ಎಲ್ಲರ ಚಿತ್ತ ಈಗಲೇ ಚಿಕ್ಕಮಗಳೂರಿನತ್ತ!

7

ಎಲ್ಲರ ಚಿತ್ತ ಈಗಲೇ ಚಿಕ್ಕಮಗಳೂರಿನತ್ತ!

Published:
Updated:
ಎಲ್ಲರ ಚಿತ್ತ ಈಗಲೇ ಚಿಕ್ಕಮಗಳೂರಿನತ್ತ!

ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪ್ರಮುಖ ರಾಜಕೀಯ ಪಕ್ಷಗಳ ಪಾಲಿಗೆ ಜಿಲ್ಲೆಯಲ್ಲಿ ಅತ್ಯಂತ ಪ್ರತಿಷ್ಠಿತ ಕ್ಷೇತ್ರವಾಗಲಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಡುವಿನ ಸ್ಪರ್ಧೆಗೆ ಸೀಮಿತವಾಗಿದ್ದ ಕ್ಷೇತ್ರ ಈ ಬಾರಿ ಕೆಜೆಪಿ ಪ್ರವೇಶದಿಂದ  ಹೆಚ್ಚಿನ ಕುತೂಹಲ ಮೂಡಿಸುವ ನಿರೀಕ್ಷೆ ಹುಟ್ಟುಹಾಕಿದೆ. ಸಂಭವನೀಯ ಅಭ್ಯರ್ಥಿಗಳು ಮತ್ತು ಟಿಕೆಟ್ ಆಕಾಂಕ್ಷಿಗಳು ಸದ್ದಿಲ್ಲದೆ ಚುನಾವಣಾ ತಯಾರಿ ನಡೆಸುತ್ತಿದ್ದಾರೆ.ಸತತ ಎರಡು ಬಾರಿ ಆಯ್ಕೆಯಾಗಿರುವ ಹಾಲಿ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರೇ ಈ ಬಾರಿಯೂ ಬಿಜೆಪಿ ಅಧಿಕೃತ ಅಭ್ಯರ್ಥಿ ಎನ್ನುವುದು ಬಹುತೇಕ ಖಚಿತ. ರವಿ ಅವರಿಗೆ ಪ್ರತಿಸ್ಪರ್ಧಿಯಾಗಿ ಟಿಕೆಟ್ ಕೇಳುವ ಆಕಾಂಕ್ಷಿ ಪಕ್ಷದಲ್ಲಿ ಮತ್ತೊಬ್ಬರು ಸದ್ಯಕ್ಕೆ ಕಾಣಿಸುತ್ತಿಲ್ಲ.

ಆರೇಳು ತಿಂಗಳ ಹಿಂದೆ `ಸಿ.ಟಿ.ರವಿ ಸ್ವಕ್ಷೇತ್ರ ತೊರೆ ಯುತ್ತಾರೆ, ಬೆಂಗಳೂರಿನ ಬಸವನಗುಡಿಯಲ್ಲಿ ಸ್ಪರ್ಧಿಸುತ್ತಾರೆ' ಎಂದು ಹಬ್ಬಿದ್ದ ವದಂತಿಗೂ ತೆರೆ ಎಳೆದಿರುವ ಸಚಿವರು, `ಎಲ್ಲ ಪಕ್ಷಗಳು ಒಗ್ಗಟ್ಟಾಗಿ ನನ್ನ ವಿರುದ್ಧ ಏಕೈಕ ಅಭ್ಯರ್ಥಿ ಕಣಕ್ಕೆ ಇಳಿಸಿದರೂ ಅಂಜುವುದಿಲ್ಲ. ನಾನೇ ಪಕ್ಷದ ಅಧಿಕೃತ ಅಭ್ಯರ್ಥಿ.ಮತ ಎಣಿಕೆಗೆ ನಾಲ್ಕು ದಿನ ಮೊದಲು ಫಲಿತಾಂಶದ ಅಂತರ ವನ್ನೂ ಹೇಳುತ್ತೇನೆ' ಎನ್ನುವ ವಿಶ್ವಾಸದ ಮಾತನ್ನು ಮಾಧ್ಯಮ ಪ್ರತಿನಿಧಿಗಳ ಎದುರೇ ಹೇಳಿದ್ದರು. ವಿಶ್ವಾಸ ಗಟ್ಟಿ ಮಾಡಿ ಕೊಳ್ಳಲು ಕಳೆದ ಒಂದು ವರ್ಷದಿಂದಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಸುತ್ತಾಟ ನಡೆಸುತ್ತಿದ್ದಾರೆ. ಗ್ರಾಮ ವಾಸ್ತವ್ಯ, ವಿಕಾಸಯಾತ್ರೆ ನಡೆಸಿದ್ದಾರೆ. ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆಪದಲ್ಲಿ ಹಳ್ಳಿಹಳ್ಳಿ ತಿರುಗುತ್ತಿದ್ದಾರೆ. ಗ್ರಾಮದಲ್ಲಿ ನಾಲ್ಕು ಮಂದಿಗೆ ಪಡಿತರ ಚೀಟಿ ವಿತರಿಸುವ ಸಂದರ್ಭ ಇದ್ದರೂ ತಪ್ಪಿಸಿಕೊಳ್ಳುತ್ತಿಲ್ಲ. ಚುನಾವಣೆ ಹತ್ತಿರವಿರುವಾಗ `ಸ್ವಾಮಿ ಕಾರ್ಯ, ಸ್ವ ಕಾರ್ಯ' ಎರಡರನ್ನೂ ಸಚಿವರು ಭರ್ಜರಿಯಾಗಿಯೇ ನಡೆಸುತ್ತಿದ್ದಾರೆ.ಜೆಡಿಎಸ್‌ನಿಂದ ಮಾಜಿ ಶಾಸಕ ಎಸ್.ಎಲ್.ಧರ್ಮೇಗೌಡ ಆಕಾಂಕ್ಷಿಯಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲ ಧರ್ಮೇಗೌಡರೇ ಮುಂದಿನ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಮತದಾರರನ್ನು ಸಂಪರ್ಕಿಸುವ ನಿರಂತರ ಕೆಲಸವನ್ನು ಸಂಭವನೀಯ ಅಭ್ಯರ್ಥಿ ಧರ್ಮೇಗೌಡ ಮಾಡುತ್ತಿದ್ದಾರೆ.  ಮೂರ‌್ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾರ್ಯಕರ್ತರ ಸಭೆ, ಸಾರ್ವಜನಿಕ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡು, ಚುನಾವಣಾ ಪೂರ್ವ ತಯಾರಿ ನಡೆಸುತ್ತಿರುವುದು ಉಂಟು.ಕ್ಷೇತ್ರ ಬಿಜೆಪಿಗೆ ಒಲಿಯುವ ಮೊದಲು ಸತತ ಮೂರು ಬಾರಿ ಆಯ್ಕೆಯಾಗಿದ್ದ ಮಾಜಿ ಸಚಿವ ಸಗೀರ್ ಅಹಮದ್, ಕಾಂಗ್ರೆಸ್ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿ. ಸಗೀರ್ ಟಿಕೆಟ್‌ಗೆ ಬಯಸಿದರೆ ಅಲ್ಪಸಂಖ್ಯಾತರ ಕೋಟಾದಡಿ ಅವರಿಗೆ ಪಕ್ಷ ಮಣೆ ಹಾಕುವುದು ಖಚಿತ ಎನ್ನುತ್ತವೆ ಪಕ್ಷದ ಮೂಲಗಳು.`ಅಧಿಕಾರ ಕೈತಪ್ಪಿದ ಮೇಲೆ ಸಗೀರ್ ಪಕ್ಷದ ಸಂಘಟನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಕ್ರಿಯ ರಾಜಕಾರಣದಿಂದಲೂ ದೂರವಾಗಿದ್ದಾರೆ' ಎಂದು ಅವರ ಪಕ್ಷದವರೇ ದೀರ್ಘ ಸಮಯದಿಂದಲೂ ದೂರುತ್ತಾ ಬಂದಿದ್ದಾರೆ. ಇದಕ್ಕೆ ಪ್ರತ್ಯುತ್ತ ರವಾಗಿ ಸಗೀರ್ ಅಹಮದ್ ಕಾಂಗ್ರೆಸ್ ಪ್ರತಿಭಟನೆಯಲ್ಲಿ `ನಾನು ಅಂಬಾರಿ ಹೊರುವ ಆನೆ ಅರ್ಜುನನಂತೆ. ಯಾವಾಗಲೂ ಹೊರ ಬರುವುದಿಲ್ಲ. ಉತ್ಸವ, ಮೆರವಣಿಗೆ ಇದ್ದಾಗಷ್ಟೆ ಅರ್ಜುನ ಹೊರಬರಬೇಕು' ಎನ್ನುವ ಮೂಲಕ ಪಕ್ಷದೊಳಗಿನ ವಿರೋಧಿಗಳ ದನಿ ಅಡಗಿಸಲು ಯತ್ನಿಸಿದ್ದರು.ಸಗೀರ್ ಟಿಕೆಟ್‌ಗೆ ಪಟ್ಟು ಹಿಡಿದರೆ, ಉಳಿದ ಆಕಾಂಕ್ಷಿಗಳು ಸುಮ್ಮನಾಗುವುದು ಅನಿವಾರ್ಯವಾಗಿದೆ. ಪಕ್ಷದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಲ್.ಮೂರ್ತಿ ಮತ್ತು ವಿಧಾನಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಅವರ ಪತಿ, ಗುತ್ತಿಗೆದಾರ ಶಾಂತೇಗೌಡ ಕೂಡ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳು. ` 35 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಈ ಬಾರಿ ಸ್ಪರ್ಧಿಸಲು ಅವಕಾಶ ಮಾಡಿಕೊಡಿ' ಎಂದು ಮೂರ್ತಿ ರಾಜ್ಯ ನಾಯಕರ ಎದುರು ಬೇಡಿಕೆ ಇಟ್ಟಿದ್ದಾರೆ.ಗುತ್ತಿಗೆದಾರ ಶಾಂತೇಗೌಡ `ತಮ್ಮ ಸಮುದಾಯದ ಮತಗಳು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ತಮಗೊಂದು ಅವಕಾಶ ನೀಡಿದರೆ ಬಿಜೆಪಿ ಮಣಿಸಬಹುದು' ಎಂದು ನಾಯಕರಿಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ, ಪಕ್ಷದ ಜಿಲ್ಲಾ ಉಪಾಧ್ಯಕ್ಷ  ಡಿ.ಎಲ್.ವಿಜಯಕುಮಾರ್, ಪಕ್ಷದ ಜಿಲ್ಲಾ ವಕ್ತಾರ ಎ.ಎನ್.ಮಹೇಶ್, ನಗರಸಭೆ ಸದಸ್ಯ ಸಂದೀಪ್, ಜಿ.ಪಂ.ಸದಸ್ಯೆ ಸವಿತಾ ರಮೇಶ್, ಡಾ.ಕುಮಾರಸ್ವಾಮಿ ಕೂಡ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗೆ ಪ್ರಮುಖ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.ಪಕ್ಷದಲ್ಲಿ ಇನ್ನು ಕೂಡ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯೂ ಸಿದ್ಧವಾಗಿಲ್ಲ. ಹಾಗಾಗಿ ನಮಗೇ ಟಿಕೆಟ್ ಖಚಿತ ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್‌ನಿಂದ ಯಾರೊಬ್ಬರೂ ಸಭೆ, ಸಮಾರಂಭ ನಡೆಸುತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಸಂಘಟನೆ, ಸಮಾವೇಶ ನಡೆಸುತ್ತಿರುವುದನ್ನು ಅವಲೋಕಿಸಿದರೆ ಜೆಡಿಎಸ್, ಬಿಜೆಪಿ ಕೆಜೆಪಿಗಿಂತ ಕಾಂಗ್ರೆಸ್ ಕೊಂಚ ಹಿಂದೆ ಬಿದ್ದಿದೆ.ಕೆಜೆಪಿ ಕೂಡ ಬೃಹತ್ ಸಮಾವೇಶ ನಡೆಸಿ, ಪಕ್ಷದ ರಾಜ್ಯ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವ ರವಿ ವಿರುದ್ಧ ರಣ ಕಹಳೆ ಊದಿ ಹೋಗಿದ್ದಾರೆ. ಕೆಜೆಪಿ ನಾಯಕರು ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್ ನಡೆ ಎದುರು ನೋಡುತ್ತಿರುವುದು ವಾಸ್ತವ ಸಂಗತಿ. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೈತಪ್ಪುವವರನ್ನು ಕರೆತಂದು ಅಭ್ಯರ್ಥಿ ಮಾಡುವ ಲೆಕ್ಕಾಚಾರದಲ್ಲಿ ಇದ್ದಾರೆ ಆ ಪಕ್ಷದ ನಾಯಕರು. ಶಾಂತೇಗೌಡ ಅಥವಾ ಸಗೀರ್ ಅಹಮದ್ ಅವರಲ್ಲಿ ಒಬ್ಬರಿಗಂತೂ ಕಾಂಗ್ರೆಸ್‌ನಲ್ಲಿ ಅವಕಾಶ ಕೈ ತಪ್ಪುವುದು ಖಚಿತ. ಈ ಇಬ್ಬರಲ್ಲಿ ಯಾರು ಬಂದರೂ ಸರಿಯೇ ಅವರೇ ಕೆಜೆಪಿ ಅಭ್ಯರ್ಥಿ ಎನ್ನುವ ನಿರ್ಧಾರಕ್ಕೆ ಪಕ್ಷದ ನಾಯಕರು ಬಂದಿದ್ದಾರೆ ಎನ್ನುತ್ತದೆ ಆ ಪಕ್ಷದ ಉನ್ನತ ಮೂಲಗಳು.`ಕೆಜೆಪಿಯಿಂದ ಅಭ್ಯರ್ಥಿಯಾಗಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಅವರಿಗೂ ಆಹ್ವಾನ ಬಂದಿದೆ. ಆದರೆ, ಅವರು ಚುನಾವಣೆಗೆ ಇನ್ನಷ್ಟು ಸಮಯ ಇರುವುದರಿಂದ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಈಗಷ್ಟೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಹುದ್ದೆ ಸಿಕ್ಕಿರುವುದರಿಂದ ದುಡುಕಿನ ನಿರ್ಧಾರ ಕೈಗೊಳ್ಳುವುದು ಬೇಡ ಎನ್ನುವುದು ಅವರ ನಿಲುವು. ಅವಕಾಶ ಸಿಕ್ಕಿದರೆ ಕೆಜೆಪಿಯಿಂದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ಮನಸು ಮಾಡಿದ್ದಾರೆ' ಎನ್ನುತ್ತಾರೆ ಅವರ ಸಮೀಪ ವರ್ತಿಗಳು.ಸ್ಥಳೀಯವಾಗಿ ಕೆಜೆಪಿ ಸಂಘಟಿಸುತ್ತಿರುವ ಎಚ್.ಎಚ್.ದೇವರಾಜ್, ಮಾಜಿ ಸಚಿವ ಡಿ.ಸಿ.ಶ್ರೀಕಂಠಪ್ಪ ಪುತ್ರ ಡಿ.ಎಸ್.ಅಶೋಕ್, ಸಿ.ಎಚ್.ಲೋಕೇಶ್, ಮೂಡಿಗೆರೆ ತಾ.ಪಂ. ಸದಸ್ಯ ರಂಜನ್ ಅಜಿತ್ ಕುಮಾರ್, ತೇಜೇಶ್ ಕುಮಾರ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನು ಜೆಡಿಯು, ಬಿಎಸ್‌ಪಿ, ಸಿಪಿಐ ನಾಯಕರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ತುಟಿ ಬಿಚ್ಚಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry