`ಎಲ್ಲರೂ ಸ್ವಾರ್ಥದ ಬೆನ್ನು ಬಿದ್ದಿದ್ದಾರೆ'

ಸೋಮವಾರ, ಜೂಲೈ 22, 2019
27 °C
ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ವಿಷಾದ

`ಎಲ್ಲರೂ ಸ್ವಾರ್ಥದ ಬೆನ್ನು ಬಿದ್ದಿದ್ದಾರೆ'

Published:
Updated:

ಚನ್ನಪಟ್ಟಣ: `ರಾಜಕಾರಣಿಗಳು ಸೇರಿದಂತೆ ಎಲ್ಲರೂ ಸ್ವಾರ್ಥದ ದಾಸರಾಗುತ್ತಿದ್ದು, ಸಮಾಜದಲ್ಲಿ ಇಂದು ಮನುಷ್ಯ ಸಂಬಂಧಗಳು ಮರೆಯಾಗುತ್ತಿವೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ವಿಷಾದಿಸಿದರು.ಪಟ್ಟಣದ ಕೋವಿ ಪ್ರಕಾಶನದ ವತಿಯಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಲೇಖಕ ಸಿ.ಕೆ.ಯೋಗಾನಂದ ರಚಿಸಿರುವ `ನಿಷ್ಕಲಾ ಹಾಗೂ ಅನ್ನಪೂರ್ಣೆಯ ಮಡಿಲಲ್ಲಿ ಮುಕ್ತಿನಾಥ' ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.ಮಠಗಳು ಕೂಡಾ ಇಂದು ಕೇವಲ ಜಾತಿ ರಾಜಕಾರಣದ ಕಪಿಮುಷ್ಠಿಗೆ ಒಳಗಾಗಿವೆ. ಮನುಷ್ಯರಿಗೆ ಮಾರ್ಗದರ್ಶನ ನೀಡುವ ಬದಲು ಸ್ವಾರ್ಥಕ್ಕೆ ಬಳಕೆಯಾಗುತ್ತಿವೆ. ಬದುಕುವ ಕೆಲವು ದಿನಗಳಲ್ಲಿ ಮನುಷ್ಯ ಹೆಸರು-ಉಸಿರಿನ ನಡುವೆ ಕೆಸರು ಎರಚುವುದನ್ನು ಬಿಟ್ಟು ಸಮಾಜಕ್ಕೆ ಕೊಡುಗೆ ನೀಡುವ ಕಡೆ ಗಮನ ಹರಿಸಬೇಕು ಎಂದು ಕಣ್ಣನ್ ಅಭಿಪ್ರಾಯಪಟ್ಟರು.ಕನ್ನಡ ಸಾಹಿತ್ಯವು ಅಗಾಧವಾಗಿದ್ದು, ಇಂದು ದೇಶಾದ್ಯಂತ ಹೆಸರು ಗಳಿಸಿದೆ. ಕಿರಿಯರು ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು. ಹಿರಿಯರು ಇದಕ್ಕೆ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದರು.ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮಾತನಾಡಿ, ರಾಜ್ಯದಲ್ಲಿ ಭಷ್ಟ್ರಾಚಾರ, ಲಂಚಾವತಾರ, ಅತ್ಯಾಚಾರ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ನಾಟಕಗಳ ಮೂಲಕ ಜನರನ್ನು ಜಾಗೃತಗೊಳಿಸಲು ಮುಂದಾದರೂ ಅದು ಪ್ರಯೋಜನವಾಗಿಲ್ಲ. ಇಂದಿಗೂ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದರೂ ರಾಜ್ಯದ ಜನತೆ ಅವರಿಗೆ ಬುದ್ಧಿ ಕಲಿಸಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಮತದಾರರು ಮುಂದಾಗುವವರೆಗೂ ಭ್ರಷ್ಟಾಚಾರ ನಿರಂತರವಾಗಿರುತ್ತದೆ ಎಂದರು.ಮದ್ರಾಸ್ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ ಮಾತನಾಡಿ, `ಪ್ರಸ್ತುತ ಟಿವಿ ಮಾಧ್ಯಮಗಳ ಹಾವಳಿಯಿಂದ ಪುಸ್ತಕಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ. ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜೊತೆಗೆ ನಾಡಿನ ಹಿರಿಯ ಬರಹಗಾರರ ಮತ್ತು ನಾಡಿನ ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಅಧ್ಯಯನ ಮಾಡುವಂತೆ ತಿಳಿಸಿದರು.ಹರಟೆ ಕಾರ್ಯಕ್ರಮ ಖ್ಯಾತಿಯ ಜಾಹ್ನವಿ ಹಾಗೂ ವೃತ್ತಪತ್ರಿಕೆಗಳ ಸಂಗ್ರಹಕಾರ ಭಂಡಾರಿ ಚಲ್ಲಪ್ಪನ್ ಅವರನ್ನು ಸನ್ಮಾನಿಸಲಾಯಿತು. ಕೃತಿ ಕುರಿತು ಎ.ಎನ್.ವಿಠಲರಾಜು ಮಾತನಾಡಿದರು.ಹಿರಿಯ ಪತ್ರಕರ್ತ ಸು.ತ.ರಾಮೇಗೌಡ, ಸಾಹಿತಿ ಡಾ.ಎನ್.ಎಸ್.ಲೀಲಾ, ಪುಸ್ತಕಗಳ ಕರ್ತೃ ಸಿ.ಕೆ.ಯೋಗಾನಂದ್, ಮೇಲುಕೋಟೆ ದೇವಾಲಯದ ಪ್ರಧಾನ ಸ್ಥಾನಿಕ ಅರ್ಚಕ ನಾರಾಯಣ ಅಯ್ಯಂಗಾರ್ ಮುಂತಾದವರು ವೇದಿಕೆಯಲ್ಲಿದ್ದರು.ಉಪನ್ಯಾಸಕ ವೈ.ಬಿ.ವಿಜಯಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಇದೆ ವೇಳೆ ಕಾರ್ಯಕ್ರಮಕ್ಕೆ ಸಹಕರಿಸಿದ ರೋಟರಿ ಸಂಸ್ಥೆಯ ರಾಮ್‌ಪ್ರಸಾದ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರಾಮಲಿಂಗೇಶ್ವರ್ ಸೇರಿದಂತೆ ಹಲವರನ್ನು ಗೌರವಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry