ಮಂಗಳವಾರ, ನವೆಂಬರ್ 12, 2019
19 °C

ಎಲ್ಲರೂ ನಿರಾಳರಾಗಿದ್ದೇವೆ: ಗಂಭೀರ್

Published:
Updated:

ಕೋಲ್ಕತ್ತ (ಪಿಟಿಐ): ಐಪಿಎಲ್‌ನ ಆರನೇ ಋತುವಿನ ಟೂರ್ನಿಯನ್ನು ಗೆಲುವಿನೊಂದಿಗೆ ಆರಂಭಿಸಲು ಸಾಧ್ಯವಾದ ಕಾರಣ ಎಲ್ಲರೂ ನಿರಾಳರಾಗಿದ್ದೇವೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ.`ನಾನು ತಂಡದ ನಾಯಕತ್ವ ವಹಿಸಿಕೊಂಡ ಬಳಿಕ ಮೊದಲ ಪಂದ್ಯದಲ್ಲಿ ಗೆಲುವು ಲಭಿಸಿದ್ದು ಇದೇ ಮೊದಲು. ಟೂರ್ನಿಯಲ್ಲಿ ಶುಭಾರಂಭ ಮಾಡಿರುವುದು ಸಂತಸದ ವಿಚಾರ. ತಂಡ ನೀಡಿದ ಪ್ರದರ್ಶನ ನನಗೆ ತೃಪ್ತಿ ನೀಡಿದೆ' ಎಂದು ಪಂದ್ಯದ ನಂತರ ತಿಳಿಸಿದ್ದಾರೆ.ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ ಆರು ವಿಕೆಟ್‌ಗಳ ಗೆಲುವು ಪಡೆದಿತ್ತು. ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ತಂಡವನ್ನು 128 ರನ್‌ಗಳಿಗೆ ನಿಯಂತ್ರಿಸಿದ್ದ ನೈಟ್ ರೈಡರ್ಸ್, ಆ ಬಳಿಕ 18.4 ಓವರ್‌ಗಳಲ್ಲಿ 129 ರನ್ ಗಳಿಸಿ ಜಯ ಸಾಧಿಸಿತ್ತು.ಗೌತಮ್ ಗಂಭೀರ್ (41, 29 ಎಸೆತ, 5 ಬೌಂ, 1 ಸಿಕ್ಸರ್) ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ದರು. ಜಾಕ್ ಕಾಲಿಸ್ (23) ಹಾಗೂ ಮನೋಜ್ ತಿವಾರಿ (23) ಅವರೂ ಉತ್ತಮ ಪ್ರದರ್ಶನ ನೀಡಿದ್ದರು. ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಬೌಲರ್‌ಗಳ ಪ್ರದರ್ಶನದ ಬಗ್ಗೆ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆಗಿಂದಾಗ್ಗೆ ವಿಕೆಟ್ ಕಳೆದುಕೊಂಡೆವು: ಮಧ್ಯದ ಓವರ್‌ಗಳಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡದ್ದು ಸೋಲಿಗೆ ಕಾರಣ ಎಂದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ನಾಯಕ ಮಾಹೇಲ ಜಯವರ್ಧನೆ ಪ್ರತಿಕ್ರಿಯಿಸಿದ್ದಾರೆ.`ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡ ಕಾರಣ ನಾವು ಮರುಹೋರಾಟ ನಡೆಸಬೇಕಿತ್ತು. ಆದರೆ ಡೇವಿಡ್ ವಾರ್ನರ್ ಔಟಾದ ಬಳಿಕ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡೆವು. ಉತ್ತಮ ಜೊತೆಯಾಟದ ಸೂಚನೆ ಕಂಡುಬಂದ ಸಂದರ್ಭದಲ್ಲೇ ವಿಕೆಟ್‌ಗಳು ಬಿದ್ದವು' ಎಂದು ಹೇಳಿದ್ದಾರೆ.`ಕೈಯಲ್ಲಿ ಹೆಚ್ಚಿನ ವಿಕೆಟ್‌ಗಳಿದ್ದಲ್ಲಿ ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಪೇರಿಸಬಹುದಿತ್ತು. ಇಂತಹ ಪಿಚ್‌ನಲ್ಲಿ 140-150 ರನ್ ಪೇರಿಸಿದರೂ ಗೆಲುವು ಪಡೆಯಬಹುದು ಎಂದು ಭಾವಿಸಿದ್ದೆವು' ಎಂದಿದ್ದಾರೆ.

ಪ್ರತಿಕ್ರಿಯಿಸಿ (+)