ಎಲ್ಲಾ ಒತ್ತೆಯಾಳುಗಳ ರಕ್ಷಣೆ: ಸೇನೆ

7
ಕೀನ್ಯಾ ಮಾಲ್‌ ಮೇಲಿನ ದಾಳಿ: ಮುಂದುವರಿದ ಕಾರ್ಯಾಚರಣೆ

ಎಲ್ಲಾ ಒತ್ತೆಯಾಳುಗಳ ರಕ್ಷಣೆ: ಸೇನೆ

Published:
Updated:

ನೈರೋಬಿ (ಎಎಫ್‌ಪಿ): ಉಗ್ರರ ಅಟಾಟೋಪಕ್ಕೆ ತುತ್ತಾಗಿದ್ದ ಇಲ್ಲಿನ ವೆಸ್ಟ್‌ಗೇಟ್‌ ಶಾಪಿಂಗ್‌ ಮಾಲ್‌ನಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿ­ಯಲ್ಲಿದ್ದು, ಭದ್ರತಾ ಪಡೆಯ ಕಾರ್ಯಾಚರಣೆ­ಯಲ್ಲಿ ಕನಿಷ್ಠ ಮೂವರು ಉಗ್ರರು ಹತರಾಗಿ­ದ್ದಾರೆ.  ಇನ್ನೂ ಒಂದಿಬ್ಬರು ಉಗ್ರರು ಮಾಲ್‌ನಲ್ಲಿ ಅಡಗಿರುವ ಶಂಕೆ ಕಾರಣ  ಮಂಗಳವಾರ ಕೂಡ ಕಾರ್ಯಾಚರಣೆ ಮುಂದುವರಿದಿತ್ತು ಎಂದು ಕೀನ್ಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಆದರೆ, ಆರು ಉಗ್ರರು ಹತರಾಗಿದ್ದಾರೆ ಎಂದು ಕೀನ್ಯಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಉಗ್ರರ ಹಿಡಿತದಲ್ಲಿದ್ದ ಎಲ್ಲಾ ಒತ್ತೆ­ಯಾಳು­ಗಳು   ಬಿಡುಗಡೆಯಾಗಿದ್ದಾರೆ ಎನ್ನಲಾ­ಗಿದೆ. ಆದರೆ, ಬಿಡುಗಡೆಯಾದ ಒತ್ತೆಯಾಳುಗಳ ನಿಖರ ಸಂಖ್ಯೆ ತಿಳಿದುಬಂದಿಲ್ಲ.ಉಗ್ರರ ಹಿಡಿತದಲ್ಲಿ ಒತ್ತೆಯಾಳು?: ಈ ಮಧ್ಯೆ, ಒತ್ತೆಯಾಳುಗಳು ಇನ್ನೂ ತಮ್ಮ ಹಿಡಿತದಲ್ಲಿದ್ದಾರೆ ಎಂದು ಶಬಾಬ್‌ ಉಗ್ರರ ಸಂಘಟನೆ ಹೇಳಿ­ಕೊಂಡಿದೆ. ಅಸಂಖ್ಯ ಶವಗಳು ಮಾಲ್‌ನಲ್ಲಿ ಬಿದ್ದಿವೆ ಎಂದೂ ತಿಳಿಸಿದೆ.ಪೊಲೀಸರು ವಿಚಾರಣೆಗಾಗಿ 10 ಜನರನ್ನು ಬಂಧಿಸಿದ್ದಾರೆ. ರೆಡ್‌ ಕ್ರಾಸ್‌ ಸಂಸ್ಥೆಯು 63 ಜನರು ಕಣ್ಮರೆಯಾಗಿದ್ದಾರೆ ಎಂದು ಹೇಳಿದ್ದು ಇವರ ಸ್ಥಿತಿಗತಿ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ.62 ಜನರ ಸಾವು: ಉಗ್ರರು ನಡೆಸಿದ ಹತ್ಯಾಕಾಂಡ ಮತ್ತು ಭದ್ರತಾ ಪಡೆಯ ಕಾರ್ಯಾಚರಣೆ ಕುರಿತು  ಹೇಳಿಕೆ ನೀಡಿರುವ ಕೀನ್ಯಾ ಸರ್ಕಾರದ ವಕ್ತಾರ ಮ್ಯಾನೊ ಇಸಿಪಿಸು, ಕನಿಷ್ಠ 62 ಜನರು ಸಾವನ್ನಪ್ಪಿ­ದ್ದಾರೆ ಎಂದಿದ್ದಾರೆ. ಸೋಮವಾರ ಸತ್ತವರ ಸಂಖ್ಯೆ 69ಕ್ಕೆ ಏರಿದೆ ಎಂದು ವರದಿಯಾಗಿತ್ತು.‘ಭದ್ರತಾ ಪಡೆಗಳು ಕಟ್ಟಡದ ಇಂಚಿಂಚು ಜಾಗವನ್ನು ಶೋಧಿಸಿದ್ದಾರೆ. ಎಲ್ಲಾ ಒತ್ತೆಯಾಳು­ಗಳನ್ನು ರಕ್ಷಿಸಲಾಗಿದೆ. ಆದರೂ ಒಂದಿಬ್ಬರು ಉಗ್ರರು ಕಟ್ಟಡದ ಯಾವುದಾದರೂ ಮೂಲೆ­ಯಲ್ಲಿ ಅಡಗಿರುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ಸಣ್ಣ ಪ್ರಮಾದಕ್ಕೂ ಆಸ್ಪದ ನೀಡದಂತೆ ಎಲ್ಲಡೆ ಕೂಲಂಕಷವಾಗಿ ಶೋಧ ಕಾರ್ಯಾ ನಡೆಸಲಾಗುತ್ತಿದೆ’ ಎಂದು ಇಸಿಪಿಸು ಹೇಳಿದ್ದಾರೆ.ಕಟ್ಟಡದ ಮೇಲ್ಛಾವಣಿಯಲ್ಲಿರುವ ಕ್ಯಾಸಿನೊ­ದಲ್ಲಿ ಬಳಿ ಈ ಉಗ್ರರು ಅಡಗಿರಬಹುದು ಶಂಕಿಸ­ಲಾಗಿದೆ ಎಂದು ಮೂಲಗಳು ತಿಳಿಸಿವೆ.ಬೇರೆ ಬೇರೆ ದೇಶಗಳ ಉಗ್ರರು: ‘ದಾಳಿ ನಡೆಸಿದ ಸೋಮಾಲಿಯಾ ಮೂಲದ ಉಗ್ರರಲ್ಲಿ  ಬೇರೆ ಬೇರೆ ದೇಶದವರು ಇದ್ದರು. ಅವರು ಸೋಮಾಲಿಯಾದ ಪೌರತ್ವವನ್ನೂ ಪಡೆದು­ಕೊಂಡಿದ್ದರು ಎಂಬ ಗುಪ್ತಚರದ ಮಾಹಿತಿಗಳಿಂದ ತಿಳಿದುಬಂದಿದೆ’ ಎಂದು ಕೀನ್ಯಾ ಸೇನೆಯ ಮುಖ್ಯಸ್ಥ ಜುಲಿಯೂಸ್‌ ಕರನಗಿ ತಿಳಿಸಿದ್ದಾರೆ.‘ಉಗ್ರರ ತಂಡದಲ್ಲಿ ಮಹಿಳೆಯರು ಇರಲಿಲ್ಲ. ಅವರೆಲ್ಲರೂ ಪುರುಷರು. ಕೆಲವರು ಮಹಿಳೆಯ­ರಂತೆ ವೇಷ ಧರಿಸಿದ್ದರು’ ಎಂದು ಆಂತರಿಕ ವ್ಯವಹಾರಗಳ ಸಚಿವ ಜೋಸೆಫ್‌ ಒಲೆ ಲೆಂಕು ಸ್ಪಷ್ಟಪಡಿಸಿದ್ದಾರೆ.11 ಯೋಧರಿಗೆ ಗಾಯ: ಈ ಹತ್ಯಾಕಾಂಡದಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಭದ್ರತಾ ಪಡೆಯ ಕನಿಷ್ಠ 11 ಯೋಧರಿಗೆ ಗಾಯವಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.ಉಗ್ರರ ಬೆದರಿಕೆ

ಸೋಮಾಲಿಯಾದಿಂದ ಕೀನ್ಯಾದ ಪಡೆಯನ್ನು ತಕ್ಷಣ ಹಿಂದಕ್ಕೆ ಪಡೆಯದಿದ್ದಲ್ಲಿ ಮತ್ತಷ್ಟು  ದಾಳಿಗಳನ್ನು ನಡೆಸುವುದಾಗಿ ಶಬಾಬ್‌ ಉಗ್ರರು ಬೆದರಿಕೆ ಹಾಕಿದ್ದಾರೆ.‘ನಾವು ಏನು ಮಾಡಬಲ್ಲೆವು ಎಂಬುದನ್ನು ಈಗ ತೋರಿಸಿದ್ದೇವೆ. ಮುಂದೆ ನಿಮಗೆ ಕರಾಳ ದಿನಗಳು ಕಾದಿವೆ’ ಎಂದು ಸಂಘಟನೆಯ ವಕ್ತಾರ ಅಲಿ ಮೊಹಮ್ಮದ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry