನಿ ಆಗಲಿಲ್ಲ. ಆದರೆ, ಕೃಷಿ ಸಚಿವರಾಗಿ ದೇಶ ಹಸಿರು ಕ್ರಾಂತಿಯತ್ತ ಕೊಂಡೊಯ್ದ ರಕ್ಷಣಾ ಸಚಿವರಾಗಿಯೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು ಎಂದು ಸ್ಮರಿಸಿದರು.ಅಂಬೇಡ್ಕರ್ ಮತ್ತು ಜಗಜೀವನ ರಾಂ ಅವರ ಭಾವಚಿತ್ರ ಅನಾವರಣ ಮಾಡಿದ ಬಿಜೆಪಿ ಮುಖಂಡ ಜಿ.ಎಸ್. ಮಂಜುನಾಥ್ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಂಬೇಡ್ಕರ್ ಮಂತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ದಲಿತರು ಮುಂದೆ ಬರಲು ಸಾಧ್ಯ ಎಂದು ಹೇಳಿದರು.ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಮಾತನಾಡಿ, ಹಕ್ಕುಗಳ ರಕ್ಷಣೆ ಮಾಡಿಕೊಳ್ಳಲು ಅಕ್ಷರದ ಅರಿವು ಬೇಕು. ಕಠಿಣ ಶ್ರಮ, ಶಿಸ್ತು, ಸ್ಪಷ್ಟ ಗುರಿ ಇದ್ದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂದರು.ಸಮಿತಿಯ ಅಧ್ಯಕ್ಷ ಕೆ. ತಿಮ್ಮರಾಜು ಅಧ್ಯಕ್ಷತೆ ವಹಿಸಿದ್ದರು. ಪಿಎಸ್‌ಐ ಎಸ್.ಬಿ. ಪಾಲಭಾವಿ, ಬಸವರಾಜ ನಾಯಕ ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ಸದಸ್ಯ ಹನುಮಂತರಾಯಪ್ಪ, ಜಿ.ಎಲ್. ಮೂರ್ತಿ, ಬಿ. ಸಿದ್ದಪ್ಪ, ಭೂತೇಶ್, ಕೆ.ಪಿ. ಶ್ರೀನಿವಾಸ್, ವಿ. ಅರುಣ್‌ಕುಮಾರ್ ಮತ್ತಿತರರು ಹಾಜರಿದ್ದರು.ಮಾರುತೇಶ್ ಕ್ರಾಂತಿಗೀತೆ ಹಾಡಿದರು. ಎಸ್.ಜಿ. ರಂಗಸ್ವಾಮಿ ಸಕ್ಕರ ಕಾರ್ಯಕ್ರಮ ನಿರೂಪಿಸಿದರು. ಆರ್. ಶಿವಶಂಕರ್ ವಂದಿಸಿದರು.ಪರಶುರಾಂಪುರ ವರದಿ

ಸಮಾಜದಲ್ಲಿನ ಮೇಲು ಕೀಳು ಭಾವ ತೊಡೆದು ಹಾಕಿ, ಸಮಾನತೆ ದೊರಕಿಸಿಕೊಡುವಲ್ಲಿ ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಮುಖ್ಯವಾದುದು ಎಂದು ಮಾದಿಗ ದಂಡೋರ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರಿರಾಮ್ ತಿಳಿಸಿದರು.ಸಮೀಪದ ರೇಣುಕಾಪುರ ಗ್ರಾಮದಲ್ಲಿ ಸೋಮವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಹಾಗೂ ಬಾಬು ಜಗಜೀವನ ರಾಂ ಅವರ 105ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.ದಲಿತರ ಏಳ್ಗೆಗಾಗಿ ಶ್ರಮಿಸಿದ ನಾಯಕರ ಆದರ್ಶಗಳನ್ನು ಪಾಲಿಸುವ ಮೂಲಕ ಜನಮಾನಸದಲ್ಲಿ ಅವರು ಉಳಿಯುವಂತೆ ಮಾಡಬೇಕು ಎಂದು ಕರೆ ನೀಡಿದರು.ನೀರಾವರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಜಯಣ್ಣ ಮಾತನಾಡಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಜಯಂತಿ ಕೇವಲ ದಲಿತರಿಗೆ ಸೀಮಿತವಾ ಆಗಬಾರದು ಎಂದರು.ಕಾರ್ಯಕ್ರಮದಲ್ಲಿ ರಾಜು, ಅಕ್ಕುಲಪ್ಪ, ದೇವಪುತ್ರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ನಿಂಗಮ್ಮ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry